ADVERTISEMENT

ರಮ್ಯ ಭಾವುಕತೆಯ ಸುದೀರ್ಘ ರಾಗಾಲಾಪ

ಪದ್ಮನಾಭ ಭಟ್ಟ‌
Published 21 ಏಪ್ರಿಲ್ 2017, 12:11 IST
Last Updated 21 ಏಪ್ರಿಲ್ 2017, 12:11 IST
ರಮ್ಯ ಭಾವುಕತೆಯ ಸುದೀರ್ಘ ರಾಗಾಲಾಪ
ರಮ್ಯ ಭಾವುಕತೆಯ ಸುದೀರ್ಘ ರಾಗಾಲಾಪ   

ಚಿತ್ರ: ರಾಗ
ನಿರ್ಮಾಣ: ಮಿತ್ರ
ನಿರ್ದೇಶನ: ಪಿ.ಸಿ. ಶೇಖರ್‌
ತಾರಾಗಣ: ಮಿತ್ರ, ಭಾಮಾ, ಅವಿನಾಶ್‌, ರಮೇಶ್‌ ಭಟ್‌

ನಡೆದಲ್ಲೆಲ್ಲ ಪಾದ ಸೋಕುವ ಹಸಿರು, ಮುತ್ತಿಕ್ಕಿದರೂ ತುಟಿ ತುಸುವೂ ಕೊಳೆಯಾಗದಂಥ ನೆಲ, ಸದಾ ಹೂವರಳಿಸಿ ನಗುವ ಗಿಡಗಳು, ಇದು ಇನ್ಯಾವುದೋ ಲೋಕ ಎಂಬ ಭ್ರಮೆ ಹುಟ್ಟಿಸುವ ತೆಳು ಹೊಗೆ, ಆ ಲೋಕದ ಮೋಹಕತೆಯನ್ನು ಹೆಚ್ಚಿಸುವ ಗೋಡೆಯ ಮೇಲಿನ ಮಾಸಲು ಬಣ್ಣ, ಬೀದಿಯಂಚಿನ ಗಾಡಿಯಂಗಡಿ... ಇದು ಅವನ ಬಾಹ್ಯಜಗತ್ತು. ಆದರೆ ಇಷ್ಟು ಮೋಹಕಲೋಕ ಕಾಣಲು ಅವನಿಗೆ ದೃಷ್ಟಿಯೇ ಇಲ್ಲ. ಆದರೆ ಅಂತರಂಗದ ಕಣ್ಣಿನಲ್ಲಿ ಅವನು ಕಾಣುವ ಒಂದು ಸುಂದರ ಜಗತ್ತಿದೆ. ಅಲ್ಲಿ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾನೆ. ಹೆಜ್ಜೆ ಸಪ್ಪಳದಲ್ಲಿಯೇ ವ್ಯಕ್ತಿಯ ಪತ್ತೆ ಹಚ್ಚಬಲ್ಲ, ಧ್ವನಿಯ ಮೂಲಕವೇ ಮನದ ದುಡುಗ ಅರಿತು ಸಾಂತ್ವನಗೊಳಿಸಬಲ್ಲ ಅಂತರಂಗದ ಕಣ್ಣು ಅವನಿಗಿದೆ.

ಹೀಗೆ ಒಳ್ಳೆಯತನವನ್ನು ಬದುಕುವ ಮತ್ತು ಧಾರಾಳವಾಗಿ ಬೋಧಿಸುವ ಅವನ ಬದುಕಿನಲ್ಲಿ ಅವನಂತೆಯೇ ದೃಷ್ಟಿಹೀನ ಹುಡುಗಿಯೊಬ್ಬಳ ಪ್ರವೇಶವಾಗುತ್ತದೆ. ಆಗರ್ಭ ಶ್ರೀಮಂತನ ಮಗಳಾದರೂ ಪ್ರೇಮದ ವಿಷಯದಲ್ಲಿ ಕಡುಬಡವಿ. ಹತಾಶೆಯೇ ಮೈವೆತ್ತಂತಿರುವ ಅವಳಲ್ಲಿಯೂ ಅವನು ಜೀವನಪ್ರೀತಿ ಚಿಗುರಿಸುತ್ತಾನೆ.

ADVERTISEMENT

ಇಬ್ಬರ ಅಂತರಂಗದ ಜಗತ್ತೂ ಸೇರಿ ಒಳ್ಳೆಯತನದ ನಂದನವನ ರೂಪುಗೊಳ್ಳುವಷ್ಟರಲ್ಲಿ ಸುಂದರ ಹೂತೋಟದಲ್ಲಿ ಸಣ್ಣ ಬಿರುಗಾಳಿ. ನಂತರದ್ದೆಲ್ಲ ಸಿರಿವಂತರ ಸಣ್ಣತನಗಳು, ಅದರಿಂದ ಉಂಟಾಗುವ ಸಂಕಟಗಳ ಸರಮಾಲೆ.

ಭಾವುಕತೆಯ ಮಂತ್ರದಲ್ಲಿಯೇ ಪ್ರೇಕ್ಷಕರನ್ನು ಮೋಡಿಮಾಡಲು ಯತ್ನಿಸಿದ್ದಾರೆ ನಿರ್ದೇಶಕ ಪಿ.ಸಿ. ಶೇಖರ್‌. ಇಬ್ಬರು ಕುರುಡರ ಪ್ರೇಮಕಥೆಯನ್ನು ಸಮಾಜ ಉಪಕಾರಿ ಸಂದೇಶಗಳ ಅಡಿಪಾಯದ ಮೇಲೆ ಕಟ್ಟುವ ಪ್ರಯತ್ನ ಅವರದ್ದು. ಮೊದಲರ್ಧ ನಾಯಕ, ತನ್ನ ಬದುಕಿನಲ್ಲಿ ಬರುವ ಎಲ್ಲರ ಸಂಕಟಗಳಿಗೂ ಉಪದೇಶದ ಮುಲಾಮು ಹಚ್ಚಿ ಮಾನಸಿಕ ಪರಿವರ್ತನೆ ಮಾಡುತ್ತ ಹೋಗುತ್ತಾನೆ. ದ್ವಿತೀಯಾರ್ಧದಲ್ಲಿ ತನ್ನದೇ ಬದುಕಿನಲ್ಲಿ ಎದುರಾಗುವ ಸಂಕಟಗಳಿಗೂ ಅವನದ್ದು ಒಳ್ಳೆಯತನದ್ದೇ ಉತ್ತರ.

ಅತಿಭಾವುಕತೆಯೇ ಈ ಸಿನಿಮಾಕ್ಕೆ ಶಾಪವೂ ಆಗಿದೆ. ಒಂದಕ್ಕಿಂತ ಇನ್ನೊಂದು ದೃಶ್ಯವು ಪ್ರೇಕ್ಷಕರ ಕಣ್ಣಂಚನ್ನು ಇನ್ನಷ್ಟು ಒದ್ದೆ ಮಾಡುವಂತಿರಬೇಕು ಎಂಬ ಹಟದಲ್ಲಿ ಕಥೆ ಅವಾಸ್ತವಿಕ ಜಾಡಿಗೆ ಸಾಗಿಬಿಡುತ್ತದೆ. ಕೊಂಚ ಸಮಯದ ನಂತರ ನಿರ್ದೇಶಕರ ಈ ತಂತ್ರಕ್ಕೆ ನೋಡುಗನ ಸಂವೇದನೆಗೆ ಜಡ್ಡುಗಟ್ಟಿ ತೆರೆಯ ಮೇಲಿನ ನಾಟಕ ಬೇಸರ ಹುಟ್ಟಿಸತೊಡಗುತ್ತದೆ. ಮತ್ತೆ ಮತ್ತೆ ಬರುವ ಉಪದೇಶಗಳು ತಾಳ್ಮೆಯನ್ನು ಪರೀಕ್ಷೆಗೊಡ್ಡುತ್ತವೆ.

ಕೊನೆಯಲ್ಲಿನ ಮೆಲೋಡ್ರಾಮಾವಂತೂ ಅವಾಸ್ತವಿಕ ಮಾತ್ರವಲ್ಲ, ಅತಾರ್ಕಿಕ ಅಂತಲೂ ಅನಿಸುತ್ತದೆ. ಬಹುತೇಕ ದೃಶ್ಯಗಳಲ್ಲಿ ಮನೆ, ರಸ್ತೆ, ಅಂಗಡಿ ಎಲ್ಲ ಕಡೆಗಳಲ್ಲಿಯೂ ತೆಳುವಾದ ಹೊಗೆ ಯಾಕೆ ಇರುತ್ತದೆ? ಇಂದಿನದಲ್ಲದ ಕಾಲವನ್ನು ತೋರಿಸಲು ನಿರ್ಮಿಸಿದ ಸೆಟ್‌ಗಳೂ ತೀರಾ ಕೃತಕವಾಗಿವೆ.

ಹಾಸ್ಯಪಾತ್ರಗಳಿಂದಲೇ ಗುರ್ತಿಸಿಕೊಂಡಿದ್ದ ಮಿತ್ರ, ಈ ಸಿನಿಮಾದಲ್ಲಿ ತಮ್ಮ ಹಿಂದಿನ ಇಮೇಜ್‌ನ ನೆರಳೂ ಸುಳಿಯದಂತೆ ನಟಿಸಿದ್ದಾರೆ. ಮಗುವಿನ ಹಾಗೆ ತುಟಿ ವಕ್ರವಾಗಿಸಿ ಅಳುವ ಭಾಮಾ ಕೂಡ ತಮ್ಮ ಪಾತ್ರವನ್ನು ಜೀವಂತವಾಗಿಸಿದ್ದಾರೆ. ರಮೇಶ್‌ ಭಟ್‌, ಅವಿನಾಶ್‌ ಅವರದ್ದು ಅಚ್ಚುಕಟ್ಟು ಅಭಿನಯ.

ಎಲ್ಲವನ್ನೂ ಇರುವುದಕ್ಕಿಂತ ಹೆಚ್ಚು ಮೋಹಕಗೊಳಿಸಿಯೇ ತೋರಿಸಲು ಛಾಯಾಗ್ರಾಹಕ ವೈದಿ ಎಸ್‌. ವಹಿಸಿರುವ ಶ್ರಮ ಪ್ರತಿ ಫ್ರೇಮ್‌ನಲ್ಲಿಯೂ ಎದ್ದು ಕಾಣುತ್ತದೆ. ಅವರ ಈ ಶ್ರಮ ಅವಾಸ್ತವಿಕಗೊಳಿಸುವ ನಿರ್ದೇಶಕರ ಪ್ರಯತ್ನಕ್ಕೂ ಹೆಗಲು ಕೊಟ್ಟಿದೆ. ಅರ್ಜುನ್‌ ಜನ್ಯ ಸಂಯೋಜನೆಯ ಹಾಡುಗಳು ಆ ಕ್ಷಣದ ಅವಶ್ಯಕತೆಯನ್ನು ಪೂರೈಸುವುದರಾಚೆ ನೆನಪಿನಲ್ಲುಳಿಯುವುದಿಲ್ಲ.

ಭಾವುಕತೆಯಲ್ಲಿ ಮುಳುಗಿಯೇ ಇರಲು ಬೇಸರಿಸದವರಿಗೆ ‘ರಾಗ’ದ ಸುದೀರ್ಘ ಆಲಾಪ ಇಷ್ಟವಾಗಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.