ADVERTISEMENT

ಪಾಪಿಯಲ್ಲ,ಪವಿತ್ರಾತ್ಮರು ನಾವು!

ಡಿ.ಎಂ.ಹೆಗಡೆ
Published 28 ಫೆಬ್ರುವರಿ 2017, 19:30 IST
Last Updated 28 ಫೆಬ್ರುವರಿ 2017, 19:30 IST
ಪಾಪಿಯಲ್ಲ,ಪವಿತ್ರಾತ್ಮರು ನಾವು!
ಪಾಪಿಯಲ್ಲ,ಪವಿತ್ರಾತ್ಮರು ನಾವು!   
ಜಗತ್ತಿನಲ್ಲಿ ಕೋಟ್ಯಂತರ ಜೀವಜಂತುಗಳಿವೆ. ಇಷ್ಟೆಲ್ಲ ಪ್ರಾಣಿ-ಪಕ್ಷಿಗಳಲ್ಲಿ ಮನುಷ್ಯರು ಶ್ರೇಷ್ಠರು. ಮನುಷ್ಯರಿಗೆ ಮೆದುಳು ವಿಕಾಸಗೊಂಡಿದೆ. ನಕ್ಕು, ನಗಿಸುವ ಶಕ್ತಿ ಇದೆ. ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡುತ್ತಾರೆ. ಕನಸು ಕಾಣುತ್ತಾರೆ. ಕನಸುಗಳನ್ನು ನನಸು ಮಾಡಲಿಕ್ಕೆ ಶ್ರಮಿಸುತ್ತಾರೆ. ಹೊಸತನ್ನು ಸೃಷ್ಟಿಸುತ್ತಾರೆ. ಇತಿಹಾಸವನ್ನು ನಿರ್ಮಿಸುತ್ತಾರೆ. ಹಣ, ಹೆಸರುಗಳನ್ನು ಗಳಿಸುತ್ತಾರೆ. ಗಳಿಸಿದ್ದನ್ನು ಕೂಡಿಡುತ್ತಾರೆ. ಅದು ಸಾಮಾನ್ಯ ಮನುಷ್ಯರಾದ ನಮಗೆಲ್ಲ ತಿಳಿದ ವಿಚಾರ. ಇವೆಲ್ಲದರ ಜೊತೆಗೆ ಮನುಷ್ಯರು ಪವಿತ್ರರು ಎಂದು ಎಷ್ಟೋ ಜ್ಞಾನಿಗಳು ಘೋಷಿಸಿದ್ದಾರೆ. ಮನುಷ್ಯರೆಲ್ಲರೂ ಸೃಷ್ಟಿಕರ್ತನ, ಎಂದರೆ ದೇವರ ಅಂಶ ಎಂದು ಹೇಳಿದವರರೂ ಹಲವರಿದ್ದಾರೆ. ನಮ್ಮ ಉಪನಿಷತ್ತುಗಳು ಮನುಷ್ಯನ ಶ್ರೇಷ್ಠತೆಯನ್ನು ಸಾರಿ ಸಾರಿ ಹೇಳಿವೆ. ‘ಅಮೃತಪುತ್ರರೇ..!’ ಎಂದು ಉದ್ಗರಿಸಿವೆ. 
 
ಇವೆಲ್ಲವೂ ನಿಜ. 
ಹಿರಿಯರು, ಸತ್ಪುರುಷರು, ಸಂತರು, ಜ್ಞಾನಿಗಳು ಹೇಳಿರುವುದು ನಮಗೆ ಗೊತ್ತಿದ್ದರಷ್ಟೇ ಸಾಲದು. ‘ನಾನು ಪವಿತ್ರ’ ಎಂದು ನಾವು ಮೊದಲು ನಂಬಬೇಕು. ಆದರೆ ಹಾಗೆ ನಂಬಲಿಕ್ಕೆ ನಾವೇ ಕಸಿವಿಸಿಪಡುತ್ತೇವೆ. ಪವಿತ್ರರು ಎಂದು ಎದೆಯುಬ್ಬಿಸಿ ಹೇಳಿಕೊಳ್ಳಲಿಕ್ಕೆ ನಾಚಿಕೆ ಪಡುತ್ತೇವೆ. ಸಂಶಯಪಡುತ್ತೇವೆ. ‘ಅವರಿಗಿಂತ ನಾನು ಕಡಿಮೆ’ ಎನ್ನುವ ಕೀಳರಿಮೆಯಲ್ಲಿ ಕೊರಗುತ್ತೇವೆ. ನಾವೆಲ್ಲರೂ ಒಂದೇ. ನಾವೆಲ್ಲರೂ ಪವಿತ್ರರು – ಎಂದು ಒಪ್ಪಿಕೊಳ್ಳುವುದಕ್ಕೆ ಹಿಂಜರಿಯುತ್ತೇವೆ. ಎಲ್ಲರೊಂದಿಗಿದ್ದು ಎಲ್ಲರಿಗಿಂತಲೂ ಭಿನ್ನವಾಗಿರುವುದಕ್ಕೆ ಬಯಸುತ್ತೇವೆ.  
 
‘ನಾವೆಂತಹ ಪವಿತ್ರರು ಮಾರಾಯರೇ, ನೀವೊಳ್ಳೇ ಕತೆ ಹೇಳ್ತೀರಿ! ನಾವು ಪಾಪಿಗಳು! ಇಲ್ಲಿ ಹುಟ್ಟಿದ ತಪ್ಪಿಗೆ ಎಷ್ಟೆಲ್ಲ ಕಷ್ಟಪಡುತ್ತಿದ್ದೇವೆ. ಹೀಗೆಲ್ಲ ಕಷ್ಟ – ನಷ್ಟ ಅನುಭವಿಸುವುದಕ್ಕಾ ನಾವು ಹುಟ್ಟಿರುವುದು’ ಎಂದು ಗೋಳಾಡುತ್ತೇವೆ. ನಾವು ಹುಟ್ಟಿದ್ದರಿಂದ ಯಾರಿಗೇನು ಮಹಾಪ್ರಯೋಜನವಾಗಿದೆ  ಎಂದೋ, ಅಕಸ್ಮಾತ್ ನಾವು ಹುಟ್ಟದೇ ಇರುತ್ತಿದ್ದರೆ ಜಗತ್ತಿಗೇನು ನಷ್ಟವಾಗುತ್ತಿತ್ತು, ಎಂದೋ ಯೋಚಿಸುತ್ತೇವೆ, ವಾದಿಸುತ್ತೇವೆ. ‘ಆದರೂ ಬದುಕಿದು ಜಟಕಾಬಂಡಿ, ವಿಧಿಯದರ ಸಾಹೇಬ’ ಎಂದುಕೊಂಡು ಬದುಕುತ್ತೇವೆ. ಕಳೆದು ಹೋದ ನೆನ್ನೆಗಳಿಗಾಗಿ ಮರುಗುತ್ತೇವೆ. ಬರಲಿರುವ ನಾಳೆಗಳಿಗಾಗಿ ಹಪಾಹಪಿಸುತ್ತೇವೆ. ಇನ್ನೂ ಕಾಣದ ನಾಳೆಗಳಲ್ಲಿ ನನಸಾಗುತ್ತವೆ ಎನ್ನುವ ನಂಬಿಕೆಯಲ್ಲಿ ನಮ್ಮ ಕನಸುಗಳನ್ನು ಸಾಕುತ್ತೇವೆ. 
 
ನಾವು ಮನುಷ್ಯರ ಹಾಗೆಯೇ ಬದುಕುತ್ತೇವೆ. 
ತಾನು ಪವಿತ್ರಾತ್ಮನು ಎಂದೂ, ತನ್ನ ದೇಹದೊಳಗಿನ ಚೈತನ್ಯಶಕ್ತಿ ಬೆಳಕಿನಂತೆ, ಗಾಳಿಯಂತೆ, ನೀರಿನಂತೆ ಪರಮ ಪವಿತ್ರ ಎಂದೂ ನಂಬುವುದಕ್ಕೆ ಆಗದಷ್ಟು ನಮ್ಮ ಮನಸ್ಸು ಮಲಿನಗೊಂಡಿದೆ. ಆಸೆ, ದ್ವೇಷ, ಅಸೂಯೆ, ಕೋಪ, ತಾಪಗಳಿಂದ ನಮ್ಮನ್ನು ನಾವು ಕಲುಷಿತಗೊಳಿಸಿಕೊಂಡಿದ್ದೇವೆ. ನಾವು ಮಾಯೆಯ ಅಧೀನದಲ್ಲಿ ಇದ್ದೇವೆ. ಹಾಗಾಗಿಯೇ ನಾವು ನಮ್ಮನ್ನು ಪವಿತ್ರರು ಎಂದು ಹೇಳಿಕೊಳ್ಳಲಿಕ್ಕೆ ಹಿಂಜರಿಯುತ್ತೇವೆ. ನಾವು ಯಾರೆನ್ನುವುದನ್ನು ನಮಗೆ ತಿಳಿಸಿಕೊಡಲಿಕ್ಕೆ ಶತಮಾನಗಳಿಂದಲೂ ಬಹಳಷ್ಟು ಪ್ರಯತ್ನಗಳು ನಡೆಯುತ್ತಲೇ ಬಂದಿವೆ. ಮಾಯೊಳಗಿದ್ದುಕೊಂಡೇ ಮಾಯಾಲೋಕದಿಂದ ಹೊರಗೆ ಹೋಗಲಿಕ್ಕೆ ಪ್ರಯತ್ ನಮಾಡಬೇಕೆನ್ನುವ ತಂತ್ರಗಳನ್ನು ಸಂಶೋಧಿಸುತ್ತಲೇ ಬಂದಿದ್ದಾಗಿದೆ. 
 
‘ನೀವು ಪಾಪಿಗಳಲ್ಲ. ನೀವು ಅಮೃತಪುತ್ರರು. ದೇವಸಂತಾನ. ಮರುಗಬೇಡಿ. ಜಾಗೃತರಾಗಿ. ನಿಮ್ಮ ಅಂತರಂಗದಲ್ಲಿ ಅರಿವಿನ ಬೆಂಕಿಯನ್ನು ಹೊತ್ತಿಸಿ. ಆ ಬೆಳಕಿನಲ್ಲಿ ನಿಮ್ಮ ನಿಜತ್ವವನ್ನು ಕಂಡುಕೊಳ್ಳಿ. ಮಾಯೆಯ ಪಾಶದಿಂದ ಮುಕ್ತರಾಗಿ’ – ಎಂದು ಅನೇಕಾನೇಕ ಸಾಧಕರು ಮನುಕುಲಕ್ಕೆ ಜ್ಞಾನದ ಬೆಳಕನ್ನು ಕೊಡುವ ಕೆಲಸವನ್ನು ಮಾಡಿದ್ದಾರೆ. ಯಾರೇ ಬಂದು ಬೆಳಕನ್ನು ಕೊಟ್ಟರೇನಂತೆ, ನಾವು ಕಣ್ಣು ಬಿಡದಿದ್ದರೆ ನಮಗೆಲ್ಲಿಯ ಬೆಳಕು ಕಂಡೀತು? ನಮಗೆಲ್ಲಿಯ ದಾರಿ ಕಂಡೀತು? ಕೆಲವೊಮ್ಮೆ ನಾವು ಜಾಣ ಕುರುಡರಂತೆ ಇರುತ್ತೇವೆ. ಕೆಲವೊಮ್ಮೆ ನಾವು ಜಾಣಕಿವುಡರಂತೆಯೂ ಇರುತ್ತೇವೆ. ವಾಸ್ತವದಲ್ಲಿ ನಾವು ಜಾಣರಾಗಿರುವುದಿಲ್ಲ. ಅದೇ ಈ ಜಗದ ಸೋಜಿಗ. ನಮಗೆ ನಾವು ಅಪರಿಚಿತರಾಗಿಯೇ ಉಳಿದುಬಿಡುತ್ತೇವೆ. ಹಾಗಿರಲಿಕ್ಕಾಗಿಯೇ ತರಬೇತಿ ಪಡೆದುಕೊಂಡವರಂತೆ ಇದ್ದುಬಿಡುತ್ತೇವೆ. ಸಂಸಾರವೆಂದರೆ ಅದು ಶೋಕಸಾಗರ ಅಂತಲೇ ನಂಬಿಕೊಂಡಿರುತ್ತೇವೆ. 
 
ಆದರೆ, ನಾವು ನೀವು – ಎಲ್ಲರೂ ಇರಬೇಕಾಗಿರುವುದು ಮತ್ತು ಬದುಕಬೇಕಾಗಿರುವುದು ಹಾಗಲ್ಲ. ಭೂಮಿಯ ಮೇಲೆ ಮನುಷ್ಯರು ಹೇಗೆ ಬದುಕಬೇಕು ಎನ್ನುವುದನ್ನು ಶತಮಾನದ ಹಿಂದೆಯೇ ವಿಶ್ವಮಾನವ ಸ್ವಾಮಿ ವಿವೇಕಾನಂದರು ಸ್ಪಷ್ಟವಾಗಿ ಹೇಳಿದ್ದಾರೆ: ‘ನೀವು ಪಾಪಿಗಳಲ್ಲ. ನೀವು ಪವಿತ್ರರು. ನೀವು ದುರ್ಬಲರಲ್ಲ. ನೀವು ಬಲಿಷ್ಠರು. ನೀವು ಹೇಡಿಗಳಲ್ಲ. ನೀವು ವೀರರು’. ಆದರೆ, ನೀವು ಅದನ್ನು ನಂಬಬೇಕು. ನಿಮ್ಮನ್ನು ನೀವು ಏನೆಂದು ನಂಬಿರುತ್ತೀರೋ ನೀವು ಅದೇ ಆಗಿರುತ್ತೀರಿ ಎಂದೂ ಅವರು ಎಚ್ಚರಿಸಿದ್ದಾರೆ. 
 
ಅಲ್ಲಿಯೇ ನಮ್ಮ ಸಮಸ್ಯೆ ಇರುವುದು.
ನಾವು ಏನನ್ನು ನಂಬುತ್ತೇವೆಯೋ ಅದರಲ್ಲಿಯೇ ನಮ್ಮ ಸಮಸ್ಯೆ ಇರುವುದು. 
 
ಶತಮಾನಗಳಿಂದಲೂ ನಮ್ಮನ್ನು ನಾವು ಪಾಪಿಗಳೆಂದೂ, ಅಶಕ್ತರೆಂದೂ, ದುರ್ಬಲರೆಂದೂ, ಅಜ್ಞಾನಿಗಳೆಂದೂ, ಗುಲಾಮರೆಂದೂ ನಂಬಿಕೊಂಡಿದ್ದೇವೆ. ಅಥವಾ ಹೀಗೆಂದು ನಮ್ಮನ್ನೆಲ್ಲ ನಂಬಿಸಿ ಬೆಳೆಸಲಾಗುತ್ತಿದೆ. ಪಾಪಮಾಡಲಿಕ್ಕಾಗಿಯೇ, ಹಿಂಸೆಮಾಡಲಿಕ್ಕಾಗಿಯೇ, ದುಃಖಪಡಲಿಕ್ಕಾಗಿಯೇ, ನಾವೆಲ್ಲರೂ ಬದುಕಿರುವುದು ಎಂದೂ ನಂಬಿಸಲಾಗುತ್ತಿದೆ. ಯಾವುದೋ ಅಸ್ಪಷ್ಟ ಕಾರಣಕ್ಕಾಗಿ ಮಾನವರನ್ನು ಕೊಲ್ಲುವುದಕ್ಕಾಗಿಯೋ, ನಮ್ಮನ್ನು ನಾವು ಕೊಂದುಕೊಳ್ಳುವುದಕ್ಕಾಗಿಯೋ ಹುಟ್ಟಿರುವುದು ಎಂದು ಬೋಧಿಸಲ್ಪಡುತ್ತಿದ್ದೇವೆ.  ನಾವು ಅದನ್ನು ನಂಬುತ್ತಿದ್ದೇವೆಯೇ ಹೊರತು ನಮ್ಮನ್ನು ನಾವು ಪವಿತ್ರರೆಂದೂ ಪುಣ್ಯಾತ್ಮರೆಂದೂ ಬಲಿಷ್ಠರೆಂದೂ ನಂಬಲಾರೆವು. 
 
ಅದೇ ನಮ್ಮೆಲ್ಲರ ನಿಜವಾದ ಸಮಸ್ಯೆ. 
ನಾವು ಪಾಪಿಗಳೆಂತಲೂ, ನಮ್ಮಂತಿರುವವರೆಲ್ಲರೂ ಪಾಪಿಗಳೆಂತಲೂ ನಂಬಿಕೊಂಡು ಎಲ್ಲರೊಟ್ಟಿಗೆ ನರಳುತ್ತಿದ್ದೇವೆ. ನರಳುತ್ತ ಬದುಕುವುದಕ್ಕಾಗಿಯೇ ಇರುವುದು ಎಂದೂ ನಂಬಿಕೊಂಡಿದ್ದೇವೆ. ನಾವು ಹೀಗಿರುವುದಕ್ಕೆ ನಮ್ಮ ಅಜ್ಞಾನವೇ ಕಾರಣ ಎಂದು ಸ್ವಾಮಿ ವಿವೇಕಾನಂದರು ಸ್ಪಷ್ಟವಾಗಿಯೇ ಹೇಳಿದ್ದಾರೆ. ‘ನೀವು ಅಶಕ್ತರಲ್ಲ, ನಿಜಕ್ಕೂ ನೀವು ಶಕ್ತಿವಂತರು. ನೀವು ಅಶಕ್ತರೆಂದು ನಂಬಬೇಡಿ. ನೀವು ಶಕ್ತಿವಂತರೆನ್ನುವುದನ್ನು ನಂಬಿ. ನಿಮ್ಮೊಳಗಿನ ಪವಿತ್ರತೆಯನ್ನು ನಂಬಿ.  ನಿಮ್ಮಲ್ಲಿರುವ ಪೌರುಷವನ್ನು ನಂಬಿ. ನಿಮ್ಮೊಳಗಿನ ಪಾವಿತ್ರ್ಯವನ್ನು ನೋಡಿಕೊಳ್ಳಿ. ನಿಮ್ಮನ್ನು ನೀವು ನಂಬಿ’ ಎಂದು ಪದೇ ಪದೇ ಹೇಳಿದ್ದಾರೆ. ಜಗತ್ತಿನ ಜನರನ್ನು ಬೆಳಕಿನೆಡೆಗೆ ಕರೆದುಕೊಂಡು ಬರುವ ಪ್ರಯತ್ನವನ್ನು ಮಾಡಿದ್ದಾರೆ. 
 
ನಾವು ನಂಬಬೇಕಾಗಿದೆ. 
ಅವರ ಉಪದೇಶಾಮೃತವನ್ನು ಪರೀಕ್ಷಿಸುವುದಕ್ಕಾದರೂ, ಅವರು ಹೇಳಿರುವುದನ್ನು ನಂಬಬೇಕು. ನಮ್ಮನ್ನು ನಾವು ನಂಬಬೇಕು.  ಅಂತಹ ನಂಬಿಕೆಯಿಂದಾಗಬಹುದಾದ ಅದ್ಭುತ ಅನುಭವಗಳನ್ನು ಅನುಭವಿಸಲಿಕ್ಕಾದರೂ ನಾವು ನಮ್ಮನ್ನು ನಂಬುವುದನ್ನು ಆರಂಭಿಸಬೇಕು. 
 
ಹೊಸದಾಗಿ ನಮ್ಮನ್ನು ನಾವು ನೋಡಬೇಕು. ನಮ್ಮೊಳಗಿನ ಚೈತನ್ಯವನ್ನು ಕಂಡುಕೊಳ್ಳಬೇಕು. ನಮ್ಮ ಮನಸ್ಸಿನ ಮಾತುಗಳಿಗೆ ನಾವು ಕಿವಿಯಾಗಬೇಕು. ನಮ್ಮ ಅಂತರಂಗದ ಬೇಕು–ಬೇಡಗಳನ್ನು ಗಮನಿಸಬೇಕು. ನಮ್ಮ ಜೊತೆಗೆ ನಾವಿರುವುದನ್ನು ಅಭ್ಯಾಸಮಾಡಿಕೊಳ್ಳಬೇಕು. ಮನಸ್ಸು ಮತ್ತು ಶರೀರದ ಅವಿನಾಭಾವ ಸಂಬಂಧವನ್ನು ಕಂಡುಕೊಳ್ಳಬೇಕು. ನಮ್ಮ ಮನಸ್ಸಿನ ಆಲೋಚನಾಶಕ್ತಿಯು ನಮ್ಮದೇ ಶರೀರದ ಮೇಲೆ ಉಂಟುಮಾಡುವ ಪರಿಣಾಮಗಳನ್ನು ಗಮನಿಸುವುದನ್ನು ರೂಢಿಮಾಡಿಕೊಳ್ಳಬೇಕು. ನಮ್ಮ ಮನಸ್ಸು ಆರೋಗ್ಯದಿಂದ ಇರುವಷ್ಟು ಕಾಲವೂ ನಮ್ಮ ಶರೀರ ಆರೋಗ್ಯದಿಂದ ಇರುತ್ತದೆ. ಮನಸ್ಸು ಏರುಪೇರಾಗುತ್ತಿರುವಂತೆಯೇ, ಶರೀರದ ಆರೋಗ್ಯವೂ ಅಯೋಮಯವಾಗುವುದನ್ನು ಗಮನಿಸಬೇಕು. 
 
ನಾವೆಲ್ಲರೂ ಪವಿತ್ರರಾಗಿದ್ದೇವೆ. ಪವಿತ್ರತಾಯಿಯ ಮಕ್ಕಳಾಗಿದ್ದೇವೆ. ಪವಿತ್ರವಾದ ಜೀವಾತ್ಮದ ಅನುಭವಕ್ಕೆ ದೇಹವಾಗಿದ್ದೇವೆ.  ನಮ್ಮೊಳಗಿನ ಪರಿಶುದ್ಧತೆಯನ್ನು ಜಾಗೃತಗೊಳಿಸಿಕೊಂಡ ನಂತರ ಸಿಗಲಿರುವ ಜೀವನಾನುಭವವನ್ನು ಅನುಭವಿಸಲಿಕ್ಕಾಗಿಯೇ ನಾವು ನಮ್ಮನ್ನು ನಂಬಬೇಕಾಗಿದೆ. ನಾವು ಉಸಿರಾಡುವ ಗಾಳಿಯು ಕೇವಲ ಗಾಳಿಯಲ್ಲ. ಅದು ಪರಮಪವಿತ್ರವಾದ ಪ್ರಾಣವಾಯುವಾಗಿದೆ. ನಾವು ಕುಡಿಯುವ ನೀರು ಪವಿತ್ರವಾದದ್ದಾಗಿದೆ. ನಾವು ತಿಂದ ಆಹಾರವನ್ನು ಜೀರ್ಣಿಸುವ ಶಕ್ತಿಯು ಪವಿತ್ರವಾದ ಅಗ್ನಿಯಾಗಿದೆ. ಹಾಗಾಗಿ ನಾವು ಅಶಕ್ತರೂ, ಅಪವಿತ್ರರೂ, ಪಾಪಿಗಳೂ ಆಗಿರಲಿಕ್ಕೆ ಸಾಧ್ಯವಿಲ್ಲ. 
 
ನನಗನ್ನಿಸುವ ಮಟ್ಟಿಗೆ, ನಮ್ಮೊಳಗಿನ ಪವಿತ್ರತೆಯನ್ನು ನಾವು ಒಪ್ಪಿಕೊಳ್ಳಬೇಕು. ಎಲ್ಲರೊಳಗಿನ ಪವಿತ್ರತೆಯನ್ನು ಒಪ್ಪಿಕೊಳ್ಳಬೇಕು. ನಂತರ ಎಲ್ಲರೊಳಗೊಂದಾಗುವ ಸಂತೋಷ ನಮ್ಮದಾಗುತ್ತದೆ. ನಮ್ಮೊಳಗಿನ ನೆಮ್ಮದಿ ನಮ್ಮ ಮನೋದೈಹಿಕ ಆರೋಗ್ಯವನ್ನು ಕಾಪಾಡುತ್ತದೆ. ಆರೋಗ್ಯವಂತ ಜನರಿಂದ ಆರೋಗ್ಯವಂತ ಸಮಾಜ ಅದರಿಂದ ಆರೋಗ್ಯವಂತ ಜನಜೀವನ ನಿರ್ಮಾಣವಾಗಲಿಕ್ಕೆ ಸಾಧ್ಯವಾಗುತ್ತದೆ.  
 
ಹಾಗಾಗಿ, ನಮಗೆಲ್ಲರಿಗೂ ನಮ್ಮೆಲ್ಲರೊಳಗಿನ ಶಾಂತಿ, ಶಕ್ತಿ, ಭಕ್ತಿ, ಪ್ರೀತಿ, ಪವಿತ್ರತೆಯ ಅರಿವಾಗಲಿ. ಎಲ್ಲರೂ ಎಲ್ಲರಲ್ಲಿಯೂ ಪ್ರೀತಿಯನ್ನು ಕಾಣುವಂತಾಗಲಿ. ಎಲ್ಲರೂ ಎಲ್ಲರನ್ನೂ ಪ್ರೀತಿಸುವಂತಾಗಲಿ. ಎಲ್ಲೆಡೆಯೂ ಪ್ರೀತಿಯೇ ಜೀವಿಸಲಿ. ಎಲ್ಲರ ಜೀವನವೂ ಪ್ರೀತಿಯಲ್ಲಿ ಅರಳುತ್ತ ಬೆಳೆಯಲಿ. 
 
**
ಸಂಶಯ ಬೇಡ...
* ನಾವು ಪವಿತ್ರರು ಎಂದು  ಹೇಳಿಕೊಳ್ಳಲಿಕ್ಕೆ ನಾವೇ ನಾಚಿಕೆ ಪಡುತ್ತೇವೆ. ಸಂಶಯಪಡುತ್ತೇವೆ. ‘ಅವರಿಗಿಂತ ನಾನು ಕಡಿಮೆ’ ಎನ್ನುವ ಕೀಳರಿಮೆಯಲ್ಲಿ ಕೊರಗುತ್ತೇವೆ. 
* ಕಳೆದು ಹೋದ ನೆನ್ನೆಗಳಿಗಾಗಿ ಮರುಗುತ್ತೇವೆ. ಬರಲಿರುವ ನಾಳೆಗಳಿಗಾಗಿ ಹಪಾಹಪಿಸುತ್ತೇವೆ. ಇನ್ನೂ ಕಾಣದ ನಾಳೆಗಳು ನಮ್ಮ ಕನಸನ್ನು ನನಸಾಗಿಸುತ್ತವೆ ಎಂಬ ಭಂಡ ಧೈರ್ಯದಲ್ಲೇ ಬದುಕುತ್ತೇವೆ.
* ಶತಮಾನಗಳಿಂದಲೂ ನಮ್ಮನ್ನು ನಾವು ಪಾಪಿಗಳೆಂದೂ ಅಶಕ್ತರೆಂದೂ ಅಜ್ಙಾನಿಗಳೆಂದೂ ಗುಲಾಮರೆಂದೂ ನಂಬಿಕೊಂಡಿದ್ದೇವೆ. ಹಾಗಾಗಿ ನಾಮ್ಮನ್ನು ನಾವು ಪವಿತ್ರರರೂ, ಪುಣ್ಯಾತ್ಮರು, ಬಲಿಷ್ಠರೂ ಎಂದು ನಂಬಲು ಹಿಂಜರಿಯುತ್ತೇವೆ. 
* ನಮ್ಮಲ್ಲಿರುವ ಅಜ್ಞಾನವೇ ನಮ್ಮನ್ನು ನಾವು ಪಾಪಿಗಳೆಂತಲೂ, ನಮ್ಮಂತಿರುವವರೆಲ್ಲರೂ ಪಾಪಿಗಳು ಎಂದು ನಂಬಿಕೊಂಡು ಬದುಕುವಂತೆ ಮಾಡಿದೆ. 
* ನಮ್ಮೊಳಗೆ ನಾವು ಹೊಸತನವನ್ನು ಕಂಡುಕೊಳ್ಳಬೇಕು. ನಮ್ಮೊಳಗಿನ ಚೈತನ್ಯವನ್ನು ನಾವು ಕಂಡುಕೊಳ್ಳಬೇಕು. ನಮ್ಮ ಮನಸ್ಸಿನ ಮಾತುಗಳಿಗೆ ನಾವು ಕಿವಿಯಾಗಬೇಕು. ನಮ್ಮ ಅಂತರಂಗದ ಬೇಕು–ಬೇಡಗಳನ್ನು ಗಮನಿಸಬೇಕು.
* ನಾವೆಲ್ಲರೂ ಪವಿತ್ರರಾಗಿದ್ದೇವೆ. ಪವಿತ್ರವಾದ ಜೀವಾತ್ಮದ ಅನುಭವಕ್ಕೆ ದೇಹವಾಗಿದ್ದೇವೆ.  ನಮ್ಮೊಳಗಿನ ಪರಿಶುದ್ಧತೆಯನ್ನು ಜಾಗೃತಗೊಳಿಸಿಕೊಂಡ ನಂತರ ಸಿಗಲಿರುವ ಜೀವನಾನುಭವವನ್ನು ಅನುಭವಿಸಲಿಕ್ಕಾಗಿಯೇ ನಾವು ನಮ್ಮನ್ನು ನಂಬಬೇಕಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.