ADVERTISEMENT

ಕಸ ಗುಡಿಸುವವರೂ ಇಲ್ಲ, ಕಾವಲೂ ಇಲ್ಲ...

ರಾಯಚೂರು : ಕ್ರೀಡಾ ಹಾಸ್ಟೆಲ್‌ ಕಥೆ–ವ್ಯಥೆ

ಶಶಿಧರ ಗರ್ಗಶ್ವೇರಿ
Published 5 ಜುಲೈ 2015, 19:30 IST
Last Updated 5 ಜುಲೈ 2015, 19:30 IST

ಕೆಲವೆಡೆ ಸೋರುವ ತಾರಸಿ, ಎಲ್ಲೆಂದರಲ್ಲಿ ಕಣ್ಣಿಗೆ ರಾಚುವ ಕಸ ಕಡ್ಡಿ, ಕಿತ್ತು ಬಂದ ಕಿಟಕಿ, ಒಡೆದ ಕಿಟಕಿಗಳ ಗಾಜು, ಗಬ್ಬುನಾರುವ ಶೌಚಾಲಯ, ಚಪ್ಪಡಿ ಕಲ್ಲಿನ ನೆಲಹಾಸು... ಇದು ರಾಯಚೂರು ನಗರದಲ್ಲಿರುವ ಕ್ರೀಡಾಹಾಸ್ಟೆಲ್‌ನ ಸ್ಥಿತಿ.

ಫುಟ್‌ಬಾಲ್‌ ಮತ್ತು ಹಾಕಿ ಕ್ರೀಡೆಗಳಿಗೆ ಸಂಬಂಧಿಸಿದಂತೆ 5ರಿಂದ 10ನೇ ತರಗತಿವರೆಗಿನ ಬಾಲಕರ ಹಾಸ್ಟೆಲ್‌ ಬಿಆರ್‌ಬಿ ಕಾಲೇಜಿನ ಹಿಂಬದಿ ಇದೆ. 52 ಕೊಠಡಿಗಳಿರುವ ಹಾಸ್ಟೆಲ್‌ ಕಟ್ಟಡವೇನೋ ದೊಡ್ಡದಿದೆ. ಆದರೆ, ನಿರ್ವಹಣೆ ಇಲ್ಲ. ಹಾಸ್ಟೆಲ್‌ನ ಗೇಟ್‌ ಬಳಿಯೇ ಹಂದಿಗಳ ಸಂಸಾರ ಬೀಡುಬಿಟ್ಟಿದೆ. ಇವುಗಳಿಗೆ ಹಾಸ್ಟೆಲ್‌ ಆವರಣಕ್ಕೂ ಮುಕ್ತ ಪ್ರವೇಶ ಇದೆ.

ಹಿಂದೆ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್‌ ಆಗಿದ್ದ ಈ ಕಟ್ಟಡವನ್ನು ಬಿಜೆಪಿ– ಜೆಡಿಎಸ್‌ ಸಮ್ಮಿಶ್ರ ಸರ್ಕಾರವಿದ್ದಾಗ ಕ್ರೀಡಾ ಹಾಸ್ಟೆಲ್‌ಗೆ ಪಡೆದುಕೊಳ್ಳಲಾಗಿದೆ. ಆದರೆ, ಹಾಸ್ಟೆಲ್‌ಗೆ ವಾರ್ಡನ್‌ ಇಲ್ಲ. ಇಲಾಖೆಯ ಗುಮಾಸ್ತರೊಬ್ಬರಿಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಕಸಗುಡಿಸುವ ಮತ್ತು ಶೌಚಾಲಯ ಸ್ವಚ್ಛ ಮಾಡಬೇಕಾದ ಡಿ ಗುಂಪಿನ ಕಾಯಂ ಸಿಬ್ಬಂದಿಯೂ ಇಲ್ಲ.

ಹೊರಗುತ್ತಿಗೆ ಮೇಲೆ ಅವರನ್ನು ನೇಮಿಸಿಕೊಳ್ಳಲಾಗಿದೆ. ಭದ್ರತಾ ಸಿಬ್ಬಂದಿಯೊಬ್ಬರು ಸಂಜೆ 6 ಗಂಟೆಗೆ ಬಂದು ಬೆಳಿಗ್ಗೆ 7ಕ್ಕೆ ಹೋಗುತ್ತಾರೆ. ಹಗಲು ಹೊತ್ತಿನಲ್ಲಿ ಹಾಸ್ಟೆಲ್‌ಗೆ ಕಾವಲು ಇಲ್ಲ. ಹಾಕಿ ಮತ್ತು ಫುಟ್‌ಬಾಲ್‌ಗೆ ತಲಾ 25 ಬಾಲಕರಿಗೆ ಪ್ರವೇಶ ಇದೆ. ಸದ್ಯ ಒಟ್ಟು 39 ಬಾಲಕರಿದ್ದು, ಇವರಲ್ಲಿ 22 ಬಾಲಕರು ಹಾಕಿಯಲ್ಲಿ ಮತ್ತು 17 ಮಂದಿ ಫುಟ್‌ಬಾಲ್‌ ಅಭ್ಯಾಸ ಮಾಡುತ್ತಾರೆ. ಆದರೆ, ಹಾಕಿಗೆ ಇಲಾಖೆಯ ಕೋಚ್‌ ಇದ್ದಾರೆ. ಫುಟ್‌ಬಾಲ್‌ಗೆ ಪ್ರತಿವರ್ಷ ಹೊರಗುತ್ತಿಗೆಯ ಮೇಲೆ ಕೋಚ್‌ ನೇಮಕ ಮಾಡಿಕೊಳ್ಳಲಾಗುತ್ತದೆ.

ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ, ಮಲಗುವುದಕ್ಕೆ ಮಂಚ, ಹಾಸಿಗೆ ಹೊದಿಕೆಗಳು ಇವೆ. ಆದರೆ, ಹಾಸ್ಟೆಲ್‌ ಮುಂದಿನ ಇಕ್ಕಟ್ಟಾದ ಜಾಗದಲ್ಲೇ ಅವರು ಅಭ್ಯಾಸ ಮಾಡಬೇಕಿದೆ. ಈ ಜಾಗದ ಅಲ್ಲಲ್ಲಿ ದಪ್ಪ ದಪ್ಪ ಕಲ್ಲುಗಳು ಇದ್ದವು ಅದನ್ನು ಈಗ ತೆಗೆಯಿಸಿ ಒಂದು ಕಡೆ ಹಾಕಲಾಗಿದೆ.ಹಾಸ್ಟೆಲ್‌ನಿಂದ ಸುಮಾರು ನಾಲ್ಕು ಕಿ.ಮೀ. ದೂರದಲ್ಲಿರುವ ಜಿಲ್ಲಾ ಕ್ರೀಡಾಂಗಣಕ್ಕೆ ಮಕ್ಕಳನ್ನು ಅಭ್ಯಾಸಕ್ಕಾಗಿ ಈ ಮೊದಲು ಕರೆದೊಯ್ಯಲಾಗುತ್ತಿತ್ತು.

ಆದರೆ, ಕ್ರೀಡಾಂಗಣಕ್ಕೆ ಹೋಗಿ ಬರುವುದಕ್ಕೆ ಒಂದು ತಾಸಿಗೂ ಹೆಚ್ಚು ಸಮಯ ತಗುಲುತ್ತದೆ. ಅದೂ ಅಲ್ಲದೆ ಆ ಕ್ರೀಡಾಂಗಣದಲ್ಲಿ  ಕ್ರಿಕೆಟ್‌ ಆಡುವವರ ಸಂಖ್ಯೆಯೇ ಹೆಚ್ಚು. ಹಾಸ್ಟೆಲ್‌ ಮಕ್ಕಳ ತಲೆಗೆ ಬಾಲ್‌ ಬಡಿದು ಪೆಟ್ಟಾಗುವ ಅಪಾಯವೂ ಬಹಳಷ್ಟಿತ್ತು. ಅಲ್ಲದೆ ಕ್ರೀಡಾಂಗಣಕ್ಕೆ ಹೋಗಿ ಬರುವ ಮಾರ್ಗದ ಮಧ್ಯೆ ಏನಾದರೂ ಅವಘಡವಾಗುವ ಸಾಧ್ಯತೆಗಳೂ ಇತ್ತು. ಹೀಗಾಗಿ ಇಂತಹ ರಗಳೆಗಳೇ ಬೇಡ ಎಂದು ತೀರ್ಮಾನಿಸಿದ ಸಂಬಂಧಪಟ್ಟ ಅಧಿಕಾರಿಗಳು ಹಾಸ್ಟೆಲ್‌ನ ಎದುರಿನಲ್ಲಿರುವ ಪುಟ್ಟ ಜಾಗದಲ್ಲೇ ಮಕ್ಕಳು ಅಭ್ಯಾಸ ನಡೆಸಲು ಆದೇಶಿಸಿದ್ದಾರೆ.

ಹಾಸ್ಟೆಲ್‌ ನವೀಕರಣಕ್ಕೆ₹ 45 ಲಕ್ಷ  ಬಿಡುಗಡೆಯಾಗಿದೆ. 2009ರಲ್ಲಿ₹15 ಲಕ್ಷ ಪಾವತಿಯೂ ಆಗಿದೆ. ಆದರೆ, ನಿರ್ಮಿತಿ ಕೇಂದ್ರದವರು ಇದನ್ನು ಮಂದಗತಿಯಲ್ಲಿ ಮಾಡಿದರು. ಈಗ ಈಕಾಮಗಾರಿಗೆ ₹28 ಲಕ್ಷ ಬಿಡುಗಡೆ ಮಾಡಿರುವ ಜಿಲ್ಲಾಧಿಕಾರಿಗಳು ತ್ವರಿತವಾಗಿ ಕೆಲಸ ಮುಗಿಸುವಂತೆ   ಸೂಚಿಸಿದ್ದಾರೆ.

ಕೊರತೆಯ ಮಧ್ಯೆಯೂ ಸಾಧನೆ
ಸಮಸ್ಯೆ– ಕೊರತೆಗಳ ನಡುವೆಯೂ ಈ ಹಾಸ್ಟೆಲ್‌ ಮಕ್ಕಳು ಗಮನಾರ್ಹ ಸಾಧನೆ ಮಾಡಿದ್ದಾರೆ. 14 ವರ್ಷದೊಳಗಿನವರ ಫುಟ್‌ಬಾಲ್‌ ಟೂರ್ನಿಯಲ್ಲಿ ಈ ಹಾಸ್ಟೆಲ್‌ನ ಬಾಲಕರು ಉತ್ತಮ ಸಾಮರ್ಥ್ಯ ತೋರಿದ್ದಾರೆ. ಹರಿಯಾಣದ ರೋಹ್ಟಕ್‌ನಲ್ಲಿ ಕಳೆದ ವರ್ಷ ನಡೆದ ಗ್ರಾಮೀಣ ಹಾಕಿ ಪಂದ್ಯಾ ವಳಿಯಲ್ಲಿ ಈ ಹಾಸ್ಟೆಲ್‌ನ ರವಿಕುಮಾರ್‌, ಜಾರ್ಖಂಡ್‌ನಲ್ಲಿ ನಡೆದ ಶಾಲಾ ಮಟ್ಟದ ಹಾಕಿ ಪಂದ್ಯದಲ್ಲಿ ಶೇಖರ್‌ ಮತ್ತು ಲಕ್ಷ್ಮಣ್‌ ರಾಜ್ಯ ತಂಡ ವನ್ನು ಪ್ರತಿನಿಧಿಸಿದ್ದಾರೆ. ಹಾಸ್ಟೆಲ್‌ನಲ್ಲಿದ್ದ ಇಬ್ಬರು ಬಾಲಕರು ಹಿರಿಯರ ಹಾಸ್ಟೆಲ್‌ಗೆ ಆಯ್ಕೆ ಆಗಿದ್ದಾರೆ.

********
ನಿರ್ಮಿತಿ ಕೇಂದ್ರದ ಕಾಮಗಾರಿ ಅಕ್ರಮದ ತನಿಖೆ ನಡೆಯುತ್ತಿದ್ದ ಕಾರಣ ಕ್ರೀಡಾ ಹಾಸ್ಟೆಲ್‌ ನವೀಕರಣ ಕಾರ್ಯ ಕುಂಠಿತಗೊಂಡಿತ್ತು. ಈಗ ಮತ್ತೆ ಆರಂಭವಾಗಿದೆ. ಕ್ರೀಡಾ ಹಾಸ್ಟೆಲ್‌ ಸಮೀಪದಲ್ಲಿರುವ ಖಾಸಗಿ ಕಾಲೇಜುಗಳ ಮೈದಾನದಲ್ಲಿ ಹಾಸ್ಟೆಲ್‌ ವಿದ್ಯಾರ್ಥಿಗಳು ಅಭ್ಯಾಸ ಮಾಡುವುದಕ್ಕೆ ಅವಕಾಶ ನೀಡುವಂತೆ ಕೋರಲಾಗುವುದು
–ಕುಮಾರಸ್ವಾಮಿ, ಕ್ರೀಡಾ ಇಲಾಖೆಯ ಪ್ರಭಾರಿ ಉಪನಿರ್ದೇಶಕ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.