ADVERTISEMENT

ಹೊಸ ಬಗೆಯ ಬೋಂಡ ಮಾಡಿ ನೋಡಿ

ಸವಿರುಚಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2017, 19:30 IST
Last Updated 10 ಫೆಬ್ರುವರಿ 2017, 19:30 IST
ಹೊಸ ಬಗೆಯ ಬೋಂಡ ಮಾಡಿ ನೋಡಿ
ಹೊಸ ಬಗೆಯ ಬೋಂಡ ಮಾಡಿ ನೋಡಿ   
ಈ ವರ್ಷ ಫೆಬ್ರುವರಿ ಆರಂಭವಾದರೂ ಚಳಿ ಕಡಿಮೆಯಾಗುತ್ತಿಲ್ಲ. ಮುಂಗಾರು ಆರಂಭಕ್ಕೂ ಮುನ್ನ ಹಗಲಿನ ಬಿಸಿಲ ಕಾವು. ರಾತ್ರಿ ಚಳಿಯ ವಾತಾವರಣ ಬೆಂಗಳೂರಿಗರನ್ನು ಕಾಡುತ್ತಿದೆ.
 
ಹೀಗಾಗಿಯೇ ಹಲವರಿಗೆ ಬಜ್ಜಿ–ಬೋಂಡಗಳು ನೆನಪಾಗುತ್ತವೆ. ಬೋಂಡ ಬಜ್ಜಿಗಳಲ್ಲಿ ಪ್ರದೇಶಕ್ಕೊಂದು, ಊರಿಗೊಂದು ವೈಶಿಷ್ಟ್ಯ ಇದೆ. ಸ್ಥಳೀಯವಾಗಿ ಸಿಗುವ ತರಕಾರಿ, ಸೊಪ್ಪಿನಲ್ಲಿ ಮಾಡುವ ಬೋಂಡಗಳ ರುಚಿ ತುಸು ಹೆಚ್ಚು. ಈರುಳ್ಳಿ ಬೋಂಡ, ಆಲೂ ಬೋಂಡಗಳನ್ನು ಸಾಮಾನ್ಯವಾಗಿ ಮಾಡುತ್ತಿರುತ್ತೇವೆ. ಸ್ವಲ್ಪ ಹೊಸ ರೆಸಿಪಿ ಏಕೆ ಪ್ರಯತ್ನಿಸಬಾರದು?
 
ಪನ್ನೀರ್ ಬೋಂಡ
ಬೇಕಾಗುವ ಸಾಮಗ್ರಿಗಳು: ಪನ್ನೀರ್ ತುಂಡು, ಕಡಲೆ ಹಿಟ್ಟು ಒಂದು ಬಟ್ಟಲು, ಅಕ್ಕಿ ಹಿಟ್ಟು ಅರ್ಧ ಬಟ್ಟಲು, ನಿಂಬೆ ರಸ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು.
 
ಮಾಡುವ ವಿಧಾನ: ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಹಸಿಮೆಣಸಿನಕಾಯಿ ಚೂರು, ಕೊತ್ತಂಬರಿ ಸೊಪ್ಪು, ನಿಂಬೆ ರಸ ಎಲ್ಲವನ್ನು ಬಿಸಿನೀರಿನಲ್ಲಿ ಬೆರೆಸಿ. ಈ ಮಿಶ್ರಣಕ್ಕೆ ಪನ್ನೀರ್ ತುಂಡು ಸೇರಿಸಿ ಒಂದೊಂದೇ ತುಂಡನ್ನು ಎಣ್ಣೆಯಲ್ಲಿ ಕರಿಯಿರಿ. ಇದಕ್ಕೆ ಪುದೀನ ಚಟ್ನಿ ಸೊಗಸಾಗಿ ಹೊಂದುತ್ತದೆ.
 
*
ಬ್ರೆಡ್ ಬಜ್ಜಿ ಚಾಟ್‌
ಬೇಕಾಗುವ ಸಾಮಗ್ರಿಗಳು: ಬ್ರೆಡ್ ಸ್ಲೈಸ್ ನಾಲ್ಕು, ಕಡಲೆ ಹಿಟ್ಟು ಒಂದು ಬಟ್ಟಲು, ಜೀರಿಗೆ ಪುಡಿ ಸ್ವಲ್ಪ, ಕಾರದ ಪುಡಿ ರುಚಿಗೆ.
 
ಮಾಡುವ ವಿಧಾನ: ಕಡಲೆ ಹಿಟ್ಟಿಗೆ ಜೀರಿಗೆ ಪುಡಿ, ಕಾರದ ಪುಡಿ, ಉಪ್ಪು ಸೇರಿಸಿ ನೀರಿನೊಂದಿಗೆ ಕಲಸಿ ಹಿಟ್ಟು ಸಿದ್ಧ ಮಾಡಿಕೊಳ್ಳಿ. ಇದಕ್ಕೆ ಬ್ರೆಡ್‌ ತುಂಡು ಮಿಶ್ರಣ ಮಾಡಿ ಎಣ್ಣೆಯಲ್ಲಿ ಕರಿಯಿರಿ. ಈ ಬಜ್ಜಿ ಮೇಲೆ ಈರುಳ್ಳಿ, ಹಸಿಮೆಣಸಿನಕಾಯಿ ತುಂಡು, ಕ್ಯಾರೆಟ್‌ ತುರಿ, ಮಸಾಲೆ ಕಡಲೆಕಾಯಿ ಬೀಜ, ಹೆಸರುಕಾಳು, ನಿಂಬೆ ರಸ ಹರಡಿಕೊಂಡು ಸವಿಯಬಹುದು.
 
*
ಸೊಪ್ಪಿನ ಬೋಂಡ
ಯಾವ ಸೊಪ್ಪಿನಲ್ಲಾದರೂ ಈ ಬೋಂಡವನ್ನು ಮಾಡಬಹುದು. ಸಬ್ಬಸಿಗೆ, ಪಾಲಕ್ ಸೊಪ್ಪು, ನುಗ್ಗೆ ಸೊಪ್ಪಿನಲ್ಲಿ ಮಾಡಿದರೆ ಹೆಚ್ಚು ರುಚಿಯಾಗಿರುತ್ತದೆ. ಮೂಲಂಗಿ ಸೊಪ್ಪು, ಪುದೀನ, ದಂಟು ಸೊಪ್ಪನ್ನೂ ಬಳಸಬಹುದು.
 
ಬೇಕಾಗುವ ಸಾಮಾಗ್ರಿಗಳು: ಆಯ್ಕೆ ಮಾಡಿಕೊಂಡ ಸೊಪ್ಪು, ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಸೋಡಾ ಸೇರಿಸಬಹುದು.
 
ಮಾಡುವ ವಿಧಾನ: ಸೊಪ್ಪನ್ನು ಸಣ್ಣಗೆ ಹೆಚ್ಚಿ ಕಡಲೆಹಿಟ್ಟಿನೊಂದಿಗೆ ಮಿಶ್ರಣ ಮಾಡಬಹುದು, ಅಥವಾ ಇಡಿಯಾದ  ಎಲೆಯನ್ನೇ ಬಳಸಿ ಕೂಡ ಮಾಡಬಹುದು. ಒಂದು ಎಲೆಯನ್ನು ಬಳಸಿ ಮಾಡುವುದಾದರೆ ಹಿಟ್ಟನ್ನು ಸ್ವಲ್ಪ ತೆಳುವಾಗಿ ಕಲಸಿಕೊಳ್ಳಬೇಕು (ದೋಸೆ ಹಿಟ್ಟಿನ ಹದಕ್ಕೆ). ಹಿಟ್ಟಿನಲ್ಲಿ ಮುಳುಗಿಸಿ ಎಣ್ಣೆಯಲ್ಲಿ ಕರಿಯಬೇಕು. ಈ ಬಜ್ಜಿ ಗರಿಗರಿಯಾಗಿರುವುದರಿಂದ ಯಾವುದೇ ಸಾಸ್‌, ಮಸಾಲೆ  ಅವಶ್ಯಕತೆಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.