ADVERTISEMENT

‘ಐರಾವತ’ ಮಹಾತ್ಮೆ !

‘ಐರಾವತ’

ಆನಂದತೀರ್ಥ ಪ್ಯಾಟಿ
Published 3 ಅಕ್ಟೋಬರ್ 2015, 6:11 IST
Last Updated 3 ಅಕ್ಟೋಬರ್ 2015, 6:11 IST

‘ಐರಾವತ’
ನಿರ್ಮಾಪಕ: ಸಂದೇಶ ನಾಗರಾಜ್, ನಿರ್ದೇಶನ: ಎ.ಪಿ.ಅರ್ಜುನ್, ತಾರಾಗಣ: ದರ್ಶನ್, ಊರ್ವಶಿ ರೌಟೇಲಾ, ಪ್ರಕಾಶ್ ರೈ, ಅನಂತನಾಗ್, ಸಿತಾರಾ, ಜಿ.ಕೆ.ಗೋವಿಂದರಾವ್, ಅಶೋಕ


ಸರ್ಕಾರವನ್ನು ಯಾಮಾರಿಸಿ ಪೊಲೀಸ್ ಅಧಿಕಾರಿಯಾಗುವುದು ಎಷ್ಟು ಸುಲಭ! ಹಾಗೆ ದೊಡ್ಡ ಅಧಿಕಾರಿಯಾದವರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ರಾಮರಾಜ್ಯ ಸ್ಥಾಪನೆಗೆ ಎಷ್ಟು ಹೊತ್ತು ಹಿಡಿದೀತು? ಆದರೆ ಹುಷಾರು! ಪ್ರಾಮಾಣಿಕತೆಯನ್ನು ಸಹಿಸದವರು ಏನು ಬೇಕಾದರೂ ಮಾಡಿಯಾರು. ಆದರೆ ಜನ ಬೆಂಬಲ ಇದ್ದರೆ ನಕಲಿ ಅಧಿಕಾರಿಯು ಐಪಿಎಸ್‌ ಪಾಸು ಮಾಡಿ, ರಿಯಲ್ ಅಧಿಕಾರಿಯಾಗಬಹುದು. ದುರುಳರನ್ನು ಮಟ್ಟ ಹಾಕಿ, ಸರ್ಕಾರದಿಂದ ಪ್ರಶಸ್ತಿಯನ್ನೂ ಪಡೆಯಬಹುದು.

ಇಷ್ಟೆಲ್ಲವನ್ನೂ ‘ಐರಾವತ’ ಬರೀ ಎರಡೂವರೆ ತಾಸಿನಲ್ಲಿ ತೋರಿಸುತ್ತದೆ. ಸುದೀರ್ಘ ಕಥೆಯನ್ನು ಹಂತಹಂತವಾಗಿ ವಿಂಗಡಿಸಿ, ಪ್ರತಿ ಭಾಗದಲ್ಲೂ ಫೈಟಿಂಗ್, ಹಾಡು ಇರುವಂತೆ ನೋಡಿಕೊಳ್ಳಲಾಗಿದೆ. ಕರ್ನಾಟಕ ಪೊಲೀಸ್‌ ಘನತೆ ಹೆಚ್ಚಿಸುವ ಉದ್ದೇಶ ಮೇಲ್ನೋಟಕ್ಕೆ ಕಾಣುತ್ತಿದೆಯಾದರೂ, ಅದಕ್ಕಿಂತ ಹೆಚ್ಚಾಗಿ ದರ್ಶನ್ ವರ್ಚಸ್ಸನ್ನು ಹಿಗ್ಗಿಸುವುದೇ ‘ಐರಾವತ’ದ ಹಿಂದಿರುವಂತಿದೆ.

ದರ್ಶನ್ ಅಭಿಮಾನಿಗಳನ್ನು ಗಮನದಲ್ಲಿ ಇಟ್ಟುಕೊಂಡೇ ಮಾಡಿರುವ ‘ಐರಾವತ’, ಸಿದ್ಧಸೂತ್ರಗಳ ಚೌಕಟ್ಟಿನಿಂದ ಆಚೆಗೆ ದಾಟುವ ಯತ್ನವನ್ನೇ ಮಾಡಿಲ್ಲ. ತನ್ನ ಕುಟುಂಬದ ಸಮಸ್ಯೆಗೆ ಸ್ಪಂದಿಸದ ಪೊಲೀಸರ ವಿರುದ್ಧ ಬಂಡೆದ್ದು, ತಾನೇ ಪೊಲೀಸ್ ಅಧಿಕಾರಿಯಾಗುವ ಯುವರೈತನೊಬ್ಬನ ಕಥೆಯಿದು.

ರೈತ, ನಕಲಿ ಪೊಲೀಸ್ ಹಾಗೂ ಅಸಲಿ ಪೊಲೀಸ್– ಎಂಬ ಮೂರು ಹಂತಗಳಲ್ಲಿ ದರ್ಶನ್ ಪಾತ್ರವಿದೆ. ಯಾವ ವೇಷ ಹಾಕಿದರೇನು? ಸಾಮಾನ್ಯ ಜನರ ಸಂಕಟಕ್ಕೆ ಸ್ಪಂದಿಸುವ ಗುಣ ಅವರದು! ಅದಕ್ಕೆ ತಕ್ಕಂತೆ ‘ಇಮೇಜ್’ ವೈಭವೀಕರಿಸುವ ಸಂಭಾಷಣೆಗಳು ಹೇರಳವಾಗಿವೆ; ಕೆಲವು ಸಲ ಅತಿರೇಕ ಅನಿಸುತ್ತವೆ.

ಹೀರೋಗೆ ಪ್ರತಿಯಾಗಿ ವಿಲನ್ ಇರಬೇಕಲ್ಲ? ಇಲ್ಲಿನ ಖಳನಾಯಕ ಪ್ರತಾಪ್ ಕಾಳೆ, ‘ಬಹುಮುಖ’ ವ್ಯಕ್ತಿತ್ವದವನು, ಕಾನೂನುಬಾಹಿರ ಚಟುವಟಿಕೆಯನ್ನೂ ನಡೆಸುತ್ತಿರುವವನು. ಪ್ರಕಾಶ್ ರೈ ನಿರ್ವಹಿಸಿರುವ ಈ ಪಾತ್ರಕ್ಕೆ ಹೆಚ್ಚು ಆದ್ಯತೆ ಸಿಕ್ಕಿದೆ. ಮುಖದಲ್ಲೇ ಭಾವನೆ ತೋರುವ ರೈಗೆ ಸೈ ಅನ್ನದವರಾರು?

‘ಐರಾವತ’ನನ್ನು ಆ್ಯಕ್ಷನ್ ಸಿನಿಮಾ ಮಾಡುವುದರಲ್ಲಿ ಅದ್ಭುತ ಸ್ಟಂಟ್‌ ಸಂಯೋಜಿಸಿರುವ ರವಿವರ್ಮ ಪಾಲು ದೊಡ್ಡದು. ಪಾತ್ರಕ್ಕಾಗಿ ದರ್ಶನ್ ತಮ್ಮ ದೇಹವನ್ನು ಸಾಕಷ್ಟು ದಂಡಿಸಿರುವುದು ಎದ್ದು ಕಾಣುತ್ತದೆ. ಬಳ್ಳಿಯಂತೆ ಬಳಕುವ ನಾಯಕಿ (ಊರ್ವಶಿ ರೌಟೇಲಾ) ನಾಲ್ಕಾರು ದೃಶ್ಯಕ್ಕೆ ಸೀಮಿತ.

ಅಧಿಕಾರಿ (ನಕಲಿ) ಅಷ್ಟೊಂದು ಜನಪ್ರಿಯತೆ ಪಡೆಯುವುದು, ಆತನನ್ನು ಬಂಧಿಸಿದಾಗ ಜನರ ಒತ್ತಾಯಕ್ಕೆ ಮಣಿದು ಜನತಾ ನ್ಯಾಯಾಲಯ ನಡೆಸುವುದು, ಬಳಿಕ ಆತ ಐಪಿಎಸ್ ಪಾಸು ಮಾಡಿ, ಅಧಿಕಾರಿಯಾಗುವುದೆಲ್ಲ ವಾಸ್ತವಕ್ಕೆ ಎಷ್ಟು ಹತ್ತಿರ? ಇಂಥ ಲಾಜಿಕ್ಕನ್ನೆಲ್ಲ ಅತ್ತ ತಳ್ಳಿದರೆ, ‘ಐರಾವತ’ ಪಕ್ಕಾ ಆ್ಯಕ್ಷನ್ ಸಿನಿಮಾ.

ಹೊಡೆದಾಟದಲ್ಲಿ ಪುಡಿಪುಡಿಯಾಗುವ ಕಾರ್‌– ಜೀಪುಗಳು, ಪಿಸ್ತೂಲುಗಳು ಉಗುಳುವ ಗುಂಡುಗಳ ಘಾಟು ವಿಪರೀತ. ಅದನ್ನೆಲ್ಲ ಸಹಿಸುತ್ತ, ‘ನಮ್ಮ ಮಾತನ್ನು ಸರ್ಕಾರ ಕೇಳುವಂತಿದ್ದರೆ, ಎಲ್ಲ ಪೊಲೀಸ್ ಅಧಿಕಾರಿಗಳು ಐರಾವತನ ಹಾಗೆ ಇದ್ದರೆ ನಮ್ಮ ನಾಡು ರಾಮರಾಜ್ಯ ಆಗುತ್ತಿತ್ತು’ ಎಂಬ ಹಳಹಳಿಕೆಯೊಂದಿಗೆ ಪ್ರೇಕ್ಷಕ ಹೊರಬರುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.