ADVERTISEMENT

ಮುಕ್ಕಾದ ಉಗುರುಗಳ ವ್ಯಾಘ್ರ!

‘ಪುಲಿ’ (ತಮಿಳು)

ಅಮಿತ್ ಎಂ.ಎಸ್.
Published 2 ಅಕ್ಟೋಬರ್ 2015, 19:30 IST
Last Updated 2 ಅಕ್ಟೋಬರ್ 2015, 19:30 IST

‘ಪುಲಿ’ (ತಮಿಳು)
ನಿರ್ಮಾಪಕರು: ಶಿಬು ತಮೀನ್ಸ್‌, ಪಿ.ಟಿ. ಸೆಲ್ವಕುಮಾರ್‌, ನಿರ್ದೇಶಕ: ಚಿಂಬು ದೇವನ್‌, ತಾರಾಗಣ: ವಿಜಯ್‌, ಸುದೀಪ್, ಶ್ರುತಿ ಹಾಸನ್‌, ಹನ್ಸಿಕಾ ಮೋಟ್ವಾನಿ, ಶ್ರೀದೇವಿ, ಪ್ರಭು, ನಂದಿತಾ ಶ್ವೇತಾ


ದಕ್ಷಿಣ ಭಾರತದ ಈಗಿನ ಸಿನಿಮಾ ಸನ್ನಿವೇಶದಲ್ಲಿ ಫ್ಯಾಂಟಸಿ ಕಥನಗಳು ಸಾಮಾನ್ಯವಾಗಿ ಎರಡು ರೀತಿ ಅಭಿವ್ಯಕ್ತಗೊಳ್ಳುತ್ತವೆ. ಆಧುನಿಕ ಜಗತ್ತಿನಲ್ಲಿರುವ ನಾಯಕನ ಜನ್ಮಾಂತರದ ಕಥೆಯನ್ನು ಇತಿಹಾಸ ಅಥವಾ ಪುರಾಣದ ಕಲ್ಪನೆಗಳಲ್ಲಿ ಚಿತ್ರಿಸುವುದು ಇತ್ತೀಚಿನ ಜನಪ್ರಿಯ ಟ್ರೆಂಡ್‌. ಸಂಪೂರ್ಣ ಕಾಲ್ಪನಿಕ ಜಗತ್ತಿನಲ್ಲಿಯೇ ವರ್ಣರಂಜಿತವಾಗಿ ವಿಹರಿಸುವುದು ಮತ್ತೊಂದು ಬಗೆ.

‘ಬಾಹುಬಲಿ’ ಇಂತಹ ಜಗತ್ತಿಗೆ ಕರೆದೊಯ್ದು ರೋಚಕತೆಯನ್ನು ಕಟ್ಟಿಕೊಟ್ಟಿತ್ತು. ‘ಪುಲಿ’ ಸಹ ಎರಡನೇ ವರ್ಗಕ್ಕೆ ಸೇರುವ ಆದರೆ, ರೋಚಕತೆಯನ್ನು ಒಳಗೊಳ್ಳಲಾಗದ, ಅತ್ತ ಕಲ್ಪನೆಯನ್ನೂ ಸೊಗಸಾಗಿ ಕಟ್ಟಿಕೊಡಲಾಗದ ಪೇಲವ ಕಾಮಿಕ್ ದೃಶ್ಯಗಳ ತುಣುಕುಗಳಂತೆ ಕಾಣಿಸುತ್ತದೆ.

‘ಪುಲಿ’ಯ ಪಾತ್ರಗಳನ್ನು ನೋಡಿ, ಇವೆಲ್ಲವೂ ವಿವಿಧ ದೇಶ–ಭಾಷೆಗಳಲ್ಲಿ ಬಂದ ಪುರಾಣ ಕಥೆಗಳಲ್ಲಿ ಓದಿರುವಂತಹವು. ಗಲಿವರ್ ಟ್ರಾವೆಲ್ಸ್‌ನ ಲಿಲಿಪುಟ್‌ ಮನುಷ್ಯರು, ಚಂದಮಾಮ ಕಥೆಗಳಲ್ಲಿ ಬರುವ ಒಂಟಿ ಕಣ್ಣಿನ ದೈತ್ಯ ಮಾನವ, ಪಂಚತಂತ್ರದ ಮಾತನಾಡುವ ಪ್ರಾಣಿಗಳು, ಶಾಪಗ್ರಸ್ತ ಪಕ್ಷಿಗಳು, ‘ಬಾಲಮಂಗಳ’ದಲ್ಲಿ ಬರುತ್ತಿದ್ದ ಶಕ್ತಿಮದ್ದು, ಮಾಟಗಾತಿ, ರಾಜ್ಯವಾಳಲು ಕುತಂತ್ರ ಬುದ್ಧಿ ಉಪಯೋಗಿಸುವ ಖಳನಾಯಕ, ಹತ್ತು ಹಲವು ಸಿನಿಮಾಗಳಲ್ಲಿ ಬಂದು ಹೋದ ಕಾಡಿನ ಜನರ ಬದುಕು, ಅವರಲ್ಲೊಬ್ಬ ನಾಯಕ, ನಾಯಕನಿಗಾಗಿಯೇ ಹುಟ್ಟಿದ ಸುರಸುಂದರಿ– ಮಕ್ಕಳಿಗೆ ಮುದ ನೀಡುತ್ತಿದ್ದ ಈ ಕಥೆಗಳಲ್ಲಿ ಒಂದಷ್ಟು ಭಾಗಗಳನ್ನು ಆಯ್ದು ತಂದಿದ್ದಾರೆ ನಿರ್ದೇಶಕ ಚಿಂಬು ದೇವನ್‌. ನೀರಿನಲ್ಲಿ ತೇಲಿಬರುವ ‘ಕುಂತಿ ಪುತ್ರ’ನ ಪರಿಕಲ್ಪನೆ ಇಲ್ಲಿಯೂ ಇದೆ. ಈ ಕಥೆಗಳನ್ನು ಜೋಡಿಸುವ ಕೆಲಸವನ್ನು ಆಸ್ಥೆಯಿಂದ ಮಾಡಿದ್ದರೆ ‘ಪುಲಿ’ ಕನಿಷ್ಠ ಮಕ್ಕಳಿಗಾಗಿ ಮಾಡಿದ ಚಿತ್ರಗಳ ಗುಂಪಿಗಾದರೂ ಸೇರುತ್ತಿತ್ತು.

ಫ್ಯಾಂಟಸಿ ಸಿನಿಮಾ ಮಾಡುವ ಹಪಹಪಿ ಇಲ್ಲಿ ಪ್ರಕಟವಾಗುತ್ತದೆಯೇ ವಿನಾ, ಚಿಂಬು ಅವರ ಕೆಲಸದಲ್ಲಿ ಅದಕ್ಕೆ ಬೇಕಾದ ಸಿದ್ಧತೆ, ಪಕ್ವತೆ ಮತ್ತು ಕಸುಬುದಾರಿಕೆ ಕಾಣುವುದಿಲ್ಲ. ಮಾಮೂಲಿ ವ್ಯಾಪಾರಿ ಸಿನಿಮಾಗಳ ಸೂತ್ರವನ್ನೇ ಅವರು ಇಲ್ಲಿಯೂ ಅಳವಡಿಸಿದ್ದಾರೆ.  ದುರ್ಬಲ ಹಾಸ್ಯ, ಇದಕ್ಕಿದ್ದಂತೆ ಎರಗುವ ಹಾಡು, ವಿಶೇಷವೆನಿಸುವ ಹೊಡೆದಾಟಗಳು, ಅಪ್ರಬುದ್ಧ ವ್ಯಾಪಾರಿ ಸಿನಿಮಾವನ್ನು ಫ್ಯಾಂಟಸಿಯ ಚೌಕಟ್ಟಿನೊಳಗಿಟ್ಟು ಪ್ರದರ್ಶಿಸಿದ ಅನುಭವ ನೀಡುತ್ತದೆ. ಚರ್ವಿತ ಚರ್ವಣ ವಸ್ತುಗಳನ್ನೇ ತುಂಬಿಕೊಂಡ ಚಿತ್ರದಲ್ಲಿ ಗ್ರಾಫಿಕ್ ಕೂಡ ಗಮನ ಸೆಳೆಯುವುದಿಲ್ಲ.

ವಿಜಯ್ ಹಾವ ಭಾವ, ಸಂಭಾಷಣೆ ಒಪ್ಪಿಸುವ ಶೈಲಿಗಳಲ್ಲಿನ ಏಕತಾನತೆ ಇಲ್ಲಿಯೂ ಮುಂದುವರಿದಿದೆ. ಖಳನಟ ಸುದೀಪ್‌ ಅಭಿನಯದ ಎದುರು ನಾಯಕ ವಿಜಯ್‌ ಪ್ರಭೆ ತೀರಾ ಮಂಕು. ಶ್ರೀದೇವಿ ಪಾತ್ರವನ್ನು ಹಾಸ್ಯಾಸ್ಪದವಾಗಿ ಚಿತ್ರಿಸಲಾಗಿದೆ. ಶ್ರುತಿ ಹಾಸನ್‌ ಮತ್ತು ಹನ್ಸಿಕಾ ಮೋಟ್ವಾನಿ ಇಬ್ಬರಿಗೂ ಗ್ಲಾಮರ್ ಪ್ರದರ್ಶನದ ಕೆಲಸ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT