ADVERTISEMENT

ಮಫ್ತಿ: ನೆತ್ತರ ಕಮಟು ವಾಸನೆ

ಕೆ.ಎಚ್.ಓಬಳೇಶ್
Published 1 ಡಿಸೆಂಬರ್ 2017, 11:21 IST
Last Updated 1 ಡಿಸೆಂಬರ್ 2017, 11:21 IST
ಮಫ್ತಿ: ನೆತ್ತರ ಕಮಟು ವಾಸನೆ
ಮಫ್ತಿ: ನೆತ್ತರ ಕಮಟು ವಾಸನೆ   

ಚಿತ್ರ: ಮಫ್ತಿ

ನಿರ್ಮಾಪಕರು: ಜಯಣ್ಣ, ಭೋಗೇಂದ್ರ

ನಿರ್ದೇಶನ: ನರ್ತನ್

ADVERTISEMENT

ತಾರಾಗಣ: ಶಿವರಾಜ್‌ಕುಮಾರ್, ಶ್ರೀಮುರಳಿ, ಸಾನ್ವಿ ಶ್ರೀವಾಸ್ತವ್, ದೇವರಾಜ್‌, ಛಾಯಾಸಿಂಗ್, ಪ್ರಕಾಶ್‌ ಬೆಳವಾಡಿ, ವಸಿಷ್ಟ ಸಿಂಹ, ಸಾಧುಕೋಕಿಲ

**

ಕೈಯಲ್ಲಿ ಫಳ ಫಳ ಹೊಳೆಯುವ ಪಿಸ್ತೂಲ್‌ಗಳು. ಮಾರುದ್ದದ ಲಾಂಗ್‌ಗಳು. ಕತ್ತರಿಸಿದ ಸೌತೆಕಾಯಿಯ ಚೂರುಗಳಂತೆ ಹೆಣವಾಗಿ ಉರುಳುವ ಪುಡಿ ರೌಡಿಗಳು. ಪಿಸ್ತೂಲ್‌ನಿಂದ ಚಿಮ್ಮುವ ಬುಲೆಟ್‌ಗಳಂತೆ ಬಾಯಿಂದ ಸಿಡಿಯುವ ಪಂಚಿಂಗ್‌ ಡೈಲಾಗ್‌ಗಳು. ಮರಣ ಮಹಾಹೋಮದ ನೆತ್ತರ ಕಮಟಿನ ನಡುವೆ ಬಂದಿಯಾದ ತಂಗಿಯ ಪ್ರೀತಿ. ರಾಕ್ಷಸ ರೂಪದಲ್ಲಿರುವ ಡಾನ್. ಕರ್ತವ್ಯಕ್ಕೆ ಜೀವ ಮುಡಿಪಿಟ್ಟಿರುವ ರಾಕ್ಷಸ ರೂಪದ ಪೊಲೀಸ್‌ ಅಧಿಕಾರಿ...

ಈ ಹಳೆಯ ಸಿದ್ಧಸೂತ್ರದ ಮೂಲಕವೇ ‘ಮಫ್ತಿ’ ಚಿತ್ರದಲ್ಲಿ ಪೊಲೀಸ್‌ ಮತ್ತು ಪಾತಕಲೋಕದ ನಡುವಿನ ಕಥೆ ಹೇಳಿದ್ದಾರೆ ನಿರ್ದೇಶಕ ನರ್ತನ್. ಭೂಗತಲೋಕದ ಚಿತ್ರಗಳು ಹೊಸದೇನಲ್ಲ. ಆದರೆ, ಈ ವಿಷಯವನ್ನು ಹೊಸ ರೀತಿಯಲ್ಲಿ ಹೇಳುವ ನಿರ್ದೇಶಕರ ಪ್ರಯತ್ನ ಚಿತ್ರದುದ್ದಕ್ಕೂ ಕಾಣುತ್ತದೆ. ಶಿವರಾಜ್‌ಕುಮಾರ್‌ ಮತ್ತು ಶ್ರೀಮುರಳಿ ಅವರ ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತೆ ಚಿತ್ರಕಥೆ ಹೆಣೆಯುವಲ್ಲಿ ನರ್ತನ್‌ ಸಫಲರಾಗಿದ್ದಾರೆ.

ಬೈರತಿ ರಾಣಗಲ್(ಶಿವರಾಜ್‌ಕುಮಾರ್) ರೋಣಾಪುರದ ಡಾನ್. ಜಿಡ್ಡುಗಟ್ಟಿದ ಸರ್ಕಾರಿ ವ್ಯವಸ್ಥೆ ಬಗ್ಗೆ ಅವನಿಗೆ ಕೋಪ. ಆತ ಸತ್ಯಕ್ಕಾಗಿ ಹೋರಾಡುವ ರಾಕ್ಷಸ. ತಪ್ಪು ಮಾಡಿದರೆ ಅವನ ಬಳಿ ಕ್ಷಮೆಯಿಲ್ಲ. ಔಷಧಿ ಕಂಪನಿ ಜತೆಗೆ ಕೈಜೋಡಿಸಿ ಜನರ ದಾರುಣ ಸಾವಿಗೆ ಕಾರಣನಾದ ತಂಗಿ ಗಂಡನನ್ನೇ ಕತ್ತರಿಸಿ ಹಾಕುವಷ್ಟು ನಿರ್ದಯಿ. ಹಾಗಾಗಿ, ತಂಗಿಗೂ ಅವನನ್ನು ಕಂಡರೆ ಕಡುಕೋಪ. ಅವನದು ತಣ್ಣನೆಯ ಕ್ರೌರ್ಯ. ಆದರೆ, ರಾಮಾಯಣ ಓದಿಕೊಂಡಿರುವ ಮೇಧಾವಿ.

ಅಕ್ರಮ ಗಣಿಗಾರಿಕೆ, ಹವಾಲ ದಂಧೆಯಲ್ಲಿ ಬೈರತಿಯದ್ದು ಎತ್ತಿದ ಕೈ. ಆತ ಜನಾನುರಾಗಿಯೂ ಹೌದು. ಅವನ ದುಷ್ಕೃತ್ಯಕ್ಕೆ ಅಂತ್ಯವಾಡುವುದೇ ಹಿರಿಯ ಪೊಲೀಸ್‌ ಅಧಿಕಾರಿಯ ಗುರಿ. ಈ ಕಾರ್ಯಾಚರಣೆಯ ಸಾರಥ್ಯವಹಿಸುವುದು ಸಿಬಿಐ ಅಧಿಕಾರಿ ಗಣ(ಶ್ರೀಮುರಳಿ). ಗಣನಿಗೆ ಡಾನ್‌ನ ಸ್ನೇಹ ಸಂಪಾದಿಸುವುದು ಸುಲಭವಲ್ಲ. ಈ ನಡುವೆಯೇ ಮುಖ್ಯಮಂತ್ರಿ ಹುದ್ದೆ ಕೈತಪ್ಪಿಸಿದ್ದಕ್ಕೆ ಬೈರತಿ ಮೇಲೆ ದ್ವೇಷಕಾರುವ ದೇವರಾಜ್. ಡಾನ್‌ನ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟಕ್ಕಿಳಿಯುವ ಅಶ್ವಥ್‌ ಕುಡಾರಿ(ಪ್ರಕಾಶ್‌ ಬೆಳವಾಡಿ). ಕೊನೆಗೆ, ರೋಣಾ‍ಪುರ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬೈರತಿಯದ್ದೇ ಮೇಲುಗೈ.

ಬೈರತಿ ಮತ್ತು ತಂಗಿಯ ನಡುವಿನ ಮನಸ್ತಾಪಕ್ಕೆ ಗಣ ಅಂತ್ಯವಾಡುತ್ತಾನೆ. ಗಣ ತನ್ನನ್ನು ಬಂಧಿಸಲು ಬಂದಿರುವ ಮಫ್ತಿಯಲ್ಲಿ ಇರುವ ಸಿಬಿಐ ಅಧಿಕಾರಿ ಎಂಬುದು ಬೈರತಿಗೂ ಗೊತ್ತಿರುತ್ತದೆ. ಕೊನೆಗೆ, ಆತ ಶರಣಾಗುವುದರೊಂದಿಗೆ ಚಿತ್ರ ಮುಗಿಯುತ್ತದೆ.

ಚಿತ್ರದ ಮೊದಲಾರ್ಧದಲ್ಲಿ ಪಿಸ್ತೂಲ್‌, ಲಾಂಗ್‌ಗಳಿಗೆ ಹೆಚ್ಚಿನ ಕೆಲಸ ಕೊಟ್ಟಿದ್ದಾರೆ ನಿರ್ದೇಶಕರು. ಶಿವರಾಜ್‌ಕುಮಾರ್‌ ಅವರ ಪ್ರವೇಶವಾಗುವುದು ಮಧ್ಯಂತರದ ವೇಳೆಗೆ. ದ್ವಿತೀಯಾರ್ಧವನ್ನು ಅವರೇ ಆವರಿಸಿಕೊಳ್ಳುತ್ತಾರೆ. ಡಾನ್‌ ರೂಪದ ಅವರ ಹೊಸ ಗೆಟಪ್‌ ಮತ್ತು ಖಡಕ್‌ ಡೈಲಾಗ್‌ಗಳಿಗೆ ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಪೊಲೀಸ್‌ ಅಧಿಕಾರಿಯಾಗಿ ಶ್ರೀಮುರಳಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ದೇವರಾಜ್‌, ಪ್ರಕಾಶ್‌ ಬೆಳವಾಡಿ, ವಸಿಷ್ಟ ಸಿಂಹ, ಛಾಯಾಸಿಂಗ್‌, ಸಾನ್ವಿ ಶ್ರೀವಾಸ್ತವ್ ಅವರದ್ದು ಅಚ್ಚುಕಟ್ಟಾದ ಅಭಿನಯ. ಐ. ನವೀನ್‌ಕುಮಾರ್‌ ಅವರ ಛಾಯಾಗ್ರಹಣ ಸೊಗಸಾಗಿದೆ. ರವಿ ಬಸ್ರೂರ್‌ ಸಂಯೋಜನೆಯ ಹಾಡುಗಳು ಚಿತ್ರಕ್ಕೆ ಹೊಸದೇನನ್ನು ಕಟ್ಟಿಕೊಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.