ADVERTISEMENT

ಹಾಗಲಕಾಯಿ ವಿಶೇಷ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2015, 19:30 IST
Last Updated 17 ಏಪ್ರಿಲ್ 2015, 19:30 IST
ಹಾಗಲಕಾಯಿ ಪಲ್ಯ
ಹಾಗಲಕಾಯಿ ಪಲ್ಯ   

ಹಾಗಲಕಾಯಿಯೆಂದರೆ ಅದು ಕಹಿ ಎಂದು ಮೂಗು ಮುರಿಯುವವರೆ ಹೆಚ್ಚು. ಆದರೆ ಹಾಗಕಾಯಿಯಿಂದಲೂ, ಅದೂ ಕಹಿ ಮಾಡದೆ ಸುಲಭವಾಗಿ ರುಚಿಯಾಗಿ ಅಡುಗೆ ಮಾಡಬಹುದು. ಅವುಗಳಲ್ಲಿ 3 ಖಾದ್ಯಗಳನ್ನಿಲ್ಲಿ ತಿಳಿಸಿದ್ದಾರೆ.

ಹಾಗಲಕಾಯಿ ಗೊಜ್ಜು
ಸಾಮಗ್ರಿ: ಹಾಗಲಕಾಯಿ, ಕಾಯಿ ತುರಿ, ಬೆಳ್ಳುಳ್ಳಿ (6ಎಸಳು), ಒಣ ಮೆಣಸಿನಕಾಯಿ 5, ಹುಣಸೆ ಹಣ್ಣು, ಬೆಲ್ಲ, ಉಪ್ಪು, ಸಾಸಿವೆ, ಕರಿಬೇವು, ಅರಿಶಿಣ, ಎಣ್ಣೆ.

ವಿಧಾನ: ಹಾಗಲಕಾಯಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಕರಿಬೇವು, ಅರಿಶಿಣ ಹಾಕಿ ನಂತರ ಹೆಚ್ಚಿಟ್ಟುಕೊಂಡ ಹಾಗಲಕಾಯಿ, ಉಪ್ಪು, ಬೆಲ್ಲ ಹಾಕಿ ಬೇಯಿಸಿಕೊಳ್ಳಬೇಕು. ಮಿಕ್ಸಿ ಜಾರಿಗೆ ಕಾಯಿ ತುರಿ, ಬೆಳ್ಳುಳ್ಳಿ, ಒಣ ಮೆಣಸಿನಕಾಯಿ ಹುಣಸೆ ಹಣ್ಣು ಹಾಕಿ ರುಬ್ಬಿಕೊಳ್ಳಬೇಕು. ಹಾಗಲಕಾಯಿ ಬೆಂದ ನಂತರ ಅದಕ್ಕೆ ರುಬ್ಬಿಕೊಂಡ ಮಿಶ್ರಣ ಹಾಕಿ ಐದು ನಿಮಿಷ ಕುದಿಸಿದರೆ ಹಾಗಲಕಾಯಿ ಗೊಜ್ಜು ಸವಿಯಲು ಸಿದ್ಧ.

ಹಾಗಲಕಾಯಿ ಟೊಮೆಟೊ ಪಲ್ಯ
ಸಾಮಗ್ರಿ: ಹಾಗಲಕಾಯಿ 1, ಟೊಮೆಟೊ 1, ಈರುಳ್ಳಿ 1, ಹಸಿ ಮೆಣಸಿನ ಕಾಯಿ 4, ಕಾಯಿ ತುರಿ ಸ್ವಲ್ಪ, ಬೆಲ್ಲ ಸ್ವಲ್ಪ, ಕೊತ್ತೊಂಬರಿ ಸೊಪ್ಪು. ಒಗ್ಗರಣೆಗೆ ಕಡಲೆಬೇಳೆ, ಉದ್ದಿನಬೇಳೆ, ಸಾಸಿವೆ, ಕರಿಬೇವು, ಅರಿಶಿಣ, ಹಿಂಗು, ಎಣ್ಣೆ.

ವಿಧಾನ: ಹಾಗಲಕಾಯಿ, ಟೊಮೆಟೊ, ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು. ಒಂದು ಬಾಣಲೆಗೆ ಎಣ್ಣೆ ಹಾಕಿ ಕಡಲೆಬೇಳೆ, ಉದ್ದಿನಬೇಳೆ, ಸಾಸಿವೆ, ಕರಿಬೇವು, ಅರಿಶಿಣ, ಹಿಂಗು, ಹಸಿ ಮೆಣಸು ಹಾಕಿ ಒಗ್ಗರಣೆ ಮಾಡಿ ಅದಕ್ಕೆ ಹೆಚ್ಚಿದ ಹಾಗಲಕಾಯಿ ಹಾಕಿ 2 ನಿಮಿಷ ಹುರಿದು ನಂತರ ಟೊಮೆಟೊ, ಈರುಳ್ಳಿ, ಉಪ್ಪು, ಬೆಲ್ಲ ಹಾಕಿ ಹುರಿಯಬೇಕು. ಕೊನೆಯಲ್ಲಿ ಕೊತ್ತೊಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಹಾಗಲಕಾಯಿ ಟೊಮೆಟೊ ಪಲ್ಯ ಸವಿಯಲು ಸಿದ್ಧ. ಇದು ಅನ್ನ, ಚಪಾತಿ ಜೊತೆ ಚೆನ್ನಾಗಿರುತ್ತದೆ.

ಹಾಗಲಕಾಯಿ ಪಲ್ಯ
ಸಾಮಗ್ರಿ
: ಹಾಗಲಕಾಯಿ 2, ಕಡಲೆಬೇಳೆ 3ಟೀ ಚಮಚ, ಉದ್ದಿನಬೇಳೆ 2ಟೀ ಚಮಚ, ಕೊತ್ತೊಂಬರಿ ಬೀಜ 1ಟೀ ಚಮಚ, ಜೀರಿಗೆ 1ಟೀ ಚಮಚ, ಒಣ ಮೆಣಸಿನಕಾಯಿ 8, ಹುಣಸೆ ರಸ 5ಟೀ ಚಮಚ, ಹಿಂಗು, ಬೆಲ್ಲ ಒಂದು ಹಿಡಿ, ಉಪ್ಪು, ಎಣ್ಣೆ.

ADVERTISEMENT

ವಿಧಾನ: ಹಾಗಲಕಾಯಿಯನ್ನು ಹೆಚ್ಚಿಕೊಳ್ಳಬೇಕು. ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಹೆಚ್ಚಿಟ್ಟುಕೊಂಡ ಹಾಗಲಕಾಯಿ, ಉಪ್ಪು, ಬೆಲ್ಲ, ಹುಣಸೆ ರಸ ಹಾಕಿ ಬೇಯಿಸಿಕೊಳ್ಳಬೇಕು. ಇನ್ನೊಂದು ಬಾಣಲೆಯಲ್ಲಿ ಕಡಲೆಬೇಳೆ, ಉದ್ದಿನಬೇಳೆ, ಕೊತ್ತೊಂಬರಿ ಬೀಜ, ಜೀರಿಗೆ ಒಣ ಮೆಣಸಿನಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಅದನ್ನು ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು (ನೀರು ಹಾಕಬಾರದು). ಹಾಗಲಕಾಯಿ ಬೆಂದ ನಂತರ ಒಲೆ ಆರಿಸಿ ಅದಕ್ಕೆ ರುಬ್ಬಿದ ಮಿಶ್ರಣ ಹಾಕಿ ಕಲಸಿದರೆ ಪಲ್ಯ ರೆಡಿ. ಇದನ್ನು ಗಾಳಿಯಾಡದ ಡಬ್ಬದಲ್ಲಿಟ್ಟರೆ 15ದಿನದವರೆಗೂ ಕೆಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.