ADVERTISEMENT

ಯಾವುದು ನಿಮಿರುವಿಕೆ ದೌರ್ಬಲ್ಯವಲ್ಲ?

ಡಾ.ಎಸ್.ಎಸ್.ವಾಸನ್
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ಡಾ. ಎಸ್.ಎಸ್. ವಾಸನ್, ಆ್ಯಂಡ್ರೊಲಜಿಸ್ಟ್ info@manipalfertility.com
ಡಾ. ಎಸ್.ಎಸ್. ವಾಸನ್, ಆ್ಯಂಡ್ರೊಲಜಿಸ್ಟ್ info@manipalfertility.com   

1) ಆಗಾಗ್ಗೆ ನಿಮಿರುವಿಕೆಯಲ್ಲಿ ತೊಂದರೆ
ಎಲ್ಲ ಪುರುಷರೂ ಜೀವನದಲ್ಲಿ ಕೆಲವೊಮ್ಮೆ ನಿಮಿರುವಿಕೆ ತೊಂದರೆ ಅನುಭವಿಸುತ್ತಾರೆ. ಹಾಗೆಂದು ಇದನ್ನು ನಿಮಿರುವಿಕೆ ದೌರ್ಬಲ್ಯ ಎಂದು ಪರಿಗಣಿಸಲು ಆಗುವುದಿಲ್ಲ. ವಿಪರೀತ ಶಾರೀರಿಕ ಅಥವಾ ದೈಹಿಕ ಶ್ರಮ, ಕಾಯಿಲೆಗಳು, ಮದ್ಯಪಾನ, ಮಾದಕವಸ್ತು ಸೇವನೆ, ಮಾನಸಿಕ ಒತ್ತಡಗಳು ನಿಮಿರುವಿಕೆಯನ್ನು ಪ್ರಭಾವಿಸುತ್ತವೆ.

2) ಸಂಭೋಗದ ಅವಧಿ
ಪುರುಷನಿಗೆ ಸಂಭೋಗದಲ್ಲಿ ಆಸಕ್ತಿಯಿದ್ದೂ ಶಿಶ್ನದ ಉದ್ರೇಕವನ್ನು ಕಾಪಾಡಿಕೊಳ್ಳಲಾಗದ ಸ್ಥಿತಿಯನ್ನು ನಿಮಿರುವಿಕೆ ದೌರ್ಬಲ್ಯ ಎನ್ನುತ್ತಾರೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಕೆಲವು ಪುರುಷರ ಸಂಭೋಗದ ಅವಧಿ ಕಡಿಮೆ ಇರುತ್ತದೆ. ಇದಕ್ಕೆ ಹಾರ್ಮೋನ್‌ಗಳ ಸ್ರವಿಸುವಿಕೆಯಲ್ಲಿ ಆಗುವ ತೊಂದರೆ ಮತ್ತು ಖಿನ್ನತೆ ಕಾರಣವಿರಬಹುದು. ಶಿಶ್ನದ ಉದ್ರೇಕಸ್ಥಿತಿಯನ್ನು ಹೆಚ್ಚು ಸಮಯ ಕಾಪಾಡಿಕೊಳ್ಳಲು ಆಗದಿರುವುದು ದೊಡ್ಡ ಸಮಸ್ಯೆ ಏನಲ್ಲ. ಅದನ್ನು ಗುಣಪಡಿಸಬಹುದು. ಹಾಗೆಂದು ಅದನ್ನು ನಿಮಿರುವಿಕೆ ದೌರ್ಬಲ್ಯ ಎಂದು ಪರಿಗಣಿಸಲು ಆಗುವುದಿಲ್ಲ.

3) ಸ್ಖಲನದ ಸಮಸ್ಯೆಗಳು
ಶಿಶ್ನದ ರಚನೆ ಮತ್ತು ಸಂವೇದನೆಯಲ್ಲಿ ಇರುವ ಸಮಸ್ಯೆಗಳಿಂದ ಸ್ಖಲನದಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. 40ರಿಂದ 70 ವರ್ಷ ವಯೋಮಾನದ ಶೇ. 10ರಷ್ಟು ಪುರುಷರಲ್ಲಿ ನಿಮಿರುವಿಕೆ ದೌರ್ಬಲ್ಯ ಸಾಮಾನ್ಯ. ವಯಸ್ಸು ಹೆಚ್ಚಿದಂತೆ ನಿಮಿರುವಿಕೆ ದೌರ್ಬಲ್ಯ ಕಾಣಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಹಾಗೆಂದು ಹೆಚ್ಚ ವಯಸ್ಸಾದ ಎಲ್ಲ ಪುರುಷರಲ್ಲಿಯೂ ಇದು ಕಾಣಿಸಿಕೊಳ್ಳಲೇಬೇಕು ಎಂದೇನಿಲ್ಲ.

ನಿಮಿರುವಿಕೆ ದೌರ್ಬಲ್ಯದ ಕಾರಣಗಳು
ಪುರುಷರಲ್ಲಿ ಸಶಕ್ತ ನಿಮಿರುವಿಕೆ ಸಾಧಿಸಲು ಈ ಮೂರು ಅಂಶಗಳು ಮುಖ್ಯ:
* ಶಿಶ್ನದಲ್ಲಿರುವ ನರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು.
* ಶಿಶ್ನದ ರಕ್ತಪರಿಚಲನೆ ಸಮರ್ಪಕವಾಗಿರಬೇಕು.
* ಮೆದುಳಿನಿಂದ ಸಂದೇಶಗಳು ಸಮರ್ಪಕವಾಗಿ ರವಾನೆಯಾಗಬೇಕು.
ಈ ಮೂರು ಅಂಶಗಳಲ್ಲಿ ಯಾವೊಂದು ಸರಿಯಾಗಿ ಇಲ್ಲದಿದ್ದರೂ ಪೂರ್ಣ ಪ್ರಮಾಣದ ಉದ್ರೇಕ ಸ್ಥಿತಿ ಮುಟ್ಟುವುದು ಸಾಧ್ಯವಾಗುವುದಿಲ್ಲ.

ಸಕ್ಕರೆ ಕಾಯಿಲೆಯಿಂದ ನಿಮಿರುವಿಕೆ ದೌರ್ಬಲ್ಯ
ಕಾಮೋದ್ರೇಕವಾಗಲು ಪುರುಷರಿಗೆ ಆರೋಗ್ಯಕರ ರಕ್ತನಾಳಗಳು, ನರಗಳು, ಪುರುಷ ಹಾರ್ಮೋನ್‌ಗಳು ಮತ್ತು ಲೈಂಗಿಕ ಆಸಕ್ತಿ ಇರಬೇಕು. ಸಕ್ಕರೆ ಕಾಯಿಲೆಯು ರಕ್ತನಾಳಗಳನ್ನು ಹಾಳು ಮಾಡುತ್ತದೆ. ಶಿಶ್ನದಲ್ಲಿರುವ ಸೂಕ್ಷ್ಮ ರಕ್ತನಾಳಗಳು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ. ಮೆದುಳಿನ ಸಂಪರ್ಕ ನರಗಳಿಗೂ ಸಕ್ಕರೆಕಾಯಿಲೆ ಧಕ್ಕೆ ತರುತ್ತದೆ. ಹೀಗಾಗಿ ಅನೇಕ ಸಂದರ್ಭಗಳಲ್ಲಿ ಮೆದುಳು ಲೈಂಗಿಕ ಆಸಕ್ತಿಯ ಸಂದೇಶ ರವಾನಿಸಿದರೂ ಶಿಶ್ನ ಅದಕ್ಕೆ ಸ್ಪಂದಿಸುವುದಿಲ್ಲ.

ಸಕ್ಕರೆಕಾಯಿಲೆಯು ಹೃದಯದ ಸಮಸ್ಯೆ ಮತ್ತು ರಕ್ತಪರಿಚಲನೆಯ ತೊಂದರೆಯನ್ನೂ ಉಂಟುಮಾಡುತ್ತದೆ. ಇದರಿಂದಾಗಿ ನಿಮ್ಮ ದೇಹದಲ್ಲಿ ಪುರುಷ ಹಾರ್ಮೋನ್‌ಗಳ ಸ್ರವಿಸುವಿಕೆ ಸಾಮಾನ್ಯ ಸ್ಥಿತಿಯಲ್ಲಿದ್ದರೂ, ನಿಮ್ಮ ಮನದಲ್ಲಿ ಲೈಂಗಿಕ ಆಸಕ್ತಿ ಇದ್ದರೂ ಶಿಶ್ನದ ಉದ್ರೇಕವನ್ನು ಸಾಕಷ್ಟು ಸಮಯ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಸಕ್ಕರೆಕಾಯಿಲೆ ಮತ್ತು ಸೆಕ್ಸ್: ಎಲ್ಲ ವಯಸ್ಸಿನ ಪ್ರೌಢರಲ್ಲಿ ಸೆಕ್ಸ್ ಎನ್ನುವುದು ಸಂಬಂಧದ ಅನಿವಾರ್ಯ ಅಂಗ. ಈಡೇರದ ಲೈಂಗಿಕ ಆಸಕ್ತಿಯು ಪಾಪಪ್ರಜ್ಞೆ ಮತ್ತು ತಿರಸ್ಕಾರದ ಭಾವವನ್ನು ಬೆಳೆಸುತ್ತದೆ. ಇದರಿಂದ ಸಂಬಂಧಗಳು ಹಾಳಾಗುತ್ತವೆ. ಎಲ್ಲರಲ್ಲೂ ಲೈಂಗಿಕ ಆಸಕ್ತಿ ಸಮಾನವಾಗಿ ಇರುವುದಿಲ್ಲ. ಕಾಲಕ್ಕೆ ತಕ್ಕಂತೆ ಆಸಕ್ತಿ ಮತ್ತು ಅಭಿರುಚಿಗಳೂ ಬದಲಾಗುತ್ತವೆ.

ಲೈಂಗಿಕ ಸಮಸ್ಯೆಗಳನ್ನು ಚರ್ಚಿಸುವುದು ಬಹಳ ಕಷ್ಟ. ಕಾರಣ ತಿಳಿಯದ ಸಂದರ್ಭದಲ್ಲಿಯಂತೂ ರೋಗಿಗಳು ವೈದ್ಯರೊಂದಿಗೆ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ. ಹೀಗಾಗಿ, ಲೈಂಗಿಕ ನಿರಾಸಕ್ತಿ ಅಥವಾ ದೌರ್ಬಲ್ಯದ ಕಾರಣವನ್ನು ಅರಿಯಲು ಸಮಸ್ಯೆಯ ಲಕ್ಷಣಗಳನ್ನು ತಿಳಿದುಕೊಳ್ಳುವುದು ಬಹುಮುಖ್ಯ. ಹೀಗಾದರೆ ಮಾತ್ರ ಸಮಸ್ಯೆಯನ್ನು ಗುರುತಿಸಲು, ಚರ್ಚಿಸಲು, ಚಿಕಿತ್ಸೆ ನೀಡಲು ಅಥವಾ ನಿರ್ವಹಿಸಲು ಸಾಧ್ಯವಾಗುತ್ತದೆ.

ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಪುರುಷರು ನಿಮಿರುವಿಕೆ ದೌರ್ಬಲ್ಯವನ್ನು ಅನುಭವಿಸುವ ಸಾಧ್ಯತೆ ಮೂರು ಪಟ್ಟು ಹೆಚ್ಚು. ಟೈಪ್ 2 ಸಕ್ಕರೆ ಕಾಯಿಲೆ ಪತ್ತೆಯಾದ 10 ವರ್ಷದ ಒಳಗೆ ಬಹುತೇಕ ಪುರುಷರು (ಶೇ. 50) ನಿಮಿರುವಿಕೆ ದೌರ್ಬಲ್ಯ ಅನುಭವಿಸುತ್ತಾರೆ.

ನಿಮಿರುವಿಕೆ ದೌರ್ಬಲ್ಯ ಸಕ್ಕರೆಕಾಯಿಲೆಯ ಲಕ್ಷಣವೇ?
ಸಕ್ಕರೆಕಾಯಿಲೆ ಮತ್ತು ನಿಮಿರುವಿಕೆ ದೌರ್ಬಲ್ಯ ಪ್ರತ್ಯೇಕ ಸ್ಥಿತಿಗಳು. ಆದರೂ, ಅವರೆಡೂ ಜೊತೆಜೊತೆಗೆ ಕಾಣಿಸಿಕೊಳ್ಳುವುದು ಸಾಮಾನ್ಯ. ಸಕ್ಕರೆಕಾಯಿಲೆಯನ್ನು ಅನುಭವಿಸುತ್ತಿರುವ ಪುರುಷರಲ್ಲಿಯೇ ನಿಮಿರುವಿಕೆ ದೌರ್ಬಲ್ಯ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. 45 ವರ್ಷ ದಾಟಿದ ಪುರುಷರಲ್ಲಿ ಕಾಣಿಸಿಕೊಳ್ಳುವ ನಿಮಿರುವಿಕೆ ದೌರ್ಬಲ್ಯ ಟೈಪ್ 2 ಸಕ್ಕರೆಕಾಯಿಲೆಯ ಲಕ್ಷಣ ಆಗಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.