ADVERTISEMENT

ಡೆಂಗಿ ಜ್ವರ: ಆತಂಕ, ಭಯ ಬೇಡ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2017, 5:30 IST
Last Updated 5 ಆಗಸ್ಟ್ 2017, 5:30 IST
ಡೆಂಗಿ ಜ್ವರ: ಆತಂಕ, ಭಯ ಬೇಡ
ಡೆಂಗಿ ಜ್ವರ: ಆತಂಕ, ಭಯ ಬೇಡ   

–ಡಾ. ವಸುಂಧರಾ ಭೂಪತಿ

‘ಡಾಕ್ಟ್ರೇ ನನ್ನ ಮಗನಿಗೆ ಸುಡು ಸುಡು ಜ್ವರ. ಮೂರ್ನಾಲ್ಕು ದಿನಗಳಾದ್ರೂ ಕಡಿಮೆಯಾಗಿಲ್ಲ. ಡೆಂಗಿ ಇರಬಹುದಾ ಅಂತ ಭಯ ಆಗ್ತಿದೆ. ನೋಡಿ ಡಾಕ್ಟ್ರೇ...’

‘ನಂಗೆ ಮೈ ಕೈ ನೋವು, ವಾಂತಿಯಾಗ್ತಿದೆ, ಜ್ವರ ಬಿಟ್ಟು ಬಿಟ್ಟು ಬರ್ತಿದೆ. ಮನಸ್ಸಿಗೆ ಸಮಾಧಾನವೇ ಇಲ್ಲ. ಏನಾಗಿರಬಹುದು ಡಾಕ್ಟ್ರೇ?’...
‘ಡಾಕ್ಟ್ರೇ ನನ್‌ಮಗೂಗೆ ಜ್ವರ ಇದೆ. ಕೈ ಕಾಲು ತಣ್ಣಗಿದೆ. ಆಹಾರ ಸೇವಿಸ್ತಿಲ್ಲ. ಸದಾ ಅಳ್ತಾ ಇರುತ್ತೆ. ಅತ್ತರೆ ಕಣ್ಣಲ್ಲಿ ನೀರು ಬರೋದಿಲ್ಲ. ದಯವಿಟ್ಟು ನೋಡಿ’

ADVERTISEMENT

ಈ ಮೂರೂ ರೋಗಿಗಳ ಲಕ್ಷಣಗಳನ್ನು ಗಮನಿಸಿದರೆ ಡೆಂಗಿಯಿಂದ ಇವರೆಲ್ಲರೂ ಬಳಲುತ್ತಿದ್ದಾರೆನ್ನುವ ಅನುಮಾನ ದೃಢವಾಗುತ್ತದೆ.
ಡೆಂಗಿ ವೈರಸ್‌ನಿಂದ ಬರುವ ಕಾಯಿಲೆ. ಡೆಂಗಿ ವೈರಸ್‌ಗಳಾದ DENV1, DENV2, DENV3 ಮತ್ತು DENV4 - ಈ ನಾಲ್ಕರಲ್ಲಿ ಯಾವುದಾದರೊಂದು ವೈರಸ್‌ನಿಂದ ಡೆಂಗಿ ಜ್ವರ ಕಾಣಿಸಿಕೊಳ್ಳುತ್ತದೆ.

ಸೊಳ್ಳೆಗಳಿಂದ ಹರಡುವ ಕಾಯಿಲೆ ಡೆಂಗಿ. ಈಡಿಸ್‌ಸೊಳ್ಳೆಯಿಂದ ಇದು ಹರಡುವುದು. ಈಡಿಸ್‌ಸೊಳ್ಳೆ ತನ್ನ ಮೊಟ್ಟೆಗಳಿಗೆ ಬೇಕಾಗುವ ಪ್ರೊಟೀನನ್ನು ಮನುಷ್ಯರ ರಕ್ತದಿಂದಲೇ ಪಡೆಯುತ್ತವೆ. ಈಡಿಸ್ ಸೊಳ್ಳೆ ಗಾತ್ರದಲ್ಲಿ ಇತರ ಸೊಳ್ಳೆಗಳಿಗಿಂತ ದೊಡ್ಡದಾಗಿರುತ್ತದೆ. ಆದ್ದರಿಂದ ಇವುಗಳಿಗೆ ‘ಟೈಗರ್‌ಮಸ್ಕಿಟೋ’ ಎಂದೂ ಕರೆಯಲಾಗುತ್ತದೆ.

ಈ ಸೊಳ್ಳೆಗಳ ದೇಹ, ಕಾಲುಗಳ ಮೇಲೆ ಬಿಳಿ ಚುಕ್ಕೆಗಳಿರುವುದರಿಂದ ಸುಲಭವಾಗಿ ಗುರುತಿಸಬಹುದು. ಈ ಸೊಳ್ಳೆಯ ವಿಶಿಷ್ಟತೆಯೆಂದರೆ ಹಗಲು ಹೊತ್ತಿನಲ್ಲೇ ಇದು ಕಚ್ಚುತ್ತದೆ. ಅದರಲ್ಲೂ ಸೂರ್ಯೋದಯದ ನಂತರದ ಎರಡು ಗಂಟೆ ಮತ್ತು ಸೂರ್ಯಾಸ್ತಕ್ಕೆ ಮುಂಚಿನ ಎರಡು ಗಂಟೆ ಕಾಲ ಸೊಳ್ಳೆಗಳು ಹೆಚ್ಚು ಚಟುವಟಿಕೆಯಿಂದ ಕೂಡಿದ್ದು - ಆ ಸಮಯದಲ್ಲಿಯೇ ಮನುಷ್ಯನಿಗೆ ವೈರಸ್ಸನ್ನು ಉಡುಗೊರೆಯಾಗಿ ನೀಡುತ್ತವೆ.

ನೆರಳನ್ನು, ತಂಪಾದ ಸ್ಥಳಗಳನ್ನು, ಶುದ್ಧ ನೀರನ್ನು ಹೆಚ್ಚು ಪ್ರೀತಿಸುವ ಈ ಸೊಳ್ಳೆಗಳು ಶುದ್ಧ ನೀರಿನಲ್ಲಿಯೇ ಉತ್ಪತ್ತಿಯಾಗಿ ವೃದ್ಧಿಯಾಗುತ್ತವೆ. ಸೊಳ್ಳೆ ಕಚ್ಚಿದ ಏಳು ದಿನಗಳ ನಂತರ ಸೋಂಕು ಕಾಣಿಸಿಕೊಳ್ಳುತ್ತದೆ. ಒಮ್ಮೆ ಸೋಂಕಿಗೀಡಾದ ಸೊಳ್ಳೆ ತನ್ನ ಜೀವಿತಾವಧಿ ಪೂರ್ತಿ ಮೊಟ್ಟೆಗಳಿಗೆ ವೈರಸ್‌ನ ಕಾಣಿಕೆ ನೀಡುತ್ತಲೇ ಇರುತ್ತದೆ. ಈಡಿಸ್‌ನ ಜೀವನಾವಧಿ ಎರಡೇ ವಾರಗಳಾದರೂ ಮೂರು ಬಾರಿ ಮೊಟ್ಟೆಗಳನ್ನಿಡುತ್ತದೆ. ಪ್ರತಿಬಾರಿ 100 ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳು ನೀರಿಲ್ಲದೇ ಬದುಕಬಲ್ಲವಾದರೂ ನೀರು ಸಿಕ್ಕ ತಕ್ಷಣ ಮರಿಯಾಗಿಬಿಡಲು ಕಾಯುತ್ತಿರುತ್ತವೆ.

ಈಡಿಸ್‌ಸೊಳ್ಳೆ ಹಾಸಿಗೆಗಳ ಅಡಿ, ಕಟರ್ನ್‌ಗಳ ಕೆಳಗೆ ಅಡಗಿ ಕುಳಿತಿರುತ್ತವೆ. ಅವು ಹೆಚ್ಚು ದೂರ ಹಾರಲಾರವು. 400 ಮೀಟರ್ ದೂರ ಮಾತ್ರ ಹಾರಬಲ್ಲವು. ನೀರಿನ ಜಾಗ ಹುಡುಕಲು, ತನ್ನ ಸಂತಾನವೃದ್ಧಿಗೆ ಮೊಟ್ಟೆಯಿಡಲು ಮಾತ್ರ ಸಾಧ್ಯವಾಗುವಷ್ಟು ದೂರ ಹೋಗುತ್ತವೆ.
ಸೊಳ್ಳೆ ಕಚ್ಚಿದ ಐದಾರು ದಿನಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೆ.

ಆರಂಭದಲ್ಲಿ ತೀವ್ರ ಜ್ವರವಿದ್ದು - ತಲೆನೋವು, ಕಣ್ಣಿನ ಭಾಗ, ಅದರಲ್ಲೂ ಕಣ್ಣುಗಳ ಒಳಭಾಗದಲ್ಲಿ ಅತಿಯಾದ ನೋವು, ಕೀಲುಗಳಲ್ಲಿ, ಮಾಂಸಖಂಡಗಳಲ್ಲಿ ಹೆಚ್ಚಿನ ನೋವು ಕಾಣಿಸಿಕೊಳ್ಳುತ್ತದೆ. ಮುಖ, ಎದೆ, ಕೈಕಾಲುಗಳಲ್ಲಿ ಗಂಧೆಗಳು ಕಂಡುಬರುತ್ತವೆ. ವಾಂತಿಯೂ ಆಗಬಹುದು. ಸೋಂಕು ತೀವ್ರವಾದಾಗ ಮೂಗು, ವಸಡುಗಳಲ್ಲಿ ರಕ್ತಸ್ರಾವವೂ ಕಾಣಿಸಿಕೊಳ್ಳಬಹುದು.

ವಿಶ್ರಾಂತಿಯೂ ಮದ್ದು!
ಡೆಂಗಿ ಜ್ವರಕ್ಕೆ ಪ್ರಮುಖ ಚಿಕಿತ್ಸೆ ಎಂದರೆ ವಿಶ್ರಾಂತಿ ಮತ್ತು ಆತಂಕಗೊಳ್ಳದಿರುವಂತೆ ನೋಡಿಕೊಳ್ಳುವುದು. ತಣ್ಣೀರಿನಲ್ಲಿ ಕರವಸ್ತ್ರ ಅದ್ದಿ ಮೈಯೆಲ್ಲ ಒರೆಸುತ್ತಿರಬೇಕು (Cold Sponge). ಜಲ ಮರುಪೂರ್ಣ ಚಿಕಿತ್ಸೆ ಅವಶ್ಯಕ. ಹಣ್ಣಿನರಸ, ಕಾಯಿಸಿ ಆರಿಸಿದ ನೀರು, ಗಂಜಿ, ಹಾಲು ಮುಂತಾದ ದ್ರವಗಳ ಸೇವನೆ ಅತ್ಯವಶ್ಯಕ. ಜ್ವರಕ್ಕೆ ‘ವಿಶ್ವ ಆರೋಗ್ಯ ಸಂಸ್ಥೆ’ ನಿರ್ದೇಶನದಂತೆ ನೋವು ನಿವಾರಕ ಮಾತ್ರೆಗಳ ಸೇವನೆ ಬೇಡ. ಏಕೆಂದರೆ ಕೆಲವು ನೋವು ನಿವಾರಕ ಮಾತ್ರೆಗಳ ಪಾರ್ಶ್ವ ಪರಿಣಾಮದಿಂದ ವಾಂತಿ, ಗಾಸ್ಟ್ರಿಟಿಸ್‌, ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಏರುಪೇರಾಗುತ್ತವಾದ್ದರಿಂದ ಅವುಗಳ ಸೇವನೆ ಬೇಡ.

ರ ನಿವಾರಕ ಮಾತ್ರೆಗಳನ್ನು ವೈದ್ಯರ ಸಲಹೆ ಮೇರೆಗೆ ನೀಡಬಹುದು. ಜ್ವರವಿರುವಾಗ 1 ಚಮಚ ಶುಂಠಿ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಪ್ರತಿ ಮೂರು ಗಂಟೆಗಳಿಗೊಮ್ಮೆ ನೀಡಬೇಕು. ಆಯುರ್ವೇದ ಔಷಧಿ ಅಂಗಡಿಯಲ್ಲಿ ದೊರೆಯುವ ಅಮೃತಾರಿಷ್ಟವನ್ನು ಪ್ರತಿ ಮೂರ್‍ನಾಲ್ಕು ಗಂಟೆಗಳಿಗೊಮ್ಮೆ ಮೂರು ಚಮಚೆಯಷ್ಟು ನೀರು ಬೆರೆಸಿ ಕೊಡುತ್ತಿದ್ದಲ್ಲಿ ಜ್ವರ ತಗ್ಗುತ್ತದೆ.(ಮಕ್ಕಳಿಗಾದರೆ ಒಂದೂವರೆ ಚಮಚೆ) ಕೀಲುನೋವು ಹೆಚ್ಚಾಗಿದ್ದಲ್ಲಿ ದನಿಯಾ, ಒಣಶುಂಠಿ ಕುಟ್ಟಿ ಪುಡಿ ಮಾಡಿ ಕಷಾಯ ತಯಾರಿಸಿ ಕುಡಿಯಬೇಕು.

ಎಳ್ಳೆಣ್ಣೆಯಲ್ಲಿ ಸ್ವಲ್ಪ ಕರ್ಪೂರ ಬೆರೆಸಿ ಬಿಸಿ ಮಾಡಿ ನೋವಿರುವ ಭಾಗಕ್ಕೆ ಲೇಪಿಸಿ ಶಾಖ ತೆಗೆದುಕೊಳ್ಳಬೇಕು. ಬಿಸಿನೀರಿನ ಚೀಲದಿಂದ ಶಾಖ ತೆಗೆದುಕೊಳ್ಳಬಹುದು. ಮೈಮೇಲೆ ಗಂಧೆಗಳಿದ್ದಲ್ಲಿ ತುಳಸಿ ರಸ ಇಲ್ಲವೇ ದೊಡ್ಡಪತ್ರೆ ರಸ, ಇಲ್ಲವೇ ಬೇವು ಮತ್ತು ಅರಿಷಿಣ ಅರೆದು ಲೇಪಿಸಬೇಕು. ಸೊಳ್ಳೆ ಕಚ್ಚದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.

ಹಗಲು ಹೊತ್ತಿನಲ್ಲಿ ಮಲಗುವ ಅಭ್ಯಾಸವಿರುವವರು, ಮಕ್ಕಳು, ಮಲಗುವಾಗ ಮೈ-ಕೈಗೆ ಬೇವಿನೆಣ್ಣೆ ಲೇಪಿಸಿಕೊಳ್ಳಬೇಕು. ಚಿಕ್ಕ ಮಕ್ಕಳಿಗೆ ಬಜೆ ಪುಡಿಯನ್ನು ಮೈ, ಕೈ ಮತ್ತು ನೆತ್ತಿಗೆ ಲೇಪಿಸಿದಲ್ಲಿ ಸೊಳ್ಳೆ ಹತ್ತಿರ ಸುಳಿಯುವುದಿಲ್ಲ. ಅಲ್ಲದೇ ಮಕ್ಕಳನ್ನು ಮಲಗಿಸುವ ಹಾಸಿಗೆಯ ಮೇಲೆ ಮತ್ತು ಸುತ್ತಮುತ್ತಲೂ ಬಜೆ ಪುಡಿಯನ್ನು ಸಿಂಪಡಿಸಿದಲ್ಲಿ ಸೊಳ್ಳೆಗಳು ದೂರ ಓಡುತ್ತವೆ. ಬೆಳಿಗ್ಗೆ ಹಾಗೂ ಸಂಜೆ ಮನೆಯ ಕೋಣೆಗಳಲ್ಲಿ ಬಜೆ, ಸಾಂಬ್ರಾಣಿ ಧೂಪ ಹಾಕಬೇಕು. ನಿಂಬೆಹುಲ್ಲಿನ ಸುಂಗಂಧದೆಣ್ಣೆಯನ್ನು ತಲೆದಿಂಬಿಗೆ ಸಿಂಪಡಿಸಿಕೊಳ್ಳಬೇಕು.

ಡೆಂಗಿ ರೋಗಿಗಳಿಗೆ ವಿಶ್ರಾಂತಿ ಬಹಳ ಮುಖ್ಯ. ಕನಿಷ್ಠ ಒಂದು ವಾರದ ವಿಶ್ರಾಂತಿ ಬೇಕು. ಬಹುತೇಕ ಡೆಂಗಿ ಸೋಂಕಿತರು ಒಂದೆರಡು ವಾರಗಳಲ್ಲಿ ಗುಣಮುಖವಾಗುತ್ತಾರೆ. ದೇಹದಲ್ಲಿ ನಿರ್ಜಲೀಕರಣ (dehydration) ಆಗದಂತೆ ನೋಡಿಕೊಳ್ಳುವುದು ಬಹಳ ಅವಶ್ಯಕ. ಚಿಕ್ಕಮಕ್ಕಳಲ್ಲಿ ವಾಂತಿಯಾಗುತ್ತಿದ್ದಲ್ಲಿ, ಮೂತ್ರ ಸರಿಯಾಗಿ ವಿಸರ್ಜಿಸದಿದ್ದಲ್ಲಿ, ಅಳುವಾಗ ಕಣ್ಣಲ್ಲಿ ನೀರು ಬಾರದಿರುವುದು, ಹೃದಯದ ಬಡಿತ ಹೆಚ್ಚಾಗುವುದು, ಬಾಯಿ ಒಣಗುವುದು, ಕೈಕಾಲು ತಣ್ಣಗಾಗುವುದು ಮುಂತಾದ ಲಕ್ಷಣಗಳು ಇದ್ದಲ್ಲಿ ಹಣ್ಣಿನ ರಸ ಇಲ್ಲವೇ ಓಆರ್‌ಎಸ್‌(ORS) ಕೊಡಬೇಕು.

ಓಆರ್‌ಎಸ್‌ ಕುಡಿಯದಿದ್ದಲ್ಲಿ ಆಸ್ಪತ್ರೆಗೆ ಸೇರಿಸಿ ದ್ರವ ಪೂರಣ ಚಿಕಿತ್ಸೆ ಕೊಡಿಸಬೇಕು. ಡೆಂಗಿ ಸೋಂಕುಂಟಾದ 3–5 ದಿನಗಳಲ್ಲಿ ಕೆಲ ರೋಗಿಗಳಲ್ಲಿ ಚಿಕ್ಕ ರಕ್ತನಾಳಗಳಲ್ಲಿ (capillaries) ಸೋರಿಕೆ ಉಂಟಾಗಬಹುದು. ಇದರಿಂದ ರಕ್ತಪರಿಚಲನೆಯಲ್ಲಿ ತೊಂದರೆ ಉಂಟಾಗಬಹುದು. ಮುಕ್ತ ಪ್ರಮಾಣದಲ್ಲಿ ದ್ರವ ದೇಹಕ್ಕೆ ಸೇರದಿದ್ದಾಗ ಶಾಕ್‌ಕೂಡ ಉಂಟಾಗಬಹುದು.

ರಕ್ತ ಪರೀಕ್ಷೆಯ ಮೂಲಕ ಡೆಂಗಿ ಪತ್ತೆ ಹಚ್ಚಬಹುದಾಗಿದೆ. Igm ಡೆಂಗಿ ಮತ್ತು ಪ್ಲೇಟ್‌ಲೆಟ್ ಸಂಖ್ಯೆಯನ್ನು ರಕ್ತಪರೀಕ್ಷೆಯ ಮೂಲಕ ವೈದ್ಯರು ತಿಳಿಯುತ್ತಾರೆ. ಯಾವುದೇ ಕಾರಣಕ್ಕೆ ಡೆಂಗಿಗೆ ಹೆದರುವ ಕಾರಣವಿಲ್ಲ.

ಸೋಂಕು ತೀವ್ರವಾಗಿದ್ದಲ್ಲಿ ತೀವ್ರತರ ಹೊಟ್ಟೆನೋವು ಇಲ್ಲವೇ ಪದೇ ಪದೇ ವಾಂತಿಯಾಗುವುದು, ಮೂಗು, ವಸಡುಗಳಲ್ಲಿ ರಕ್ತಸ್ರಾವ, ಮಲದ ಬಣ್ಣ ಕಪ್ಪಾಗಿರುವುದು, ಮಂಪರು ಆವರಿಸುವುದು, ಕೈಕಾಲು ತಣ್ಣಗಾಗುವುದು, ಉಸಿರಾಟದಲ್ಲಿ ತೊಂದರೆ ಮುಂತಾದ ಲಕ್ಷಣಗಳಿದ್ದಲ್ಲಿ ತಡ ಮಾಡದೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕು. ದ್ರವ ಪೂರಣ ಚಿಕಿತ್ಸೆ ಮಾಡಿದಲ್ಲಿ ತಕ್ಷಣ ಸರಿಯಾಗುತ್ತದೆ. ಎಲ್ಲ ರೋಗಿಗಳಲ್ಲಿಯೂ ಪ್ಲೇಟ್‌ಲೆಟ್‌ಪೂರಣ (ರಕ್ತಪೂರಣ)ದ ಅವಶ್ಯಕತೆ ಇರುವುದಿಲ್ಲ.

ಡೆಂಗಿ ಒಮ್ಮೆ ಬಂದು ಹೋದ ನಂತರ ಮತ್ತೆ ಮರುಕಳಿಸಬಹುದು. ಒಂದಕ್ಕಿಂತ ಹೆಚ್ಚು ಬಾರಿ ಸೋಂಕು ಉಂಟಾಗಬಹುದು. ಆರಂಭದ ಹಂತದಲ್ಲಿಯೇ ಸರಿಯಾದ ಆರೈಕೆ, ಚಿಕಿತ್ಸೆ ಮಾಡಿದಲ್ಲಿ ಗುಣವಾಗುತ್ತದೆ. ಡೆಂಗಿ ಸೋಂಕಿಗೀಡಾದವರಲ್ಲಿ ಅಪರೂಪದಲ್ಲಿ ಅಪರೂಪದ ಪ್ರಸಂಗಗಳಲ್ಲಿ ಮಾತ್ರ ಜೀವಕ್ಕೆ ಅಪಾಯ ಇರುತ್ತದೆ. ಡೆಂಗಿ ರಕ್ತಸ್ರಾವ ಲಕ್ಷಣ (DHF) ಮತ್ತು ಡೆಂಗಿ ಶಾಕ್‌ಸಿಂಡ್ರೋಮ್‌(DSF) ಉಂಟಾದಾಗ ತಕ್ಷಣ ಆಸ್ಪತ್ರೆಗೆ ಸೇರಿಸಬೇಕು. ಹಸುಗೂಸುಗಳು ಮತ್ತು ಮಕ್ಕಳು ಇಂತಹ ತೀವ್ರ ಸೋಂಕಿಗೆ ಹೆಚ್ಚು ಈಡಾಗುತ್ತಾರೆ. ಡೆಂಗಿಗೆ ಯಾವುದೇ ಭಯ, ಆತಂಕ ಬೇಡ.

ಬಿಸಿ ಆಹಾರ ಅಗತ್ಯ
ಡೆಂಗಿ ರೋಗಿಗಳು ಬಿಸಿಯಾದ ಆಹಾರವನ್ನೇ ಸೇವಿಸಬೇಕು. ಅನ್ನ, ಮುದ್ದೆ, ಗಂಜಿ, ಇಡ್ಲಿ, ಬಿಸಿಯಾಗಿರುವಾಗಲೇ ತಿನ್ನಬೇಕು. ತಂಗಳು ಆಹಾರ, ಫ್ರಿಜ್‌ನಲ್ಲಿಟ್ಟ ಆಹಾರ, ತಂಪು ಪಾನೀಯ ಸೇವನೆ ಬೇಡವೇ ಬೇಡ. ಗಂಜಿ, ಕಷಾಯ, ಮೋಸಂಬಿ, ಕಿತ್ತಲೆ, ಸೇಬು, ಸಪೋಟ ಮುಂತಾದ ಹಣ್ಣಿನ ರಸ, ಎಳನೀರು ಹೆಚ್ಚು ಸೇವಿಸಬೇಕು. ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು. ಕುಡಿಯುವ ನೀರನ್ನು ಕಾಯಿಸುವಾಗ ತೆಳ್ಳಗಿನ ಶುಂಠಿ ತುಂಡುಗಳು ಇಲ್ಲವೇ ತುಳಸಿ ಎಲೆ ಹಾಕಿ ಕುದಿಸುವುದು ಉತ್ತಮ.

ನೀರನ್ನು ಕನಿಷ್ಠ 10 ನಿಮಿಷ ಕುದಿಸಬೇಕು. ಜೇನುತುಪ್ಪ ಬೆರೆಸಿದ ನೀರು ಕುಡಿಯುವುದು ಒಳ್ಳೆಯದು. ದನಿಯಾ, ಜೀರಿಗೆ, ಕಾಳು ಮೆಣಸು, ಜೇಷ್ಠಮಧು, ಹಿಪ್ಪಲಿಗಳನ್ನು ಪುಡಿ ಮಾಡಿಟ್ಟುಕೊಂಡು ಕಷಾಯ ತಯಾರಿಸಿ ಕುಡಿಯಬೇಕು. ಸುಲಭವಾಗಿ ಜೀರ್ಣವಾಗುವ ತರಕಾರಿ, ಸೊಪ್ಪು, ಹೆಸರುಬೇಳೆಯಿಂದ ತಯಾರಿಸಿದ ಆಹಾರ ಸೇವನೆ ಒಳ್ಳೆಯದು. ಟೀ ತಯಾರಿಸುವಾಗ ಶುಂಠಿ, ನಿಂಬೆಹಣ್ಣು, ತುಳಸಿಬೀಜ ಬೆರೆಸಿ ತಯಾರಿಸಬೇಕು.

ಡೆಂಗಿ ನಿಯಂತ್ರಣಕ್ಕೆ ಸಾಮೂಹಿಕ ಪ್ರಯತ್ನ
ಸೊಳ್ಳೆಗಳ ವೃದ್ಧಿಯನ್ನು ನಿಯಂತ್ರಿಸುವುದರ ಮೂಲಕ ಔಷಧ ಚಿಕಿತ್ಸೆ ಮತ್ತು ಆರೋಗ್ಯಕರ ಆಹಾರ ಕ್ರಮ ಅನುಸರಿಸಿದಲ್ಲಿ ಡೆಂಗಿ ಬಾಧೆಯನ್ನು ಕನಿಷ್ಠಗೊಳಿಸಲು ಸಾಧ್ಯ. ಡೆಂಗಿ ನಿಯಂತ್ರಣಕ್ಕೆ ವ್ಯಕ್ತಿ, ಕುಟುಂಬ ಮಾತ್ರವಲ್ಲ ಇಡೀ ಸಮುದಾಯವೇ ಸಜ್ಜಾದಲ್ಲಿ ತಡೆಗಟ್ಟಲು ಸಾಧ್ಯವಿದೆ. ಇದಕ್ಕೆ ಸರ್ಕಾರ ಮತ್ತು ಜನತೆ ಇಬ್ಬರೂ ಕೈಜೋಡಿಸಬೇಕು.

ಸೊಳ್ಳೆಗಳ ನಿಯಂತ್ರಣ: ಪ್ರತಿಬಾರಿ ಮಳೆಯಾದಾಗಲೂ ಮನೆಯ ಸುತ್ತಮುತ್ತಲಿನ ಮತ್ತು ಮನೆಯ ಛಾವಣಿಯಲ್ಲಿರುವ ಹಳೆಯ ಬಾಟಲಿಗಳು, ಟೈರುಗಳು, ತೆಂಗಿನಚಿಪ್ಪು, ಹೂಕುಂಡ, ಡಬ್ಬಗಳು, ಬಕೆಟ್‌, ಬ್ಯಾರೆಲ್ಲುಗಳಲ್ಲಿ ನೀರು ನಿಲ್ಲದಂತೆ ಮಾಡಿ ಸ್ವಚ್ಛಗೊಳಿಸಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಬೇವಿನಿಂದ ತಯಾರಾದ ಕೀಟನಾಶಕಗಳನ್ನು ಸಿಂಪಡಿಸಬೇಕು. ಪುಟ್ಟ ಕೊಳ, ಬಾವಿಗಳಲ್ಲಿ ಸೊಳ್ಳೆಗಾಗಿ ಪರಿವರ್ತಿತವಾಗುವ ಲಾರ್ವಾಗಳನ್ನು (ಮೊಟ್ಟೆಯ ನಂತರದ ರೂಪ) ತಿಂದುಹಾಕುವ ಗಪ್ಪಿ, ಗ್ಯಾಂಬೊಸಿಯಾದಂತಹ ಮೀನುಗಳನ್ನು ಬಿಡಬೇಕು.

ಮನೆಯ ಸುತ್ತಮುತ್ತ ಬೆಳೆಸಿದ ಗಿಡಗಂಟಿಗಳಲ್ಲಿ, ವಾತಾವರಣಗಳಲ್ಲಿ ಉಷ್ಣತೆ ಹೆಚ್ಚಿದಾಗ ಈ ಸೊಳ್ಳೆಗಳು ಆಶ್ರಯ ಪಡೆಯಬಹುದಾದ್ದರಿಂದ ಅವುಗಳನ್ನು ಚಿಕ್ಕದಾಗಿ ಟ್ರಿಮ್‌ಮಾಡಿಡಬೇಕು. ಮನೆಯ ಸುತ್ತಮುತ್ತ ಗುಂಡಿಗಳಿದ್ದಲ್ಲಿ ಮುಚ್ಚಬೇಕು. ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಸಂಪು ಮತ್ತು ಬಾವಿಗಳಿಗೆ ಭದ್ರವಾದ ಮುಚ್ಚಳ ಮುಚ್ಚಬೇಕು. ಬೇಕಾದಾಗ ತೆಗೆದು ಮುಚ್ಚುವಂತಹ ವ್ಯವಸ್ಥೆ ಇರಬೇಕು.

ನೀರಿನ ಟ್ಯಾಂಕನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ಅದಕ್ಕೂ ಭದ್ರವಾದ ಮುಚ್ಚಳವಿರಬೇಕು. ಕುಡಿಯುವ ನೀರಿನ ಶೇಖರಣೆ ಹೊರತುಪಡಿಸಿ ಸಿಮೆಂಟ್‌ತೊಟ್ಟಿ, ಡ್ರಮ್ಮು, ಬ್ಯಾರೆಲ್‌ಮತ್ತು ಇತರ ಗೃಹೋಪಯೋಗಿ ನೀರಿನ ಶೇಖರಣೆಯಲ್ಲಿ ಈಡಿಸ್‌ಸೊಳ್ಳೆಯ ಉತ್ಪತ್ತಿ ತಡೆಗಟ್ಟಲು ಟೆಮ್‌ಫಾಸ್‌ದ್ರಾವಣವನ್ನು 50% ಈ.ಸಿ. ಎಂಬ ಲಾರ್ವಾನಾಶಕ ದ್ರಾವಣವನ್ನು (Temphos 50% EC) ಉಪಯೋಗಿಸಬಹುದು.

ಸೊಳ್ಳೆ ಬಾರದಂತೆ ಕಿಟಕಿ, ಬಾಗಿಲುಗಳಿಗೆ ಸೊಳ್ಳೆಪರದೆಯ ಸ್ಕ್ರೀನ್‌ಅಳವಡಿಸಬೇಕು. ಈ ಸೊಳ್ಳೆ ಹಗಲುಹೊತ್ತಿನಲ್ಲಿಯೇ ಕಚ್ಚುವುದರಿಂದ ಹಗಲು ಹೊತ್ತು ಸೊಳ್ಳೆ ನಿರೋಧಕ ಬಳಸಬೇಕು. ಸೊಳ್ಳೆ ಪರದೆ ಬಳಕೆಯೊಂದಿಗೆ, ಕೈ ಮುಚ್ಚುವಂತೆ ತುಂಬು ತೋಳಿನ ಉಡುಪು ಧರಿಸಬೇಕು.

ಕಚೇರಿಗಳಲ್ಲಿ ಮುಂದುಗಡೆ ಹುಲ್ಲುಹಾಸು ಇದ್ದಲ್ಲಿ, ಅಲ್ಲಲ್ಲಿ ನೀರು ನಿಲ್ಲುವಂತಿದ್ದಲ್ಲಿ ಆ ನೀರು ಹೋಗಲು ದಾರಿ ಮಾಡಬೇಕು. ಹುಲ್ಲುಹಾಸಿಗೆ ನೀರು ಹನಿಸುವಾಗ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಮನೆಯ ಅಂಗಳದಲ್ಲಿ ನಿಂಬೆಹುಲ್ಲು ಮತ್ತು ತುಳಸಿ ಗಿಡಗಳನ್ನು ಬೆಳೆಸಬೇಕು.

ಈ ಗಿಡಗಳು ಪರಿಸರಮಾಲಿನ್ಯ ನಿವಾರಕಗಳಂತೆ ಕಾರ್ಯ ನಿರ್ವಹಿಸುತ್ತವೆ. ಮಳೆಗಾಲದಲ್ಲಿ ಈ ರೀತಿಯ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡಲ್ಲಿ ಡೆಂಗಿ ಬಾರದಂತೆ ತಡೆಗಟ್ಟಲು ಸಾಧ್ಯವಿದೆ.

ಮಳೆಗಾಲದಲ್ಲಿ ಪ್ರತಿದಿನ ಖಾಲಿ ಹೊಟ್ಟೆಗೆ ಬೆಳಿಗ್ಗೆ ಒಂದು ಚಮಚೆ ಶುದ್ಧ ಅರಿಶಿಣಪುಡಿ, ನೆಲ್ಲಿಕಾಯಿ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ ಸೇವನೆ ಮಾಡಿದಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.