ADVERTISEMENT

ದೇಸಿಸ್ವಾದದ ಚೆಟ್ಟಿನಾಡು ಆಹಾರೋತ್ಸವ

ಮಂಜುಶ್ರೀ ಎಂ.ಕಡಕೋಳ
Published 24 ಜನವರಿ 2018, 19:30 IST
Last Updated 24 ಜನವರಿ 2018, 19:30 IST
ದೇಸಿಸ್ವಾದದ ಚೆಟ್ಟಿನಾಡು ಆಹಾರೋತ್ಸವ
ದೇಸಿಸ್ವಾದದ ಚೆಟ್ಟಿನಾಡು ಆಹಾರೋತ್ಸವ   

ಸಂಜೆಯ ಮಬ್ಬುಗತ್ತಲಲ್ಲಿ ‘ಸೌತ್ ಇಂಡೀಸ್’ ಎನ್ನುವ ಅಪ್ಪಟ ದಕ್ಷಿಣ ಭಾರತೀಯ ಹೋಟೆಲ್‌ಗೆ ಕಾಲಿಟ್ಟಾಗ ನಮ್ಮನ್ನು ಸ್ವಾಗತಿಸಿದ್ದು ಸಾಂಪ್ರದಾಯಿಕ ಶೈಲಿಯ ತೂಗುದೀಪಗಳು. ಮರದ ಪೀಠೋಪಕರಣಗಳ ಮೇಲೆ ಚೆಲ್ಲಿದ್ದ ಹಳದಿ ಬೆಳಕು, ದೊಡ್ಡದೊಡ್ಡ ಪಾತ್ರೆಗಳ ಬಾಯಂಚಿನಲ್ಲಿ ಆಡುತ್ತಿದ್ದ ಹಬೆ, ಮಣ್ಣಿನ ತಟ್ಟೆ, ಬಟ್ಟಲುಗಳಲ್ಲಿ ಅಪ್ಪಟ ತಮಿಳು ಶೈಲಿಯ ಖಾದ್ಯಗಳು ಥಟ್ಟನೆ ಗಮನ ಸೆಳೆದವು.

ಪ್ರತಿ ತಿಂಗಳೂ ದಕ್ಷಿಣ ರಾಜ್ಯಗಳ ಆಹಾರೋತ್ಸವ ಆಯೋಜಿಸುವ ‘ಸೌತ್ ಇಂಡೀಸ್’ ಸಂಕ್ರಾಂತಿಯ ಮರುದಿನದಿಂದ ‘ಚೆಟ್ಟಿನಾಡು ಆಹಾರೋತ್ಸವ’ ನಡೆಸುತ್ತಿದೆ. ಇದರಲ್ಲಿ, ಹೆಸರಿಗೆ ತಕ್ಕಂತೆ ತಮಿಳುನಾಡಿನ ಮೆನು. ರುಚಿಕರ ಸಸ್ಯಾಹಾರಿ ಆಹಾರ ಇಲ್ಲಿನ ವಿಶೇಷ. ಊಟಕ್ಕೆ ಮುನ್ನ ಸ್ಟಾರ್ಟರ್‌ ಸೇವಿಸುವ ಅಭ್ಯಾಸವಿರುವವರಿಗೆ ಇಲ್ಲಿ ರಸದೌತಣ. ಯಾಕೆಂದರೆ ಇಲ್ಲಿ ಏಳು ಬಗೆಯ ಸ್ಟಾರ್ಟರ್‌ಗಳಿವೆ.

ಮಣ್ಣಿನ ದೊಡ್ಡ ಬಟ್ಟಲಿನಲ್ಲಿ ನೀಡುವ ಐಸ್‌ಕ್ರೀಂ ಮೊದಲ ನೋಟದಲ್ಲೇ ನಾಲಗೆಯ ರುಚಿಮೊಗ್ಗು ಅರಳಿಸುತ್ತದೆ. ಇದೇನಪ್ಪಾ ಊಟಕ್ಕೆ ಮೊದಲೇ ಐಸ್‌ಕ್ರೀಂ ಕೊಡ್ತಾ ಇದ್ದೀರಿ ಅಂತ ವ್ಯವಸ್ಥಾಪ‍ಕ ಅಬ್ರಹಾಂ ಅವರನ್ನು ಕೇಳಿದೆ.

ADVERTISEMENT

‘ಹೌದು ಮೇಡಂ. ಅದುವೇ ನಮ್ಮ ವೈಶಿಷ್ಟ್ಯ. ಎಲ್ಲರೂ ಊಟವಾದ್ಮೇಲೆ ಐಸ್‌ಕ್ರೀಂ ಕೊಡ್ತಾರೆ. ಆದರೆ, ನಮ್ಮಲ್ಲಿ ಹಾಗಲ್ಲ. ಊಟ ಶುರು ಮಾಡುವುದಕ್ಕೆ ಮೊದಲು ಹೊಟ್ಟೆ ತಂಪಾಗಿದ್ದರೆ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮನ್ನು ಕಾಡದು. ಅಷ್ಟಕ್ಕೂ ಇದು ಐಸ್‌ಕ್ರೀಂ ಥರವೇ ಹೊರತು ಅಪ್ಪಟ ಐಸ್‌ಕ್ರೀಂ ಅಲ್ಲ. ಪೀನಟ್ ಬಟರ್‌ ಅನ್ನು ಐಸ್‌ಕ್ರೀಂ ಹದಕ್ಕೆ ತಂದು, ಸ್ವಲ್ಪ ಹೊತ್ತು ಫ್ರೀಜರ್‌ನಲ್ಲಿಡುತ್ತೇವೆ. ನಂತರ ಶೇಂಗಾ ಚಿಕ್ಕಿ ಮಿಕ್ಸ್ ಮಾಡಲಾಗಿರುತ್ತದೆ’ ಎಂದು ವಿವರಣೆ ಕೊಟ್ಟರು.

ಅವರ ವಿವರಣೆ ಕೇಳುತ್ತಲೇ ಪೀನಟ್ ಬಟರ್ ಐಸ್‌ಕ್ರೀಂ ಬಾಯಲ್ಲಿಟ್ಟೆ. ಕ್ಷಣಾರ್ಧದಲ್ಲಿ ಕರಗಿ ಹೋಯಿತು. ಅಲ್ಲಲ್ಲಿ ಸಿಕ್ಕ ಶೇಂಗಾ ಚಿಕ್ಕಿ ಜಗಿಯುವಾಗ ಖುಷಿ ಅನಿಸಿತು. ನಂತರ ತೆಂಗಿನಹಾಲಿಗೆ ತರಕಾರಿ ಮಿಶ್ರಣ ಸೇರಿಸಿದ ಸೂಪ್ ತಂದುಕೊಟ್ಟರು. ತುಸು ಸಿಹಿ, ತುಸು ಖಾರ ಎನಿಸುವಂತಿದ್ದ ಈ ಸೂಪ್‌ಗೆ ಹಸಿವನ್ನು ಕೆರಳಿಸುವ ಶಕ್ತಿಯಿದೆಯಂತೆ. ಪೈನಾಪಲ್ ಚುಟ್ಟುಡು, ವಜಾಪೂ ವಡಾ, ಮಶ್ರೂಮ್ ಚೆಟ್ಟಿನಾಡು, ಅರ್ಬಿ ರವಾ ಫ್ರೈ, ಪನ್ನೀರ್ ಪೊಲೈಚಟ್ಟು, ರಾಗಿ ಪಣಿಯಂ (ರಾಗಿಪಡ್ಡು), ಪೋಡಿ ಇಡ್ಲಿ, ಪರಾಟ ಪಿಜ್ಜಾ  ಹೀಗೆ ಸರತಿ ಸಾಲಿನಲ್ಲಿ ಬರುವ ಸ್ಟಾರ್ಟರ್‌ಗಳಿಂದಲೇ ಹೊಟ್ಟೆ ತುಂಬುವಂತಾಗಿತ್ತು.

ಅದರಲ್ಲೂ ಪೈನಾಪಲ್ ಚುಟ್ಟುಡುವಿನ ಸ್ವಾದಕ್ಕೆ ಮರುಳಾಗದೇ ವಿಧಿಯಿಲ್ಲ ಎನ್ನುವಂತಿತ್ತು. ಹಬೆಯಲ್ಲಿ ಬೇಯಿಸಿದ ಪೈನಾಪಲ್ ತುಂಡಿಗೆ ತುಸು ಉಪ್ಪು, ಕಾರ, ಸಣ್ಣಗೆ ಹಾಕಿದ ಒಗ್ಗರಣೆ ಲಾರಸಗ್ರಂಥಿಗಳನ್ನು ಬಡಿದೆಬ್ಬಿಸುವಂತಿತ್ತು. ಅಕ್ಕಿಹಿಟ್ಟಿನೊಂದಿಗೆ ಹದವಾಗಿ ಬೆರೆಸಿದ ರಾಗಿಹಿಟ್ಟಿನ ಪುಟ್ಟಪುಟ್ಟ ರಾಗಿಪಡ್ಡು ನೋಟದಲ್ಲೇ ಮನಸೆಳೆಯುವಂತಿತ್ತು. ಬಾಳೆಎಲೆಯಲ್ಲಿ ಹದವಾಗಿ ಬೇಯಿಸಿಟ್ಟ ಮಸಾಲದಲ್ಲಿ ಅಡಗಿದ್ದ ಪನ್ನೀರ್ ಪೊಲ್ಲಿಚಟ್ಟುನ ರುಚಿ ತಿಂದಷ್ಟೂ ಹೆಚ್ಚುತ್ತಲೇ ಇತ್ತು. ದೇಸಿ ಸ್ವಾದದ ಪರಾಟ ಪಿಜ್ಜಾ ಮಕ್ಕಳಿಗೆ ಇಷ್ಟವಾಗುವುದರಲ್ಲಿ ಸಂಶಯವಿಲ್ಲ.

ಮುಖ್ಯ ಮೆನುವಿನಲ್ಲಿ ಸ್ವಾಗತಿಸಿದ್ದು ತಮಿಳುನಾಡಿನ ದೇಸಿ ಆಹಾರ. ರೋಟಿ ಅಥವಾ ದೋಸೆಯೊಂದಿಗೆ ಸವಿಯಬಹುದಾದ ಕರಿಬೇವು–ಬೆಳ್ಳುಳ್ಳಿ ಗ್ರೇವಿ (ಕೈಕರಿ ಸ್ಟ್ಯೂ), ಪಲ್ಲಕಟ್ಟಿ ಕಲನ್ ಕರಿ, ಬೆಂಡೆ ಕಡಾಯಿ ಚೆಟ್ಟಿನಾಡು, ಸೊಪ್ಪಿನ ಕರಿ. ರುಚಿರುಚಿ ಕರಿಗಳ ಜೊತೆಗೆ ರೋಟಿ, ಪರಾಟ, ದೋಸೆಗಳನ್ನು ಸವಿಯುವ ಸೊಗಸೇ ಬೇರೆ. ದಕ್ಷಿಣ ಭಾರತದ ಊಟ ಅಂದ ಮೇಲೆ ಅನ್ನ ಇರದೇ ಇರುತ್ತದೆಯೇ? ಘಮಘಮಿಸುತ್ತಿದ್ದ ಅನ್ನಕ್ಕೆ ತಿಳಿಸಾರು ಸೊಗಸು.

ಇನ್ನೇನು ಊಟ ಮುಗಿಯಿತು ಎಂದು ಎದ್ದವರಿಗೆ ಮತ್ತೆ ಕೈಹಿಡಿದು ಕೂಡಿಸಿದ್ದು ತೆಂಗಿನಹಾಲಿನ ಸಿಹಿ ಪಾಯಸ. ಗಟ್ಟಿ ತೆಂಗಿನಹಾಲಿಗೆ ಸಕ್ಕರೆ, ಹಾಲು, ಏಲಕ್ಕಿಪುಡಿ ಸೇರಿಸಿ ಮಾಡಿದ ಪಾಯಸವು ಊಟದ ರುಚಿಯನ್ನು ಮತ್ತಷ್ಟು ಹೆಚ್ಚಿಸಿತು.

ಎದ್ದು ಬರುವಾಗ, ‘ಚೆಟ್ಟಿನಾಡು ಆಹಾರೋತ್ಸವದಲ್ಲಿ ಕೊಟ್ಟ ದುಡ್ಡಿಗೆ ಮೋಸವಿಲ್ಲದೇ ಹೊಟ್ಟೆ ತುಂಬಿಸಿಕೊಳ್ಳಲು ಅಡ್ಡಿಯಿಲ್ಲ’ ಎನಿಸಿದ್ದು ಸುಳ್ಳಲ್ಲ.

***

ರೆಸ್ಟೊರೆಂಟ್: ಸೌತ್ ಇಂಡೀಸ್

ವಿಶೇಷ: ಚೆಟ್ಟಿನಾಡು ಆಹಾರೋತ್ಸವ

ಕೊನೆಯ ದಿನ: ಜ.31

ದರ: ₹450ರಿಂದ ಆರಂಭ

ವಿಳಾಸ: ಸೌತ್ ಇಂಡೀಸ್, ನೂರು ಅಡಿ ರಸ್ತೆ, ಗಿರಿಯಾಸ್ ಮಳಿಗೆ ಮೊದಲ ಮಹಡಿ, ಇಂದಿರಾ ನಗರ

ಟೇಬಲ್ ಕಾಯ್ದಿರಿಸಲು: 080 4163 6363

***

ರೆಸ್ಟೊರೆಂಟ್: ಸೌತ್ ಇಂಡೀಸ್

ಸಮಯ: 12ರಿಂದ 3, ರಾತ್ರಿ 7ರಿಂದ 11

ವಿಶೇಷ : ಚೆಟ್ಟಿನಾಡು ಆಹಾರೋತ್ಸವ

ಒಬ್ಬರಿಗೆ: ₹₹450ರಿಂದ ಆರಂಭ

ಸ್ಥಳ: ಸೌತ್ ಇಂಡೀಸ್, ನೂರು ಅಡಿ ರಸ್ತೆ, ಗಿರಿಯಾಸ್ ಮಳಿಗೆ ಮೊದಲ ಮಹಡಿ, ಇಂದಿರಾ ನಗರ

***

ಟೇಬಲ್ ಕಾಯ್ದಿರಿಸಲು

080 4163 6363

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.