ADVERTISEMENT

ಇಡ್ಲಿಯಿಂದ ವಡಾಪಾವ್‌ವರೆಗೆ...

ರಾಜಾಜಿನಗರದ ರಾಮಮಂದಿರ ಸುತ್ತಮುತ್ತ ಬಗೆಬಗೆ ತಿನಿಸು - ಆಹಾರ ಬೀದಿ

​ಪ್ರಜಾವಾಣಿ ವಾರ್ತೆ
Published 19 ಮೇ 2016, 19:32 IST
Last Updated 19 ಮೇ 2016, 19:32 IST
ಮೃದುವಾದ ಇಡ್ಲಿಗೆ ಹೆಸರುವಾಸಿಯಾಗಿರುವ ಕರಿಗಿರಿ ಹೋಟೆಲ್‌ನಲ್ಲಿ ಬೆಳಗಿನ ಉಪಹಾರ ಸವಿಯುತ್ತಿರುವ ಗ್ರಾಹಕರು -  ಚಿತ್ರ: ವಿಶ್ವನಾಥ ಸುವರ್ಣ
ಮೃದುವಾದ ಇಡ್ಲಿಗೆ ಹೆಸರುವಾಸಿಯಾಗಿರುವ ಕರಿಗಿರಿ ಹೋಟೆಲ್‌ನಲ್ಲಿ ಬೆಳಗಿನ ಉಪಹಾರ ಸವಿಯುತ್ತಿರುವ ಗ್ರಾಹಕರು - ಚಿತ್ರ: ವಿಶ್ವನಾಥ ಸುವರ್ಣ   

ನಗರದ ಆಹಾರ ಸಂಸ್ಕೃತಿಯ ಕವಲುಗಳೇ ಆಸಕ್ತಿಕರ. ಈಗ ಎಲ್ಲೆಂದರೆ ಅಲ್ಲಿ ಆಹಾರ ಬೀದಿಗಳು ಹುಟ್ಟಿಕೊಂಡಿವೆ. ಹೊಸರುಚಿಯ ಕಥೆಗಳ ಜೊತೆಗೆ ಹಲವು ನೆನಪುಗಳನ್ನೂ ಅಡಗಿಸಿಕೊಂಡ ಇಂಥ ಬೀದಿಗಳನ್ನು ಪರಿಚಯ ಮಾಡಿಕೊಡುವ ಮಾಲಿಕೆ ಇದು.

ಬೆಳಿಗ್ಗೆ ಹೊತ್ತು ಬಿಕೊ ಎನ್ನುವ ಈ ರಸ್ತೆ ಸಂಜೆಯಾಗುತ್ತಿದ್ದಂತೆ ಜನದಟ್ಟಣೆಯಿಂದ ತುಂಬಿ ತುಳುಕುತ್ತಿರುತ್ತದೆ. ಕಾರಣ ಇಲ್ಲಿನ ಆಹಾರ ಮಳಿಗೆಗಳು.

ಮಾರುಕಟ್ಟೆ ಇದ್ದ ಜಾಗದಲ್ಲೀಗ ವಿವಿಧ ಆಹಾರ ಮಳಿಗೆಗಳು ಲಗ್ಗೆ ಇಟ್ಟಿವೆ. 40 ವರ್ಷಗಳ ಹಿಂದೆ ಇಲ್ಲಿನ ಹೋಟೆಲ್‌ಗಳಲ್ಲಿ ಸಂಜೆ ವೇಳೆ ಬಜ್ಜಿ, ಬೋಂಡಾ ಹಾಗೂ ಇಡ್ಲಿ ಮಾತ್ರ ಸಿಗುತ್ತಿತ್ತು. ಆದರೆ ಈಗ 30ಕ್ಕೂ ಹೆಚ್ಚು ಆಹಾರ ಮಳಿಗೆಗಳು ತಲೆ ಎತ್ತಿವೆ, ಪ್ರತಿಯೊಂದೂ ವಿಭಿನ್ನ ರುಚಿಯನ್ನು ಉಣಬಡಿಸುವ ತಾಣಗಳು.

ಇದು ರಾಜಾಜಿನಗರ ರಾಮ ಮಂದಿರ  ಹಿಂದಿನ ರಸ್ತೆಯಲ್ಲಿರುವ ಆಹಾರ ಬೀದಿಯ ಕಥೆ. ಬೆಳಿಗ್ಗೆ ಹೊತ್ತು ಬಿಕೊ ಎನ್ನುವ ಈ ರಸ್ತೆ ಸಂಜೆಯಾಗುತ್ತಿದ್ದಂತೆ ಜನದಟ್ಟಣೆಯಿಂದ ತುಂಬಿ ತುಳುಕುತ್ತಿರುತ್ತದೆ. ಇದಕ್ಕೆ ಕಾರಣ ಇಲ್ಲಿನ ಆಹಾರ ಮಳಿಗೆಗಳು.

ಹೌದು, ನಗರದ ಆಹಾರ ಸಂಸ್ಕೃತಿಯ ಜೊತೆಜೊತೆಗೇ ಬೆಳೆಯುತ್ತಿರುವ ಈ ಆಹಾರ ಬೀದಿಯಲ್ಲಿ ದಕ್ಷಿಣ ಭಾರತದ ಆಹಾರದ ಜೊತೆಗೆ ಉತ್ತರ ಭಾರತೀಯ, ಚೈನೀಸ್‌ ಆಹಾರವೂ ಸಿಗುತ್ತದೆ.

‘ದಶಕಗಳ ಕಥೆ ಹೇಳುವ ಈ ಆಹಾರ ಬೀದಿಯಲ್ಲಿ ಸಂಜೆ ವೇಳೆ ಒಮ್ಮೆ ಬಂದರೆ ಸಾಕು ಎಷ್ಟೊಂದು ಬದಲಾವಣೆಯಾಗಿದೆ ಎಂಬುದು ನಮ್ಮ ಕಣ್ಣಮುಂದೆ ಹಾದು ಹೋಗುತ್ತದೆ’ ಎಂದು ನೆನಪು ಮಾಡಿಕೊಳ್ಳುತ್ತಾರೆ 47 ವರ್ಷಗಳಿಂದ ಕರಿಗಿರಿ ಹೋಟೆಲ್‌ ನಡೆಸುತ್ತಿರುವ ಎಚ್‌.ಕೆ. ಗೋಪಿ.

ನಮ್ಮ ತಂದೆಯ ಕಾಲದಿಂದಲೂ ಹೋಟೆಲ್‌ ನಡೆಸಿಕೊಂಡು ಬರುತ್ತಿದ್ದೇವೆ. ಆಗಿನ ಕಾಲದಲ್ಲಿ ಇದ್ದ ಹೋಟೆಲ್‌ನ ಬಾಗಿಲನ್ನು ಬದಲಿಸದೇ ಹಾಗೆಯೇ ಉಳಿಸಿಕೊಂಡಿದ್ದೇವೆ ಎನ್ನುತ್ತಾರೆ ಅವರು. ಗೋಪಿ ಅವರ ಹೋಟೆಲ್ ಈಗ ಬೇಕರಿಯ ಸ್ವರೂಪ ಪಡೆದುಕೊಂಡಿದೆ. 

‘ಬೇಕರಿ ಅಂದ್ರೆ ಎಲ್ಲ ಕಡೆ ಇರುವ ಹಾಗೆ ಅಲ್ಲ...’ ಎಂದು ತಕ್ಷಣ ಮಾರ್ನುಡಿಯುತ್ತಾರೆ. ಇವರ ಬೇಕರಿಯಲ್ಲಿ ಮನೆಯಲ್ಲಿ ಮಾಡಿದಂಥದ್ದೇ ರುಚಿಯ ಹೋಳಿಗೆ, ಕಜ್ಜಾಯ, ಕೋಡುಬಳೆ, ಅವರೇಬೇಳೆ, ಕಾಯಿ ಹೋಳಿಗೆ, ಕೊಬ್ಬರಿ ಮಿಠಾಯಿ ಸಿಗುತ್ತದೆ.

ಗಣೇಶನ ಹಬ್ಬದ ಆಸುಪಾಸಿನಲ್ಲಿ ಕಡುಬು, ಸಂಕ್ರಾಂತಿಗೆ ಸಕ್ಕರೆ ಅಚ್ಚು, ಎಳ್ಳು, ಯುಗಾದಿ ಸಂದರ್ಭಕ್ಕೆ ಹೋಳಿಗೆ ವ್ಯಾಪಾರ ಬಲು ಜೋರು.
ಇಲ್ಲಿನ ರುಚಿಗೆ ಮಾರು ಹೋದ ಗ್ರಾಹಕರು ಮಲ್ಲೇಶ್ವರ, ಹನುಮಂತನಗರ, ವಿಜಯನಗರ, ಯಶವಂತಪುರ, ಬಸವೇಶ್ವರ ನಗರದಿಂದಲೂ ಹುಡುಕಿಕೊಂಡು ಬರುತ್ತಾರೆ.

‘ಸಿನಿಮಾ ನಟರಾದ ಸಿಹಿಕಹಿ ಚಂದ್ರು, ಅರವಿಂದ್‌, ಹಲವು ಕಿರುತೆರೆ ಸ್ಟಾರ್‌ಗಳು ನಮ್ಮ ಹೋಟೆಲ್‌ ಕಂ ಬೇಕರಿಯ ರುಚಿಗೆ ಮನಸೋತಿದ್ದಾರೆ’ ಎಂದು ಹೆಮ್ಮೆಯಿಂದ ನುಡಿಯುತ್ತಾರೆ ಗೋಪಿ.

‘ನಲ್ವತ್ತು ವರ್ಷಗಳ ಹಿಂದೆ ನಾಲ್ಕಾಣೆಗೆ ಮೂರು ಇಡ್ಲಿ, 10 ಪೈಸೆಗೆ ಒಂದು ವಡೆ ಮಾರುತ್ತಿದ್ದೆವು. ಈಗ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ತಿಂಡಿ, ತಿನಿಸುಗಳ ಬೆಲೆಯೂ ದುಬಾರಿ ಆಗಿವೆ’ ಎಂದು ನೆನಪಿನ ಲೋಕಕ್ಕೆ ಜಾರುತ್ತಾರೆ.

ರಾಮಮಂದಿರದಿಂದ ಹಳೆ ಪೊಲೀಸ್‌ ಠಾಣೆವರೆಗೂ ಅನೇಕ ಫುಡ್‌ ಕಾರ್ನರ್‌ಗಳಿವೆ. ಸಂಪೂರ್ಣ ವಸತಿ ಪ್ರದೇಶವಾಗಿದ್ದ ಈ ಭಾಗ ಈಚೆಗೆ ವಾಣಿಜ್ಯ ಪ್ರದೇಶದ ಲುಕ್ ಪಡೆಯುತ್ತಿದೆ.

ಇಲ್ಲಿನ ಮತ್ತೊಂದು ವಿಶೇಷವೆಂದರೆ ಆಹಾರ ಮಳಿಗೆಗಳ ವೈವಿಧ್ಯ. ಒಬ್ಬರು ಬೋಂಡಾ ಅಂಗಡಿ ಹಾಕಿದ್ದರೆ ಮತ್ತೊಬ್ಬರದು ಉತ್ತರ ಭಾರತೀಯ ತಿನಿಸು. ಒಂದೇ ಆಹಾರದ ವ್ಯಾಪಾರವನ್ನು ಬಹಳಷ್ಟು ಮಂದಿ ಮಾಡುವುದಿಲ್ಲ. ಹಾಗಾಗಿ ಪೈಪೂಟಿಯೂ ಕಡಿಮೆ.

‘ಹತ್ತು ವರ್ಷಗಳ ಹಿಂದೆ ರಾಮಮಂದಿರ ಬಳಿ ಮಾರುಕಟ್ಟೆ ಇತ್ತು, ನಂತರ ಇಎಸ್‌ಐಗೆ ಸ್ಥಳಾಂತರವಾಯಿತು. ಇಡ್ಲಿ, ವಡೆ ತಿನ್ನಲು ಕರಿಗಿರಿ ಹೋಟೆಲ್‌ಗೆ ಹೋಗುತ್ತಿದ್ದೆವು, ಅಲ್ಲದೇ ಆಟದ ಮೈದಾನದ ಹತ್ತಿರವಿದ್ದ ಭಟ್ಟರ ಹೋಟೆಲ್‌, ದೇವಸ್ಥಾನದ ಹಿಂದೆ ಇದ್ದ ಅಂಬಿಕಾ ಹೋಟೆಲ್‌ ಸಹ ಯಾವಾಗಲೂ ಭೇಟಿ ನೀಡುತ್ತಿದ್ದ ಜಾಗ.

ನಗರ ಬೆಳೆದಂತೆ ವಿವಿಧ ರೀತಿಯ ಆಹಾರ ಮಳಿಗೆಗಳು ಪ್ರವೇಶ ಮಾಡಿದವು, ಚೈನೀಸ್‌, ಉತ್ತರ ಭಾರತೀಯ ತಿನಿಸುಗಳು, ಬರ್ಗರ್‌, ಪಿಜ್ಜಾ ಹೀಗೆ ಜನರ ಅಭಿರುಚಿ ಬದಲಾದಂತೆ ಹೋಟೆಲ್‌ಗಳು ಬಂದವು. ಈಗ ಸಂಜೆಯಾಗುತ್ತಿದ್ದಂತೆ ರಸ್ತೆಯಲ್ಲಿ ಜನದಟ್ಟಣೆಯೂ ಹೆಚ್ಚಾಗುತ್ತದೆ’ ಎನ್ನುತ್ತಾರೆ ರಾಜಾಜಿನಗರ ನಿವಾಸಿ ಚಂದ್ರು.

‘ನಮ್ಮೂರು ತಿರುವಣ್ಣಮಲೈ, ಬೆಂಗಳೂರಿಗೆ ಬಂದು 13 ವರ್ಷಗಳಾಯಿತು. ಐಟಿಐ ಮುಗಿಸಿ ಕೆಲಸಕ್ಕಾಗಿ ಇಲ್ಲಿಗೆ ಬಂದೆ. ಬಿಇಎಲ್‌ನಲ್ಲಿ ಫಿಟ್ಟರ್‌ ಆಗಿ ಕೆಲಸ ಸಿಕ್ಕಿತು, ಇದು ಕಾಯಂ ಕೆಲಸವಲ್ಲ. ಹಾಗಾಗಿ ಒಂದು ವರ್ಷದ ನಂತರ ಕೆಲಸ ಬಿಟ್ಟು ಇಎಸ್‌ಐ ಬಳಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದೆ.

ಅಲ್ಲಿ ಪೊಲೀಸರ ಕಾಟ ತಾಳಲಾರದೇ ಆ ವ್ಯಾಪಾರವನ್ನೂ ಬಿಟ್ಟು, ಪಟಾಕದಲ್ಲಿ ಕೆಲಸಕ್ಕೆ ಸೇರಿದೆ. ಇಲ್ಲಿ ವಡಾಪಾವ್‌, ಪಿಜ್ಜಾ, ಬರ್ಗರ್‌, ನಗೆಟ್ಸ್‌, ಪಾವ್‌ ಭಾಜಿ ಮಾಡುವುದನ್ನೂ ಕಲಿತೆ. ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇನೆ’ ಎನ್ನುತ್ತಾರೆ ಪಟಾಕ ಫುಡ್‌ ಕಾರ್ನರ್‌ನಲ್ಲಿ ಕೆಲಸ ಮಾಡುವ ಶರವಣ್‌.

ಆಹಾರ ಬೀದಿಯಲ್ಲಿ ಪಾನಿಪುರಿ, ಮಸಾಲೆಪುರಿ, ಗೋಬಿ ಮಂಚೂರಿ, ನೂಡಲ್ಸ್‌, ವಡಾ ಪಾವ್‌, ಫ್ರೆಂಚ್‌ಫ್ರೈಸ್‌, ಬರ್ಗರ್‌, ಬಿಜಾಪುರದ ಜೋಳದ ರೊಟ್ಟಿ, ಚಟ್ನಿಪುಡಿ, ಧಾರವಾಡ ಪೇಡ, ಶೇಂಗಾ ಹೋಳಿಗೆ, ರೋಲ್ಸ್‌, ಬೋಂಡ, ಚುರುಮುರಿ, ಕಬ್ಬಿನ ಹಾಲು, ಮಿಠಾಯಿ... ಹೀಗೆ ವೈವಿಧ್ಯಮಯ ತಿನಿಸುಗಳು ಸಿಗುತ್ತವೆ. ಜೇಬು– ಹೊಟ್ಟೆ ನಿಮ್ಮದಾದ ಮೇಲೆ ನಾಲಿಗೆ ತಣಿಸುವ ರುಚಿಯ ಆಯ್ಕೆಯೂ ನಿಮ್ಮದೇ ಅಲ್ಲವೇ? 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.