ADVERTISEMENT

ಲಘು ತಿನಿಸುಗಳ ‘ರ್‍ಯಾಪ್ಸ್‌ ಮತ್ತು ಕಾಠೀಸ್‌’ ಉತ್ಸವ

ರಸಾಸ್ವಾದ

ವಿದ್ಯಾಶ್ರೀ ಎಸ್.
Published 25 ಆಗಸ್ಟ್ 2016, 19:30 IST
Last Updated 25 ಆಗಸ್ಟ್ 2016, 19:30 IST
ಟಿಎಲ್‌ಟಿ
ಟಿಎಲ್‌ಟಿ   

ಆಹಾರ ಪ್ರಿಯರಾದ ಬೆಂಗಳೂರಿನ ಜನರಿಗೆ ವೈವಿಧ್ಯಮಯ ತಿನಿಸುಗಳನ್ನು ಪರಿಚಯಿಸಬೇಕು ಎಂಬ ಉದ್ದೇಶದಿಂದ ‘ಮೈ ಫಾರ್ಚೂನ್‌ ಹೋಟೆಲ್‌’ ತಿಂಗಳಿಗೊಮ್ಮೆ ಆಹಾರೋತ್ಸವವನ್ನು ನಡೆಸುತ್ತದೆ.

ಸದಾ ಧಾವಂತದಲ್ಲಿರುವ ಮಂದಿಗೆ ಹೊಸ ಬಗೆಯ ತಿನಿಸನ್ನು ಪರಿಚಯಿಸಬೇಕೆಂಬ ಕಾರಣಕ್ಕೆ  ಈ ಬಾರಿ ಲಘು ತಿನಿಸಿನ ‘ರ್‍ಯಾಪ್ಸ್‌ ಮತ್ತು ಕಾಠೀಸ್‌’ ಆಹಾರೋತ್ಸ ಆಯೋಜಿಸಲಾಗಿದೆ.

‘ಆಫೀಸ್‌ಗೆ ಹೋಗುವ ಮಂದಿಗೆ ಹೊಟ್ಟೆ ತುಂಬಾ ತಿನ್ನುವಷ್ಟು ಸಮಯವಿರುವುದಿಲ್ಲ. ಹಾಗಂತ ಹೊಟ್ಟೆ ಖಾಲಿ ಎಂದೂ ಅನಿಸಬಾರದು. ತಿನ್ನುವ ಆಹಾರ ಆರೋಗ್ಯಕರವಾಗಿರುವುದರ ಜೊತೆಗೆ ಲಘುವಾಗಿರಬೇಕು’ ಎಂಬ ಉದ್ದೇಶದಿಂದ ಹೊಸ ಬಗೆಯ ಆಹಾರೋತ್ಸವ ನಡೆಸಲಾಗುತ್ತಿದೆ ಎನ್ನುತ್ತಾರೆ ಜನರಲ್‌ ಮ್ಯಾನೇಜರ್ ಕುಲ್‌ದೀಪ್‌ ಧವನ್‌.

ಮೈ ಫಾರ್ಚೂನ್‌ನಲ್ಲಿ ಸೌಸ್‌ ಶೆಫ್‌ ಆಗಿ ಕೆಲಸ ಮಾಡುತ್ತಿರುವ ಮನೋಜ್‌ ಸಿಂಗ್‌    ಅವರ ಕೈರುಚಿಯಲ್ಲಿ ಈ ಆಹಾರಗಳು ತಯಾರಾಗಿವೆ. ಬಾಣಸಿಗ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಇವರು ಯುರೋಪಿಯನ್‌ ಅಡುಗೆಶೈಲಿಯಲ್ಲಿ ಪಳಗಿದವರು. ಈ ಆಹಾರೋತ್ಸವದಲ್ಲಿ ಮೆಕ್ಸಿಕೊ ಮತ್ತು ಇಂಡಿಯನ್‌ ರುಚಿಯ ಸಮ್ಮಿಳಿತವನ್ನು ಪರಿಚಯಿಸಿದ್ದಾರೆ.

‘ಮೆಕ್ಸಿಕೊ ಮತ್ತು ಭಾರತದಲ್ಲಿ ಒಂದೇ ಬಗೆಯ ವಾತಾವರಣವಿದೆ. ಅಲ್ಲದೆ ಅಲ್ಲಿಯವರು ಕೂಡ ನಮ್ಮಂತೆ ಅಡುಗೆಗೆ ಕೊತ್ತಂಬರಿ ಮತ್ತು ಜೀರಿಗೆಯನ್ನು ಬಳಸುತ್ತಾರೆ. ಈ ಎರಡು ದೇಶದ  ಜನರು ಸವಿಯುವ ಆಹಾರದಲ್ಲಿ ಸಾಕಷ್ಟು ಸಾಮ್ಯತೆಯಿದೆ. ಹಾಗಾಗಿ ಈ ಆಹಾರೋತ್ಸವದಲ್ಲಿ ಈ ಎರಡು ದೇಶದ ಆಹಾರದ ಸಮ್ಮಿಳಿತ ಮಾಡಿ ಹೊಸ ರುಚಿಯನ್ನು ಪರಿಚಯಿಸಿದ್ದೇವೆ’ ಎಂದು ಬಾಣಸಿಗ ಮನೋಜ್‌.

ಸ್ಪೆಷಲ್‌ ಮೆನುವಿನಲ್ಲಿ ಸ್ಟಾರ್ಟರ್ಸ್‌ ಮತ್ತು ಡೆಸರ್ಟ್‌ ನೀಡುವುದಿಲ್ಲ. ಬೇಕಿನಿಸಿದರೆ ಆರ್ಡರ್‌ ಮಾಡಿ ತೆಗೆದುಕೊಳ್ಳಬಹುದು. ಶೆಫ್‌ ಮೊದಲಿಗೆ ಟೊಮೆಟೊ ಚಿಕನ್‌ ಸೂಪ್‌ ಅನ್ನು ತಂದಿಟ್ಟರು. ಸ್ಪಲ್ಪ ಹುಳಿಯಾದ ಈ ಸೂಪ್‌ ಒಳಗಿನ ಚಿಕನ್‌ ತುಂಡುಗಳು ತಿನ್ನಲು ರುಚಿಯಾಗಿರುವುದರ ಜೊತೆಗೆ ಹಸಿವನ್ನು ಕೆರಳಿಸುವಂತಿತ್ತು. 

ನಂತರ ತಂದಿದ್ದು ‘ಟಿಎಲ್‌ಟಿ’ ರ್‍ಯಾಪ್ಸ್‌, ಮೈದಾಹಿಟ್ಟಿನ ರೋಲ್‌ ಒಳಗೆ ಹಾಕಿದ್ದ ಟೊಮೆಟೊ ಮತ್ತು ಕೋಸಿನ ಎಲೆಗಳು ತಿನ್ನಲು ರುಚಿಯೆನಿಸಿತು. ಆದಾದ ಬಳಿಕ ವಿಂಟರ್‌ ವೆಗ್ಗಿ ಡಿಲೈಟ್‌ ಅನ್ನು ಸಾಲ್ಸಾ ಸೋರ್‌ ಕ್ರೀಮ್‌ನೊಂದಿಗೆ ತಿನ್ನಲು ಹಿತವೆನಿಸಿತು.

ಈ ತಿನಿಸುಗಳು ಅಷ್ಟೊಂದು ಖಾರ ಇರಲಿಲ್ಲ.
ಸ್ವಲ್ಪ ಖಾರ ತಿನ್ನುವ ಮನಸ್ಸಾಗುತ್ತಿದ್ದಂತೆ ಶೆಫ್‌ ‘ಆಚಾರಿ ಕಾಠಿ’ಯನ್ನು ಟೇಬಲ್‌ ಮೇಲೆ ತಂದಿಟ್ಟರು.  ಪರಾಟದ ರೋಲ್‌ ಒಳಗೆ ತುಂಬಿದ್ದ ಆಲೂಗಡ್ಡೆ, ಹಸಿರು ಬಟಾಣಿ, ತರಕಾರಿಗಳನ್ನು ಪುದೀನಾ ಚಟ್ನಿಯೊಂದಿಗೆ ತಿನ್ನುತ್ತಿದ್ದಂತೆ ರುಚಿ ಮೊಗ್ಗುಗಳು ಅರಳಿದವು. ಇನ್ನೊಂದು ತಿನ್ನಬೇಕು ಅನಿಸುವಂತ್ತಿತ್ತು ಇದರ ರುಚಿ.    

ಅಷ್ಟರಲ್ಲಿ ಎಲೆಕೋಸು ಮತ್ತು ಚಿಕನ್‌ ತುಂಬಿದ ಚಿಕನ್‌ ಹವಾಲಿಯನ್‌ ರ್‍ಯಾಪ್ಸ್‌  ಟೇಬಲ್‌ ಮೇಲೆ ಇಟ್ಟರು. ಕ್ಯಾರೆಟ್‌, ಕ್ಯಾಪ್ಸಿಕಂ, ಸೌತೆಕಾಯಿಯಿಂದ ಮಾಡಿದ ಅಲಂಕಾರ ಆಕರ್ಷಕವಾಗಿತ್ತು. ರುಚಿ ಕೂಡ ಉತ್ತಮವಾಗಿತ್ತು.

ಸೋಯಾ ಕಿಮಾ ಮತ್ತು ಹಸಿಮೆಣಸಿನಕಾಯಿ ಹಾಕಿ ಮಾಡಿದ ಹರಿ ಮಿರ್ಚಿ ಕೀಮಾ  ಮತ್ತು ಗರ್ಬ್‌ಬಾನ್‌ಜೋ ಸ್ವಾದ ಸಾಧಾರಣವಾಗಿತ್ತು.

ಒಟ್ಟು ಹನ್ನೆರಡು ಬಗೆಯ ಕಾಠೀಸ್‌ ಮತ್ತು ರ್‍ಯಾಪ್ಸ್‌  ಅನ್ನು ಇಲ್ಲಿ ಪರಿಚಯಿಸಲಾಗಿದೆ. ಚಿಕನ್‌, ಮೊಟ್ಟೆ ನಾನ್‌ವೆಜ್‌ ರೆಸಿಪಿಗಳಾದರೆ ವೆಜ್‌ನಲ್ಲಿ ಕ್ಯಾಪ್ಸಿಕಂ, ಪನ್ನಿರ್‌ ಹೀಗೆ ಹಲವು ಆಯ್ಕೆಗಳಿವೆ.

ಡೆಸರ್ಟ್‌ನಲ್ಲಿ ಕುಲ್ಫಿ, ಬ್ರೆಡ್‌ ಪೀಸ್‌, ಜಾಮೂನು ಮಿಶ್ರಿತ ಸಿಹಿಯನ್ನು ಸವಿದು ಊಟವನ್ನು ಮುಗಿಸಬಹುದು.

ಈ ಉತ್ಸವ ಆ. 28ರವರೆಗೆ ನಡೆಯಲಿದೆ. ಸ್ಪೆಷಲ್‌ ಮೆನು ಜೊತೆಗೆ ರೆಗ್ಯುಲರ್‌ ಮೆನು ಕೂಡ ಇರುತ್ತದೆ.

*
ರೆಸ್ಟೊರೆಂಟ್‌: ಮೈ ಫಾರ್ಚೂನ್‌ ಮೈ ಇಂಡಿಯನ್‌ ಒವೆನ್‌
ವಿಶೇಷತೆ: ರ್‍ಯಾಪ್ಸ್‌ ಮತ್ತು ಕಾಠೀಸ್‌ ಆಹಾರೋತ್ಸವ
ಸಮಯ: ಮಧ್ಯಾಹ್ನ 12ರಿಂದ 3.30, ಸಂಜೆ 7ರಿಂದ ರಾತ್ರಿ 11.30.
ಕೊನೆಯ ದಿನ: ಆಗಸ್ಟ್‌ 28
ಸ್ಥಳ: ರಿಚ್ಮಂಡ್‌ ರಸ್ತೆ, ಹಾಸ್ಮಟ್‌ ಆಸ್ಪತ್ರೆ ಹತ್ತಿರ.
ಸ್ಥಳ ಕಾಯ್ದಿರಿಸಲು: 080- 25001700, 91-9899567054
ಒಬ್ಬರಿಗೆ: ₹ 500

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.