ADVERTISEMENT

ಪೈಕಾ ಎಂಬ ಕಾಟಾಚಾರದ ಕ್ರೀಡಾಕೂಟ...

ನಾಗೇಶ್ ಶೆಣೈ ಪಿ.
Published 14 ಡಿಸೆಂಬರ್ 2014, 19:30 IST
Last Updated 14 ಡಿಸೆಂಬರ್ 2014, 19:30 IST
ಪೈಕಾ ಎಂಬ ಕಾಟಾಚಾರದ ಕ್ರೀಡಾಕೂಟ...
ಪೈಕಾ ಎಂಬ ಕಾಟಾಚಾರದ ಕ್ರೀಡಾಕೂಟ...   

ಕೇಂದ್ರ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಡಿ ಬರುವ ‘ಪೈಕಾ’ (ಪಂಚಾಯತ್‌ ಯುವ್‌ ಖೇಲ್‌ ಔರ್‌ ಕ್ರೀಡಾ ಅಭಿಯಾನ್‌), ದೇಶದಲ್ಲಿ ಪಂಚಾಯತ್‌ ಮಟ್ಟದಲ್ಲೂ ಕ್ರೀಡಾ ಸೌಲಭ್ಯ, ಕ್ರೀಡಾ ಚಟುವಟಿಕೆ ಆ ಮೂಲಕ ಕ್ರೀಡಾ ಸಂಸ್ಕೃತಿ ಪಸರಿಸಬೇಕೆಂಬ ಸದುದ್ದೇಶ ಹೊಂದಿದ ಯೋಜನೆ. ಆದರೆ ಈ ಯೋಜನೆ ಮಾತ್ರ ಆರಂಭದಿಂದಲೂ ಸರಿಯಾದ ದಿಕ್ಕಿನತ್ತ ಸಾಗುತ್ತಿಲ್ಲ.
‘ಪೈಕಾ’ ಕ್ರೀಡಾಕೂಟಕ್ಕೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಹಲವು ಕೋಟಿ ಹಣ ತೆಗೆದಿರಿಸಿದೆ. ದುಡ್ಡು ಹರಿಯುವುದರಿಂದ ಇಲಾಖೆಯ ಅಧಿಕಾರಿಗಳಿಗೆ ಈ ಯೋಜನೆ ಸುಗ್ಗಿ.

ಕಾಟಾಚಾರಕ್ಕೆ ನಡೆಯುವ ಕೆಲವು ಕೂಟಗಳಲ್ಲಿ ‘ಪೈಕಾ’ ಕ್ರೀಡೆ ಕೂಡ ಒಂದು. ಈ ಕೂಟ ರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ಸ್‌ ಸೇರಿದಂತೆ 21 ವಿವಿಧ ಕ್ರೀಡಾ ವಿಭಾಗಗಳಲ್ಲಿ ನಡೆಯುತ್ತದೆ. ರಾಜೀವ್‌ ಗಾಂಧಿ ರಾಷ್ಟ್ರ ಮಟ್ಟದ ಮಹಿಳಾ ಕ್ರೀಡಾಕೂಟ ವಿವಿಧ ಗುಂಪುಗಳಲ್ಲಿ ನಡೆಯುತ್ತದೆ. ಒಂದೊಂದು ಆಟ ಆಯೋಜಿಸಲು ತಲಾ ರೂ 3 ಲಕ್ಷ ನೀಡಲಾಗುತ್ತದೆ. (ಒಂದೇ ಕಡೆ 3 ಕ್ರೀಡೆ ಆಯೋಜಿಸಿದರೆ ಒಟ್ಟು ರೂ 9 ಲಕ್ಷ) ಜತೆಗೆ ಪ್ರಮಾಣಪತ್ರ, ಪದಕ, ಟ್ರೋಫಿ, ಫಲಕ ಮೊದಲಾದ ಖರ್ಚನ್ನು ಎನ್‌ಐಎಸ್‌ ನಿಂದ ರೂ 50 ಸಾವಿರ ಪ್ರತ್ಯೇಕವಾಗಿ ನೀಡಲಾಗುತ್ತದೆ. ಅಲ್ಲದೇ ಸ್ಥಳೀಯವಾಗಿ ಜಿ.ಪಂ.ನಿಂದ, ಸ್ಥಳೀಯ ಆಡಳಿತದಿಂದ ಹಣ ಸಂಗ್ರಹಿಸಲು ಅವಕಾಶವಿದೆ. 

ಬದ್ಧತೆಯಿಂದ ಭಾಗವಹಿಸುವ ಅಥ್ಲೀಟುಗಳಿಗೆ ಸ್ವಲ್ಪ ಸಮಾಧಾನ ತರುವ ವಿಷಯವೆಂದರೆ ಅವರಿಗೆ ಟ್ರ್ಯಾಕ್ ಸೂಟ್‌ ನೀಡಲಾಗುತ್ತದೆ. ವಿಜೇತ ಸ್ಪರ್ಧಿಗಳ ಖಾತೆಗೆ ಬಹುಮಾನದ ಮೊತ್ತ ನೇರವಾಗಿ ಜಮೆಯಾಗುತ್ತದೆ. ಹೀಗಾಗಿ ಅವರಿಗೆ ಸಲ್ಲಬೇಕಾದ ಹಣ ಸುರಕ್ಷಿತ.
ರಾಜೀವ್‌ ಗಾಂಧಿ ಖೇಲ್‌ ಅಭಿಯಾನ್‌ ರಾಷ್ಟ್ರ ಮಟ್ಟದ ಮಹಿಳಾ ಕ್ರೀಡಾಕೂಟಗಳು ನಡೆಯುವ ಅವಧಿಯೂ ಕ್ರೀಡಾಪಟುಗಳಿಗೆ ಪಾಲ್ಗೊಳ್ಳಲು ಯೋಗ್ಯವಾದ ಸಮಯವೇನಲ್ಲ. ಮೊದಲನೆಯದಾಗಿ ಈ ಕೂಟ ನಡೆಯುವ ವೇಳೆಗೆ ಅಂತರ ಕಾಲೇಜು, ಅಂತರ ವಿಶ್ವವಿದ್ಯಾಲಯ ಕ್ರೀಡೆಗಳು ಮುಗಿದಿರುತ್ತವೆ. ಕೆಲವು ಮಹತ್ವದ ಕೂಟಗಳಿಗೆ ಆಯ್ಕೆ ಟ್ರಯಲ್ಸ್‌ ಕೂಡ ಆಗಿರುತ್ತದೆ. ಪರೀಕ್ಷೆಗೆ ಸಿದ್ಧತೆ ನಡೆಸುವ ಅವಧಿ ಕೂಡ. ಹೀಗಾಗಿ ಹೆಚ್ಚಿನವರು ಈ ಕ್ರೀಡೆಯಿಂದ ವಿಮುಖರಾಗುತ್ತಾರೆ. ಹೀಗಾಗಿ ಇಲ್ಲಿ ಗುಣಮಟ್ಟ ನಿರೀಕ್ಷಿಸುವುದು ದೂರದ ಮಾತು.

ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ರಾಜ್ಯ ತಂಡಗಳ ಆಯ್ಕೆ ಪ್ರಕ್ರಿಯೆ ಕೂಡ ಶಿಸ್ತುಬದ್ಧವಾಗಿರುವುದಿಲ್ಲ. ಉದಾಹರಣೆಗೆ, ಕರ್ನಾಟಕದಲ್ಲಿ ದಸರಾ, ಗ್ರಾಮೀಣ, ಮಹಿಳಾ ಕ್ರೀಡಾಕೂಟಗಳನ್ನು ಒಟ್ಟಿಗೆ ಆಯೋಜಿಸಲಾಗುವ ಪ್ರಕಟಣೆ ನೀಡಲಾಗುತ್ತದೆ. ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ದಸರಾ ಸಾಧನೆಯನ್ನೇ ಆಧಾರವಾಗಿಟ್ಟುಕೊಂಡು ಜಿಲ್ಲಾ ಮಟ್ಟ, ರಾಜ್ಯ ಮಟ್ಟಕ್ಕೆ ಬಾಲಕಿಯರ ತಂಡಗಳನ್ನು ಆಯ್ಕೆ ಮಾಡಲಾಗುತ್ತಿದೆ. ಕೆಲವು ಕಡೆ ಕ್ರೀಡೆಯನ್ನೇ ನಡೆಸದೇ ಪಟ್ಟಿ ಕಳುಹಿಸಿಕೊಡುವ ಪದ್ಧತಿಯೂ ಇದೆ. ಪೈಕಾ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸುವವರು (25 ವರ್ಷದೊಳಗಿನವರು ಇರಬೇಕು ಎಂಬ ನಿಯಮ ಇದೆ) ಅಲ್ಲಿನ ಕ್ರೀಡಾ ಹಾಸ್ಟೆಲ್‌ನ ವಿದ್ಯಾರ್ಥಿಗಳು ಮತ್ತು ಬೆರಳೆಣಿಕೆಯ ಮಾಜಿ ಅಂತರರಾಷ್ಟ್ರೀಯ ಸ್ಪರ್ಧಿಗಳು. ಆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದರೂ, ದಸರಾ/ ಮಹಿಳಾ ಕೂಟಗಳಲ್ಲಿ ಭಾಗವಹಿಸದಿರುವ ಪ್ರತಿಭಾನ್ವಿತ ಕ್ರೀಡಾಪಟುವಿಗೆ ಅವಕಾಶ ಇರುವುದಿಲ್ಲ.

ರಾಷ್ಟ್ರೀಯ ಮಟ್ಟದ ಪೈಕಾ ಕೂಟ ಯಾವುದೇ ಅಂತರರಾಷ್ಟ್ರೀಯ ಕೂಟಕ್ಕೆ ಮಾನದಂಡ ಅಥವಾ ಆಯ್ಕೆ ಟ್ರಯಲ್ಸ್‌ ಆಗಿಲ್ಲ ಎನ್ನುವ ಕಾರಣಕ್ಕೆ ಅಥ್ಲೀಟುಗಳು ಅಥವಾ ಕ್ರೀಡಾಪಟುಗಳು ಸ್ಪರ್ಧೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಭಾರತ ಅಥ್ಲೆಟಿಕ್‌ ಫೆಡರೇಷನ್‌ ಸೇರಿ ಕೆಲವು ಕ್ರೀಡಾ ಸಂಸ್ಥೆಗಳು ಈ ಕೂಟಕ್ಕೆ ಮಹತ್ವ ನೀಡದ ಕಾರಣ ಇಲ್ಲಿ ಅಥ್ಲೀಟುಗಳ ಸಾಧನೆ ಗಣನೆಗೇ ಬರುವುದಿಲ್ಲ. ಆಯೋಜಕರ ಬಳಿ ಹಳೆಯ ದಾಖಲೆಗಳೂ ಇರುವುದಿಲ್ಲ. ಕ್ರೀಡಾಪಟುಗಳೂ ಹೊಸದೊಂದು ಊರಿಗೆ ‘ಖುಷಿ’ಪಟ್ಟು ಹೋಗಿ ಬರುತ್ತಾರೆ.
* * *

‘ಪೈಕಾ ಕ್ರೀಡೆ ಶುರುವಾಗಿ 4–5 ವರ್ಷಗಳಾಗಿವೆ. ಆದರೆ ಈ ಯೋಜನೆಯ ಆಶಯಕ್ಕೆ ತಕ್ಕಂತೆ ಅನುಷ್ಠಾನ ನಡೆಯುತ್ತಿದೆಯೇ? ಈ ಕೂಟದ ಮೂಲಕ ಎಷ್ಟು ಮಂದಿ ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿದ್ದಾರೆ ಎಂಬ ಬಗ್ಗೆ ಮೌಲ್ಯಮಾಪನ ವ್ಯವಸ್ಥೆ ಆಗಬೇಕಿದೆ. ಇದನ್ನು ಸರಿಯಾಗಿ ನಡೆಸಲು ಈ ಕ್ಷೇತ್ರದಲ್ಲಿ ಪರಿಜ್ಞಾನ ಹೊಂದಿರುವವರೂ ಬೇಕು.
– ಅಶ್ವಿನಿ ನಾಚಪ್ಪ,
ಅಂತರರಾಷ್ಟ್ರೀಯ ಮಾಜಿ ಅಥ್ಲೀಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.