ADVERTISEMENT

ಮತ್ತಿ ಮೀನು ಸಾರು ರುಚಿ ಬಲು ಜೋರು

ರಸಾಸ್ವಾದ

ರಮೇಶ ಕೆ
Published 10 ಮೇ 2017, 19:30 IST
Last Updated 10 ಮೇ 2017, 19:30 IST
ಏಡಿ ಸುಕ್ಕ
ಏಡಿ ಸುಕ್ಕ   

ಕಾಣೆ ಮೀನನ್ನು ತವಾದ ಮೇಲೆ ಹಾಕಿ ಬೇಯಿಸುತ್ತಿದ್ದ ಬಾಣಸಿಗ, ಬ್ಯಾಡಗಿ ಮೆಣಸಿನಕಾಯಿ ಪುಡಿಯಿಂದ ಮಾಡಿದ ಮಸಾಲೆಯನ್ನು ಮೀನಿನ ಮೇಲೆ ಸವರಿದರು. ಕೊಬ್ಬರಿ ಎಣ್ಣೆಯೊಂದಿಗೆ ಬೇಯುತ್ತಿದ್ದ ಮೀನಿನ ವಾಸನೆ ಊಟಕ್ಕಾಗಿ ಕಾಯುತ್ತಿದ್ದವರ ಮೂಗಿಗೆ ತಾಗಿ ಹಸಿವನ್ನು ಹೆಚ್ಚಿಸುತ್ತಿತ್ತು.

ಮಲ್ಲೇಶ್ವರ 7ನೇ ಅಡ್ಡರಸ್ತೆಯ  ಗಲ್ಲಿಯೊಂದರಲ್ಲಿ ಏಳು ವರ್ಷಗಳ ಹಿಂದೆ ಆರಂಭವಾದ ‘ಕರಾವಳಿ ಲಂಚ್ ಹೋಮ್‌’ನಲ್ಲಿ ಸೀಫುಡ್‌ ಊಟಕ್ಕೆ ಬರುವವರಿಗೆ ಈ ಅನುಭವ ಆಗುತ್ತದೆ.

ಇಲ್ಲಿ ಮುಖ್ಯ ಬಾಣಸಿಗ ಆಗಿರುವ ಕುಂದಾಪುರ ಮೂಲದ ರವಿಶೆಟ್ಟಿ ಅವರೇ ಮಾಲೀಕರು. ಏಳನೇ ತರಗತಿ ಓದಿರುವ ರವಿಶೆಟ್ಟಿ ಚಿಕ್ಕಂದಿನಿಂದಲೂ ಹೋಟೆಲ್‌ನಲ್ಲಿ ಕೆಲಸ ಮಾಡಿದವರು. ಹಾಗಾಗಿ ಇವರು  ಕರಾವಳಿ ತಿನಿಸುಗಳನ್ನೂ ರುಚಿಯಾಗಿ ಮಾಡುತ್ತಾರೆ.

‘ಕುಂದಾಪುರದ  ಶರೂನ್‌ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಮೀನಿನ ಫ್ರೈ, ಚಿಕನ್‌ ಸುಕ್ಕ, ಮೀನು ಸಾರು, ಬಿರಿಯಾನಿ ಮಾಡುವುದನ್ನು ಕಲಿತಿದ್ದೆ. ಬೆಂಗಳೂರಿಗೆ ಬಂದ ಮೇಲೂ ಹೋಟೆಲ್‌ ಉದ್ಯಮದಲ್ಲೇ ಕೆಲಸ ನೋಡಿಕೊಂಡೆ. ಆರಂಭದಲ್ಲಿ 5ನೇ ಅಡ್ಡರಸ್ತೆಯಲ್ಲಿ ಕರಾವಳಿ ಲಂಚ್‌ ಹೋಮ್‌ ಆರಂಭಿಸಿದ್ದೆ. ನಂತರ 7ನೇ ಅಡ್ಡರಸ್ತೆಯಲ್ಲಿ ಹೋಟೆಲ್‌ ತೆರೆಯಬೇಕಾಯಿತು.

ನಟ ಪುನೀತ್‌ ರಾಜ್‌ಕುಮಾರ್‌ ಒಮ್ಮೆ ನಮ್ಮ ಹೋಟೆಲ್‌ನ ರುಚಿ ನೋಡಿ, ಇಂದಿಗೂ ಮನೆಗೆ ತರಿಸಿಕೊಳ್ಳುತ್ತಾರೆ. ಅಷ್ಟು ರುಚಿ, ಶುಚಿಯಾಗಿ ಕುಂದಾಪುರ ಶೈಲಿಯ ಸೀಫುಡ್‌ ಆಹಾರ ಮಾಡುತ್ತೇವೆ. ಪುನೀತ್‌ ಅಲ್ಲದೇ ದುನಿಯಾ ವಿಜಯ್‌, ಚೇತನ್  ಕೂಡ ನಮ್ಮ ಗ್ರಾಹಕರು’ ಎನ್ನುತ್ತಾರೆ ಮಾಲೀಕ ರವಿಶೆಟ್ಟಿ.

ಮೀನಿನ ಕರ್ರಿ, ಮೀನಿನ ಫ್ರೈ, ಕೋಳಿ ಸುಕ್ಕ, ನೀರುದೋಸೆ, ಕೋರಿ ರೊಟ್ಟಿ, ಏಡಿ ಸುಕ್ಕ  ಇಲ್ಲಿ ಹೆಚ್ಚಾಗಿ ಜನ ಇಷ್ಟಪಡುವ ತಿನಿಸುಗಳಾಗಿವೆ.
ಅಂಜಲ್‌, ಕಾಣೆ, ಪಾಂಫ್ರೆಟ್‌, ಕೊಡವಾಯಿ, ಹೊಳೆಬೈಗಿ, ನಂಗ್‌,  ಬಂಗುಡೆ ಮೀನು ಆಯ್ಕೆ ಮಾಡಿಕೊಳ್ಳಬಹುದು.

‘ಪ್ರತಿದಿನ ಬೆಳಿಗ್ಗೆ ಶೇಷಾದ್ರಿಪುರ ಮತ್ತು ಯಶವಂತಪುರ ಮಾರುಕಟ್ಟೆಗೆ ಹೋಗಿ ಮಲ್‍ಪೆ ಮೀನು ತರುತ್ತೇವೆ. ಕಿವಿರು ಕೆಂಪು ಇರುವ ಮೀನುಗಳನ್ನೇ ಆಯ್ಕೆ ಮಾಡುತ್ತೇವೆ. ಕೆಂಪಿದ್ದರೆ ತಾಜಾ ಆಗಿರುತ್ತವೆ’ ಎನ್ನುತ್ತಾರೆ ರವಿಶೆಟ್ಟಿ.

ಬಂಗುಡೆ  ಫ್ರೈ (ತವಾ, ರವಾ, ಡೀಪ್‌ ಫ್ರೈ) ₹90, ಅಂಜಲ್‌ ಫ್ರೈ ₹160, ಮೀನು ಸಾರು ₹80, ಊಟಕ್ಕೆ ₹80 (ಅನ್ನ, ಮೀನುಸಾರು, ಮಜ್ಜಿಗೆ, ಚೆಟ್ನಿ), ನೀರುದೋಸೆ, ಚಿಕನ್‌ ಸುಕ್ಕ ₹130 ಬೆಲೆ ನಿಗದಿಪಡಿಸಿದ್ದಾರೆ.

ಇಲ್ಲಿನ ರುಚಿ ಮೆಚ್ಚಿ ಆರ್.ಟಿ.ನಗರ, ಹೆಬ್ಬಾಳ, ಕೆ.ಆರ್‌.ಪುರದಿಂದಲೂ ಗ್ರಾಹಕರು ಬರುತ್ತಾರೆ. ಕರೆ ಮಾಡಿ, ಹೋಟೆಲ್‌ ತೆರೆದಿದೆಯೋ ಇಲ್ಲವೋ ಎಂದು ಕೇಳಿಕೊಂಡು ಬರುವವರೂ ಇದ್ದಾರಂತೆ. ಸ್ವಾಗ್ಗಿಫುಡ್‌ಆ್ಯಪ್‌ನಲ್ಲೂ ಕರಾವಳಿ ಲಂಚ್‌ ಹೋಮ್‌ನ ಊಟವನ್ನು ತರಿಸಿಕೊಳ್ಳಬಹುದು. 18 ಮಂದಿ ಕುಳಿತು ಊಟ ಮಾಡುವಷ್ಟು ಆಸನಗಳಿವೆ.

‘ಐದು ವರ್ಷಗಳಿಂದ ಈ ಹೋಟೆಲ್‌ಗೆ ಬರುತ್ತಿದ್ದೇನೆ. ಇಲ್ಲಿನ ಅಡುಗೆಗೆ ತಾಜಾ ಮೀನು ಬಳಸುವುದರಿಂದ ರುಚಿಯೂ ಚೆನ್ನಾಗಿರುತ್ತದೆ. ಕುಂದಾಪುರ ಶೈಲಿ ಮಸಾಲೆ ಹಾಕಿ ಸಾರು ಮಾಡುತ್ತಾರೆ. ಇಲ್ಲಿನ ತಿನಿಸುಗಳು ಕಡಿಮೆ ಬೆಲೆಗೆ ಸಿಗುತ್ತವೆ. ನಾನು ಇಲ್ಲಿಗೆ ಬರುವ ಮುಂಚೆ ಫೋನ್‌ ಮಾಡಿ ಟೇಬಲ್‌ ಕಾಯ್ದಿರಿಸುತ್ತೇನೆ. ₹500ಕ್ಕೆ ಇಬ್ಬರು ಊಟ ಮಾಡಬಹುದು’ ಎನ್ನುತ್ತಾರೆ ಹೆಬ್ಬಾಳದಿಂದ ಬಂದಿದ್ದ ಶ್ರೀಧರ್‌ ಕುಬಸದ್‌. 

ರೆಸ್ಟೊರೆಂಟ್‌: ಕರಾವಳಿ ಲಂಚ್‌ ಹೋಮ್‌
ವಿಶೇಷತೆ: ಸೀಫುಡ್‌
ಸಮಯ: ಬೆಳಿಗ್ಗೆ 11ರಿಂದ 4.30, ಸಂಜೆ 7ರಿಂದ ರಾತ್ರಿ 11
ಒಬ್ಬರಿಗೆ: ₹300
ಸ್ಥಳ: ನಂ147, 7ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಮಾರ್ಗೋಸ ರಸ್ತೆ, ಕೃಷ್ಣ ಸ್ವೀಟ್ಸ್‌ ಸಮೀಪ, ಮಲ್ಲೇಶ್ವರ.
ಸ್ಥಳ ಕಾಯ್ದಿರಿಸಲು: 99005 61139

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT