ADVERTISEMENT

ಲೊಡ್ಡೆ! ಹೆಸರಿಗಷ್ಟೇ...

ಆನಂದತೀರ್ಥ ಪ್ಯಾಟಿ
Published 31 ಜುಲೈ 2015, 19:45 IST
Last Updated 31 ಜುಲೈ 2015, 19:45 IST

ಚಿತ್ರ:  ಲೊಡ್ಡೆ
ನಿರ್ಮಾಪಕ:  ಮಂಜುನಾಥ್‌
ನಿರ್ದೇಶಕ: ಎಸ್‌.ವಿ. ಸುರೇಶ್‌

​ತಾರಾಗಣ: ಕೋಮಲ್, ಆಕಾಂಕ್ಷ ಪುರಿ, ಸಯ್ಯಾಜಿ ಶಿಂಧೆ, ಅವಿನಾಶ್, ಕರಿಸುಬ್ಬು, ಸುಚೇಂದ್ರ ಪ್ರಸಾದ್, ಲಕ್ಷ್ಮಿದೇವಮ್ಮ, ಮುಖ್ಯಮಂತ್ರಿ ಚಂದ್ರು, ಪವಿತ್ರಾ ಲೋಕೇಶ್

ಅದೆಲ್ಲ ಕಾಲು ಶತಮಾನದ ಹಿಂದಿನ ಕಥೆ. ಆ ಕಥೆಗೆ ಇನ್ನೊಂದು ಉಪಕಥೆ. ಆ ಉಪಕಥೆಗೆ ಮತ್ತೊಂದು ಪೂರಕ ಕಥೆ. ಪೂರಕ ಕಥೆಗೆ ಸಂಬಂಧಿಸಿದಂತೆ ಮತ್ತೊಂದು ಕಥೆ. ಇದೆಲ್ಲದರ ಮಧ್ಯೆ ನಡೆಯುತ್ತಿರುವುದೇನು ಎಂದು ಯೋಚಿಸುತ್ತ ಹೋದರೆ, ತಲೆ ಸಿಡಿದು ಸಾವಿರ ಹೋಳಾದೀತು! ಆ ಗೊಂದಲದ ಗೂಡನ್ನು ಅಲ್ಲೇ ಬಿಟ್ಟು ಕೋಮಲ್‌ ಕೊಡುವ ಭರಪೂರ ಕಚಗುಳಿ ನೋಡುತ್ತ, ಮನಸಾರೆ ನಕ್ಕು ಬಿಡಬೇಕು.

ಎರಡು ಕುಟುಂಬಗಳ ನಡುವಿನ ದ್ವೇಷಕ್ಕೆ ನಾಯಕ ಅಥವಾ ನಾಯಕಿ ತೇಪೆ ಹಾಕುವ ಹತ್ತಾರು ಸಿನಿಮಾಗಳು ಹೀಗೆ ಬಂದು ಹಾಗೆ ಹೋಗಿವೆ. ಅಂಥದೇ ಎಳೆಯನ್ನು ಹಿಡಿದಿಟ್ಟುಕೊಂಡು ಎಸ್‌.ವಿ. ಸುರೇಶ ನಿರ್ದೇಶಿಸಿರುವ ‘ಲೊಡ್ಡೆ’ ಹೆಚ್ಚೇನೂ ಗಮನ ಸೆಳೆಯುವ ಚಿತ್ರವಲ್ಲ. ಕಾಮಿಡಿ ಹಾಗೂ ಭಾವನೆಗಳು ಒಟ್ಟಿಗೇ ಬೆರೆತ ಕಥೆಯನ್ನು ಬರೆಯುವಾಗ, ನಿರ್ದೇಶಕರು ಇನ್ನೊಂದಷ್ಟು ಯೋಚಿಸಿದ್ದರೂ ಸಾಕಿತ್ತು.

25 ವರ್ಷಗಳ ಹಿಂದೆ ನಡೆದ ಘಟನೆಯೊಂದು,ಆಪ್ತಮಿತ್ರರನ್ನು ದೂರ ಮಾಡಿರುತ್ತದೆ. ಅದನ್ನು ಸರಿಪಡಿಸಲು ನರಸಿಂಹ (ಕೋಮಲ್‌) ಬರುತ್ತಾನೆ. 25 ವರ್ಷಗಳ ಹಿಂದಿನ ಘಟನೆಯನ್ನು ಪದೇ ಪದೇ ನೆನಪಿಸುತ್ತ ಕುಟುಂಬ ದ್ವೇಷಕ್ಕೊಂದು ಪರಿಹಾರ ಕಂಡುಕೊಳ್ಳಲು ಹೆಣಗುತ್ತಾನೆ. ಹಲವಾರು ದೃಶ್ಯಗಳ ಮಧ್ಯೆ ‘25 ವರ್ಷಗಳ ಹಿಂದೆ’ ಎಂಬ ಉಲ್ಲೇಖ ಮತ್ತೆ ಮತ್ತೆ ಪ್ರಸ್ತಾಪವಾದಾಗ ಕುತೂಹಲ ಹೆಚ್ಚಾಗುತ್ತದೆ. ಆಗ ನಡೆದಿದ್ದೇನು ಎಂಬುದು ಕೊನೆಗೆ ಗೊತ್ತಾದಾಗ ಒಂದು ಹಾಡು ಪ್ರತ್ಯಕ್ಷವಾಗುತ್ತದೆ. ಅದರಲ್ಲಿ ವಿಷ್ಣುವರ್ಧನ್ (ಕಂಪ್ಯೂಟರ್ ಗ್ರಾಫಿಕ್ಸ್) ಹಾಗೂ ಕೋಮಲ್ ಜತೆಯಾಗಿ ಹೆಜ್ಜೆ ಹಾಕುತ್ತಾರೆ. ಅಂದಹಾಗೆ ಎಡಗೈಯನ್ನು ಹೆಚ್ಚೆಚ್ಚು ಬಳಸುವವರಿಗೆ ಪ್ರೀತಿಯಿಂದ ‘ಲೊಡ್ಡೆ’ ಅನ್ನುತ್ತಾರೆ.

ಕೋಮಲ್ ಸಿನಿಮಾ ಅಂದಮೇಲೆ ಇರಲೇಬೇಕಾದ ಹಾಸ್ಯದ ಸರಕು ಸಾಕಷ್ಟಿದೆ. ಪಟಾಕಿ ಹೊಡೆದಂತೆ ಪಟಪಟನೇ ಮಾತಾಡುವ ಅವರು ಇಡೀ ಚಿತ್ರವನ್ನು ಹೊತ್ತು ಮುನ್ನಡೆಸುತ್ತಾರೆ. ನಗೆಬುಗ್ಗೆ ಉಕ್ಕಿಸುವ ಕೋಮಲ್ ಮಾತುಗಳಲ್ಲಿ ಸಂಭಾಷಣೆಕಾರ ಎಂ.ಎಸ್. ಶ್ರೀನಾಥ್ ಪಾಲು ದೊಡ್ಡದು. ಮಾದಕವಾಗಿ ಕಾಣುವ ಆಕಾಂಕ್ಷ ಪುರಿ, ನಟನೆಯಲ್ಲೂ ಸೈ. ಕುಟುಂಬದ ಹಿರಿಯರಾಗಿ ಅವಿನಾಶ್ ಹಾಗೂ ಸಯ್ಯಾಜಿ ಶಿಂಧೆ ಗರ್ಜನೆ ಮಧ್ಯೆ ಪೈಲ್ಸ್‌ ರೋಗಿಯಾಗಿ ನವೀನ್‌ ಕೃಷ್ಣ, ವೈದ್ಯನಾಗಿ ಸುಚೇಂದ್ರಪ್ರಸಾದ್ ಅಭಿನಯ ಕೂಡ ಗಮನ ಸೆಳೆಯುತ್ತದೆ. ಎರಡು ಹಾಡುಗಳು (ಸಂಗೀತ ಚರಣ್‌ ಬ್ಯಾಂಚೋ) ನೆನಪಿನಲ್ಲಿ ಉಳಿದರೆ, ಮಲೆನಾಡಿನ ಸಿರಿಯನ್ನು ಸೇಫ್ಟಿ ಪ್ರಕಾಶ್ ಚೆನ್ನಾಗಿ ಸೆರೆಹಿಡಿದಿದ್ದಾರೆ.

ಎಲ್ಲ ಕೆಲಸಕ್ಕೂ ಎಡಗೈ ಬಳಸುವ ಎಡಚರ ಸಾಲಿನಲ್ಲಿ ಅಮಿತಾಭ್, ಸಚಿನ್ ಸೇರಿದಂತೆ ಹಲವು ಖ್ಯಾತನಾಮರು ಇದ್ದಾರೆ. ಅದರ ದೊಡ್ಡ ವಿವರ ಆರಂಭದಲ್ಲೇ ಹಾಡಿನ ಮೂಲಕ ಮೂಡಿಬರುತ್ತದೆ. ಸಿನಿಮಾದಲ್ಲಿ ನಾಯಕ ನರಸಿಂಹ ಎಡಗೈಯನ್ನು ಹೆಚ್ಚು ಬಳಸಿಲ್ಲ. ಹೀಗಾಗಿ ಈ ಶೀರ್ಷಿಕೆ ಔಚಿತ್ಯವಾದರೂ ಏನು ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT