ADVERTISEMENT

ಕೂಸು ಬೆಳೆದು ನಿಂತ ಪರಿ

ಕೆ.ಓಂಕಾರ ಮೂರ್ತಿ
Published 1 ಜೂನ್ 2014, 19:30 IST
Last Updated 1 ಜೂನ್ 2014, 19:30 IST
ಟೂರ್ನಿಗೆ ಮೆರುಗು ತುಂಬಿದ ಚಿಯರ್‌ ಬೆಡಗಿಯರು...
ಟೂರ್ನಿಗೆ ಮೆರುಗು ತುಂಬಿದ ಚಿಯರ್‌ ಬೆಡಗಿಯರು...   

ಎಷ್ಟೊಂದು ಟೀಕೆ, ಎಷ್ಟೊಂದು ವಿವಾದ...!   ಬೇರೆ ಯಾವುದೇ ಕ್ರೀಡಾಕೂಟವಾಗಿದ್ದರೂ ಇಷ್ಟೊತ್ತಿಗೆ ಮೂಲೆಗೆ ಸರಿದು ಬಿಡುತ್ತಿದ್ದವೇನೊ? ಆದರೆ ಲಲಿತ್‌ ಮೋದಿ ಎಂಬ ಚತುರ ಉದ್ಯಮಿಯ ಪರಿಕಲ್ಪನೆಯ ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ ಆವೃತ್ತಿಯಿಂದ ಆವೃತ್ತಿಗೆ ಹೆಚ್ಚಾಗುತ್ತಲೇ ಇದೆ. ಅವರಷ್ಟು ಚೆನ್ನಾಗಿ ಕ್ರೀಡಾ ಗ್ರಾಹಕರನ್ನು ಅರ್ಥಮಾಡಿಕೊಂಡುವರು ಭಾರತದಲ್ಲಿ ಮತ್ತೊಬ್ಬರು ಇರಲಿಕ್ಕಿಲ್ಲ!

ಒಮ್ಮೆ ಯಶಸ್ಸು ಸಿಕ್ಕಿದ್ದನ್ನು ಉಳಿಸಿಕೊಂಡು ಹೋಗುವುದು ಅಷ್ಟು ಸುಲಭವಲ್ಲ. ಏಕೆಂದರೆ ಪ್ರತಿ ಬಾರಿಯೂ ನಿರೀಕ್ಷೆ ಹೆಚ್ಚಾಗುತ್ತಾ ಹೋಗುತ್ತದೆ. ಪ್ರೇಕ್ಷಕ ಹೊಸದನ್ನು ಬಯಸುತ್ತಾ ಹೋಗುತ್ತಾನೆ. ಯಶಸ್ಸಿನ ತುತ್ತತುದಿಗೆ ಏರುವುದಕ್ಕಿಂತ ಆ ಸ್ಥಾನದಲ್ಲಿ ಉಳಿಯುವುದು ದೊಡ್ಡ ಸವಾಲು ಎಂಬ ಮಾತಿದೆ. ಆ ಮಟ್ಟಿಗೆ ಐಪಿಎಲ್‌ ಯಶಸ್ವಿಯಾಗಿದೆ.

ಅದಕ್ಕೆ ಕಾರಣ ಕ್ರೀಡೆಯನ್ನು ಉದ್ಯಮದೊಂದಿಗೆ ಬೆರೆಸಿದ್ದು. ಪ್ರತಿ ಬಾರಿಯೂ ಭಿನ್ನ ಪ್ರಯೋಗ ಹಾಗೂ ಬದಲಾವಣೆಗಳ ಮೂಲಕ ವಿಶ್ವದ ಪ್ರಮುಖ ಕ್ರೀಡಾಕೂಟವಾಗಿ ಹೊರಹೊಮ್ಮಿದೆ. ಪ್ರತಿಬಾರಿಯೂ ಯಶಸ್ಸು ಸಿಗುತ್ತಿದೆ. ಟಿಆರ್‌ಪಿ, ವಹಿವಾಟು, ಜಾಹೀರಾತು, ಆದಾಯದಲ್ಲಿ ಹೆಚ್ಚಳವಾಗುತ್ತಿದೆ. ನೋಡುಗರ ಸಂಖ್ಯೆಯೂ ಕೂಡ. ಯೂಟ್ಯೂಬ್‌, ಆನ್‌ಲೈನ್‌, ಮೊಬೈಲ್‌ನಲ್ಲೂ ಐಪಿಎಲ್‌ ಪ್ರಸಾರ ಲಭ್ಯವಾಗುವಂತೆ ಮಾಡಲಾಗಿದೆ.

ಜೊತೆಗೆ ಪ್ರತಿಬಾರಿಯೂ ಹೊಸ ಹೊಸ ಪ್ರಯೋಗಗಳು, ಕೌಶಲ, ಮನರಂಜನೆ ಹೆಚ್ಚುತ್ತಲೇ ಇದೆ. ಕ್ರಿಕೆಟ್‌ನ ನಿಯಮಗಳ ಬದಲಾವಣೆಗೆ ಈ ಲೀಗ್‌ ಕಾರಣವಾಗಿದೆ. ಈ ಕಾರಣ ಕ್ರಿಕೆಟ್‌ ಜಗತ್ತಿನ ಆರ್ಥಿಕ ರಾಜಧಾನಿ ಮತ್ತಷ್ಟು ಬಲಿಷ್ಠವಾಗಿ ಬೆಳೆದು ನಿಂತಿದೆ.  ಈ ಟೂರ್ನಿಯಿಂದ ಪ್ರೇರಣೆಗೊಂಡು ಭಾರತದಲ್ಲಿ ಬೇರೆ ಬೇರೆ ಕ್ರೀಡೆಗಳಲ್ಲೂ ಲೀಗ್‌ಗಳು ಸೃಷ್ಟಿಯಾಗಿವೆ.

ಐಪಿಎಲ್‌ ಈಗ ಜಾಗತಿಕ ಕ್ರಿಕೆಟ್‌ ಮನರಂಜನಾ ಉತ್ಪನ್ನವಾಗಿ ಹೊರಹೊಮ್ಮಿದೆ. ಐಪಿಎಲ್‌ ಒಂದು ಕ್ರೀಡಾಕೂಟ ಎನ್ನುವುದಕ್ಕಿಂತ ಒಂದು ‘ವಿನೂತನ ಕಂಪೆನಿ’ ಎಂದು ಕರೆಸಿಕೊಳ್ಳುತ್ತಿದೆ. ನಿಯತಕಾಲಿಕೆಯೊಂದು ವಿನೂತನ ಕಂಪೆನಿಗಳಲ್ಲಿ ಬಿಎಂಡಬ್ಲ್ಯು, ಇನ್ಫೊಸಿಸ್‌, ಏರ್‌ಟೆಲ್‌ಗಿಂತ ಐಪಿಎಲ್‌ಗೆ ಮೊದಲ ಸ್ಥಾನ ನೀಡಿದೆ.

ಹಿಂದಿನ ಆರು ಆವೃತಿಗಳಿಗಿಂತ ಏಳನೇ ಆವೃತ್ತಿ ಭಿನ್ನವಾಗಿತ್ತು. ಟಿಆರ್‌ಪಿ, ಪ್ರೇಕ್ಷಕರ ಸಂಖ್ಯೆ, ಆಟದ ರೋಚಕತೆಯಿಂದಲೂ ಗಮನ ಸೆಳೆದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ವಿವಾದವಿಲ್ಲದೇ ಕೊನೆಗೊಂಡಿದೆ. ಜೊತೆಗೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲೂ (ಯುಎಇ) ಯಶಸ್ಸು ಕಂಡಿದೆ. ಹೆಚ್ಚಿನ ಪ್ರೇಕ್ಷಕರು ಪ್ರತಿ ಪಂದ್ಯಗಳನ್ನು ಅನುಮಾನದಿಂದ ನೋಡುತ್ತಲೇ ಖುಷಿಪಟ್ಟಿದ್ದಾರೆ.

ಈ ಬಾರಿಯ ವಿಶೇಷವೆಂದರೆ ಮನರಂಜನೆ, ಪಾರ್ಟಿ, ಚಿಯರ್‌ ಲೀಡರ್‌, ಆರ್ಥಿಕ ವಹಿವಾಟಿಗಿಂತ ಆಟಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಕ್ರಿಕೆಟ್‌ ಹಾಗೂ ಆಟಗಾರರು ಕೇಂದ್ರಬಿಂದುವಾಗಿದ್ದರು. ಇದಕ್ಕೆ ಕಾರಣ ಹಿಂದಿನ ಟೂರ್ನಿಗಳಲ್ಲಿ ಉದ್ಭವಿಸಿದ ವಿವಾದ. ಸುಪ್ರೀಂ ಕೋರ್ಟ್‌ ಆದೇಶದಂತೆ ಐಪಿಎಲ್‌ ಹಂಗಾಮಿ ಅಧ್ಯಕ್ಷರಾಗಿದ್ದ ಸುನಿಲ್‌ ಗಾವಸ್ಕರ್ ಏಳನೇ ಆವೃತ್ತಿಯನ್ನು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಂಡರು.

‘ಐಪಿಎಲ್‌ ಎಂಬುದು ಜಾಗತಿಕ ಬ್ರ್ಯಾಂಡ್‌ ಆಗಿ ರೂಪುಗೊಂಡಿದೆ. ಆಡಳಿತದಲ್ಲಿ ಯಾರೇ ಇರಲಿ. ಐಪಿಎಲ್‌ ಟೂರ್ನಿಯ ಯಶಸ್ಸು ನಿರಂತರ’ ಎಂದು ಲಲಿತ್‌ ಮೋದಿ ಅವರೇ ಹೇಳಿದ್ದಾರೆ. ಆದರೆ ಈ ಬಾರಿ ಯಾವುದೇ ಹೊಸ ಪ್ರಯೋಗಗಳು ಇರಲಿಲ್ಲ ಅಷ್ಟೇ. ಲಲಿತ್‌ ಮೋದಿ ಐಪಿಎಲ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅದ್ಭುತ ಎನಿಸುವ ಪ್ರಯೋಗಗಳು ಮೂಡಿಬಂದಿದ್ದವು.

ಅದೇ ಕಾರಣಕ್ಕಾಗಿ ಹೊಸ ಪ್ರೇಕ್ಷಕ ವರ್ಗ ಈ ಲೀಗ್‌ನತ್ತ ಚಿತ್ತ ಹರಿಸಿತ್ತು. ಆದರೆ ಈಗಿನ ಆಡಳಿತದ ಬಳಿ ಅಂಥ ಹೊಸ ಯೋಜನೆಗಳು ಇಲ್ಲ. ಇದಕ್ಕೆ ಹಿಂದಿನ ವಿವಾದಗಳು ಕಾರಣವಿರಬಹುದು. ಕಳ್ಳಾಟ, ಬೆಟ್ಟಿಂಗ್‌ನಂಥ ವಿವಾದ ಕಾಣಿಸಿ ಕೊಳ್ಳದಿದ್ದರೂ ಅಂಗಳದಲ್ಲಿ ಚಕಮಕಿ ಜೋರಾಗಿಯೇ ಇತ್ತು. ಮುಂಬೈ ಇಂಡಿಯನ್ಸ್‌ನ ಪೊಲಾರ್ಡ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ನ ಮಿಷೆಲ್‌ ಸ್ಟಾರ್ಕ್‌ ನಡುವಿನ ಕಿತ್ತಾಟವೇ ಅದಕ್ಕೊಂದು ಸಾಕ್ಷಿ. ಜೊತೆಗೊಂದಿಷ್ಟು ಅದ್ಭುತ ಕ್ಯಾಚ್‌ಗಳು ಮೈನವಿರೇಳಿಸಿದವು.

ಆರಂಭದಲ್ಲಿ ಕೇವಲ ಹೊಡಿಬಡಿ ಆಟ ಎನಿಸಿದ್ದ ಐಪಿಎಲ್‌ ಈಗ ಗುಣಮಟ್ಟದ ಆಟವಾಗಿ ಹೊರಹೊಮ್ಮಿದೆ. ಟೆಸ್ಟ್‌, ಏಕದಿನ ಪಂದ್ಯಗಳಂತೆ ಟ್ವೆಂಟಿ-20 ಪಂದ್ಯಗಳನ್ನೂ ಗಂಭೀರವಾಗಿ ಪರಿಗಣಿ ಸಲಾಗುತ್ತಿದೆ. ತಾಂತ್ರಿಕ ಆಟಕ್ಕೆ ಒತ್ತು ನೀಡಲಾಗುತ್ತಿದೆ.  ಟೂರ್ನಿಯ ಏಳೂ ಆವೃತ್ತಿಗಳಲ್ಲಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ತಂಡವೆಂದರೆ ಚೆನ್ನೈ ಸೂಪರ್‌ ಕಿಂಗ್ಸ್‌. ಇದಕ್ಕೆ ಕಾರಣ ಎಂ.ಎಸ್‌.ದೋನಿ ಅವರ ಯಶಸ್ವಿ ನಾಯಕತ್ವ. ಜೊತೆಗೆ ಒಂದೂ ಪಂದ್ಯ ತಪ್ಪಿಸಿಕೊಳ್ಳದ ಸುರೇಶ್‌ ರೈನಾ ಅವರ ಅಮೋಘ ಪ್ರದರ್ಶನ.

ಪ್ರತಿ ಆವೃತ್ತಿಗಳಲ್ಲಿ ರೈನಾ 400ಕ್ಕೂ ಅಧಿಕ ರನ್‌ ಪೇರಿಸಿದ್ದಾರೆ. ರಾಷ್ಟ್ರೀಯ ತಂಡದಲ್ಲಿದ್ದಾಗಲೂ ಅವರು ಈ ರೀತಿ ಪ್ರದರ್ಶನ ನೀಡಿಲ್ಲ. ಆದರೆ ಹಳದಿ ಪೋಷಾಕಿನಲ್ಲಿ ಅವರು ಗೆಲುವಿನ ರೂವಾರಿ ಎನಿಸಿದ್ದಾರೆ. ಹಾಗಾಗಿ ಇಷ್ಟು ಆವೃತ್ತಿಗಳ ಯಶಸ್ವಿ ಬ್ಯಾಟ್ಸ್‌ಮನ್‌ ಎಂದು ರೈನಾ ಅವರನ್ನು ಹೆಸರಿಸಬಹುದು. ಒಂದೇ ತಂಡದಲ್ಲಿ ಆಡುತ್ತಿದ್ದಾರೆ. ಈ ಬಾರಿ ಹೊಸದಾಗಿ ಹರಾಜು ಪ್ರಕ್ರಿಯೆ ನಡೆದ ಕಾರಣ           ತಂಡಗಳ ಸ್ವರೂಪ ಸಂಪೂರ್ಣ ಬದಲಾಗಿತ್ತು. ಹಾಗಾಗಿ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದೂ ಉಂಟು.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ್ದು ಅದೇ ರಾಗ ಅದೇ ಹಾಡು. ಕಿಂಗ್ಸ್‌ ಇಲೆವೆನ್‌ನದ್ದು ಅದ್ಭುತ ಪ್ರದರ್ಶನ.
ಎಂ.ಎಸ್‌.ದೋನಿ, ಆರ್‌ಸಿಬಿ ತಂಡದ ವಿರಾಟ್‌ ಕೊಹ್ಲಿ, ಮುಂಬೈ ಇಂಡಿಯನ್ಸ್‌ನ ರೋಹಿತ್‌ ಶರ್ಮ ಟೂರ್ನಿ ಆರಂಭದಿಂದಲೂ ಸ್ಥಿರ ಪ್ರದರ್ಶನ ತೋರುತ್ತಿದ್ದಾರೆ. ಆದರೆ ಸನ್‌ರೈಸರ್ಸ್ ಪ್ರತಿನಿಧಿಸುವ ಶಿಖರ್‌ ಧವನ್‌, ಕೋಲ್ಕತ್ತ ನೈಟ್‌ ರೈಡರ್ಸ್‌ ಪರ ಆಡುವ ಗೌತಮ್ ಗಂಭೀರ್‌ ಅಷ್ಟಕಷ್ಟೆ.

ಕರ್ನಾಟಕದ ಉತ್ತಪ್ಪ ಏಳು ಆವೃತ್ತಿಗಳಲ್ಲಿ ನಾಲ್ಕು      ತಂಡದ ಪರ ಆಡಿದ್ದಾರೆ. ಈ ಟೂರ್ನಿಯಲ್ಲಿ ಅವರು ಕೂಡ ಅಪಾಯಕಾರಿ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದ್ದಾರೆ. ನೈಟ್‌ ರೈಡರ್ಸ್‌್ ಯಶಸ್ಸಿಗೆ ಉತ್ತಪ್ಪ ಪ್ರಮುಖ ಕಾರಣ. ಎಂದಿನಂತೆ ಈ ಬಾರಿಯೂ ಪ್ರತಿಭಾವಂತ ಆಟಗಾರರು ಹೊರಹೊಮ್ಮಿದ್ದಾರೆ.

ಅಕ್ಷರ್‌ ಪಟೇಲ್‌, ಕರುಣ್‌ ನಾಯರ್‌, ಯಜುವೇಂದ್ರ ಚಾಹಲ್‌, ಜಸ್‌ಪ್ರಿತ್‌ ಬುಮ್ರಾ, ಮನನ್‌ ವೋಹ್ರಾ, ಕೆ.ಎಲ್‌.ರಾಹುಲ್, ಸಂದೀಪ್‌ ಶರ್ಮ, ಈಶ್ವರ್‌ ಪಾಂಡೆ, ನಮನ್‌ ಓಜಾ ಅದಕ್ಕೆ ಉದಾಹರಣೆ. ಅನುಭವಿ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌, ವೇಗಿಗಳಾದ ಆಶೀಶ್‌ ನೆಹ್ರಾ, ಎಲ್‌.ಬಾಲಾಜಿ ಇನ್ನೂ ತಮ್ಮ ಆಟ ಮುಗಿದಿಲ್ಲ ಎಂಬುದನ್ನು ಸಾರಿದ್ದಾರೆ.

ಅದೇನೇ ಇರಲಿ, ಐಪಿಎಲ್‌ ಎಂಬುದು ಅದ್ಭುತ ಬ್ರ್ಯಾಂಡ್‌ ಆಗಿ ರೂಪುಗೊಂಡಿದೆ. ಪ್ರೇಕ್ಷಕರೊಂದಿಗಿನ ಇದರ ಬಾಂಧವ್ಯ ಹೀಗೆ ಮುಂದುವರಿಯುವುದು ಖಚಿತ. ಯಾವುದೇ ಟೂರ್ನಿಯ ಯಶಸ್ಸು ಪ್ರಸಾರಕರ ಮೇಲೆ ಅವಲಂಬಿತವಾಗಿರುತ್ತದೆ. ನೇರ ಪ್ರಸಾರ ಮಾಡಲು ಟಿವಿ ವಾಹಿನಿಗಳು ಮುಂದೆ ಬಂದರೆ ಕಬಡ್ಡಿ, ಕೊಕ್ಕೊನಂಥ ಕ್ರೀಡೆಗಳೂ ಯಶಸ್ವಿಯಾಗಬಲ್ಲವು ಎಂಬುದು ಲಲಿತ್ ಮೋದಿ ಅಭಿಪ್ರಾಯ. 

ಆಟಗಾರರ ಬೆಲೆಯಲ್ಲೂ ಹೆಚ್ಚಳ

ಚೊಚ್ಚಲ ಟೂರ್ನಿಯಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಆಟಗಾರ ದೋನಿ. ಅವರು ಆಗ ₨ 6 ಕೋಟಿ ಪಡೆದಿದ್ದರು. ಈ ವರ್ಷ ನೋಡಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ₨ 12.5 ಕೋಟಿ ಪಡೆದಿದ್ದಾರೆ. ಯುವರಾಜ್‌ ಸಿಂಗ್‌     ₨ 14 ಕೋಟಿ ಗಳಿಸಿದ್ದಾರೆ. ಇದು ಅಧಿಕೃತವಾಗಿ ದಾಖಲೆಯ ಮೊತ್ತ.

ಕಡಿಮೆಯಾದ ಕೌಂಟಿ ಆಸಕ್ತಿ
ಹಿಂದೆ ಕೌಂಟಿಯಲ್ಲಿ ಕ್ರಿಕೆಟ್‌ ಆಡಲು ಭಾರತದ ಆಟಗಾರರು ಕಾತರದಿಂದ ಕಾಯುತ್ತಿರುತ್ತಿದ್ದರು. ಅದು ಗೌರವದ ವಿಷಯ ಕೂಡ. ಆದರೆ ಐಪಿಎಲ್‌ ಶುರುವಾದ ಮೇಲೆ ಕೌಂಟಿ ಬಗ್ಗೆ ಆಸಕ್ತಿಯೇ ಇಲ್ಲ. ಕೌಂಟಿಯಲ್ಲಿ ಆಡುವವರೇ ಇಲ್ಲಿಗೆ ಬರುತ್ತಿದ್ದಾರೆ. ಅದಕ್ಕೆ ಕಾರಣ ಐಪಿಎಲ್‌ ಎಂಬ ‘ಮಿಲಿಯನ್‌ ಡಾಲರ್‌ ಬೇಬಿ’ಗೆ ಸಿಕ್ಕಿದ ಯಶಸ್ಸು.

ಬಹುಮಾನ  ಮೊತ್ತದಲ್ಲಿ ಹೆಚ್ಚಳ
ಚೊಚ್ಚಲ ಐಪಿಎಲ್‌ ಟೂರ್ನಿ ಯಲ್ಲಿ ಇದ್ದ ಒಟ್ಟು ಬಹುಮಾನ ಮೊತ್ತ ₨ 12 ಕೋಟಿ. ಚಾಂಪಿಯನ್‌ ಆದ ರಾಜಸ್ತಾನ ರಾಯಲ್ಸ್‌ ಕೇವಲ    ₨ 4.8 ಕೋಟಿ ಪಡೆದಿತ್ತು. ಈಗ ಬಹುಮಾನ ಮೊತ್ತದಲ್ಲಿ ಭಾರಿ ಹೆಚ್ಚಳವಾಗಿದೆ. ಈ ಬಾರಿ ಟೂರ್ನಿಯ ಒಟ್ಟು ಬಹುಮಾನ ಮೊತ್ತ ₨ 30 ಕೋಟಿ. ಚಾಂಪಿಯನ್‌ ತಂಡಕ್ಕೆ ₨ 13 ಕೋಟಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.