ADVERTISEMENT

ನವರಾತ್ರಿಗೆ ವಿಶೇಷ ತಿನಿಸು

ನಳಪಾಕ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2016, 19:30 IST
Last Updated 7 ಅಕ್ಟೋಬರ್ 2016, 19:30 IST
ನವರಾತ್ರಿಗೆ ವಿಶೇಷ ತಿನಿಸು
ನವರಾತ್ರಿಗೆ ವಿಶೇಷ ತಿನಿಸು   

ಸಂಜೀವ್‌ ಕಪೂರ್‌ ಅವರು ಜನಪ್ರಿಯ ಬಾಣಸಿಗರಲ್ಲೊಬ್ಬರು. ಹೋಟೆಲ್‌ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೊಮ ಪದವಿಯನ್ನು ಇವರು ಪಡೆದಿದ್ದಾರೆ. ಟಿವಿ ವಾಹಿನಿಗಳಲ್ಲಿ ಸರಳ ಹಾಗೂ ರುಚಿಕರ ತಿನಿಸು ಮಾಡುವ ಮೂಲಕ ಇವರು ಪ್ರಸಿದ್ಧಿ ಗಳಿಸಿದ್ದಾರೆ.

ರುಚಿಕರ ಅಡುಗೆ ತಯಾರಿಸುವುದರಲ್ಲಿ ಪಳಗಿರುವ ಇವರು, ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರ ‘ಖಾನ ಕಝಾನ’ ಶೋ ಎರಡು ಸಾವಿರ ಸಂಚಿಕೆ ಪೂರೈಸಿತ್ತು.

**
ಆಲೂಪೊಸ್ಟೊ
ಬೇಕಾಗುವ ಸಾಮಗ್ರಿ

ಸಿಪ್ಪೆಯನ್ನು ತೆಗೆದು ಕತ್ತರಿಸಿಕೊಂಡ ಐದರಿಂದ ಆರು ಆಲೂಗಡ್ಡೆ, ನಾಲ್ಕು ಚಮಚ ಸಾಸಿವೆ, ಎರಡು ಚಮಚ ನ್ಯೂಟ್ರಿಲೈಟ್‌, ಅರ್ಧ ಚಮಚ ಈರುಳ್ಳಿ ಬೀಜ, ಉಪ್ಪು ರುಚಿಗೆ ತಕ್ಕಷ್ಟು, ಅರ್ಧ ಚಮಚ ಸಕ್ಕರೆ, ಉದ್ದವಾಗಿ ಕತ್ತರಿಸಿದ ಹಸಿಮೆಣಸಿನಕಾಯಿ ಎರಡು.

ಮಾಡುವ ವಿಧಾನ
ಸಾಸಿವೆಯನ್ನು ಉಗುರುಬೆಚ್ಚಗಿನ ನೀರಿನಲ್ಲಿ ಹದಿನೈದರಿಂದ ಇಪ್ಪತ್ತು ನಿಮಿಷ ನೆನೆಸಿಡಬೇಕು. ನಂತರ ಅದನ್ನು ರುಬ್ಬಿಕೊಳ್ಳಬೇಕು. ನ್ಯೂಟ್ರಿಲೈಟನ್ನು ನಾನ್‌ಸ್ಟಿಕ್‌ ಪಾನ್‌ನಲ್ಲಿ ಕಾಯಿಸಿಕೊಳ್ಳಬೇಕು. ಇದಕ್ಕೆ ಈರುಳ್ಳಿ ಬೀಜವನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕು.

ಅದಕ್ಕೆ ಆಲೂಗಡ್ಡೆ ಹೋಳುಗಳನ್ನು ಹಾಕಿ ಮಂದ ಉರಿಯಲ್ಲಿ ಬೇಯಿಸಿಕೊಳ್ಳಬೇಕು. ಇದಕ್ಕೆ ರುಬ್ಬಿಕೊಂಡ ಸಾಸಿವೆಯನ್ನು ಹಾಕಿ ಕಲಸಬೇಕು. ನಂತರ ಅರ್ಧ ಲೋಟ ನೀರು ಹಾಕಿ ಮಂದ ಉರಿಯಲ್ಲಿ ಬೇಯಿಸ ಬೇಕು. ಆಲೂಗಡ್ಡೆ ಮುಕ್ಕಾಲುಭಾಗ ಬೆಂದ ನಂತರ ಸಕ್ಕರೆ, ಉಪ್ಪು, ಹಸಿಮೆಣಸಿನಕಾಯಿ ಹಾಕಿ ಆಲೂಗಡ್ಡೆ ಪೂರ್ಣ ಬೇಯುವವರೆಗೂ ಬಿಡಬೇಕು. ಇದನ್ನು ಬಿಸಿಯಾಗಿ ತಿನ್ನಲು ರುಚಿಯಾಗಿರುತ್ತದೆ. 

**
ಸಾಂಡೆಶ್‌
ಬೇಕಾಗುವ ಪದಾರ್ಥಗಳು

ಒಂದೂವರೆ ಲೀಟರ್‌ ಹಾಲು, ನಿಂಬೆಹಣ್ಣಿನ ರಸ, 65 ಗ್ರಾಂ ಶುಗರ್‌ಫ್ರಿ, ಏಲಕ್ಕಿ ಪುಡಿ ಸ್ವಲ್ಪ, ಸಣ್ಣದಾಗಿ ಕತ್ತರಿಸಿಕೊಂಡಿರುವ ಪಿಸ್ತಾ.

ಮಾಡುವ ವಿಧಾನ
ದಪ್ಪಗಿನ ತಳವಿರುವ ಪಾತ್ರೆಯಲ್ಲಿ ಹಾಲನ್ನು ಕುದಿಸಬೇಕು. ಇದಕ್ಕೆ ನಿಂಬೆಹಣ್ಣಿನ ರಸವನ್ನು ಸೇರಿಸಬೇಕು. ಹಾಲು ಒಡೆಯುವವರೆಗೂ ಕಲಸಬೇಕು.  ನಂತರ ಪನ್ನಿರ್‌ ಅನ್ನು ತಕ್ಷಣ ನೀರಿನಿಂದ ಅದನ್ನು ತೊಳೆಯಬೇಕು.

ಅದನ್ನು ಬಳಿ ಬಟ್ಟೆಯಲ್ಲಿ ಹಾಕಿ ನೀರು ಸಂಪೂರ್ಣವಾಗಿ ಹೋಗುವವರೆಗೂ ಹಿಂಡಬೇಕು. ಇದಕ್ಕೆ ಶುಗರ್‌ ಫ್ರಿ ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ನಾದಬೇಕು. ಇದನ್ನು ಪಾನ್‌ನಲ್ಲಿ ಎಂಟು ನಿಮಿಷ ಮಂದ ಉರಿಯಲ್ಲಿ ಬೇಯಿಸಬೇಕು. ಇದು ತಣ್ಣಗಾದ ನಂತರ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಬೇಕು. ಇದರ ಮೇಲೆ ಪಿಸ್ತಾ ಚುರುಗಳನ್ನು ಇರಿಸಿದರೆ ಸಾಂಡೆಶ್‌ ಸವಿಯಲು ಸಿದ್ಧವಾಗುತ್ತದೆ.

**
ಚೆನ್ನಾರ್‌ ಪಾಯಶ್‌
ಬೇಕಾಗುವ ಸಾಮಗ್ರಿ

ಅರ್ಧ ಕಪ್‌ ಪನ್ನೀರ್, ಒಂದು ಲೀಟರ್‌ ಹಾಲು, ಅರ್ಧ ಕಪ್‌ ಶುಗರ್‌ ಫ್ರಿ, ಕತ್ತರಿಸಿಕೊಂಡಿರುವ ಬಾದಾಮಿ ಮತ್ತು ಪಿಸ್ತಾ.

ಮಾಡುವ ವಿಧಾನ
ಹಾಲನ್ನು ಚೆನ್ನಾಗಿ ಕಾಯಿಸಿಕೊಳ್ಳಬೇಕು. ನಂತರ ಮಂದ ಉರಿಯಲ್ಲಿ ಹಾಲಿನ ಪ್ರಮಾಣ ಮೊದಲಿಗಿಂತ ಅರ್ಧದಷ್ಟು ಆಗಬೇಕು. ನಂತರ ಇದಕ್ಕೆ ಶುಗರ್‌ ಫ್ರಿ ಸೇರಿಸಿ ಚೆನ್ನಾಗಿ ಕಾಯಿಸಬೇಕು.

ಇದಕ್ಕೆ ಮ್ಯಾಶ್‌ ಮಾಡಿದ ಪನ್ನೀರ್‌ ಸೇರಿಸಿ ಮಂದ ಉರಿಯಲ್ಲಿ ಎರಡು ನಿಮಿಷ ಕಾಯಿಸಬೇಕು. ಕೊನೆಯಲ್ಲಿ ಬಾದಾಮಿ ಮತ್ತು ಪಿಸ್ತಾ ದಿಂದ ಅಲಂಕರಿಸಿ ಚೆನ್ನಾರ್ ಪಾಯಶ್‌ ತಯಾರಾಗುತ್ತದೆ.

**
ಗುಗ್‌ನಿ
ಬೇಕಾಗುವ ಪದಾರ್ಥಗಳು

ಒಂದು ಚಿಕ್ಕ ಲೋಟ ನೆನೆಸಿದ ಬಿಳಿ ಬಟಾಣಿ (ಇದನ್ನು ಅರಿಶಿಣ, ಉಪ್ಪು ಮತ್ತು ನ್ಯೂಟ್ರಿಲೈಟ್‌ ಹಾಕಿ ರುಬ್ಬಿಕೊಳ್ಳಬೇಕು), ಕಾಲು ಚಮಚ ಇಂಗು, ಒಂದು ಚಮಚ ಜೀರಿಗೆ, ಒಂದು ಈರುಳ್ಳಿ, ಕತ್ತರಿಸಿಕೊಂಡಿರುವ ಶುಂಠಿ ಒಂದು ಚಮಚ, ಕಾಲು ಚಮಚ ನೆನಸಿದ ಬಟಾಣಿ, ಕತ್ತರಿಸಿಕೊಂಡಿರುವ ಟೊಮೆಟೊ ಒಂದು, ರುಚಿಗೆ ತಕ್ಕಷ್ಟು ಉಪ್ಪು, ಒಂದು ಚಮಚ ದನಿಯಾ ಪುಡಿ,  ಮಾವಿನ ಪುಡಿ ಒಂದು ಚಮಚ, ಎರಡು ಚಮಚ ಕತ್ತರಿಸಿಕೊಂಡಿರುವ ಕೊತ್ತಂಬರಿ ಸೊಪ್ಪು, ಗರಂ ಮಸಾಲ ಪುಡಿ ಸ್ವಲ್ಪ.

ಮಾಡುವ ವಿಧಾನ
ಪಾನ್‌ನಲ್ಲಿ ನ್ಯೂಟ್ರಿಲೈಟನ್ನು ಬಿಸಿ ಮಾಡಬೇಕು. ಇದಕ್ಕೆ ಇಂಗು, ಸಾಸಿವೆ,  ಈರುಳ್ಳಿಯನ್ನು ಹಾಕಿ ಹುರಿಯಬೇಕು. ಈರುಳ್ಳಿ ಕಂದುಬಣ್ಣಕ್ಕೆ ಬಂದ ನಂತರ ಶುಂಠಿ, ರುಬ್ಬಿಕೊಂಡ ಬಟಾಣಿ ಮತ್ತು ನೆನೆಸಿಟ್ಟುಕೊಂಡ ಬಟಾಣಿ ಹಾಕಬೇಕು. ನಂತರ ಇದಕ್ಕೆ ಟೊಮೆಟೊ ಹಾಕಿ ಕಲಸಬೇಕು.

ಇದಕ್ಕೆ ಉಪ್ಪು, ದನಿಯಾ ಪುಡಿ, ಮಾವಿನ ಪುಡಿ ಹಾಕಿ ಕಲಸಬೇಕು.  ನಂತರ ಇದಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕಿ ಎರಡು ನಿಮಿಷ ಬೇಯಿಸಬೇಕು. ಈಗ ಸ್ವಲ್ಪ ಗರಂ ಮಸಾಲಪುಡಿಯನ್ನು ಉದುರಿಸಿದರೆ ಗುಗನಿ ಸವಿಯಲು ಸಿದ್ಧವಾಗುತ್ತದೆ. ಇದನ್ನು ಈರುಳ್ಳಿ ಮತ್ತು ಲಿಂಬೆಹಣ್ಣಿನ್ನ ಹೋಳುಗಳಿಂದ ಅಲಂಕರಿಸಬಹುದು.
– ವಿದ್ಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT