ADVERTISEMENT

ಆಸ್ಟ್ರಿಯನ್ನರ ಮನಗೆದ್ದ ಜಾಮೂನು, ಕುಲ್ಫಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 19:30 IST
Last Updated 24 ಏಪ್ರಿಲ್ 2014, 19:30 IST

ಭೋ ಜನ ಪ್ರಿಯರು ಭಾರತೀಯರು. ಜೊತೆಗೊಂದಿಷ್ಟು ಬಗೆಬಗೆಯ ಸಿಹಿತಿಂಡಿಗಳಿದ್ದರಂತೂ ಊಟದ ಮಜವೇ ಬೇರೆ. ಹಲ್ವಾ, ಜಾಮೂನು, ಬರ್ಫಿ, ಪಾಯಸ ಎಂದುಕೊಳ್ಳುತ್ತಾ ಬಗೆಬಗೆಯ ತಿಂಡಿ ಮಾಡಿ ಸವಿಯಬಹುದಾದ ಭಾರತೀಯ ತಿನಿಸುಗಳು ಈಗ ವಿದೇಶದಲ್ಲೂ ಮನೆಮಾತಾಗುತ್ತಿವೆ.

ಕೆಫೆ, ಪೇಸ್ಟ್ರಿ, ಮಫಿನ್ಸ್‌ಗಳಿಂದಲೇ ತುಂಬಿರುವ ಆಸ್ಟ್ರಿಯಾ ಜನರ ಆಯ್ಕೆಯಲ್ಲಿ ಈಗ ತುಸು ಬದಲಾವಣೆಯಾಗಿದೆಯಂತೆ. ಇದೀಗ ಅವರ ನಾಲಿಗೆ ಸವಿಯಬಯಸುತ್ತಿರುವುದು ಗುಲಾಬ್‌ ಜಾಮೂನು, ಕುಲ್ಫಿ, ಮ್ಯಾಂಗೊ ಲಸ್ಸಿ ಮುಂತಾದ ಭಾರತೀಯ ತಿನಿಸುಗಳನ್ನು! ಅಂದಹಾಗೆ, ಈ ಪ್ರದೇಶಗಳಲ್ಲಿ ದಿನೇದಿನೇ ಭಾರತೀಯ ರೆಸ್ಟೊರೆಂಟ್‌ಗಳೂ ತಲೆಯೆತ್ತುತ್ತಿರುವುದು ಹೊಸ ಬೆಳವಣಿಗೆ.
ಐತಿಹಾಸಿಕವಾಗಿ ಶ್ರೀಮಂತವಾಗಿರುವ ಈ ನಾಡು ಅಂದದ ಕಟ್ಟಡ, ಉದ್ಯಾನಗಳಿಂದಲೂ ಹೆಸರುವಾಸಿ. ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಸುಮಾರು 50 ಹೊಸ ರೆಸ್ಟೊರೆಂಟ್‌ಗಳು ಪ್ರಾರಂಭವಾಗಿದ್ದು ಅವುಗಳೆಲ್ಲಾ ಭಾರತೀಯ ತಿನಿಸುಗಳನ್ನು ಇಲ್ಲಿಯ ಜನರಿಗೆ ಉಣಬಡಿಸುತ್ತಿವೆ.

‘ಇಲ್ಲಿನ ಸಾಂಪ್ರದಾಯಿಕ ತಿನಿಸು ಕೇಕ್‌ ಹಾಗೂ ಪೇಸ್ಟ್ರಿ. ಆದರೆ ಕಳೆದ ಐದು ವರ್ಷಗಳಿಂದ ಇಲ್ಲಿಯ ಅನೇಕರು ಭಾರತೀಯ ಸಿಹಿತಿಂಡಿ ಸವಿಯಲೆಂದೇ ಬರುತ್ತಿದ್ದಾರೆ. ‘ಗಾಜರ್‌ ಕಾ ಹಲ್ವಾ’, ‘ಬರ್ಫಿ ಮತ್ತು ಪಿಸ್ತಾ ಕುಲ್ಫಿ’ ಹಾಗೂ ಭಾರತೀಯ ಸಾಂಪ್ರದಾಯಿಕ ಸಸ್ಯಾಹಾರಿ, ಮಾಂಸಾಹಾರಿ ತಿನಿಸುಗಳಿಗೆ ಇಲ್ಲಿ ಬೇಡಿಕೆ ಹೆಚ್ಚುತ್ತಿದೆ’ ಎಂದಿದ್ದಾರೆ ವಿಯೆನ್ನಾದಲ್ಲಿನ ಜನಪ್ರಿಯ ಭಾರತೀಯ ರೆಸ್ಟೋರೆಂಟ್‌ಗಳಲ್ಲಿ ಒಂದಾದ ‘ನಿರ್ವಾಣ್‌’ನ ಮಾಲೀಕ ಪವನ್‌ ಬಾತ್ರಾ.

ನಾನ್‌, ಮುರ್ಗ್ ಮಖನಿ, ಮುರ್ಗ್ ಟಿಕ್ಕಾ ಮಸಾಲಾ, ದಾಲ್ ಮಖನಿ, ರೋಗನ್‌ ಜೋಶ್‌... ಹೀಗೆ ಇನ್ನೂ ಅನೇಕ ಭಾರತೀಯ ಆಹಾರವನ್ನು ಅಲ್ಲಿಯ ಜನರು ಪ್ರೀತಿಯಿಂದ ಸವಿಯುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ. ಈ ಮೂಲಕ ಪ್ರವಾಸಿ ಭಾರತೀಯರಿಗೂ ದೇಸಿ ತಿಂಡಿ ಸೇವಿಸುವ ಅವಕಾಶಗಳು ಇಲ್ಲಿ ಹೆಚ್ಚುತ್ತಿವೆ. ವಿಶೇಷ ಎಂದರೆ ಇಲ್ಲಿಯ ಪ್ರಧಾನಿ ಕೂಡ ನಿರ್ವಾಣ್‌ನಲ್ಲಿ ಭಾರತೀಯ ತಿನಿಸು ಸವಿಯಲು ಬರುತ್ತಾರಂತೆ.

‘ನಮ್ಮ ಪ್ರಧಾನಿ ಇಲ್ಲಿಯ ಕಾಯಂ ಗ್ರಾಹಕರು. ದಾಲ್‌ ಮಖಾನಿ ಎಂದರೆ ಅವರಿಗೆ ತುಂಬಾ ಇಷ್ಟ. ರೋಗನ್‌ ಜೋಶ್‌ ಜತೆಗೆ ನಾನ್‌ ಸವಿಯುವುದೆಂದರೆ ಅವರಿಗೆ ತುಂಬ ಇಷ್ಟ. ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಆಸ್ಟ್ರಿಯಾ ದೇಶಕ್ಕೆ ಬಂದಾಗ ನಮ್ಮ ಹೋಟೆಲ್‌ನ ರುಚಿ ಸವಿದಿದ್ದರು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಬಾತ್ರಾ.

ಹೇಲಿಗ್‌ ಕುಹ್‌ (ಹೋಲಿ ಕೌ) ರೆಸ್ಟೊರೆಂಟ್‌ನ್ನು ನಡೆಸುತ್ತಿರುವ ಅನಿಲ್‌ ಗುಪ್ತಾ ಪ್ರತಿದಿನ 10 ಲೀಟರ್‌ಗೂ ಹೆಚ್ಚು ಮ್ಯಾಂಗೊ ಲಸ್ಸಿಯನ್ನು ಮಾರಾಟ ಮಾಡುತ್ತಾರಂತೆ. ಸಾಂಪ್ರದಾಯಿಕ ಶೈಲಿಯಲ್ಲಿ ಅಂದರೆ ತಾಮ್ರದ ಗ್ಲಾಸ್‌ನಲ್ಲೇ ಗ್ರಾಹಕರಿಗೆ ಲಸ್ಸಿ ನೀಡುತ್ತಾರೆ. ಹೊಸ ಶೈಲಿಯ ಬಗ್ಗೆ ವಿದೇಶಿಗರು ಎಂದೂ ಮೆಚ್ಚುಗೆ ಸೂಚಿಸುತ್ತಾರೆ ಎಂಬುದು ಅವರ ಅನುಭವ. ಮಾಂಸಾಹಾರವನ್ನೇ ನೆಚ್ಚಿಕೊಂಡಿದ್ದ ಅಲ್ಲಿನ ಜನ ಈಗೀಗ ಹೆಚ್ಚಾಗಿ ಭಾರತೀಯ ರೆಸ್ಟೊರೆಂಟ್‌ಗಳಲ್ಲಿ ದೊರೆಯುವ ಬೆಂಡೆಕಾಯಿ, ಆಲೂ ಗೋಬಿ, ಚನಾ ಮಸಾಲಾಗಳನ್ನೇ ಹೆಚ್ಚಾಗಿ ಸವಿಯುತ್ತಾರಂತೆ. ಅದೂ ಅಲ್ಲದೆ ಭಾರತೀಯ ರೆಸ್ಟೊರೆಂಟ್‌ಗಳಲ್ಲಿ ಮಾತ್ರ ಉತ್ತಮ ಗುಣಮಟ್ಟದ ಸಸ್ಯಾಹಾರ ದೊರೆಯುತ್ತದೆ ಎಂಬುದು ಅಲ್ಲಿನವರ ಅಭಿಪ್ರಾಯವಾಗಿದೆಯಂತೆ.

ಕೇವಲ ತಿನಿಸುಗಳ ವಿಷಯ ಮಾತ್ರವಲ್ಲ ಅವರು ಸೇವಿಸುವ ವೈನ್‌ ಜಾಗದಲ್ಲಿ ಭಾರತೀಯ ಬಿಯರ್‌ ಹಾಗೂ ಮಸಾಲೆಯುಕ್ತ ಭಾರತೀಯ ತಿನಿಸುಗಳು ಅವರ ಆದ್ಯತೆಯಾಗಿವೆ. ‘ಊಟದ ಟೇಬಲ್‌ ಮಧ್ಯದಲ್ಲಿ ಕರ್ರಿ ಹಾಗೂ ಹೆಚ್ಚಿದ ತರಕಾರಿಗಳನ್ನು ಇಡುವ ಭಾರತೀಯ ಸಂಸ್ಕೃತಿ ಇಲ್ಲಿಯವರಿಗೆ ಹೊಸದಾಗಿ ಕಾಣುತ್ತದೆ. ಇದು ಅವರನ್ನು ಆಕರ್ಷಿಸುವ ಮುಖ್ಯ ಅಂಶ ಹಾಗೂ ವಿಭಿನ್ನ ಸಂಸ್ಕೃತಿ, ಊಟದ ರುಚಿ ಅವರನ್ನು ಸೆಳೆಯುತ್ತಿದೆ’ ಎನ್ನುತ್ತಾರೆ ಇಂಡಿಯನ್‌ ಪೆವಿಲಿಯನ್‌ ಹೋಟೆಲ್‌ ಮಾಲೀಕ ಅಶೋಕ್‌ ಚಾಂದಿಹಾಕ್‌.

ಭಾರತೀಯ ತಿನಿಸುಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದ್ದು ಐದು ವರ್ಷದ ಹಿಂದೆ ಕೇವಲ 20 ಭಾರತೀಯ ರೆಸ್ಟೊರೆಂಟ್‌ಗಳು ಈ ನಾಡಿನಲ್ಲಿತ್ತು. ಇದೀಗ 50 ರೆಸ್ಟೊರೆಂಟ್‌ಗಳು ಭಾರತೀಯ ತಿಂಡಿಯ ಸ್ವಾದವನ್ನು ಉಣಬಡಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.