ADVERTISEMENT

ಕಾವೇರಿ ವಿಚಾರ: ನಟ ಪ್ರಕಾಶ್ ರೈ ಸಿಟ್ಟಾಗಿದ್ದೇಕೆ?

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2016, 13:09 IST
Last Updated 1 ಅಕ್ಟೋಬರ್ 2016, 13:09 IST
ಪ್ರಕಾಶ್ ರೈ
ಪ್ರಕಾಶ್ ರೈ   

ಬೆಂಗಳೂರು: ನಟ,ನಿರ್ದೇಶಕ,ನಿರ್ಮಾಪಕ ಪ್ರಕಾಶ್ ರೈ ಅವರ ನೂತನ ಚಿತ್ರ 'ಇದೊಳ್ಳೆ ರಾಮಾಯಣ' ತೆರೆಗೆ ಬರಲು ಸಿದ್ಧವಾಗಿದೆ. ಸದ್ಯ, ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ರೈ ಶನಿವಾರ ಖಾಸಗಿ ವಾಹಿನಿಯೊಂದರಲ್ಲಿ ಸಂದರ್ಶನ ನೀಡುತ್ತಿದ್ದಾಗ ನಿರೂಪಕಿಯ ಮೇಲೆ ಸಿಟ್ಟಾಗಿದ್ದು, ಆ ವಿಡಿಯೊ ದೃಶ್ಯಗಳು ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿವೆ.

ಕಾವೇರಿ ನದಿ ನೀರು ಹಂಚಿಕೆ ವಿಚಾರದ ಬಗ್ಗೆ ಕೇಳಿದಾಗ ಪ್ರಕಾಶ್ ರೈ ಸಿಟ್ಟಾಗಿದ್ದಾರೆ ಎಂಬುದು ಸದ್ಯ ಚರ್ಚೆಗೆ ಗ್ರಾಸವಾಗಿರುವ ಸಂಗತಿ. 'ಇದೊಳ್ಳೆ ರಾಮಾಯಣ' ಸಿನಿಮಾ ವಿಷಯದ ಬಗ್ಗೆಯೇ ಸಂದರ್ಶನ ನಡೆಯುತ್ತಿತ್ತು. ಆ ಹೊತ್ತಲ್ಲಿ ನಿರೂಪಕಿ ಈಗ ಕಾವೇರಿ ಸಮಸ್ಯೆ ನಡೆಯುತ್ತಿದೆ. ಈ ಸಮಸ್ಯೆ ಪರಿಹಾರ ಕಂಡುಕೊಳ್ಳುತ್ತೆ ಅಂತ ಅನಿಸುತ್ತಿದೆಯಾ? ಸುಪ್ರೀಂಕೋರ್ಟ್ ದ್ದು ತಪ್ಪಾ? ಹಠ ಹಿಡಿದಿರುವವರು ಯಾರು? ತಮಿಳುನಾಡಾ? ಕರ್ನಾಟಕವಾ?ಎಂದು ಪ್ರಶ್ನೆ ಕೇಳಿದ್ದಾರೆ.

ಆ ಪ್ರಶ್ನೆಗೆ ರೈ ಅವರ ಉತ್ತರ ಹೀಗಿತ್ತು:
"ಇದೊಳ್ಳೆ ರಾಮಾಯಣದ ಬಗ್ಗೆ ಮಾತಾಡ್ತಿದ್ವಿ, ಸಿನಿಮಾದ ಬಗ್ಗೆ ಮಾತಾಡ್ತಿದೀವಿ, ರಾಜಕೀಯ ಅದು ದೊಡ್ಡ ವಿಷ್ಯ. ಅದು ಬೇರೆ ವಿಷ್ಯ, ನೀವ್ ಅನ್ಕೊಂಡಷ್ಟು ಚಿಕ್ಕ ವಿಷ್ಯ ಅಲ್ಲಾ ಅದು. ತುಂಬಾ ಆಳವಾದ ವಿಷಯ. ರೈತರ ಸಮಸ್ಯೆ ಬರೀ ನೀರು ಮಾತ್ರ ಅಲ್ಲಾ. ಬಹಳಷ್ಟು ಸಮಸ್ಯೆಗಳಿವೆ. ತುಂಬಾ ಗಂಭೀರವಾಗಿ ಮಾತಾಡ್ಬೇಕು. ಈ ತರದ ಕಾರ್ಯಕ್ರಮಗಳಲ್ಲಿ ಸುಮ್ ಸುಮ್ನೆ ಬಾಯಿಗೆ ಬಂದ ಹಾಗೆ ಪ್ರಶ್ನೆ ಕೇಳಿ ನನ್ನನ್ನ ಎಳಿಬೇಡಿ ನೀವು’

‘ಏನ್ ಸಿಗುತ್ತೆ ನಿಮಗೆ ಇದರಿಂದ? ಜನರು ಈಗಾಗಲೇ ಕೋಪದಲ್ಲಿದ್ದಾರೆ. ನೋವಿನಲ್ಲಿದ್ದಾರೆ. ಸಿನಿಮಾ ನಟನಿಂದ ಇದರ ಬಗ್ಗೆ ಏನೋ ಕೇಳ್ಕೊಂಡು.. ಇದ್ಯಾಕೆ ಬರುತ್ತೆ ನಿಮಗೆ ಈ ಕೆಟ್ಟ ಬುದ್ಧಿ?

ಸಮಯ ಇದಲ್ಲಾ ಅಲ್ವಾ? ದಯವಿಟ್ಟು ನೀವು ಜವಾಬ್ದಾರಿಯಿಂದ ಇರಬೇಕು, ನಿಮಗ್ಯಾಕ್ ಆ ಜವಾಬ್ದಾರಿಗಳಿಲ್ಲಾ?
ಯಾವ ಸಂದರ್ಭದಲ್ಲಿ ಯಾವ ಪ್ರಶ್ನೆ ಕೇಳ್ಬೇಕು ಅನ್ನೋ ಒಂದು ಬೇಸಿಕ್ ತಾಳ್ಮೆ ಇಲ್ಲದಿದ್ರೆ ತಪ್ಪಲ್ವಾ ಅಮ್ಮಾ ನೀವು ಮಾಡೋದು?
ನಾನೇನ್ ಪಾಪ ಮಾಡಿದ್ದೀನಿ ನಿಮ್ಗೆ? ಎಂದು ನಿರೂಪಕಿಯನ್ನು ಕೇಳಿದ್ದಾರೆ.

ರೈ ಅವರ ಪ್ರತಿಕ್ರಿಯೆಯಿಂದ ಇರಿಸುಮುರಿಸುಗೊಂಡ ನಿರೂಪಕಿ, ಅವರನ್ನು ಸಮಾಧಾನ ಮಾಡಲು ಯತ್ನಿಸಿದಾಗ ‘ಇಲ್ಲಿರುವಂತ ನಟರೂ ಸಾಕಷ್ಟು ಮಂದಿ ಅಲ್ಲಿದ್ದಾರೆ...’ ‘ಇಲ್ಲಿನ ನಟರೂ ನಟರೇ, ಅಲ್ಲಿನ ನಟರೂ ನಟರೇ, ಎಲ್ಲರೂ ಮನುಷ್ಯರೇ,  ಸಮಸ್ಯೆ ಬೇರೆ ಇದೆ. ನಮ್ಮೆಲ್ಲರಿಗೂ ಗೊತ್ತು ಅದು’ ಎಂದು ಹೇಳುತ್ತಾ ಸಂದರ್ಶನವನ್ನು ಅರ್ಧದಲ್ಲೇ ನಿಲ್ಲಿಸಿ ಅಲ್ಲಿಂದ ಹೊರ ನಡೆದಿದ್ದಾರೆ.

ಫೇಸ್‍ಬುಕ್ ನಲ್ಲಿ ನಡೆಯುತ್ತಿದೆ ಬಿಸಿ ಬಿಸಿ ಚರ್ಚೆ

ADVERTISEMENT

ಪ್ರಕಾಶ್ ರೈ ಅವರು ಕಾವೇರಿ ವಿಚಾರದ ಬಗ್ಗೆ ಮಾತನಾಡಿದಾಗ ಸಿಟ್ಟಾಗಿದ್ದಾರೆ ಎಂಬ ವಿಡಿಯೊ ಕ್ಲಿಪಿಂಗ್‍ವೊಂದನ್ನು ಖಾಸಗಿ ವಾಹಿನಿ ಸಾಮೂಹಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಪ್ರಕಾಶ್ ರೈ ಹೇಳಿದ್ದು ಸರಿ ಎಂದು ಕೆಲವು ಮಂದಿ ವಾದಿಸಿದರೆ, ನಿರೂಪಕಿಯ ಮೇಲೆ ರೈ ಅಷ್ಟೊಂದು ಸಿಟ್ಟಿನಲ್ಲಿ ಮಾತನಾಡಬಾರದಿತ್ತು ಎಂಬ ಪರ ವಿರೋಧ ನಿಲುವುಗಳು ಚರ್ಚೆಯಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.