ADVERTISEMENT

ಶವರ್ಮ ಬಲ್ಲಿರಾ ರುಚಿಯ ಮರ್ಮ

ರಸಾಸ್ವಾದ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2016, 19:30 IST
Last Updated 12 ಅಕ್ಟೋಬರ್ 2016, 19:30 IST
ಶವರ್ಮ ಬಲ್ಲಿರಾ ರುಚಿಯ ಮರ್ಮ
ಶವರ್ಮ ಬಲ್ಲಿರಾ ರುಚಿಯ ಮರ್ಮ   

ಮಧ್ಯಪ್ರಾಚ್ಯ ಮೂಲದ ‘ಶವರ್ಮ’ ಚಿಕನ್ ರೋಲ್‌ಅನ್ನು ಹೋಲುವಂಥ ತಿನಿಸು. ಚಿಕನ್‌ ಶವರ್ಮ ತಯಾರಿಯಲ್ಲಿ ಮಾಂಸದ ಬಳಕೆ ಹೆಚ್ಚು.
ಈ ತಿನಿಸಿನ ಮೂಲ ಮಧ್ಯಪ್ರಾಚ್ಯವೇ ಆಗಿದ್ದರೂ, ಶವರ್ಮ ಹೆಸರು ಕೇಳಿದರೆ ಬೆಂಗಳೂರಿನ ಮಾಂಸಾಹಾರಿಗಳ ಬಾಯಲ್ಲೂ ನೀರೂರುತ್ತದೆ. ಅಷ್ಟು ರುಚಿಕಟ್ಟಾಗಿ ತಯಾರಿಸುವ ಬಾಣಸಿಗರು ಇಲ್ಲಿದ್ದಾರೆ.

ನಗರದ ಗಲ್ಲಿಗಲ್ಲಿಗಳಲ್ಲೂ ಶವರ್ಮ ಕಾಣಿಸುತ್ತದೆ. ಕೆಲ ಪ್ರದೇಶಗಳಲ್ಲಂತೂ ಸಂಜೆ 5 ದಾಟಿದ ನಂತರ ಇದರ ಘಮ  ಹೊಮ್ಮುತ್ತದೆ. ಶವರ್ಮದಲ್ಲಿ ಹಲವು ಬಗೆಗಳಿವೆ. ನಾರ್ಮಲ್ ಶವರ್ಮ, ಕ್ರಂಚಿ ಶವರ್ಮ, ಪ್ಲೇಟ್ ಶವರ್ಮ, ಸ್ಪೈಸಿ ಶವರ್ಮ ಅದರಲ್ಲಿ ಮುಖ್ಯ. ಬೆಲೆ ₹ 60ರಿಂದ ಆರಂಭ. ನಾರ್ಮಲ್ ಶವರ್ಮಾ ಹೆಚ್ಚು ಜನಪ್ರಿಯ.

ಡಿ ಸ್ಟ್ರೀಟ್ ಕೆಫೆ
ಹೊಸೂರು ರಸ್ತೆಯ ಕ್ರೈಸ್ಟ್ ಕಾಲೇಜು ಬಳಿ ಇರುವ ‘ಡಿ ಸ್ಟ್ರೀಟ್ ಕೆಫೆ’   ಸದಾ ಗ್ರಾಹಕರಿಂದ ತುಂಬಿ ತುಳುಕುತ್ತಿರುತ್ತದೆ. ಇಲ್ಲಿ ಶವರ್ಮ ತಯಾರಿಸುವವರ ಹೆಸರು ಬಾಬು. ಮಣಿಪುರ ಮೂಲದ ಇವರು ಗ್ರಾಹಕರು ನೋಡನೋಡುತ್ತಿದ್ದಂತೆ ಶವರ್ಮ ತಯಾರಿಸಿ ಕೈಗಿಡುತ್ತಾರೆ.

‘ಸಂಜೆಯಾದರೆ ಶವರ್ಮ ಬೇಯಿಸಲು ಶುರು ಮಾಡುತ್ತೇವೆ. ರಾತ್ರಿ 9 ಗಂಟೆಯೊಳಗೆ ಖಾಲಿಯಾಗಿಬಿಡುತ್ತದೆ. ಜನರು ಬಹಳ ಇಷ್ಟಪಟ್ಟು ತಿನ್ನುತ್ತಾರೆ’ ಎಂದು ತಮ್ಮ ಕೈರುಚಿಯ ಬಗ್ಗೆ ಅವರು ಹೆಮ್ಮೆಪಡುತ್ತಾರೆ.

ಮಡಿವಾಳದ ‘ಸೀ ಶೆಲ್‌’
ಮಡಿವಾಳದಲ್ಲಿ ಶವರ್ಮ ಪ್ರಿಯರ ನೆಚ್ಚಿನ ಜಾಗ ‘ಸೀ ಶೆಲ್’. ಧನ್‌ಸಿಂಗ್‌ ಇಲ್ಲಿನ ಶವರ್ಮ ತಜ್ಞ. ಮೂರು ವರ್ಷಗಳ ಅನುಭವ ಅವರದು.
‘ಸಂಜೆ 5 ಆಯಿತೆಂದರೆ ಗ್ರಾಹಕರು ಸರತಿಯಲ್ಲಿ ನಿಲ್ಲುತ್ತಾರೆ. ಆರಂಭದಲ್ಲಿ ಒಂದೇ ಕಂಬಿ ಇತ್ತು. ಗ್ರಾಹಕರು ಹೆಚ್ಚಾಗಿರುವುದರಿಂದ ಈಗ ಎರಡು ಕಂಬಿ ಇಡುತ್ತೇವೆ. ನಾನೂ ರುಚಿ ನೋಡುತ್ತೇನೆ’ ಎಂದು ನಗುತ್ತಾರೆ ಧನ್‌ಸಿಂಗ್.

ಶವರ್ಮ ತಯಾರಿ
ಕಂಬಿಯೊಂದಕ್ಕೆ, ತೆಳುವಾಗಿ ಕತ್ತರಿಸಿದ ಕೋಳಿ ಮಾಂಸವನ್ನು ಒಂದರ ಮೇಲೊಂದು ಸಿಕ್ಕಿಸುತ್ತಾರೆ. ಇದು ಪುಟ್ಟ ಮಾಂಸ ಪರ್ವತವೊಂದನ್ನು ಉಲ್ಟಾ ನಿಲ್ಲಿಸಿದಂತೆ ಕಾಣುತ್ತದೆ. ಒತ್ತೊತ್ತಾಗಿ ಮೆತ್ತಿದರೂ ಒಳಗೆ ಪದರು ಪದರುಗಳಾಗಿ ಅಂಟಿಕೊಂಡಿರುತ್ತದೆ.

ಕೋಳಿ ಮಾಂಸ.  ಇದನ್ನು ಚೆನ್ನಾಗಿ ಗ್ರಿಲ್ ಮಾಡಲಾಗುತ್ತದೆ. ಗ್ರಿಲ್‌ನಲ್ಲಿ ಬೆಂದ ಮಾಂಸವನ್ನು ಶವರ್ಮ ಕತ್ತರಿಸುವ ಚಾಕುವಿನ ತುದಿಯಿಂದ ಮೇಲಿನಿಂದ  ಕೆಳಭಾಗಕ್ಕೆ  ಚಿಕ್ಕದಾಗಿ ಕತ್ತರಿಸುತ್ತಾರೆ.

ಈ ತುಂಡುಗಳನ್ನು ಹಮ್ಮಸ್, ಮೆಯೊನೀಸ್, ಈರುಳ್ಳಿ ಹಾಗೂ ಮಸಾಲೆ ಮಿಶ್ರಣದಲ್ಲಿ ಬೆರೆಸುತ್ತಾರೆ. ಬೆಂಕಿಯಲ್ಲಿ ಕುಬ್ಬುಸ್‌ (ಶವರ್ಮ ರೋಲ್‌ಗೆ ಬಳಸುವ ಚಪಾತಿ) ಬೆಚ್ಚಗೆ ಮಾಡಿ, ಮಾಂಸದ ಮಿಶ್ರಣ ತುಂಬುತ್ತಾರೆ. ಈಗ ಶವರ್ಮ ಸವಿಯಲು ಸಿದ್ಧ.
-ಚಿತ್ರ–ಲೇಖನ: ಪ್ರಜ್ವಲಾ ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT