ADVERTISEMENT

ಬಹೂಪಯೋಗಿ ಪಡುವಲಕಾಯಿ

ಮನೆ ಮದ್ದು

ಪ.ರಾಮಕೃಷ್ಣ
Published 17 ಏಪ್ರಿಲ್ 2015, 19:30 IST
Last Updated 17 ಏಪ್ರಿಲ್ 2015, 19:30 IST

ಪಡುವಲಕಾಯಿ ಒಂದು ವಿಶಿಷ್ಟ ಪರಿಮಳ ಬೀರುವ ತರಕಾರಿ. ನಿತ್ಯ ಬಳಕೆಯ ಎಲ್ಲ ಪದಾರ್ಥಗಳನ್ನೂ ಅದರಿಂದ ತಯಾರಿಸಿದರೆ ಸ್ವಾದಿಷ್ಟವಾಗಿರುತ್ತದೆ. ಕೇವಲ ಆಹಾರವಲ್ಲ, ಅದೊಂದು ಔಷಧವೂ ಹೌದು.

ಅದರಲ್ಲಿ ಮೆಗ್ನಿಷಿಯಂ, ಸುಣ್ಣ, ಗಂಧಕ, ಪೊಟಾಷಿಯಂ, ರಂಜಕ, ನಾರು, ಶರ್ಕರ, ಪಿಷ್ಟ, ತಾಮ್ರ, ಕಬ್ಬಿಣ, ಸತುಗಳಲ್ಲದೆ ಎ, ಸಿ, ಡಿ, ಇ ಮತ್ತು ಬಿ6, ಬಿ12 ಜೀವಸತ್ವಗಳು ಪುಷ್ಕಳವಾಗಿವೆ. ಇದರಲ್ಲಿ ಕ್ಯಾಲೊರಿಗಳಿದ್ದರೂ ದೇಹದ ತೂಕ ಹೆಚ್ಚಿಸದೆ ಅನಗತ್ಯ ಭಾರವನ್ನಿಳಿಸಲು ನೆರವಾಗುತ್ತವೆ. ಮಧುಮೇಹ ರೋಗಿಗಳಿಗೂ ಇದು ನಿಷಿದ್ಧವಲ್ಲ. ರಕ್ತದಲ್ಲಿರುವ ಸಕ್ಕರೆಯನ್ನು ಸಮಸ್ಥಿತಿಯಲ್ಲಿಡಲು ಅದು ಶಕ್ತವಾಗಿದೆ. ಮೈಯಲ್ಲಿ ಉರಿಯೇಳುವುದು, ಅಲರ್ಜಿಯ ನವೆ, ಕುರು ಇದೆಲ್ಲವನ್ನೂ ನಿವಾರಿಸಲು ಅದರ ಎಲೆಗಳನ್ನು ಕೊತ್ತಂಬರಿ, ನೆಲ್ಲಿಕಾಯಿ, ಹಿಪ್ಪಲಿ, ಶುಂಠಿ, ಕೊಡಸಿಗೆ ಬೀಜಗಳೊಂದಿಗೆ ತಯಾರಿಸಿದ ಕಷಾಯದ ಸೇವನೆಯಿಂದ ಪರಿಹರಿಸಬಹುದು.

ದೇಹಕ್ಕೆ ತಂಪು ಕೊಡುವ ಪಡುವಲ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ದೇಹದ ನಿರ್ಜಲೀಕರಣವನ್ನು ತಡೆಯುತ್ತದೆ. ಇದು ಸೌಮ್ಯ ವಿರೇಚಕವೂ ಹೌದು. ಅದರಲ್ಲಿರುವ ನಾರಿನ ಅಂಶ ಮಲಬದ್ಧತೆಯನ್ನು ನಿವಾರಿಸುತ್ತದೆ. ಕರುಳಿನ ಸೆಳೆತದಂತಹ ಸಮಸ್ಯೆ, ಹೊಟ್ಟೆಯುಬ್ಬರವನ್ನು ಪರಿಹಾರವಾಗಿ ಕರುಳಿಗೆ ಪೌಷ್ಟಿಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಇದರಿಂದ ಹೆಚ್ಚುತ್ತದೆ. ಮೂತ್ರವರ್ಧಕವೂ ಆಗಿರುವುದರಿಂದ ಮೂತ್ರಕೋಶವನ್ನು ಸರಿಯಾಗಿ ಕೆಲಸ ಮಾಡಲು ಅಣಿಗೊಳಿಸುತ್ತದೆ. ಕಾಮಾಲೆ ರೋಗಿಗಳಿಗೆ ಇದೊಂದು ಸಿದ್ಧೌಷಧ. ಅದನ್ನು ಅನ್ನದೊಂದಿಗೆ ಬೇಯಿಸಿ ತಿನ್ನಲು ಕೊಡುವುದು ಪಿತ್ಥಕೋಶದ ಶುದ್ಧಿಗೆ ಸಹಾಯಕ. ಇದರ ಹೋಳುಗಳನ್ನು ಹಾಲಿನಲ್ಲಿ ಅರೆದು ತಲೆಗೆ ಲೇಪಿಸಿ ತಾಸುಗಳ ಬಳಿಕ ಅತ್ತಿಮರದ ಹಸಿ ತೊಗಟೆಯ ಕಷಾಯದಿಂದ ಸ್ನಾನ ಮಾಡುವುದರಿಂದ ಹಳದಿ ಕಾಮಾಲೆಯ ಬಾಧೆಯಿಂದ ಮುಕ್ತವಾಗಬಹುದು ಎನ್ನುತ್ತದೆ ಆಯುರ್ವೇದ. ಪಡುವಲದ ಪಲ್ಯ ಕ್ಷಯರೋಗಿಗಳಿಗೆ ಔಷಧಿಯೂ ನಿಜ, ಶಕ್ತಿವರ್ಧಕವೂ ಹೌದು.

ಪಡುವಲ ಬಳ್ಳಿಯ ಎಲೆಗಳು ಔಷಧವೆಂಬುದು ಅನೇಕರಿಗೆ ತಿಳಿದಿರದು. ಇಂದ್ರಲುಪ್ತವೆಂಬ ಬಾಧೆಯಿಂದ ತಲೆಗೂದಲು ಉದುರಿ ಬೀಳುವುದು, ಬಾಲನರೆ, ತಲೆಹೊಟ್ಟು ಇತ್ಯಾದಿಗಳ ನಿವಾರಣೆಗೆ ಅದರ ಎಲೆಗಳ ರಸ ತೆಗೆದು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಕೆಲವೇ ದಿನಗಳಲ್ಲಿ ಸಮಸ್ಯೆ ನೀಗಿ ಸೊಂಪಾದ ಕೂದಲು ಬೆಳೆಯುತ್ತದೆಂದು ಶಾರ್ಙ್ಗಧರ ಸಂಹಿತೆ ಹೇಳುತ್ತದೆ. ಕೂದಲಿನ ಬೆಳವಣಿಗೆಗೆ ಬೇಕಾದ ಕೆರೊಟಿನ್ ಅಂಶ ಅದರಲ್ಲಿದೆ.

ಶ್ಲೇಷ್ಮ ಜ್ವರವನ್ನು ನಿವಾರಿಸಲು ಪಡುವಲದ ಎಲೆಗಳೊಂದಿಗೆ ಅಮೃತಬಳ್ಳಿ, ಆಡುಸೋಗೆ ಎಲೆ, ಬಜೆ, ತಾರೆಕಾಯಿ, ನೆಲ್ಲಿಕಾಯಿ, ಅಳಲೇಕಾಯಿಗಳನ್ನು ಕುಟ್ಟಿ ನೀರಿನಲ್ಲಿ ಕುದಿಸಿ ಅರ್ಕವನ್ನು ತಯಾರಿಸಬೇಕು. ಜೇನುತುಪ್ಪ ಬೆರೆಸಿ ಈ ಮದ್ದಿನ ಸೇವನೆ ಮಾಡಿದರೆ ಜ್ವರವು ಓಡಿ ಹೋಗುತ್ತದೆ. ಬಿಟ್ಟು ಬರುವ ಜ್ವರ, ಶ್ವಾಸನಾಳದ ಕಫ, ಲೋಳೆ, ಉಸಿರಾಟದ ತೊಂದರೆಗಳೂ ನೀಗುತ್ತವೆ. ಎಲೆಗಳ ರಸ ದಿನಕ್ಕೆರಡು ಚಮಚದಂತೆ ಕುಡಿಯುತ್ತಿದ್ದರೆ ಹೃದಯದ ನೋವು ತಗ್ಗುತ್ತದೆ. ಎದೆ ಬಡಿತದಲ್ಲಿ ಸ್ಥಿಮಿತ ಸಾಧಿಸಿ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ನರಮಂಡಲವನ್ನು ಶಾಂತವಾಗಿಡುತ್ತದೆ. ವಿಷಪಾನ ಮಾಡಿದವರಿಗೆ ವಾಂತಿ ಮಾಡಿಸಲು ಎಲೆಗಳ ರಸವನ್ನು ಕುಡಿಸಲಾಗುತ್ತದೆ. ಇದರ ಎಲೆಗಳು ಮತ್ತು ಕೊತ್ತಂಬರಿಯನ್ನು ಒಂದು ದಿನ ನೀರಿನಲ್ಲಿ ನೆನೆಸಿಟ್ಟು ಆ ನೀರಿನಿಂದ ಕುದಿಸಿದ ಕಷಾಯ ಸೇವನೆ ಕಾಮಾಲೆ, ಉರಿಯೂತ, ಪಿತ್ಥಜ್ವರಕ್ಕೆ ಸಿದ್ಧೌಷಧವೆನ್ನಲಾಗಿದೆ. ಎಲೆಗಳ ರಸವನ್ನು ದೇಹಕ್ಕೆ ಹಚ್ಚುವುದರಿಂದ ಜ್ವರ ಬಂದಾಗ ದೇಹ ತಂಪಾಗುತ್ತದೆ.

ಅತ್ಯಧಿಕ ಕ್ಯಾಲ್ಸಿಯಂ ಇರುವ ಪಡುವಲಕಾಯಿ ನಿತ್ಯ ಆಹಾರದೊಂದಿಗೆ ಜತೆಗೂಡಿದರೆ ಆರೋಗ್ಯವನ್ನು ರಕ್ಷಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.