ADVERTISEMENT

ಮಡಕೆಯಲ್ಲಿ ಬಿಯರ್‌, ಜೊತೆ ಬಿರಿಯಾನಿ...

ರಸಾಸ್ವಾದ

ರಮೇಶ ಕೆ
Published 1 ಸೆಪ್ಟೆಂಬರ್ 2016, 19:30 IST
Last Updated 1 ಸೆಪ್ಟೆಂಬರ್ 2016, 19:30 IST
ಮಡಕೆಯಲ್ಲಿ ಬಿಯರ್‌, ಜೊತೆ ಬಿರಿಯಾನಿ...
ಮಡಕೆಯಲ್ಲಿ ಬಿಯರ್‌, ಜೊತೆ ಬಿರಿಯಾನಿ...   

ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌ಗಳಲ್ಲಿ ಬಿಯರ್‌ಅನ್ನು ಗ್ಲಾಸ್‌ ಹಾಗೂ  ಮಗ್ಗಿನಲ್ಲಿ ಕೊಡುವುದನ್ನು ನೋಡಿದ್ದೇವೆ, ಆದರಿಲ್ಲಿ ಮಡಕೆಯಲ್ಲಿ  ಕೊಡುತ್ತಾರೆ. ಬಿಯರ್‌ನೊಂದಿಗೆ ಕಾಂಬಿನೇಷನ್‌ ಬಿರಿಯಾನಿ.

ಹೌದು, ಜಯನಗರದಲ್ಲಿರುವ ಗರುಡ  ಸ್ವಾಗತ್‌ ಮಾಲ್‌ನಲ್ಲಿ ಇತ್ತೀಚೆಗೆ ಆರಂಭವಾದ ‘ದಿ ಬಿಗ್‌ ಮಟಕಾ’ ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌ನಲ್ಲಿ ಬಿಯರನ್ನು ಹೀಗೆ ಮಡಕೆಯಲ್ಲಿ ತುಂಬಿ ಕೊಡುತ್ತಾರೆ. 

ಇದೊಂದು ರೆಸ್ಟ್ರೊಬಾರ್‌.  ಇಲ್ಲಿನ ಒಳಾಂಗಣ ವಿನ್ಯಾಸವೇ ನಿಮ್ಮನ್ನು ಆಕರ್ಷಿಸುತ್ತದೆ. ಪೂರ್ಣಗೊಳ್ಳದ ಕಟ್ಟಡದ ಗೋಡೆ, ವೈರಿಂಗ್‌ ಆಗದೇ ಬಿಟ್ಟಂತೆ ಕಾಣುವ ಪೈಪ್‌ಗಳು, ಚಾವಣಿಗೆ ಹಾಕಿದ ಕಪ್ಪು ಬಣ್ಣ... ಹೀಗೆ ಪ್ರತಿಯೊಂದು ವಿನ್ಯಾಸವೂ ಭಿನ್ನವಾಗಿವೆ.

ಭಾರತ ಸೇರಿದಂತೆ ಬಹುದೇಶಗಳ ಆಹಾರ ಇಲ್ಲಿ ಸಿಗುತ್ತದೆ. ಬಿಯರ್‌ಪ್ರಿಯರಿಗಂತೂ ಸುಗ್ಗಿ. ಸಾರಾಯಿ ಬರುವುದಕ್ಕೂ ಮುಂಚೆ ಇದ್ದ ಈಚಲು ಮರದ ಸೇಂದಿಯನ್ನು ಆಗ ಪಾನಪ್ರಿಯರು ಮಡಕೆಯಲ್ಲಿ ಕುಡಿಯುತ್ತಿದ್ದರು. ಅದೇ ಪರಿಕಲ್ಪನೆಯನ್ನು ಇಲ್ಲಿ ಕಾಣಬಹುದು.

ಭಾನುವಾರ ಬಿಯರ್‌ ಮತ್ತು ಬಿರಿಯಾನಿ ಬ್ರಂಚ್‌ ಇಲ್ಲಿನ ವಿಶೇಷ. ಮಧ್ಯಾಹ್ನ 12ರಿಂದ ಸಂಜೆ4ರವರೆಗೆ ನಿಮಗೆ ಸಾಕಾಗುವಷ್ಟು ಬಿಯರ್‌ ಕುಡಿಯುವ ಅವಕಾಶ ಇದರಲ್ಲಿದೆ. ಚಿಕನ್‌  ಬಿರಿಯಾನಿ ಇಷ್ಟಪಡದವರಿಗೆ ವೆಜ್‌ ಬಿರಿಯಾನಿಯ ಆಯ್ಕೆಯಿದೆ. ಕುಡಿಯುವಷ್ಟು ಬಿಯರ್‌, ತಿನ್ನುವಷ್ಟು ಬಿರಿಯಾನಿ.

ಇನ್ನೂ ಸ್ಟಾರ್ಟರ್‌ನಲ್ಲೂ ಹಲವು ಬಗೆಯಿದೆ. ತಂದೂರಿ, ಸ್ಯಾಂಡ್‌ವಿಚ್‌, ಬರ್ಗರ್‌,  ಆಂಧ್ರಶೈಲಿಯ ರುಚಿ ನೀಡುವ ‘ಕೋರಿ ಕೆಂಪ್‌’ ಇಲ್ಲಿನ ಸಿಗ್ನೇಚರ್ ಫುಡ್‌. ಜೊತೆಗೆ ಹುಳಿ ಮತ್ತು ಖಾರವೆನಿಸುವ ಗ್ರಿಲ್‌ ಪ್ರಾನ್ಸ್, ಪನ್ನೀರ್‌ ಪಟಾಕ, ದಿವಾನಿ ಹರಿಗೋಬಿ, ಗ್ರಿಲ್‌ ಫಿಶ್‌.... ಹೀಗೆ ಭಿನ್ನ ರುಚಿಯ ಆಹಾರವನ್ನು ಸವಿಯಬಹುದು. ನಾಲ್ಕು ಬಗೆಯ ಕಬಾಬ್‌ ಇರುವ ‘ಕಬಾಬ್‌ ಪ್ಲಾಟರ್‌’, ರೋಟಿ, ನಾನ್‌, ಬಟರ್‌ ನಾನ್‌ ಸಹ ಸಿಗುತ್ತವೆ.

ಕಾಕ್‌ಟೇಲ್‌ ವಿಶೇಷ
ಆಹಾರದೊಂದಿಗೆ ಬಗೆಬಗೆಯ ಕಾಕ್‌ಟೇಲ್‌ ಸಹ ಇಲ್ಲಿ ದೊರೆಯುತ್ತವೆ. ವೊಡ್ಕಾ ಕಾಕ್‌ಟೇಲ್‌, ಜಿನ್‌ ಕಾಕ್‌ಟೇಲ್‌, ರಮ್‌ ಕಾಕ್‌ಟೇಲ್‌ ಸೇರಿದಂತೆ 25 ವಿಧದ ಕಾಕ್‌ಟೇಲ್‌ಗಳಿವೆ. ಹ್ಯಾಪಿ ಅವರ್‌ನಲ್ಲಿ ಒಂದು ಕೊಂಡರೆ ಮತ್ತೊಂದು ಉಚಿತ ಕಾಕ್‌ಟೇಲ್‌ ಆಫರ್‌ ಪಡೆಯಬಹುದು. ಸ್ಟ್ರಾಬೆರಿ, ಮಾವು, ಪುದೀನಾ, ಮೊಜಿಟೊ ಸೇರಿದಂತೆ ವಿವಿಧ ಸ್ವಾದದ ಮಾಕ್‌ಟೇಲ್‌ಗಳಿವೆ.

ದೆಹಲಿ, ಮುಂಬೈ ಹಾಗೂ ಬೆಂಗಳೂರಿನ ವಿವಿಧ ರೆಸ್ಟೊರೆಂಟ್‌ಗಳಲ್ಲಿ 19 ವರ್ಷಗಳಿಂದ ಬಾಣಸಿಗನಾಗಿ ಅನುಭವ ಹೊಂದಿದ ಮಧ್ಯಪ್ರದೇಶದ ರಾಜವೀರ್‌ ಸಿಂಗ್‌ ಇಲ್ಲಿನ ಶೆಫ್‌ ಆಗಿದ್ದಾರೆ. ಭಾರತೀಯ ಅಡುಗೆ ಮಾಡುವುದು ಇವರ ವಿಶೇಷ. 

‘ಕಾಂಟಿನೆಂಟಲ್‌, ಚೀನಾ ಸೇರಿದಂತೆ ಮಲ್ಟಿ ಕ್ಯುಸಿನ್‌ ಮಾಡಲು ಒಟ್ಟು ಹತ್ತು ಮಂದಿ ಬಾಣಸಿಗರಿದ್ದಾರೆ. 100 ಮಂದಿ ಕೂರಬಹುದಾದ ಈ ರೆಸ್ಟ್ರೊ ಬಾರ್‌ನಲ್ಲಿ ಹುಕ್ಕಾಬಾರ್‌ ಸಹ ಇದೆ’ ಎನ್ನುತ್ತಾರೆ ವ್ಯವಸ್ಥಾಪಕ ರೋಹಿತ್‌.

ಬುಧವಾರದಿಂದ ಭಾನುವಾರದವರೆಗೆ ಡಿಜೆ ಮ್ಯೂಸಿಕ್‌ ಆಲಿಸಬಹುದು. ಅಲ್ಲದೇ ಕ್ರಿಕೆಟ್‌ ಸೇರಿದಂತೆ ಇನ್ನತರೆ ಕ್ರೀಡಾ ಪಂದ್ಯಾವಳಿ ವೀಕ್ಷಿಸಲು ದೊಡ್ಡ ಎಲ್‌ಇಡಿ ಪರದೆಯನ್ನು ಅಳವಡಿಸಿದ್ದಾರೆ. ಕಂಠಪೂರ್ತಿ ಬಿಯರ್‌ ಕುಡಿದು, ಹೊಟ್ಟೆತುಂಬ ಬಿರಿಯಾನಿ ತಿನ್ನುವ ಆಸೆ ಇದ್ದವರಿಗೆ ಸೂಕ್ತ ಸ್ಥಳವಿದು.

‘ದಿನಸಿ ಸಾಮಗ್ರಿಗಳನ್ನು ಖರೀದಿಸಲು ಮಾಲ್‌ಗೆ ಬಂದೆವು. ಹೊರಗೆ ಹಾಕಿದ್ದ ರೆಸ್ಟೊರೆಂಟ್‌ನ ಹೋರ್ಡಿಂಗ್‌ ನೋಡಿ ಒಮ್ಮೆ ಇಲ್ಲಿನ ಆಹಾರ ರುಚಿ ನೋಡಲು ಬಂದೆವು. ಒಳಾಂಗಣ ವಿನ್ಯಾಸ ಚೆನ್ನಾಗಿದೆ. ಸ್ಟಾರ್ಟರ್‌ನಲ್ಲಿ ಫಿಶ್‌ ತೆಗೆದುಕೊಂಡೆವು ತುಂಬಾ ರುಚಿಯಾಗಿತ್ತು’ ಎನ್ನುತ್ತಾರೆ ಜಯನಗರ 1ನೇ ಬ್ಲಾಕ್‌ನಿಂದ ಬಂದಿದ್ದ ಗ್ರಾಹಕ ವಿನಯ್‌.

ರೆಸ್ಟೊರೆಂಟ್‌: ದಿ ಬಿಗ್‌  ಮಟಕಾ
ವಿಶೇಷತೆ: ಬಗೆಬಗೆಯ ಕಾಕ್‌ಟೇಲ್‌
ಸಮಯ: ಮಧ್ಯಾಹ್ನ 12ರಿಂದ ರಾತ್ರಿ 11 (ಶುಕ್ರವಾರ, ಶನಿವಾರ ರಾತ್ರಿ 1ರವರೆಗೆ)

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.