ADVERTISEMENT

ಏನಿದು ಟೆನಿಸ್ ಮೊಣಕೈ ನೋವು?

ಡಾ. ವಿಶ್ವನಾಥ್ ಎಲ್. ಡಿ.

ಡಾ.ವಿಶ್ವನಾಥ್.
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST
ಏನಿದು ಟೆನಿಸ್ ಮೊಣಕೈ ನೋವು?
ಏನಿದು ಟೆನಿಸ್ ಮೊಣಕೈ ನೋವು?   

ಘಟನೆ 1: ಸುಮಾರು ಮೂವತ್ತೈದು ವರ್ಷದ ಹರೀಶ್ ಖಾಸಗಿ ಕಂಪನಿಯಲ್ಲಿ ಹಾರ್ಡ್‌ವೇರ್‌ ಸಂಬಂಧಿತ ಬಿಡಿ ಭಾಗಗಳ ತಯಾರಿಕಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಕೆಲವು ದಿನಗಳ ಹಿಂದೆ ಕಾಣಿಸಿಕೊಂಡ ಮೊಣಕೈ ನೋವು ಇತ್ತೀಚೆಗೆ ಹೆಚ್ಚಾಗಿತ್ತು. ಆದರೆ, ಕಂಪನಿಯಲ್ಲಿ ತೀವ್ರ ಒತ್ತಡದ ಕೆಲಸವಿದ್ದುದರಿಂದ ರಜೆ ತೆಗೆದುಕೊಳ್ಳುವಂತಿರಲಿಲ್ಲ. ಹಾಗಾಗಿ ನೋವು ಕಾಣಿಸಿಕೊಂಡಾಗಲೆಲ್ಲ ನೋವುನಿವಾರಕ ಮಾತ್ರೆಗಳನ್ನು ಸೇವಿಸಿ ಕೆಲಸಕ್ಕೆ ಹೋಗುವುದನ್ನು ರೂಢಿಸಿಕೊಂಡಿದ್ದ.

ಘಟನೆ 2: ಭೀಮಣ್ಣನು ಹದಿನೈದು ಹಸುಗಳನ್ನು ಸಾಕಿಕೊಂಡು ಜೀವನ ಸಾಗಿಸುತ್ತಿದ್ದಾನೆ. ಭೀಮಣ್ಣ ಒಬ್ಬನೇ ದಿನಕ್ಕೆ ಏಳೆಂಟು ಆಕಳುಗಳ ಹಾಲನ್ನು ಹಿಂಡಬೇಕಿತ್ತು. ಇದು ಸುಮಾರು ನಾಲ್ಕೈದು ವರ್ಷಗಳಿಂದ ನಡೆದು ಬಂದಿತ್ತು. ಈಗ ಕೆಲವು ದಿನಗಳಿಂದ ಆತನಿಗೆ ತೀವ್ರ ಮೊಣಕೈ ನೋವು ಕಾಣಿಸಿಕೊಳ್ಳಲಾರಂಭಿಸಿತ್ತು.
ಹೌದು, ಮೇಲೆ ಹೇಳಿದ ಎರಡೂ ನಿದರ್ಶನಗಳಲ್ಲಿ ವ್ಯಕ್ತಿಯು ‘ಟೆನಿಸ್ ಮೊಣಕೈ ನೋವು (’ಟೆನಿಸ್ ಎಲ್ಬೋ)’ ಎಂಬ ಸಮಸ್ಯೆಯಿಂದ ಬಳಲುತ್ತಿರಬಹುದು. ಏನಿದು ಟೆನಿಸ್ ಎಲ್ಬೋ? ಇದೊದು ಹೊಸ ಕಾಯಿಲೆಯೇ?  ಯೋಚಿಸಬೇಡಿ; ಈ ವ್ಯಾಧಿ ಬಹಳ ಹಿಂದಿನಿಂದಲೂ ಇದೆ!

ಏನಿದು ಟೆನಿಸ್ ಮೊಣಕೈ ನೋವು?

ADVERTISEMENT

ಟೆನಿಸ್ ಮೊಣಕೈ ನೋವು ಸಾಮಾನ್ಯವಾಗಿ ಮೊಣಕೈಯನ್ನು ಹೆಚ್ಚಾಗಿ ಬಳಸಿ ಕೆಲಸ ಮಾಡುವವರಲ್ಲಿ ಕಾಣಿಸಿಕೊಳ್ಳುತ್ತದೆ. ವ್ಯಕ್ತಿಯ ಮುಂಗೈ ಮಾಂಸ ಹಾಗೂ ಸ್ನಾಯುಗಳ ಮಿತಿಮೀರಿದ ಬಳಕೆಯಿಂದ ಟೆನಿಸ್ ಮೊಣಕೈ ನೋವು ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಈ ಸಮಸ್ಯೆಯು ಟೆನಿಸ್, ಕ್ರಿಕೆಟ್, ಸುತ್ತಿಗೆ ಬಡಗಿಗಳು, ಗ್ಯಾರೇಜುಗಳಲ್ಲಿ ಕೆಲಸ ಮಾಡುವವರು, ಹಸುವಿನ ಹಾಲನ್ನು ಹಿಂಡುವವರಲ್ಲಿ ಕಾಣಿಸಿಕೊಳ್ಳುತ್ತದೆ. ಇಲ್ಲಿ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡುಲ್ಕರ್‌ ಅವರನ್ನು ನೆನಪು ಮಾಡಿಕೊಳ್ಳಲೇಬೇಕು. ಅವರು ಈ ಸಮಸ್ಯೆಗಾಗಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಬಹುತೂಕದ ಬ್ಯಾಟ್ ಬಳಸುತ್ತಿದ್ದರಿಂದ ಆತ ಈ ಸಮಸ್ಯೆಗೆ ತುತ್ತಾದರು ಎಂದು ಆಗ ಆತನನ್ನು ಪರೀಕ್ಷಿಸಿದ ವೈದ್ಯರು ಹೇಳಿದ್ದರು.

ಗುರುತಿಸುವುದು ಹೇಗೆ?

ಕೆಲವರಲ್ಲಿ ಮೊಣಕೈ ನೋವು ಗಂಭೀರವಾದ ಸಮಸ್ಯೆಯನ್ನುಂಟು ಮಾಡದೇ ಇರಬಹುದು. ಆದರೆ, ಆರಂಭಿಕ ಹಂತಗಳಲ್ಲಿಯೇ ಚಿಕಿತ್ಸೆ ಪಡೆಯದಿದ್ದರೆ, ಮೊಣಕೈ ಹಾಗೂ ಮುಂದೋಳಿನ ಶಕ್ತಿಯು ಕ್ಷೀಣಿಸುತ್ತಾ ಬರುತ್ತದೆ. ಆರಂಭಿಕ ಹಂತಗಳಲ್ಲಿಯ ನೋವನ್ನು  ಟೆನಿಸ್ ಮೊಣಕೈ ನೋವು ಎಂದು ಹೇಳಲು ತುಸು ಕಷ್ಟವೆನಿಸಬಹುದು. ಸಾಮಾನ್ಯವಾಗಿ ಮೊಣಕೈ ಹೊರಭಾಗದಲ್ಲಿ ನೋವು ಹಾಗೂ ಉರಿಯೂತ ಕಾಣಿಸಿಕೊಳ್ಳುತ್ತದೆ. ಮೊಣಕೈ ಭಾಗವು ದುರ್ಬಲವಾಗಿರುತ್ತದೆ. ಕೆಲವರಲ್ಲಿ ಹೆಚ್ಚಾಗಿ ಉಪಯೋಗಿಸುವ ಯಾವುದಾದರೂ ಒಂದು ಕೈಯಲ್ಲಿ ಮಾತ್ರ ನೋವು ಕಾಣಿಸಿಕೊಳ್ಳಬಹುದು. ಇನ್ನು ಕೆಲವರಲ್ಲಿ ಎರಡೂ ಕೈಗಳಲ್ಲಿಯೂ ನೋವು ಕಾಣಿಸಿಕೊಳ್ಳಬಹುದು.

ಈ ಸಮಸ್ಯೆಯಿಂದ ಬಳಲುವವರು ವೈದ್ಯರ ಬಳಿ ಹೋದಾಗ ಹಳೆಯ ಅಪಘಾತ, ಪೆಟ್ಟು ಮಾಡಿಕೊಂಡಿದ್ದರ ಬಗ್ಗೆ, ನರಗಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರೆ ಆ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡಬೇಕು. ಗಟ್ಟಿಯಾಗಿ ಮುಷ್ಟಿ ಹಿಡಿದು ಮುಂಗೈಯನ್ನು ತಿರುಗಿಸಿದಾಗ ಮೊಣಕೈಯ ಹೊರಭಾಗದಲ್ಲಿ ಅತಿಯಾದ ನೋವು ಉಂಟಾಗುತ್ತದೆ. ಮಣಿಕಟ್ಟು ಹಾಗೂ ಬೆರಳುಗಳನ್ನು ನೇರವಾಗಿಟ್ಟು ವಿರುದ್ಧ ದಿಕ್ಕಿಗೆ ಬಲ ಪ್ರಯೋಗಿಸಿ ಬೆರಳು ಹಾಗೂ ಮಣಿಕಟ್ಟಿನ ಶಕ್ತಿಯನ್ನು ವೈದ್ಯರು ಪರೀಕ್ಷಿಸುತ್ತಾರೆ. ಆ ಸಂದರ್ಭದಲ್ಲಿ ಹೆಚ್ಚು ನೋವಾದರೆ ಅದು ಟೆನಿಸ್ ಮೊಣಕೈ ನೋವು ಎಂದು ದೃಢಪಡುತ್ತದೆ.

ಟೆನಿಸ್ ಮೊಣಕೈ ನೋವಿನ ಲಕ್ಷಣಗಳು:

ಸಾಮಾನ್ಯವಾಗಿ ಈ ಸಮಸ್ಯೆಯಿಂದ ಬಳಲುವವರು ಮೊಣಕೈ ಸುತ್ತಲಿನ ಹೊರಭಾಗದಲ್ಲಿ ನೋವೆಂದು ಹೇಳುತ್ತಾರೆ. ನೋವು ಹೆಚ್ಚಾಗುವುದು ಯಾವಾಗ?

* ಭಾರವಾದ ವಸ್ತುಗಳನ್ನು ಎತ್ತುವಾಗ
* ಡಬ್ಬಿಗಳ ಮುಚ್ಚಳಗಳನ್ನು ತೆಗೆಯುವಾಗ
* ಹಲ್ಲುಜ್ಜುವಾಗ
* ಹಸ್ತಲಾಘವ ಮಾಡುವಾಗ
* ತರಕಾರಿ ಹೆಚ್ಚುವಾಗ
* ಊಟ ಮಾಡುವಾಗ

ಧೃಡಪಡಿಸಲು ಇತರ ತಪಾಸಣೆಗಳು:

* ಎಕ್ಸರೇ ಪರೀಕ್ಷೆ
* ಎಂಆರ್‌ಐ ಪರೀಕ್ಷೆ
* ರಕ್ತಪರೀಕ್ಷೆ

ಚಿಕಿತ್ಸೆಯ ವಿಧಾನಗಳಾವುವು...:

* ಮೊಣಕೈ ಉರಿಯೂತ ಹಾಗೂ ನೋವಿರುವ ಜಾಗದಲ್ಲಿ ಮಂಜುಗಡ್ಡೆಯನ್ನು ಇಡುವುದು

* ನೋವುನಿವಾರಕ ಔಷಧಗಳ ಬಳಕೆ

* ಅಲ್ಟ್ರಾಸೌಂಡ್ ಮಾಲೀಶ್, ಸ್ನಾಯು ಉತ್ತೇಜಿಸುವ ವ್ಯಾಯಾಮಗಳನ್ನು ಮಾಡುವುದು

* ಟೆನಿಸ್ ಎಲ್ಬೋ ಬ್ರೇಸ್ ಬಳಕೆ: ಇದರಿಂದ ಮುಂಗೈ ಸ್ನಾಯುಗಳ ಬಳಕೆ ಕಡಿಮೆಯಾಗಿ ಸ್ನಾಯುಗಳಿಗೆ ವಿಶ್ರಾಂತಿ ದೊರಕಿ ನೋವು ಕಡಿಮೆಯಾಗುತ್ತದೆ

* ಸ್ಟಿರಾಯ್ಡ್ ಚುಚ್ಚು ಮದ್ದನ್ನು ವರ್ಷಕ್ಕೆ ಒಂದು ಅಥವಾ ಎರಡು ಬಾರಿ ನೀಡುವುದರಿಂದ ನೋವು ಸ್ವಲ್ಪ ಕಡಿಮೆಯಾಗುತ್ತದೆ

* ಪಿಅರ್‌ಪಿ ಚಿಕಿತ್ಸೆ: ರೋಗಿಯ ರಕ್ತವನ್ನು ತೆಗೆದು ಅದರಲ್ಲಿರುವ ಕಿರುಬಿಲ್ಲೆಗಳನ್ನು (ಪ್ಲೇಟ್‌ಲೆಸ್ಟ್‌) ಬೇರ್ಪಡಿಸಿ ಅದನ್ನು ಮೊಣಕೈ ಕೀಲಿಗೆ ಕೊಡುವುದರಿಂದ ದೀರ್ಘಕಾಲದವರೆಗೆ ನೋವು ಕಡಿಮೆಯಿರುತ್ತದೆ

ಈ ಮೇಲೆ ಹೇಳಿದ ಎಲ್ಲ ವಿಧಾನಗಳ ಬಳಕೆಯ ನಂತರವೂ ವ್ಯಕ್ತಿಯು ನೋವಿನಿಂದ ಬಳಲುತ್ತಿದ್ದರೆ ವೈದ್ಯರು ಶಸ್ತ್ರಚಿಕಿತ್ಸಾ ವಿಧಾನದಿಂದ ಮೊಣಕೈ ಕೀಲಿನಲ್ಲಿ ಪೆಟ್ಟಾದ ಅಂಗಾಂಶದ ದುರಸ್ತಿಯನ್ನು ಮಾಡುತ್ತಾರೆ.

ಕೊನೆಯ ಮಾತು:

ಮೊಣಕೈಯನ್ನು ಹೆಚ್ಚಾಗಿ ಬಳಸಿ ಕೆಲಸ ಮಾಡುವವರು ಆಗಾಗ್ಗೆ ಕೈಗಳಿಗೆ ವಿಶ್ರಾಂತಿ ಕೊಡುತ್ತಿರಬೇಕು.

ಮೊಣಕೈ ನೋವು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ ನಿಮ್ಮ ಹತ್ತಿರದ ಮೂಳೆ, ಕೀಲುರೋಗ ತಜ್ಞರಲ್ಲಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ದಿನನಿತ್ಯವೂ ನಿಯಮಿತ ವ್ಯಾಯಾಮ ಹಾಗೂ ಪೌಷ್ಟಿಕಾಂಶವುಳ್ಳ ಆಹಾರಸೇವನೆಗೆ ಮಹತ್ವ ಕೊಡಬೇಕು.

(ಡಾ. ವಿಶ್ವನಾಥ್ ಎಲ್. ಡಿ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.