ADVERTISEMENT

ವಿಳಾಸವಿಲ್ಲದವರ ಆಪ್ತಕಥೆ

ನಾವು ನೋಡಿದ ಚಿತ್ರ/ಶ್ರೀಕಂಠ

ಚ.ಹ.ರಘುನಾಥ
Published 6 ಜನವರಿ 2017, 11:14 IST
Last Updated 6 ಜನವರಿ 2017, 11:14 IST
ವಿಳಾಸವಿಲ್ಲದವರ ಆಪ್ತಕಥೆ
ವಿಳಾಸವಿಲ್ಲದವರ ಆಪ್ತಕಥೆ   

ನಿರ್ಮಾಣ: ಎಂ.ಎಸ್‌. ಮನುಗೌಡ
ನಿರ್ದೇಶನ: ಮಂಜು ಸ್ವರಾಜ್ತಾ
ರಾಗಣ: ಶಿವರಾಜ್‌ಕುಮಾರ್‌, ಚಾಂದಿನಿ ಶ್ರೀಧರನ್, ವಿಜಯ ರಾಘವೇಂದ್ರ, ರೇಖಾ

ಸಿನಿಮಾ ಕಥೆಗಳಲ್ಲಿ ಜನಸಾಮಾನ್ಯರ ಬದುಕು ಅಪರೂಪ ಆಗುತ್ತಿರುವ ಸಂದರ್ಭದಲ್ಲಿ ತೆರೆಕಂಡಿರುವ ‘ಶ್ರೀಕಂಠ’, ನಗರ ಪರಿಸರದಲ್ಲಿನ ಅಂಚಿನ ಜನರ ಬದುಕಿನ ತುಣುಕುಗಳನ್ನು ಕಾಣಿಸಲು ಪ್ರಯತ್ನಿಸಿರುವ ಸಿನಿಮಾ. ನಾಯಕನನ್ನು ಅತಿ ಮಾನವನ ರೂಪದಲ್ಲಿ ತೋರಿಸುವ ಸಿನಿಮಾಗಳು ಹೆಚ್ಚಾಗಿರುವ ಸಂದರ್ಭದಲ್ಲಿ ನಮ್ಮ ಸುತ್ತಲಿನ ಜನರ ಬದುಕಿನ ಕಥೆಯನ್ನು ಹೆಚ್ಚು ಉದ್ವೇಗವಿಲ್ಲದೆ ಹೇಳುವ ‘ಶ್ರೀಕಂಠ’ ತನ್ನ ಪ್ರಾಮಾಣಿಕ ಪ್ರಯತ್ನದಿಂದ, ಅಭಿರುಚಿಯಿಂದ ಕೊಂಚ ಭಿನ್ನವಾಗಿ ಕಾಣಿಸುತ್ತದೆ.

ಐಟಂ ಸಾಂಗ್‌ ಹಾಗೂ ಅಶ್ಲೀಲ ಹಾಸ್ಯದಿಂದ ಹೊರತಾದ ಈ ಸಿನಿಮಾ – ಮೌಲ್ಯ ವ್ಯವಸ್ಥೆ, ಭಾವುಕತೆ, ಸಂಬಂಧಗಳ ಕುರಿತು ವ್ಯಕ್ತಪಡಿಸಿರುವ ಕಾಳಜಿಯನ್ನೂ ವಿಶೇಷವಾಗಿ ಗಮನಿಸಬೇಕು.

ADVERTISEMENT

ಕಥಾನಾಯಕ ಶ್ರೀಕಂಠ ಮನೆ, ಕುಟುಂಬ, ನಿರ್ದಿಷ್ಟ ನೌಕರಿ – ಯಾವುದೂ ಇಲ್ಲದ ವ್ಯಕ್ತಿ. ಆತ ತನ್ನದೇ ಆದ ವಿಳಾಸವನ್ನು ಕಂಡುಕೊಳ್ಳಲು ಪ್ರಯತ್ನಿಸುವುದು ಚಿತ್ರದ ಕಥೆ. ಇನ್ನೇನು ಸಂಸಾರವಂದಿಗನಾದ ಎನ್ನುವ ವೇಳೆಗೆ ಶ್ರೀಕಂಠ ಒಂಟಿಯಾಗುವ ವಿಧಿವಿಲಾಸ ಚಿತ್ರದಲ್ಲಿದೆ. ತನ್ನ ಇಮೇಜನ್ನು ಮರೆತು, ರಸ್ತೆಯಲ್ಲಿ ಉಂಡು ಮಲಗುವ ನಾಯಕನ ಪಾತ್ರವನ್ನು ಪೋಷಿಸಿರುವ ಶಿವರಾಜ್‌ಕುಮಾರ್‌ ಮತ್ತು ನಾಯಕನ ತಾರಾವರ್ಚಸ್ಸಿನ ಲಾಭ ಪಡೆಯುವ ಬಗ್ಗೆ ಯೋಚಿಸದೆ, ಕಥೆಗೆ ಒತ್ತು ನೀಡಿರುವ ನಿರ್ದೇಶಕ ಮಂಜು ಸ್ವರಾಜ್‌ – ಇಬ್ಬರೂ ಸಹೃದಯರ ಮೆಚ್ಚುಗೆಗೆ ಅರ್ಹರು.

ಕಥೆಯಲ್ಲಿ ಅಂತರ್ಗತವಾಗಿರುವ ವಿಷಾದವನ್ನು ಲವಲವಿಕೆಯ ನಿರೂಪಣಾ ತಂತ್ರದ ಮೂಲಕ ಒಡೆಯಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಪಯಣದಲ್ಲಿ ಜೊತೆಯಾಗುವ ವ್ಯಕ್ತಿಯ ಮೂಲಕ ನಾಯಕನ ಬದುಕಿನ ವಿವರಗಳು ಅನಾವರಣಗೊಳ್ಳುತ್ತವೆ. ದಾರಿಯಲ್ಲಿ ಎಡತಾಕುವ ಗರ್ಭಿಣಿ ಹೆಣ್ಣು, ವೇಶ್ಯೆ, ಜ್ಯೋತಿಷಿ, ಕಾಮುಕ – ಇವರೆಲ್ಲ ನಾಯಕನ ವ್ಯಕ್ತಿತ್ವ ಹಾಗೂ ಬದುಕನ್ನು ಸೂಚಿಸುವ ಕೊಂಡಿಗಳಾಗಿರುವುದು ಚಿತ್ರದ ಕೊನೆಯಲ್ಲಿ ಸ್ಪಷ್ಟವಾಗುತ್ತದೆ. ಭಾವನೆಗಳೇ ಇಲ್ಲದಂತೆ ಕಾಣಿಸುವ ವ್ಯಕ್ತಿಯೊಳಗೆ ದುಃಖ ಮಡುಗಟ್ಟಿರುವುದು ಸಿನಿಮಾದ ಶೀರ್ಷಿಕೆಯನ್ನು ಸಮರ್ಥಿಸುವಂತಿದೆ.

ಶಿವರಾಜ್‌ಕುಮಾರ್‌ ಅಭಿನಯ ಚಿತ್ರದ ಆಕರ್ಷಕ ಅಂಶಗಳಲ್ಲೊಂದು. ಲವಲವಿಕೆ –ವಿಷಾದ ಎರಡನ್ನೂ ಒಳಗೊಂಡಿರುವ ಪ್ರಬುದ್ಧ ಅಭಿನಯ ಅವರದು. ನಾಯಕನ ಪಯಣದ ಜೊತೆಗಾರನ ಪಾತ್ರದಲ್ಲಿ ವಿಜಯ ರಾಘವೇಂದ್ರ, ಅಮಾಯಕ ಹುಡುಗಿಯ ಪಾತ್ರದಲ್ಲಿನ ನಾಯಕಿ ಚಾಂದಿನಿ ಹಾಗೂ ಬದುಕಿನ ಸತ್ಯಗಳನ್ನು ಬಡಬಡಿಸುವ ಹೆಣ್ಣಿನ ಪಾತ್ರದಲ್ಲಿ ರೇಖಾ (‘ಸ್ಪರ್ಶ’ ಚಿತ್ರದ ನಾಯಕಿ) ಪಾತ್ರಪೋಷಣೆ ಚೇತೋಹಾರಿಯಾಗಿದೆ.

ಅವಸರವಿಲ್ಲದ ನಡಿಗೆ ‘ಶ್ರೀಕಂಠ’ ಚಿತ್ರದ ವಿಶೇಷಗಳಲ್ಲೊಂದು. ಈ ಸಾವಧಾನ ಗುಣಕ್ಕೆ ಸುರೇಶ್‌ ಬಾಬು ಅವರ ಛಾಯಾಗ್ರಹಣ ಪೂರಕವಾಗಿದೆ. ಆದರೆ, ಅಜನೀಶ್ ಲೋಕನಾಥ್‌್ ಸಂಗೀತ ಸಂಯೋಜನೆಯಲ್ಲಿನ ಗೀತೆಗಳು ಆ ಕ್ಷಣದ ತುರ್ತನ್ನು ಮೀರಲು ಯಶಸ್ವಿಯಾಗಿಲ್ಲ.
ಯುವ ನಿರ್ದೇಶಕರೆಲ್ಲ ದೆವ್ವಗಳ ಹಿಂದೆ ಬಿದ್ದಿರುವ ಸಂದರ್ಭದಲ್ಲಿ, ಮೌಲ್ಯರಹಿತ ರಾಜಕಾರಣದ ಅಪಾಯಗಳ ಬಗ್ಗೆ ಹಾಗೂ ಬದುಕಿನ ಚೆಲುವಿನ ಕುರಿತು ಮಾತನಾಡುವ ‘ಶ್ರೀಕಂಠ’ ಒಂದು ವಿಶೇಷ ಪ್ರಯತ್ನದ ರೂಪದಲ್ಲಿ ನೋಡಬೇಕಾದ ಸಿನಿಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.