ADVERTISEMENT

ನಾಲಿಗೆಗೆ ಖುಷಿ ಕೊಡುವ ಫ್ರೈ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2016, 19:30 IST
Last Updated 1 ಡಿಸೆಂಬರ್ 2016, 19:30 IST
ನಾಲಿಗೆಗೆ ಖುಷಿ ಕೊಡುವ ಫ್ರೈ
ನಾಲಿಗೆಗೆ ಖುಷಿ ಕೊಡುವ ಫ್ರೈ   

ತರಕಾರಿಗಳ ವಿವಿಧ ಫ್ರೈಗಳು ರೊಟ್ಟಿ, ಚಪಾತಿಗಳೊಂದಿಗೆ ನೆಂಜಿಕೊಳ್ಳಲು ಬಹಳ ರುಚಿಯಾಗಿರುತ್ತವೆ. ಘಮ್ಮೆನ್ನುವ ಮಸಾಲೆಗಳಿಂದ ಕೂಡಿದ ವೆಜ್‌ ಫ್ರೈಗಳನ್ನು ಸುಲಭವಾಗಿ ತಯಾರಿಸಬಹುದು ಎನ್ನುತ್ತಾರೆ ಶ್ಯಾಮಲಾ ಜಿ

ಆಲೂ ಫ್ರೈ
ಬೇಕಾಗುವ ಸಾಮಗ್ರಿಗಳು: ದಪ್ಪ ಆಲೂಗಡ್ಡೆ ಎರಡು, ಮೂರು ಚಮಚ ಕಾರದಪುಡಿ, ನಾಲ್ಕು ಚಮಚ ಎಣ್ಣೆ, ಒಂದು ಚಮಚ ನಿಂಬೆಹಣ್ಣಿನ ರಸ, ಎರಡು ಚಮಚ ಕೊತ್ತಂಬರಿ ಸೊಪ್ಪು ಹೆಚ್ಚಿದ್ದು, ರುಚಿಗೆ ತಕ್ಕಷ್ಟು ಉಪ್ಪು.


ಮಾಡುವ ವಿಧಾನ: ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ. ನಂತರ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಕೊಂಡು ಪಕ್ಕಕ್ಕಿಡಿ. ದಪ್ಪ ತಳವಿರುವ ಬಾಣಲೆಯಲ್ಲಿ ಎಣ್ಣೆ ಹಾಕಿ ಹೆಚ್ಚಿದ ಆಲೂಗಡ್ಡೆಯನ್ನು ಸಣ್ಣ ಉರಿಯಲ್ಲಿ ಹುರಿಯಿರಿ. ಇದಕ್ಕೆ ಕಾರಪುಡಿ, ಉಪ್ಪು ಹಾಕಿ ಮಿಕ್ಸ್‌ ಮಾಡಿ. ಎಲ್ಲವೂ ಹೊಂದಿಕೊಂಡ ಮೇಲೆ ಕೆಳಗಿಳಿಸಿ ಕೊತ್ತಂಬರಿ ಸೊಪ್ಪು ಉದುರಿಸಿ ನಿಂಬೆರಸ ಹಿಂಡಿ. ಸುಲಭವಾಗಿ ರುಚಿಯಾದ ಆಲೂ ಫ್ರೈ ಸಿದ್ಧ.

ಬೆಂಡೆ ಫ್ರೈ
ಬೇಕಾಗುವ ಸಾಮಗ್ರಿಗಳು:

ಬೆಂಡೆಕಾಯಿ ಎಳೆಯದು ಏಳೆಂಟು, ಅಚ್ಚಕಾರದಪುಡಿ ಎರಡು ಚಮಚ, ಉಪ್ಪು ರುಚಿಗೆ ತಕ್ಕಷ್ಟು, ನಿಂಬೆಹಣ್ಣಿನ ರಸ ಒಂದು ಚಮಚ, ಗರಂ ಮಸಾಲ ಒಂದು ಚಮಚ, ಸಾಸಿವೆ ಸ್ವಲ್ಪ, ಎಣ್ಣೆ ಒಂದು ಕಪ್‌.

ಮಾಡುವ ವಿಧಾನ: ಬೆಂಡೆಕಾಯಿಯನ್ನು ತೊಳೆದು ಉದ್ದುದ್ದವಾಗಿ ಸೀಳಿ. ಒಂದು ಪ್ಯಾನ್‌ ಮೇಲೆ ಸ್ವಲ್ಪವೇ ಎಣ್ಣೆ ಹಾಕಿ ಬೆಂಡೆಕಾಯಿಯನ್ನು ಅದರ ಮೇಲೆ ಹಾಕಿ ಹೊರಳಿಸಿ ಹುರಿಯಿರಿ. ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಹುರಿದ ಬೆಂಡೆಕಾಯಿ ಹಾಕಿ. ಇದಕ್ಕೆ ಉಪ್ಪು, ಕಾರಪುಡಿ, ಗರಂ ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ.ನಂತರ ಕೆಳಗಿಳಿಸಿ ನಿಂಬೆ ರಸ ಹಿಂಡಿ. ಬೇಕಿದ್ದರೆ ಕೊತ್ತಂಬರಿ ಸೊಪ್ಪು ಉದುರಿಸಬಹುದು. ಇದು ಚಪಾತಿ, ದೋಸೆಗೆ ಚೆನ್ನಾಗಿರುತ್ತದೆ.

ಹಾಗಲಕಾಯಿ ಫ್ರೈ
ಬೇಕಾಗುವ ಸಾಮಗ್ರಿಗಳು:
ಹಾಗಲಕಾಯಿ ಎರಡು, ಉಪ್ಪು ರುಚಿಗೆ ತಕ್ಕಷ್ಟು, ಮೆಣಸಿನ ಪುಡಿ ಸ್ವಲ್ಪ, ಹುಣಸೆಹಣ್ಣು ಸ್ವಲ್ಪ, ಬೆಲ್ಲ ಅರ್ಧ ಅಚ್ಚು, ಗರಂ ಮಸಾಲೆ ಸ್ವಲ್ಪ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಒಂದು ಚಮಚ, ಅರಿಷಿಣ ಸ್ವಲ್ಪ.

ಮಾಡುವ ವಿಧಾನ: ಹಾಗಲಕಾಯಿಯನ್ನು ಬಿಲ್ಲೆಯಾಕಾರದಲ್ಲಿ ಹೆಚ್ಚಿಕೊಂಡು ಉಪ್ಪು ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿಡಿ. ನಂತರ ಅದನ್ನು ತೆಗೆದು ಗಟ್ಟಿಯಾಗಿ ಹಿಂಡಿ ಬದಿಗಿಡಿ. ಎಣ್ಣೆ ಹಾಕಿ ಕಾದ ಮೇಲೆ ಹಾಗಲಕಾಯಿ ಹಾಕಿ ಹುರಿಯಿರಿ. ಇದಕ್ಕೆ ಉಪ್ಪು, ಮೆಣಸಿನ ಪುಡಿ, ಅರಿಷಿಣ, ಬೆಲ್ಲ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಹುಣಸೆಹಣ್ಣಿನ ರಸ, ಗರಂ ಮಸಾಲೆ ಎಲ್ಲ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ರುಚಿಯಾದ ಹಾಗಲಕಾಯಿ ಫ್ರೈ ರೆಡಿ.

ಬದನೆಕಾಯಿ ಫ್ರೈ
ಬೇಕಾಗುವ ಸಾಮಗ್ರಿಗಳು: ಬದನೆಕಾಯಿ ಏಳೆಂಟು, ಉಪ್ಪು ರುಚಿಗೆ ತಕ್ಕಷ್ಟು, ಮೆಣಸಿನಕಾಯಿ ಪುಡಿ ಸ್ವಲ್ಪ, ಹುಳಿಪುಡಿ ಮೂರು ಚಮಚ, ಗರಂ ಮಸಾಲೆ ಒಂದು ಚಮಚ, ದನಿಯಾ ಪುಡಿ ಒಂದು ಚಮಚ, ಕಾರ್ನ್‌ಫ್ಲೋರ್‌ ಒಂದು ಚಮಚ, ಬೆಲ್ಲ ಚಿಟಿಕೆ, ಎಣ್ಣೆ ಒಂದು ಕಪ್‌, ಕೊತ್ತಂಬರಿ ಸೊಪ್ಪು ಸ್ವಲ್ಪ, ಈರುಳ್ಳಿ ಎರಡು.

ಮಾಡುವ ವಿಧಾನ: ಬದನೆಕಾಯಿಯನ್ನು ಚೆನ್ನಾಗಿ ತೊಳೆದು ಸೀಳಿ. ಈರುಳ್ಳಿ ಸಣ್ಣಗೆ ಹೆಚ್ಚಿಡಿ. ಬಾಣಲೆಗೆ ಎಣ್ಣೆ ಹಾಕಿ ಈರುಳ್ಳಿ ಫ್ರೈ ಮಾಡಿ. ಸೀಳಿದ ಬದನೆಕಾಯಿಯೊಳಗೆ ಹುಳಿಪುಡಿ, ಕಾರಪುಡಿ, ಕಾರ್ನ್‌ಫ್ಲೋರ್‌ ತುಂಬಿ ಎಣ್ಣೆಯಲ್ಲಿ ಹುರಿಯಿರಿ. ಉಪ್ಪು, ಬೆಲ್ಲ, ಇಂಗು, ಗರಂ ಮಸಾಲ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಇಳಿಸಿದ ಮೇಲೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ರೊಟ್ಟಿ ಜತೆ ತಿನ್ನಲು ಕೊಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT