ADVERTISEMENT

ನೈಸರ್ಗಿಕ ಸ್ವಾದದ ಐಸ್

ರಸಾಸ್ವಾದ

ಸುರೇಖಾ ಹೆಗಡೆ
Published 30 ಮಾರ್ಚ್ 2014, 19:30 IST
Last Updated 30 ಮಾರ್ಚ್ 2014, 19:30 IST

ಗೌಜು ಗದ್ದಲಗಳ ಗೊಡವೆಯಿಲ್ಲದ ಪ್ರಶಾಂತ ವಾತಾವರಣ. ಅಂದದ ಎಳನೀರು, ಪಕ್ಕದಲ್ಲೇ ಕಣ್ಸೆಳೆಯುವ ಐಸ್‌ಕ್ರೀಂ ಮನಸಿಗೆ ತಂಪಿನ ಅನುಭವ ನೀಡುತ್ತದೆ. ಒಳಗೆ ನಡೆದರೆ ಪುಟ್ಟ ಜಾಗದಲ್ಲಿ ಒಪ್ಪವಾಗಿ ಜೋಡಿಸಿಟ್ಟ ವಿವಿಧ ಬಗೆಯ ಐಸ್‌ಕ್ರೀಂಗಳು, ಪುಟ್ಟ ಆಸನ ಕೈಬೀಸಿ ಕರೆಯುತ್ತವೆ.

ವುಡ್‌ಸ್ಟ್ರೀಟ್‌ನಲ್ಲಿರುವ ನ್ಯಾಚುರಲ್‌ ಅಂಡ್‌ ಫ್ರೆಶ್‌ ‘ಪಬ್‌ರಾಯ್‌’ ಎಂಬ ಐಸ್‌ಕ್ರೀಂ ಮಳಿಗೆಯ ದೃಶ್ಯವಿದು. ಶೇ 100ರಷ್ಟು ನೈಸರ್ಗಿಕ ರೀತಿಯಲ್ಲೇ ಐಸ್‌ಕ್ರೀಂ ತಯಾರಿಸಿ ನೀಡುವುದೇ ತಮ್ಮ ವಿಶೇಷ ಎನ್ನುತ್ತಾ ಮಾತಿಗಿಳಿದರು  ವುಡ್‌ಸ್ಟ್ರೀಟ್‌ನಲ್ಲಿರುವ ‘ಪಬ್‌ರಾಯ್ಸ್‌’ ಮಾಲೀಕ ಹರ್ಷಾ.

‘ಆಯಾ ಕಾಲದಲ್ಲಿ ಯಾವ ಹಣ್ಣು ಸಿಗುತ್ತದೆಯೋ ಅದರಿಂದ ತಯಾರಾದ ಐಸ್‌ಕ್ರೀಂಗಳು ಮಾತ್ರ ಇಲ್ಲಿ ಲಭ್ಯ. ಈಗ ಬೇಸಿಗೆ. ಮನಸ್ಸು ಎಳನೀರನ್ನು ಹೆಚ್ಚಾಗಿ ಬಯಸುತ್ತದೆ. ನಾವು ಅದರಿಂದಲೇ ಐಸ್‌ಕ್ರೀಂ ತಯಾರಿಸಿ ನೀಡುತ್ತಿದ್ದೇವೆ. ಜನರು ತುಂಬಾ ಇಷ್ಟಪಟ್ಟು ಈ ಐಸ್‌ಕ್ರೀಂ ಸವಿಯುತ್ತಿದ್ದಾರೆ’ ಎಂದು ರುಚಿ ನೋಡಲು ಎಳನೀರು ಐಸ್‌ಕ್ರೀಂ ಕೈಗಿತ್ತರು.

ನಗರದ ಬೀದಿ ಬೀದಿಗಳಲ್ಲಿ ಕಲ್ಲಂಗಡಿ ಹಣ್ಣು ಕಾಣಸಿಗುತ್ತದೆ. ಬೇಸಿಗೆ ದಾಹ ನೀಗಿಸಿಕೊಳ್ಳಲು ಹಣ್ಣು ಸವಿಯುವವರು ಅನೇಕರಿದ್ದಾರೆ. ಆದರೆ ಇಲ್ಲಿ ಕಲ್ಲಂಗಡಿ ಹಣ್ಣು ತಿಂದ ಸಮಾಧಾನವನ್ನೇ ನೀಡುವ ಐಸ್‌ಕ್ರೀಂ ತಯಾರಿದೆ. ಕಲ್ಲಂಗಡಿ ಹಣ್ಣಿನ ತುಂಡುಗಳು ಬಾಯಿಗೆ ಸಿಗುವುದರಿಂದ ಐಸ್‌ಕ್ರೀಂ ಸ್ವಾದ ಮತ್ತಷ್ಟು ಹೆಚ್ಚುತ್ತದೆ.

ನೈಜ ರುಚಿಯ ಮಜಾ
ಕಲ್ಲಂಗಡಿ ಹಣ್ಣು, ಗುಲಾಬಿ ದಳ, ಚಂದನ, ಲಿಂಬೆಹಣ್ಣಿನ ಎಲೆ, ಪಾನ್‌, ಮಸಾಲಾ ಟೀ, ಗ್ರೀನ್‌ ಟೀ, ಕಿತ್ತಳೆ, ತುಳಸಿ ಮುಂತಾದ ಐಸ್‌ಕ್ರೀಂಗಳು ಹಣ್ಣಿನ ನೈಜ ರುಚಿಯನ್ನು ಉಳಿಸಿಕೊಂಡಿವೆ. ತಾಜಾ ಮಾವಿನಹಣ್ಣು ಮತ್ತು ಲೀಚಿ ಹಣ್ಣಿನ ಐಸ್‌ಕ್ರೀಂ ಸದ್ಯಕ್ಕೆ ಲಭ್ಯವಿಲ್ಲ. ಹಾಗಾಗಿ ಇನ್ನೆರೆಡು ವಾರ ಬಿಟ್ಟು ಈ ಫ್ಲೇವರ್‌ನ ಐಸ್‌ಕ್ರೀಂ ಪರಿಚಯಿಸಲಿದ್ದಾರೆ.

ಸಿಗ್ನೇಚರ್‌ ಐಸ್‌ಕ್ರೀಂ
ಪಬ್‌ರಾಯ್ಸ್‌ನ ಸಿಗ್ನೇಚರ್‌ ಐಸ್‌ಕ್ರೀಂ ‘ಪಬ್‌ರಾಯ್ಸ್‌ ನಲೇನ್‌ ಗುರ್‌’. ಇದನ್ನು ಸವಿಯುವುದೇ ಮಜಾ. ಕರ್ಜೂರ ಮತ್ತು ಬೆಲ್ಲದ ಪಾಕದಿಂದ ತಯಾರಾದ ಈ ಐಸ್‌ಕ್ರೀಂ ಹಿತವಾದ ಸಿಹಿಯಿಂದ ಆಹ್ಲಾದ ನೀಡುತ್ತದೆ. ತಿಂದಷ್ಟೂ ಮತ್ತೆ ಮತ್ತೆ ತಿನ್ನಬೇಕು ಎನಿಸುವ ನಲೇನ್‌ ಗುರ್‌ ಬಂಗಾಳದಲ್ಲಿ ತುಂಬಾ ಜನಪ್ರಿಯವಂತೆ.

ಸ್ವಾದದ ಹಿಂದಿನ ಗುಟ್ಟು
ತಾಜಾ ಹಣ್ಣುಗಳನ್ನು ಖರೀದಿಸಿ ಆಗಿಂದಾಗ್ಗೆ ಅವುಗಳಿಗೆ ಐಸ್‌ಕ್ರಿಂ ರೂಪ ನೀಡುತ್ತಾರೆ. ಹೀಗಾಗಿ ಅವು ರುಚಿಯೊಂದಿಗೆ ತಮ್ಮ ತಾಜಾತನವನ್ನು ಉಳಿಸಿಕೊಂಡಿವೆ. ಹಣ್ಣಿನಿಂದ ತಯಾರಿಸಿದ ಐಸ್‌ಕ್ರೀಂ ಅನ್ನು ಆರು ತಿಂಗಳವರೆಗೆ ಹಾಗೂ ಬೇರೆ ಐಸ್‌ಕ್ರೀಂಗಳಾದರೆ ಒಂದು ವರ್ಷದವರೆಗೂ ಶೇಖರಿಸಿಡಲಾಗುತ್ತದೆ ಎಂದು ಹೇಳಿಕೊಳ್ಳುತ್ತಾರೆ ಹರ್ಷಾ.

ಮುಂದಿನ ಯೋಜನೆ
ನಗರದ ವುಡ್‌ಸ್ಟ್ರೀಟ್‌, ಎಚ್‌ಎಸ್‌ಆರ್‌ ಲೇಔಟ್‌ ಹಾಗೂ ವೈಟ್‌ಫೀಲ್ಡ್‌ನಲ್ಲಿರುವ ಪಬ್‌ರಾಯ್ಸ್‌ ಮಳಿಗೆ ಮೈಸೂರಿನಲ್ಲೂ ತುಂಬಾ ಜನಪ್ರಿಯತೆ ಗಳಿಸಿದೆ. ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಕೋಲ್ಕತ್ತಾ ಮೂಲದ ಈ ಮಳಿಗೆ ಹೈದರಾಬಾದ್‌, ಚೆನ್ನೈ, ದೆಹಲಿ, ಮುಂಬೈಗಳಲ್ಲೂ ಕಾರ್ಯನಿರ್ವಹಿಸುತ್ತಿದೆ. ಬೆಳಿಗ್ಗೆ 11ರಿಂದ ರಾತ್ರಿ 11ರವರೆಗೆ ಕಾರ್ಯನಿರ್ವಹಿಸುವ ಪಬ್‌ರಾಯ್ಸ್‌ನಿಂದಲೇ ನಗರದ ಅನೇಕ ರೆಸ್ಟೊರೆಂಟ್‌ಗಳಿಗೆ ವಿಶೇಷ ಐಸ್‌ಕ್ರೀಂಗಳು ಸರಬರಾಜಾಗುತ್ತವೆ.

ಅಷ್ಟೇನೂ ದುಬಾರಿ ಅಲ್ಲ
ಅರವತ್ತರಿಂದ ಎಪ್ಪತ್ತು ವಿಧದ ಐಸ್‌ಕ್ರೀಂ ಸ್ವಾದ ನೀಡುವ ಪಬ್‌ರಾಯ್ಸ್‌ನಲ್ಲಿ ದೊರೆಯುವ ಐಸ್‌ಕ್ರೀಂನ ಬೆಲೆ ₨39ರಿಂದ ₨129.
ಮಕ್ಕಳ ಪ್ರೀತಿಯ ಬಬಲ್‌ಗಮ್‌ ಐಸ್‌ಕ್ರೀಂಬೇರೆ ಬೇರೆ ವಯೋಮಾನದವರು ವಿಭಿನ್ನ ಐಸ್‌ಕ್ರೀಂಗಳನ್ನು ಇಷ್ಟಪಡುತ್ತಾರೆ. ಆದರೆ ಮಕ್ಕಳಿಗೆ ಬಬಲ್‌ಗಮ್‌ ಐಸ್‌ಕ್ರೀಂ ಎಂದರೆ ತುಂಬಾ ಇಷ್ಟವಂತೆ. ಎಲ್ಲವನ್ನೂ ನೈಸರ್ಗಿಕ ರೀತಿಯಲ್ಲಿ ತಯಾರಾಗುವ ಇಲ್ಲಿನ ಐಸ್‌ಕ್ರೀಂಗೆ ಕೃತಕ ಬಣ್ಣ ನೀಡುವುದು ಇದೊಂದೇ ಐಸ್‌ಕ್ರೀಂ.

ಶುಗರ್‌ಲೆಸ್ಸೂ ಇದೆ
ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಹೆಚ್ಚಿನವರು ಇರುವ ಇಂದಿನ ಕಾಲದಲ್ಲಿ ಅಂಥವರ ಐಸ್‌ಕ್ರೀಂ ಮೋಹ ಹಗಲುಗನಸೇ. ಆದರೆ ಇಂದಿಗೆ ಅನೇಕ ವಸ್ತುಗಳು ಸಕ್ಕರೆ ರಹಿತ ಉತ್ಪನ್ನಗಳಾಗಿ ಲಭಿಸುತ್ತಿವೆ. ಖಾಯಿಲೆಯಿಂದ ಬಳಲುತ್ತಿರುವವರು ಹಾಗೂ ಡಯೆಟ್‌ ಕಾನ್ಶಿಯಸ್‌ ಆಗಿರುವವರಿಗಾಗಿ ಶುಗರ್‌ಲೆಸ್‌ ಐಸ್‌ಕ್ರೀಂ ಲಭ್ಯವಿದೆ.
 

‘ಜನರ ಪ್ರೀತಿ ಹಾಗೇ ಉಳಿದಿದೆ’
ವಿಪ್ರೊದಲ್ಲಿ ಎಂಜಿನಿಯರ್‌ ಆಗಿದ್ದ ಹರ್ಷಾ ಸ್ವಂತ ಉದ್ಯೋಗ ಮಾಡಬೇಕು ಎಂಬ ಬಯಕೆಯಿಂದ ಈ ವ್ಯಾಪಾದರಲ್ಲಿ ತೊಡಗಿಕೊಂಡಿದ್ದಾರೆ. ಆಗ ಸುರಕ್ಷಿತ ಬದುಕಿನಲ್ಲಿದ್ದೆ. ಈಗ ಪ್ರತಿದಿನ ಸವಾಲು ಎದುರಿಸುತ್ತಿದ್ದೇನೆ. ಪ್ರಾರಂಭದ ಹಂತದಲ್ಲಿರುವ ಮಳಿಗೆಯನ್ನು ಜನಪ್ರಿಯಗೊಳಿಸುವುದು ಸುಲಭವಲ್ಲ. ಈ ಮೊದಲು ಪಬ್‌ರಾಯ್ಸ್‌ ಇತ್ತು. ಯಾವುದೋ ಕಾರಣಕ್ಕೆ ಮಳಿಗೆ ಮುಚ್ಚಲಾಗಿತ್ತು. ಆದರೂ ಜನರ ಪ್ರೀತಿ ಹಾಗೇ ಉಳಿದಿದೆ’ ಎಂದು ಕೃತಜ್ಞತೆಯ ಮಾತನಾಡುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT