ADVERTISEMENT

ವಿವಿಧ ರಾಜ್ಯಗಳ ಆಹಾರ ಮೇಳ

ರಸಾಸ್ವಾದ

ರೇಷ್ಮಾ ಶೆಟ್ಟಿ
Published 23 ಆಗಸ್ಟ್ 2016, 19:30 IST
Last Updated 23 ಆಗಸ್ಟ್ 2016, 19:30 IST
ವಿವಿಧ ರಾಜ್ಯಗಳ ಆಹಾರ ಮೇಳ
ವಿವಿಧ ರಾಜ್ಯಗಳ ಆಹಾರ ಮೇಳ   

ಇಂದಿರಾನಗರದ ಗಿರಿಯಾಸ್ ಮಳಿಗೆಯ ಮೇಲಿನ ಮಹಡಿಗೆ ಹೋಗಲು ಮೆಟ್ಟಿಲಿಗೆ ಕಾಲಿರಿಸುತ್ತಿದ್ದಂತೆ ಪಾನಿಪುರಿ, ದಹಿಪುರಿ, ಆಪ್ಪಂ, ಪಪ್ಪು ಮುಂತಾದ ಖಾದ್ಯಗಳ ಚಿತ್ರಗಳು ಗೋಡೆಯ ಮೇಲೆ ಗೋಚರವಾಗುತ್ತವೆ.

ಸ್ವಾಗತಕಾರ ಬಾಗಿಲು ತೆರೆದೊಡನೆ ನಮ್ಮನ್ನು ಸ್ವಾಗತಿಸುವುದು ವಿವಿಧ ಬಗೆಯ ಸ್ಟಾರ್ಟರ್‌ಗಳು.

ಸಾಲಾಗಿ ಜೋಡಿಸಿದ ತವಾದ ಮೇಲೆ ವಿವಿಧ ರಾಜ್ಯದ ತರಹೇವಾರಿ ಖಾದ್ಯಗಳು, ಅಲ್ಲಿಯೇ ನಿಮಗೆ ಬೇಕಾದ ತಿನಿಸುಗಳನ್ನು ಬಿಸಿ ಬಿಸಿಯಾಗಿ ಮಾಡಿ ಕೊಡುವ ಸಲುವಾಗಿ ಚಿಕ್ಕ,ಚೊಕ್ಕದಾಗಿ ಸಿದ್ಧವಾಗಿರುವ ಅಡುಗೆಮನೆ ಎದುರಾಗುತ್ತದೆ.

ಮುಂದೆ ಸಾಗುತ್ತಿದ್ದಂತೆ ಉದ್ದನೆಯ ಟೇಬಲ್‌ವೊಂದರ ಮೇಲೆ ಸಾಲುಸಾಲಾಗಿ ಜೋಡಿಸಿದ ಪಾತ್ರೆಗಳಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಶೈಲಿಯ ವಿವಿಧ ಖಾದ್ಯಗಳು, ಐದು ಬಗೆಯ ಉಪ್ಪಿನಕಾಯಿ ಇವೆಲ್ಲದರೊಂದಿಗೆ ಹೋಟೆಲ್‌ನ  ಸಿಬ್ಬಂದಿ ಆತ್ಮೀಯ ಸ್ವಾಗತ ಮನಕ್ಕೆ ಮುದನೀಡುತ್ತದೆ.  
–ಇದು ಇಂದಿರಾನಗರದ ಸೌತ್‌ ಇಂಡೀಸ್‌ ಹೋಟೆಲ್‌ನ ಆಹಾರೋತ್ಸವದ ದೃಶ್ಯ.

ಪ್ರತಿ ತಿಂಗಳು ಇಲ್ಲಿ ವಿಶೇಷ ಖಾದ್ಯಗಳ ಆಹಾರೋತ್ಸವ ನಡೆಯುತ್ತದೆ. ‘ಗ್ರಾಹಕರಿಗೆ ಪ್ರತಿದಿನದ ಮೆನು ಬೋರ್ ಆಗಿರುತ್ತದೆ. ಅದಕ್ಕಾಗಿ ಹೊಸ ರುಚಿಯೊಂದಿಗೆ ಬೇರೆ ಬೇರೆ ರಾಜ್ಯದ ಸವಿಯನ್ನು ಉಣಬಡಿಸುವುದು ಈ ಆಹಾರೋತ್ಸವದ ವಿಶೇಷ’ ಎನ್ನುತ್ತಾರೆ ಹೋಟೆಲ್ ಸಿಬ್ಬಂದಿ ಡೇವಿಡ್‌.

ಈ ತಿಂಗಳ ವಿಶೇಷವಾಗಿ ‘ಕಿಂಗ್‌ ಸೈಜ್‌ ನೆವರ್ ಎಂಡಿಂಗ್‌ ಬಫೆ’ ಎಂಬ ಹೆಸರಿನಲ್ಲಿ ಆಹಾರೋತ್ಸವ ನಡೆಸುತ್ತಿದೆ ಸೌತ್ ಇಂಡೀಸ್‌.

ಕಿಂಗ್ ಸೈಜ್ ಎಂದರೆ ಹಿಂದಿನ ರಾಜ ಮಹಾರಾಜರ ಕಾಲದ ಊಟದಂತೆ ಪರಿಪೂರ್ಣ ಹಾಗೂ ಎಲ್ಲಾ ಬಗೆಯ ಆಹಾರವನ್ನು ಒಂದೇ ಊಟದಲ್ಲಿ ನೀಡುವುದು.
ಇಲ್ಲಿ ಬಫೆ ವ್ಯವಸ್ಥೆ ಇದ್ದು ಎಲ್ಲಾ ಖಾದ್ಯಗಳು ಅನಿಯಮಿತವಾಗಿದೆ. ನಾಲ್ಕು ಬಗೆಯ ವಿವಿಧ ರೈಸ್‌ ಐಟಂಗಳು ಇದರ ಇನ್ನೊಂದು ವಿಶೇಷ. ಎಲ್ಲಾ ಬಗೆಯ ರೈಸ್ ಐಟಂಗಳು ಎಲ್ಲರಿಗೂ ಇಷ್ಟವಾಗುವುದಿಲ್ಲ. 

ಇಲ್ಲಿ ಟೊಮೆಟೊ ರೈಸ್, ಕೊತ್ತಂಬರಿ ರೈಸ್, ಲೆಮನ್‌ ರೈಸ್‌ ಇದ್ದು ಇದರಲ್ಲಿ ಗ್ರಾಹಕರು ತಮಗೆ ಇಷ್ಟವಾದ ರೈಸ್ ಐಟಂ ಅನ್ನು ಆರ್ಡರ್‌ ಮಾಡಿದರೆ ಸ್ಥಳದಲ್ಲೇ ಬಿಸಿಬಿಸಿಯಾಗಿ ರೆಡಿ ಮಾಡಿ ಬಡಿಸುತ್ತಾರೆ.

ತೆಂಗಿನತುರಿ, ಕಾಳುಮೆಣಸು ಹಾಕಿ ಹದವಾಗಿ ಕುದಿಸಿ ಮಾಡಿದ ಶ್ರೀಲಂಕಾ ಶೈಲಿಯ ಸೂಪ್ ಬಾಯಿಗೆ ಹಿತ ಎನಿಸುತ್ತದೆ. ಇನ್ನು ಸ್ಟಾರ್ಟರ್‌ಗಳಲ್ಲಿ ಒಂದಾದ ಕೇರಳದ ಪಜಮ್‌ ಪೂರಿಯ ಸಿಹಿ ಅದ್ಭುತ. ನೇಂದ್ರ ಬಾಳೆಹಣ್ಣಿನಿಂದ ತಯಾರಿಸಿದ ಈ ಖಾದ್ಯ ಸಿಹಿಪ್ರಿಯರ ಮನಗೆಲ್ಲುತ್ತದೆ.

ಸೊಪ್ಪಿನ ವಡಾ, ಆಂಧ್ರದ ಶೈಲಿಯ ಉರುಗೈ ಪನ್ನೀರ್ ಸ್ಕೀವರ್ಸ್‌, ಕಾರಾ ಪುಟಾಣಿ ಕಟ್‌ಲೆಟ್‌, ಆರ್ಬಿ ರವಾ ಫ್ರೈ, ಮೊಸರು ವಡಾ, ಆಂಧ್ರ ಶೈಲಿಯ ಪಟ್ಟಿ ಸಮೋಸಾ, ಹದವಾಗಿ ಖಾರ ಸವರಿ ಕೊತ್ತಂಬರಿ ಸೊಪ್ಪು ಉದುರಿಸಿ ಸಿಂಗರಿಸಿದ ಪುಟ್ಟ, ಪುಟ್ಟ ಇಡ್ಲಿ ಇವೆಲ್ಲವೂ ವಿವಿಧ ರಾಜ್ಯದ ರುಚಿಯನ್ನು ಕುಳಿತಲ್ಲೇ ನಮಗೆ ಪರಿಚಯಿಸುತ್ತವೆ.

ತುಪ್ಪದ ಘಮದ ಪಡ್ಡು
ಈ ಊಟದಲ್ಲಿ ವಿಶೇಷವಾಗಿ ಇಷ್ಟವಾಗುವುದು ಪಡ್ಡು.  ತುಪ್ಪದ ಘಮದೊಂದಿಗೆ ಕೊತ್ತಂಬರಿ ಸೊಪ್ಪಿನ ಚೂರುಗಳೊಂದಿಗೆ ಸಿಂಗರಿಸಲಾದ ಪಡ್ಡನ್ನು ಕೆಂಪು ಮೆಣಸಿನ ಚಟ್ನಿ ಜತೆ ನೆಂಚಿಕೊಂಡು ತಿನ್ನುತ್ತಿದ್ದರೆ ಇನ್ನೂ ತಿನ್ನಬೇಕು ಎನಿಸುತ್ತದೆ.

ಮುಖ್ಯ ಊಟದ ಮೆನುಗಳಾದ ಕೈಕರಿ ಸ್ಟೀವ್‌, ವಡಾಕರಿ, ಪಾಲಾಕಟ್ಟಿ ವೆಂಡಿಯಾ ಕರಿ, ಕೊತ್ತುಮೀರ್ ವನ್‌ಕಾಯಾ ಮಸಾಲಾ, ಒರ್‌ಲೈ ಪೋಡಿಮಾಸ್‌, ಗೊಂಗುರ ಪಪ್ಪು ತಮ್ಮದೇ ಆದ ವಿಶಿಷ್ಟ ರುಚಿ ಹೊಂದಿದ್ದು ಖಾರ, ಉಪ್ಪು, ಹುಳಿಗಳ ಸಮ್ಮಿಶ್ರಣದಿಂದ  ಬಾಯಲ್ಲಿ ನೀರೂರಿಸುವುದರಲ್ಲಿ ಎರಡು ಮಾತಿಲ್ಲ.

ಕೇರಳ ಸ್ಪೆಷಲ್‌ ಆಪ್ಪಂ, ಪೋಡಿ ದೋಸಾ ಪರಾಟ ಇನ್ನೊಂದು ಬೇಕು ಎನ್ನುವಷ್ಟರ ಮಟ್ಟಿಗೆ ಹೊಟ್ಟೆ ಹಸಿವನ್ನು ಹೆಚ್ಚಿಸುತ್ತವೆ. ಆಪ್ಪಂನೊಂದಿಗೆ ನೆಂಚಿಕೊಳ್ಳಲು ನೀಡುವ ಅವೈಲ್, ಕೊಬ್ಬರಿ ಪ್ರಿಯರಿಗೆ ಇಷ್ಟವಾಗದಿರದು.

ಡೆಸರ್ಟ್‌ನಲ್ಲೂ ಕೂಡ ವಿವಿಧ ರಾಜ್ಯದ ವಿಶೇಷ ಖಾದ್ಯಗಳನ್ನು ತಯಾರಿಸಿದ್ದು ಕಿಂಗ್ ಸೈಜ್ ಬಫೆಯ ವಿಶೇಷ.

ಇಲ್ಲಿ ಮುಖ್ಯವಾಗಿ ಬಾಯಿ ಚಪಲ ಹೆಚ್ಚಿಸುವುದು ಆ್ಯಪಲ್ ಜಿಲೇಬಿ ಮತ್ತು ಎಳನೀರು ಪಾಯಸ. ಹಳದಿ ಬಣ್ಣದ ಮಾಲ್‌ಪೂರಿಯಂತೆ ಚಿಕ್ಕಗಾತ್ರದಲ್ಲಿರುವ ಜಿಲೇಬಿಯೊಂದಿಗೆ ನೆಂಚಿಕೊಳ್ಳುವ ರಬ್ಡಿ ಬಾಯಲ್ಲಿ ಕೊನೆಯವರೆಗೂ ಸಿಹಿ ಸ್ವಾದವನ್ನು ಉಳಿಸುತ್ತದೆ. ತೆಂಗಿನಹಾಲಿನಿಂದ ತಯಾರಿಸುವ ಎಳನೀರು ಪಾಯಸ ಕೂಡ ಬಾಯಿಗೆ ಹಿತವೆನ್ನಿಸುತ್ತದೆ.

ಅಷ್ಟೇ ಅಲ್ಲದೇ ಗುಲಾಬ್ ಜಾಮೂನ್, ಪಾರ್ಲೆಜಿ ಚೀಸ್ ಕೇಕ್‌, ಪೀತಾ ಮ್ಯಾಂಗೋ ಸರ್ಪ್ರೈಸ್‌, ಚಾಕೊಲೇಟ್‌ ಪೇಸ್ಟ್ರಿ, ಹಣ್ಣಿನ ಚೂರುಗಳು ನಿಮ್ಮ ಊಟವನ್ನು ಪೂರ್ಣಗೊಳಿಸುತ್ತವೆ.

*
ಹೋಟೆಲ್‌: ಸೌತ್ ಇಂಡೀಸ್‌
ಆಗಸ್ಟ್‌ 31ರವರೆಗೆ ಆಹಾರೋತ್ಸವ ನಡೆಯಲಿದೆ.
ಸಮಯ: ಲಂಚ್‌: 12ರಿಂದ 3.30 ಹಾಗೂ ಡಿನ್ನರ್‌ 7ರಿಂದ 11ಗಂಟೆ.
ಬೆಲೆ : ಒಬ್ಬರಿಗೆ   ₹ 500
ಸ್ಥಳ : ಸೌತ್ ಇಂಡೀಸ್‌, #276, 100 ಅಡಿ ರಸ್ತೆ, 6ನೇ ಮುಖ್ಯ ವೃತ್ತ, ಗಿರಿಯಾಸ್ ಮಳಿಗೆಯ ಮೇಲುಗಡೆ, ಇಂದಿರಾನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.