ADVERTISEMENT

ಹಬ್ಬಕ್ಕಾಗಿ ದಿಢೀರ್ ತಿನಿಸುಗಳು...

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2016, 19:30 IST
Last Updated 7 ಅಕ್ಟೋಬರ್ 2016, 19:30 IST
ಹಬ್ಬಕ್ಕಾಗಿ ದಿಢೀರ್ ತಿನಿಸುಗಳು...
ಹಬ್ಬಕ್ಕಾಗಿ ದಿಢೀರ್ ತಿನಿಸುಗಳು...   

ನವರಾತ್ರಿ ಹಬ್ಬದಲ್ಲಿ ವಿವಿಧ ರೀತಿಯ ಗೊಂಬೆಗಳನ್ನು ಮನೆಮನೆಗಳಲ್ಲಿ ಕೂರಿ ಸುವ ಪದ್ಧತಿಯಿದೆ. ಆ ಗೊಂಬೆಗಳನ್ನು ನೋಡಲು ಬರುವ ಮಕ್ಕಳು, ಹಾಡು ಹೇಳುವುದು ವಾಡಿಕೆ.

ಅಂಥ ಮಕ್ಕಳಿಗೆ ಕುರುಕಲು ತಿಂಡಿ ಕೊಡುವುದು ನವರಾತ್ರಿ ಸಂಭ್ರಮದ ಅವಿಭಾಜ್ಯ ಅಂಗ. ಗೊಂಬೆ ಹಬ್ಬಕ್ಕೆ ಮಾಡುವ ಕೆಲವು ತಿನಿಸುಗಳ ವಿವರ ಇಲ್ಲಿದೆ.

*
ಬೇಸನ್ ಉಂಡೆ
ಸಾಮಗ್ರಿಗಳು:
ಕಡಲೆ ಹಿಟ್ಟು, ಸಕ್ಕರೆ ತಲಾ ಒಂದು ಬಟ್ಟಲು, ತುಪ್ಪ ಅರ್ಧ ಬಟ್ಟಲು, ಸ್ವಲ್ಪ ಏಲಕ್ಕಿ ಪುಡಿ ಮತ್ತು ಗೋಡಂಬಿ ಚೂರುಗಳು.

ಮಾಡುವ ವಿಧಾನ:
ಸ್ವಲ್ಪ ತುಪ್ಪದಲ್ಲಿ ಕಡಲೆ ಹಿಟ್ಟನ್ನು ಕೆಂಪಗೆ ಪರಿಮಳ ಬರುವಷ್ಟು ಹುರಿಯಿರಿ. ಅದಕ್ಕೆ ಏಲಕ್ಕಿ ಪುಡಿ ಮತ್ತು ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಹಾಕಿ ಕಲೆಸಿ. ಸಕ್ಕರೆ ಮುಳುಗುವಷ್ಟು ನೀರು ಹಾಕಿ ಎಳೆಯ ಪಾಕ ಮಾಡಿಕೊಳ್ಳಿ. ಹಿಟ್ಟು ಬಿಸಿಯಿರುವಾಗಲೇ ಸಕ್ಕರೆ ಪಾಕ ಹಾಕಿ ಚೆನ್ನಾಗಿ ಗೊಟಾಯಿಸಿ. ಅದು ಮುದ್ದೆಯಾಗುತ್ತದೆ. ತಣಿದ ನಂತರ ಉಂಡೆ ಕಟ್ಟಿ. ಲಘುವಾದ ಉಂಡೆ ತಿನ್ನಲು ರುಚಿ.

*
ರವೆ ಉಂಡೆ
ಸಾಮಗ್ರಿಗಳು:
ಸಣ್ಣ ರವೆ, ಸಕ್ಕರೆ ತಲಾ ಒಂದು ಕಪ್ಪು, ತುಪ್ಪ, ಒಣಕೊಬ್ಬರಿ ತುರಿ ತಲಾ ಅರ್ಧ ಬಟ್ಟಲು, ಸ್ವಲ್ಪ ಏಲಕ್ಕಿ ಪುಡಿ, ಒಣದ್ರಾಕ್ಷಿ, ಗೋಡಂಬಿ.

ಮಾಡುವ ವಿಧಾನ:
ದ್ರಾಕ್ಷಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ಉಳಿದ ತುಪ್ಪದಲ್ಲಿ ರವೆಯನ್ನು ಚೆನ್ನಾಗಿ ಹುರಿಯಿರಿ. ಸಕ್ಕರೆ ಮುಳುಗುವಷ್ಟು ನೀರು ಹಾಕಿ ಪಾಕ ಮಾಡಿಕೊಳ್ಳಿ. ಸಕ್ಕರೆ ಪಾಕಕ್ಕೆ ಹುರಿದ ರವೆ, ದ್ರಾಕ್ಷಿ, ಗೋಡಂಬಿ, ಕೊಬ್ಬರಿತುರಿ, ಏಲಕ್ಕಿಪುಡಿ ಹಾಕಿ ಚೆನ್ನಾಗಿ ಕಲೆಸಿ ಮುದ್ದೆಯಾದ ಮಿಶ್ರಣವನ್ನು ಉಂಡೆ ಕಟ್ಟಿ.

*
ರವೆ ಕೋಡುಬಳೆ
ಸಾಮಗ್ರಿಗಳು:
ಸಣ್ಣ ರವೆ ಒಂದು ಬಟ್ಟಲು, ಅಕ್ಕಿಹಿಟ್ಟು ಅರ್ಧ ಬಟ್ಟಲು, ಮೆಣಸಿನ ಪುಡಿ, ಜೀರಿಗೆ ಪುಡಿ, ಉಪ್ಪು ರುಚಿಗೆ.

ಮಾಡುವ ವಿಧಾನ:
ರವೆ, ಅಕ್ಕಿಹಿಟ್ಟು, ಮೆಣಸಿನ ಪುಡಿ, ಜೀರಿಗೆ ಉಪ್ಪು ಎಲ್ಲವನ್ನೂ ಮಿಶ್ರಣ ಮಾಡಿ ಒಂದು ಚಮಚ ಬಿಸಿ ಎಣ್ಣೆ ಹಾಕಿ, ಸ್ವಲ್ಪ ನೀರು ಹಾಕಿ ಕಲಸಿ. 10–15 ನಿಮಿಷ ಬಿಟ್ಟು ಹಿಟ್ಟನ್ನು ನಾದಿ ಕೋಡಬಳೆ ಹೊಸೆದು ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ. ಗರಿಗರಿ ಕೋಡುಬಳೆ ತಿನ್ನಲು ರುಚಿ.

*
ಶಂಕರಪೋಳಿ
ಸಾಮಗ್ರಿಗಳು
:ಒಂದು ಬಟ್ಟಲು ಗೋಧಿ ಹಿಟ್ಟು, ಅರ್ಧ ಬಟ್ಟಲು ಸಣ್ಣರವೆ, ರುಚಿಗೆ ಉಪ್ಪು, ಮೆಣಸಿನ ಪುಡಿ, ಜೀರಿಗೆ ಪುಡಿ. ಕರಿಯಲು ಎಣ್ಣೆ.

ಮಾಡುವ ವಿಧಾನ:
ಗೋದಿ ಹಿಟ್ಟು, ರವೆ ಮೆಣಸಿನ ಪುಡಿ, ಜೀರಿಗೆ ಪುಡಿ ಉಪ್ಪು ಇವುಗಳನ್ನು ಚೆನ್ನಾಗಿ ಮಿಶ್ರಮಾಡಿ. ಒಂದು ದೊಡ್ಡ ಚಮಚ ಬಿಸಿ ಎಣ್ಣೆಯನ್ನು ಹಾಕಿ ಸ್ವಲ್ಪ ನೀರು ಹಾಕಿ, ಪೂರಿ ಹಿಟ್ಟಿನ ಹದಕ್ಕೆ ಕಲಿಸಿ. ಹತ್ತು ನಿಮಿಷದ ನಂತರ ನಾದಿ ಪೂರಿಯಂತೆ ಲಟ್ಟಿಸಿ ಬೇಕಾದ ಆಕಾರಕ್ಕೆ ಚಾಕುವಿನಲ್ಲಿ ಕತ್ತರಿಸಿ ಕಾದ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ. ಮುಚ್ಚಳ ಗಟ್ಟಿಯಾಗಿ ಹಾಕಿ ಡಬ್ಬಿಯಲ್ಲಿಟ್ಟರೆ ವಾರದ ವರೆಗೂ ಗರಿಗರಿಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.