ADVERTISEMENT

ಹೊಸ ಹೂಗಾರನ ಪ್ರಯೋಗ ಮಾಲೆ

ವಿಶಾಖ ಎನ್.
Published 5 ಮೇ 2017, 11:10 IST
Last Updated 5 ಮೇ 2017, 11:10 IST
ಹೊಸ ಹೂಗಾರನ ಪ್ರಯೋಗ ಮಾಲೆ
ಹೊಸ ಹೂಗಾರನ ಪ್ರಯೋಗ ಮಾಲೆ   

ಚಿತ್ರ: ಹ್ಯಾಪಿ ನ್ಯೂ ಇಯರ್
ನಿರ್ಮಾಣ: ವನಜಾ ಪಾಟೀಲ್
ನಿರ್ದೇಶನ: ಪನ್ನಗ ಭರಣ
ತಾರಾಗಣ: ಧನಂಜಯ್, ಶ್ರುತಿ ಹರಿಹರನ್, ವಿಜಯ ರಾಘವೇಂದ್ರ

ಹಲವು ಬಗೆಗಳ ಹೂಗಳು ಹರಡಿಕೊಂಡಿವೆ. ಅವುಗಳನ್ನು ಹೆಕ್ಕುತ್ತಾ ಮಾಲೆ ಕಟ್ಟುವ ಕೈಗಳಿಗೆ ಎಲ್ಲಿ ಯಾವ ಬಣ್ಣದ ಹೂ ಸೇರಿಸಬೇಕು ಎಂದು ಗೊತ್ತಿರಬೇಕು. ಮಾಲೆ ಯಾವ ಸಂದರ್ಭಕ್ಕೆ ಹೊಂದೀತು ಎಂದು ಆ ಕೈಯನ್ನು ನಿಯಂತ್ರಿಸುವ ಮೆದುಳಿಗೂ ತಿಳಿದಿರಬೇಕು. ತಮ್ಮ ಮೊದಲ ಚಿತ್ರದಲ್ಲಿ ಪನ್ನಗ ಭರಣ ಮಾಲೆ ಕಟ್ಟಲು ಹೊರಟಿದ್ದಾರೆ. ಉಪಕಥೆಗಳನ್ನು ಹೇಳುತ್ತೇನೆಂಬ ಆತ್ಮವಿಶ್ವಾಸದಲ್ಲಿ ಉಪ ಪ್ರಸಂಗಗಳನ್ನು ಪೋಣಿಸಿದ್ದಾರೆ. ಕಟ್ಟಿದ ಹೂಗಳಲ್ಲಿ ಅಲ್ಲಲ್ಲಿ ಪರಿಮಳವಿದೆ. ಕೆಲವು ಕಡೆ ಇನ್ನೂ ಒತ್ತೊತ್ತಾಗಿ ಇರಬೇಕಿತ್ತು. ಹೂದಳಗಳ ಬಣ್ಣ ಕೂಡ ಅವರಂದುಕೊಂಡ ಹದದಲ್ಲಿ ಮಿಳಿತವಾಗಿಲ್ಲ.

ಉಪಕಥೆಗಳನ್ನು ಒಂದು ಸೂತ್ರಕ್ಕೆ ಒಗ್ಗಿಸಿ ಸಿನಿಮಾ ಮಾಡುವ ಪ್ರಯೋಗಕ್ಕೆ ಕನ್ನಡದ ಪುಟ್ಟಣ್ಣ ಕಣಗಾಲ್ ಅವರಿಂದ ಹಿಡಿದು ಬಾಲಿವುಡ್‌ನ ಅನುರಾಗ್ ಬಸು ಅವರವರೆಗೆ ಅನೇಕರು ಕೈಹಾಕಿದ್ದಾರೆ. ಕನ್ನಡದಲ್ಲಿಯೂ ಕೆಲವು ವರ್ಷಗಳ ಹಿಂದೆ ‘ಪಂಚಾಮೃತ’ ಎಂಬ ಐದು ಕಥೆಗಳ ಹೆಣಿಗೆಯ ಸಿನಿಮಾ ತೆರೆಕಂಡಿತ್ತು.

ADVERTISEMENT

‘ಹ್ಯಾಪಿ ನ್ಯೂ ಇಯರ್‌’ನಲ್ಲಿ ಕೂಡ ಪನ್ನಗ ಹಲವು ಉಪ ಪ್ರಸಂಗಗಳನ್ನು ಜೋಡಿಸಿದ್ದಾರೆ. ಅವನ್ನು ಗಟ್ಟಿಯಾದ ಸೂತ್ರದಲ್ಲಿ ಕಟ್ಟುವುದು ಅವರಿಗೆ ಸಾಧ್ಯವಾಗಿಲ್ಲ. ಬಿಡಿಬಿಡಿಯಾಗಿ ಆ ಪ್ರಸಂಗಗಳ ಅಭಿರುಚಿಯನ್ನು ಮೆಚ್ಚಿಕೊಳ್ಳಬಹುದಾದರೂ ಶಿಲ್ಪವಿಲ್ಲದ ‘ದರ್ಶನ’ ಕೈಕೊಡುವ ಸಾಧ್ಯತೆಯೇ ಹೆಚ್ಚಲ್ಲವೇ?

ಹೊಸ ವರ್ಷಾಚರಣೆಯ ಸಂದರ್ಭವನ್ನು ನೆಪ ಮಾಡಿಕೊಂಡು, ಅದನ್ನೇ ಶೀರ್ಷಿಕೆಯಾಗಿ ಇಟ್ಟಿರುವುದರಲ್ಲೇ ನಿರ್ದೇಶಕರು ಮಿತಿಯೊಂದಕ್ಕೆ ಒಪ್ಪಿಸಿಕೊಂಡು ಬಿಟ್ಟಿದ್ದಾರೆ.

ಪೊಲೀಸ್ ಇಲಾಖೆಯ ವರ್ಕೋಹಾಲಿಕ್ ಕಾರು ಚಾಲಕ, ಎದೆಯೊಳಗೆ ನೋವಿಟ್ಟುಕೊಂಡೂ ಉಳಿದವರ ನಗಿಸುವ ಅವ್ಯಾಜ ಪ್ರೇಮಿ ಹಾಗೂ ರೇಡಿಯೊ ಜಾಕಿ, ವಿದೇಶದಲ್ಲಿ ಶಕುನಗಳ ನಂಬುವ ಹುಡುಗಿಯ ಪ್ರೇಮಪಾಶದಲ್ಲಿ ಸಿಲುಕುವ ಕಾರ್ಪೊರೇಟ್ ನೌಕರ, ಹೊರದೇಶದ ಸಮಾಜಸೇವಕಿಯ ಮಾಂತ್ರಿಕ ನೋಟಕ್ಕೇ ಕರಗುವ ಕೊಲೆಗಡುಕ – ಈ ಪಾತ್ರಗಳು ಸಿನಿಮಾದಲ್ಲಿ ಭಾವತಂತಿಗಳನ್ನು ಮೀಟುತ್ತವೆ. ಆದರೆ, ಇವುಗಳೆಲ್ಲಕ್ಕೆ ನಿರ್ದಿಷ್ಟ ಬಂಧವಿಲ್ಲ.

ರೇಡಿಯೊ ಜಾಕಿಯಾಗಿ ಧನಂಜಯ್ ಹಾಗೂ ಅವರ ಹಾಸಿಗೆ ಹಿಡಿದ ಪ್ರೇಮಿಯಾಗಿ ಶ್ರುತಿ ಹರಿಹರನ್ ಅಭಿನಯ ಗಮನಾರ್ಹ. ಸಾಯಿಕುಮಾರ್ ಹಾಗೂ ಸುಧಾರಾಣಿ ಜೋಡಿಯ ಪ್ರಸಂಗವೂ ಆಸಕ್ತಿಕರ. ವಿಜಯ ರಾಘವೇಂದ್ರ ಅಭಿನಯದಲ್ಲೂ ಹದವಿದೆ. ದಿಗಂತ್ ಪಾತ್ರ ನೆನಪಿನಲ್ಲಿ ಉಳಿಯುವುದಿಲ್ಲ. ಸಿಂಪಲ್ಲಾಗ್‌ ಸುನಿ ಹಾಗೂ ಪ್ರತಿಭಾ ನಂದಕುಮಾರ್‌ ಸಂಭಾಷಣೆ ಅಲ್ಲಲ್ಲಿ ಹೃದಯಕ್ಕೇ ಕೈಹಾಕುವಂತಿದೆ. ರಘು ದೀಕ್ಷಿತ್ ಸಂಯೋಜನೆಯ ಎರಡು ಹಾಡುಗಳು ಶ್ಲಾಘನೀಯ.

ಮಗಳ ನೃತ್ಯ ಪ್ರದರ್ಶನ ನೋಡಲಾಗದ ಪೊಲೀಸ್ ಇಲಾಖೆ ಕಾರಿನ ಚಾಲಕ, ಪ್ರಿಯತಮೆಗೆ ಕೃತಕ ಕಾಶ್ಮೀರ ತೋರಿಸಿ ಕೊನೆಯಾಸೆ ಈಡೇರಿಸಿ ಹನಿಗಣ್ಣಾಗುವ ರೇಡಿಯೊ ಜಾಕಿ, ಬಾಸ್‌ನಲ್ಲೇ ತಂದೆಯನ್ನು ಕಾಣುವ ಆಟೊಮೊಬೈಲ್ ಮಳಿಗೆಯ ಹುಡುಗಿ ಭಾವುಕ ನೆಲೆಗಟ್ಟಿಗೆ ಅಗತ್ಯ ಪರಿಕರಗಳಾಗಿ ಒದಗಿಬಂದಿದ್ದಾರೆ.

ಹೊಸತೇನನ್ನೋ ಹೇಳುವ ಪನ್ನಗ ಅವರ ತುಡಿತವನ್ನು ಒಪ್ಪಿಕೊಂಡು, ಅವರ ಮುಂದಿನ ಪ್ರಯತ್ನಗಳ ಕುರಿತು ಕಣ್ಣರಳಿಸಿಕೊಂಡು ಕಾಯಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.