ADVERTISEMENT

ತಂದೂರಿ ಖಾದ್ಯದ ಸವಿ, ರೆಟ್ರೊ ಸಂಗೀತದ ಝರಿ

ರಸಾಸ್ವಾದ

ರಮೇಶ ಕೆ
Published 18 ನವೆಂಬರ್ 2016, 19:30 IST
Last Updated 18 ನವೆಂಬರ್ 2016, 19:30 IST
ತಂದೂರಿ ಖಾದ್ಯದ ಸವಿ, ರೆಟ್ರೊ ಸಂಗೀತದ ಝರಿ
ತಂದೂರಿ ಖಾದ್ಯದ ಸವಿ, ರೆಟ್ರೊ ಸಂಗೀತದ ಝರಿ   
ಡಿಸ್ಕ್‌ ಜಾಕಿ (ಡಿಜೆ) ಹಾಕುತ್ತಿದ್ದ ಅಬ್ಬರದ ರೆಟ್ರೊ ಸಂಗೀತಕ್ಕೆ ಯುವಕ, ಯುವತಿಯರು ತಲೆದೂಗುತ್ತಾ ಹೆಜ್ಜೆ ಹಾಕುತ್ತಿದ್ದರು. ಕೆಲವರು ಕುಳಿತಲ್ಲೇ ಬಿಯರ್‌ ಕುಡಿಯುತ್ತಾ ‘ಚಿಕನ್‌ ಮೊಚೊ ನಾಚೋಸ್‌’ ತಿನ್ನುತ್ತಿದ್ದರು. ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ  ಪಬ್‌ನಲ್ಲಿ ಮನುಷ್ಯನ ಅಸ್ಥಿಪಂಜರದ ಸಣ್ಣ ಕಟೌಟ್‌ಗಳು ನೇತಾಡುತ್ತಿದ್ದವು. 
 
ಫ್ರೇಜರ್‌ ಟೌನ್‌ನಲ್ಲಿರುವ ಶೆರ್ಲಾಕ್ಸ್‌ ಪಬ್‌ನಲ್ಲಿ ಕಂಡುಬಂದ ದೃಶ್ಯವಿದು. ಈ ಪಬ್ ಈಗ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಇಲ್ಲಿ ಬರುವ ಗ್ರಾಹಕರಿಗೆ ಕಂಫರ್ಟ್‌ ಜೋನ್‌ ಸಹ ಇದೆ. ಹಿರಿಯ ಗ್ರಾಹಕರು ಒರಗಿ ಕುಳಿತುಕೊಳ್ಳಲು ಅನುಕೂಲವಾಗುವಂಥ ಕುರ್ಚಿಗಳನ್ನು ಒಳಗೊಂಡ ಹಾಲ್‌ ಇದೆ. ಧೂಮಪಾನ ಮಾಡುವವರಿಗೆ ಒಂದು ಹಾಲ್‌. ಸಂಸಾರ ಸಮೇತ ಬರುವ ಗ್ರಾಹಕರಿಗೆ ಪ್ರತ್ಯೇಕ ಮಹಡಿ ಇದೆ. 
 
ಚಿಕನ್‌ ಮೊಚೊ ನಾಚೊಸ್‌, ಕ್ರಷ್ಡ್‌ ಪೆಪ್ಪರ್‌ ಗ್ರಿಲ್‌ ಚಿಕನ್‌, ಹರಿಯಾಲಿ ಕಬಾಬ್‌, ಚಿಕನ್‌ ಟಿಕ್ಕ ಇಲ್ಲಿನ ಸಿಗ್ನೇಚರ್‌ ಡಿಷ್‌ಗಳಾಗಿವೆ. ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿದ  ಚಿಕನ್‌, ನಾಚೊಸ್‌, ವಿನಿಗರ್‌, ಚೀಸ್‌ ಹಾಕಿ ಮಾಡಿದ ‘ಚಿಕನ್‌ ಮೊಚೊ ನಾಚೊಸ್‌’ ಹೆಚ್ಚು ಖಾರವಿಲ್ಲದ ಖಾದ್ಯ.
 
23ನೇ ವಯಸ್ಸಿನಲ್ಲೇ ಬಾಣಸಿಗನಾಗಲು ದೆಹಲಿಯಿಂದ ಪಂಜಾಬ್‌ಗೆ ಬಂದ ಧರಂ ಸಿಂಗ್‌, ಹೋಟೆಲ್‌ಗಳಲ್ಲಿ ಸಿಕ್ಕ ಸಣ್ಣ ಕೆಲಸಗಳನ್ನೆಲ್ಲಾ ಮಾಡಿದರು. ಮುಖ್ಯ ಬಾಣಸಿಗರೊಂದಿಗೆ ಕೆಲಸ ಮಾಡುತ್ತಾ ತಂದೂರಿ, ಉತ್ತರ ಭಾರತೀಯ, ಚೈನೀಸ್‌, ಕಾಂಟಿನೆಂಟಲ್‌ ಆಹಾರ ತಯಾರಿಸುವ ಕಲೆಯನ್ನು ಕರಗತ ಮಾಡಿಕೊಂಡರು.  
 
ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಿರುವ ಧರಂ ಸಿಂಗ್‌ ಸದ್ಯ ಶೆರ್ಲಾಕ್ಸ್‌ ಪಬ್‌ನಲ್ಲಿ ತಮ್ಮ ಕೈರುಚಿಯನ್ನು ಉಣಬಡಿಸುತ್ತಿದ್ದಾರೆ.  
‘ಮಾಂಸಾಹಾರದಲ್ಲಿ ತಂದೂರಿ ಖಾದ್ಯಗಳನ್ನು ಜನ ಹೆಚ್ಚಾಗಿ ಇಷ್ಟಪಡುತ್ತಾರೆ. ಕಾಂಟಿನೆಂಟಲ್‌, ಚೈನೀಸ್‌ ಫುಡ್‌ ಸಹ ನಮ್ಮಲ್ಲಿ ಮಾಡುತ್ತೇವೆ. ಕಾಂಟಿನೆಂಟಲ್‌ ತಿನಿಸನ್ನು ಹೆಚ್ಚು ಸ್ಪೈಸಿಯಾಗಿ ಮಾಡಿಕೊಡಿ ಎಂದು ಕೇಳುತ್ತಾರೆ. ಗ್ರಾಹಕರು ಬಯಸಿದಂತೆ ಅಡುಗೆ ಮಾಡುತ್ತೇವೆ’ ಎನ್ನುತ್ತಾರೆ ಬಾಣಸಿಗ ಧರಂ ಸಿಂಗ್‌.
 
ಮಾಕ್‌ಟೇಲ್‌, ಕಾಕ್‌ಟೇಲ್‌ ಪಾನೀಯಗಳು ಗ್ರಾಹಕರು ಕೇಳುವ ಸ್ವಾದದಲ್ಲಿ ಸಿಗುತ್ತದೆ.  ಕೆಮ್ಮು, ನೆಗಡಿ ಇದ್ದರೆ, ಗಂಟಲು ಕೆಟ್ಟಿದ್ದರೆ ಬಿಸಿನೀರು ಮತ್ತು ಮಸಾಲೆ ಹಾಕಿದ ಬ್ರಾಂದಿಯನ್ನೂ ಕೊಡುತ್ತಾರೆ. 
 
‘ನಮ್ಮಲ್ಲಿ 20 ವರ್ಷಗಳಿಂದ ಬರುತ್ತಿರುವ ಗ್ರಾಹಕರಿದ್ದಾರೆ. ಹಲಸೂರು, ಫ್ರೇಜರ್‌ಟೌನ್‌, ಇಂದಿರಾನಗರ, ಮಾರತ್ತಹಳ್ಳಿಯಿಂದಲೂ ಗ್ರಾಹಕರು ಬರುತ್ತಾರೆ.  ಪಾಂಫ್ರೆಟ್‌ ಫಿಶ್‌ ತಂದೂರಿ, ಪ್ರಾನ್‌ ಬಟರ್‌ ಗಾರ್ಲಿಕ್‌, ಫಿಶ್‌ ಫಿಂಗರ್‌, ಚಿಕನ್ ಚೆಟ್ಟಿನಾಡು, ಮಂಗಳೂರು ಮೀನು ಸಾರು ಬಹುತೇಕ ಮಂದಿ ಇಷ್ಟಪಡುವ ಖಾದ್ಯಗಳು’ ಎನ್ನುತ್ತಾರೆ ಪಬ್‌ನ ಸಿಇಒ ಸಜನ್‌ ಥಾಮಸ್‌.
 
**
ಗ್ರಿಲ್ಡ್‌ ಎಗ್‌ ಮಾಡುವ ವಿಧಾನ
‘ಹಸಿಮೊಟ್ಟೆಯನ್ನು ಬಟ್ಟಲಿಗೆ ಒಡೆದು ಹಾಕಿ. ಅದರೊಳಗೆ ಖಾರದ ಪುಡಿ,  ಉಪ್ಪು, ಕಾಳುಮೆಣಸಿನ ಪುಡಿ ಹಾಕಿ ಕಲೆಸಬೇಕು. ಅದನ್ನು ಹಬೆಯಲ್ಲಿ ಬೇಯಿಸುವ ಪಾತ್ರೆಯೊಳಗೆ ಹಾಕಿ ಪಾತ್ರೆಯನ್ನು ನೀರಿನೊಳಗಿಟ್ಟು ಬೇಯಿಸಬೇಕು. ಆಗ ಕಲೆಸಿದ ಮೊಟ್ಟೆ ಬೆಂದು ಕೇಕ್‌ನಂತಾಗುತ್ತದೆ. ಆಮೇಲೆ ಆ ಮೊಟ್ಟೆಯನ್ನು ಫ್ರೆಂಚ್‌ಫ್ರೈ ರೀತಿ ಉದ್ದುದ್ದ ಕತ್ತರಿಸಿ, ಬ್ರೆಡ್‌ಪುಡಿಯಲ್ಲಿ ಅದ್ದಿ  ಗ್ರಿಲ್‌ನಲ್ಲಿ ಬೇಯಿಸಲಾಗುತ್ತದೆ. ಈ ಗ್ರಿಲ್ಡ್‌ ಎಗ್‌ನೊಂದಿಗೆ ಬಾರ್ಬೆಕ್ಯು ಸಾಸ್‌  ನೆಂಜಿಕೊಂಡು ತಿನ್ನಬಹುದು. 
 
 
**
ಡಿಜೆ ಸಂಗೀತ 
ಪ್ರತಿ ದಿನ  ಸಂಜೆ 7.30ರಿಂದ 11.30ರವರೆಗೆ ವಾರಾಂತ್ಯ ದಿನಗಳಲ್ಲಿ ರಾತ್ರಿ 1.30ರವರೆಗೆ ಡಿಜೆ ಸಂಗೀತವಿರುತ್ತದೆ. 
 
‘ಯುವಕರು ಹೆಚ್ಚಾಗಿ ರೆಟ್ರೊ ಮ್ಯೂಸಿಕ್‌ ಹಾಕುವಂತೆ ಕೇಳುತ್ತಾರೆ. ಶನಿವಾರ ಹಾಗೂ ಭಾನುವಾರ ಮಾತ್ರ ಆಧುನಿಕ ಇಂಗ್ಲಿಷ್‌ ಸಂಗೀತಕ್ಕೆ ಬೇಡಿಕೆ ಇರುತ್ತದೆ’ ಎನ್ನುತ್ತಾರೆ ಡಿಜೆ ಶೆರ್ವಿನ್‌.
 
**
ರೆಸ್ಟೊರೆಂಟ್‌:  ಶೆರ್ಲಾಕ್ಸ್‌ ಪಬ್‌
ಸ್ಥಳ:  ಕೋಲ್ಸ್‌ ರಸ್ತೆ, ಪುಲಕೇಶಿ ನಗರ, ಫ್ರೇಜರ್‌ ಟೌನ್‌. 
ಇಬ್ಬರಿಗೆ: ₹800
ಮಾಹಿತಿಗೆ: 88803 00600.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.