ADVERTISEMENT

ರುಚಿಕರ ಕೀವಿ ಹಣ್ಣು

ಪ.ರಾಮಕೃಷ್ಣ
Published 29 ಸೆಪ್ಟೆಂಬರ್ 2015, 19:30 IST
Last Updated 29 ಸೆಪ್ಟೆಂಬರ್ 2015, 19:30 IST

ಕೀವಿ ಹಣ್ಣು ಚೀನಾದೇಶದಿಂದ ಭಾರತಕ್ಕೆ ಕಾಲಿಟ್ಟ ಮಧುರವಾದ ಫಲ. ಹಿಮಾಚಲ ಪ್ರದೇಶದಲ್ಲಿ ಅದರ ಕೃಷಿ ಅತ್ಯಂತ ಯಶಸ್ವಿಯಾಗಿದ್ದು ಜಮ್ಮು-ಕಾಶ್ಮೀರಕ್ಕೂ ಕಾಲಿರಿಸಿದೆ. ಮಾರುಕಟ್ಟೆಯಲ್ಲಿ ತುಂಬ ಬೇಡಿಕೆಯಿರುವ ಹಣ್ಣಿದು. ಎಲ್ಲೆಡೆಯೂ ಮಾರುಕಟ್ಟೆಯಲ್ಲಿ ಸಿಗುತ್ತದೆ.

ಇದರಲ್ಲಿ ಇತರ ಹಣ್ಣುಗಳಿಗಿಂತ ಹೆಚ್ಚು ಪೋಷಕಾಂಶ ಗಳಿವೆ ಎನ್ನುತ್ತಾರೆ ಆಹಾರ ತಜ್ಞರು. ಇದರಿಂದ ತಯಾರಾಗುವ ವೈನ್‌ಗೆ ಭಾರೀ ಬೇಡಿಕೆ ಇದೆ. ಸೌಂದರ್ಯ ಪ್ರಸಾಧನಗಳಲ್ಲೂ ಕೀವಿ ಹಣ್ಣನ್ನು ಬಳಸುತ್ತಾರೆ. ಅದರಲ್ಲಿ ಗುರುತಿಸಲ್ಪಟ್ಟ ಪೌಷ್ಟಿಕಾಂಶ ಗಳನ್ನು ಗಮನಿಸಿದರೆ ಅದು ರೂಪದರ್ಶಿಯರ, ಸಿರಿವಂತರ ಆಹಾರವೆಂಬ ಖ್ಯಾತಿಗೊಳಗಾಗಿದೆ.

ಕೀವಿ 6 ಸೆ. ಮೀ. ವ್ಯಾಸ ಮತ್ತು ಅಷ್ಟೇ ಉದ್ದವಿದ್ದು ಕೋಳಿ ಮೊಟ್ಟೆಯ ಗಾತ್ರವಿದೆ. ದ್ರಾಕ್ಷಿಯಂತೆ ಬಳ್ಳಿಯಲ್ಲಿ ಬೆಳೆಯುವ ಅದಕ್ಕೆ ಹಸಿರುಮಿಶ್ರಿತ ಕಂದು ವರ್ಣದ ಸಿಪ್ಪೆ, ಒಳಗೆ ಕಪ್ಪಾದ ಸಣ್ಣ ಬೀಜಗಳು ಹಾಗೂ ಮೃದುವಾದ ಚಿನ್ನದ ಬಣ್ಣದ ತಿರುಳಿದೆ. ಅನನ್ಯ ಪರಿಮಳ, ಬಹು ಸಿಹಿ. 75 ಗ್ರಾಂ ತೂಕವಿರುವ ಹಣ್ಣಿನಿಂದ 9 ಗ್ರಾಂ ಸಕ್ಕರೆ, 46 ಕ್ಯಾಲೊರಿ ಸಿಗುತ್ತವೆ.

26 ಗ್ರಾಂ ನಾರಿನಾಂಶ, 16 ಗ್ರಾಂ ಸುಣ್ಣ, 2 ಗ್ರಾಂ ಸೋಡಿಯಂ, 133 ಮಿಲಿಗ್ರಾಂ ಪ್ರೊಟೀನ್, ಕಾರ್ಬೋಹೈಡ್ರೇಟ್ಸ್, ಮೊಟ್ಟೆಯ ಹಳದಿಯಲ್ಲಿರುವ ಝಿಯಾಕ್ಸಾಂತೀನ್, ಥಿಯಾಮಿನ್, ರೈಬೋಫ್ಲೇವಿನ್, ನಿಯಾಸಿನ್, ಪಾಂಥೋಟೆನಿಕ್ ಆಮ್ಲ, ಸುಣ್ಣ, ಕಬ್ಬಿಣ, ಮೆಗ್ನೆಷಿಯಂ, ಪೊಟಾಸಿಯಂ, ಮ್ಯಾಂಗನೀಸ್, ರಂಜಕ, ಸತು, ಬಿ ಜೀವಸತ್ವದ ಸಮೂಹ, ‘ಇ’, ‘ಕೆ’ ಜೀವಸತ್ವಗಳು ಹಾಗೂ ದಿನದಲ್ಲಿ ಒಂದು ಕೀವಿಹಣ್ಣು ತಿಂದರೆ ದೇಹಕ್ಕೆ ಅಗತ್ಯವಿರುವಷ್ಟು ‘ಸಿ’ ಜೀವಸತ್ವ (5 ಗ್ರಾಂ) ಪೂರ್ಣವಾಗಿ ಸಿಗುತ್ತದೆ ಎನ್ನುವ ಆಹಾರ ವಿಜ್ಞಾನಿಗಳು ಇದು ಇನ್ಯಾವ ಹಣ್ಣಿನಲ್ಲೂ ಇಲ್ಲವೆನ್ನುತ್ತಾರೆ.

ಎಕ್ಟಿಂಡಿಯಾಚೈನೆನ್ಸಿಸ್ ಎಂಬ ವೈಜ್ಞಾನಿಕ ಹೆಸರಿರುವ ಕೀವಿ ಜಗತ್ತಿನ ಅತ್ಯಂತ ಆರೋಗ್ಯದಾಯಕ ಹಣ್ಣೆಂಬ ಖ್ಯಾತಿ ಪಡೆದಿದೆ. ಅದರಲ್ಲಿರುವ ಫೈಟೊ ನ್ಯೂಟ್ರಿಯೆಟ್ಸ್ ಸತ್ವಗಳು ರೋಗಾಣುಗಳೊಂದಿಗೆ ಹೋರಾಡಲು ಶಕ್ತವಾಗಿವೆ. ಹೃದಯಕ್ಕೆ ಅಗತ್ಯವಾದ ‘ಇ’ ಜೀವಸತ್ವವಿದೆ. ಕೊಲೆಸ್ಟ್ರಾಲ್ ತಗ್ಗಿಸುತ್ತದೆ. ಹೃದಯಾಘಾತದ ಅಪಾಯವನ್ನು ನಿವಾರಿಸುತ್ತದೆ. ಮಧುಮೇಹದವರು ಸೇವಿಸಿದರೂ ಅಪಾಯವಾಗದೆ ರಕ್ತದಲ್ಲಿ ಗ್ಲೂಕೋಸ್ ನಿಯಂತ್ರಣ ಮಾಡುತ್ತದೆ.

ಹೆಂಗಸರು ಮತ್ತು ಮಕ್ಕಳ ಆರೋಗ್ಯಕ್ಕೆ ಸಹಕಾರಿ. ಗರ್ಭಿಣಿಯರು ನಿತ್ಯವೂ ತಿನ್ನುವುದರಿಂದ ಗರ್ಭಸ್ಥ ಶಿಶುವಿಗೂ ಸುರಕ್ಷೆ ನೀಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಬಾಳೆಹಣ್ಣಿಗಿಂತ ಹೆಚ್ಚು ಪೊಟಾಷಿಯಂ ಇದರಲ್ಲಿದೆ. ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆದು ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ.

ಜೀರ್ಣಕಾರಿಯಾದ ಅಧಿಕ ನಾರಿನ ಅಂಶ ಇರುವುದರಿಂದ ಮಲಬದ್ಧತೆ ನಿವಾರಿಸುತ್ತದೆ. ಮಕ್ಕಳನ್ನು ಬಾಧಿಸುವ ಅಸ್ತಮಾ, ವಿವಿಧ ಬಗೆಯ ಕೆಮ್ಮು, ಶೀತ, ಉಬ್ಬಸ, ನೆಗಡಿಗೂ ಇದೊಂದು ಸಿದ್ಧೌಷಧ. ರಾತ್ರಿ ಮಾತ್ರ ಬರುವ ಕೆಮ್ಮು ನಿವಾರಣೆಗೆ ಫಲಕಾರಿ. ಅಸ್ಥಮಾ ನಿವಾರಣೆಗೆ ವಾರದಲ್ಲಿ 5 ರಿಂದ 7 ಹಣ್ಣು ತಿಂದರೆ ಶೇ.44ರಷ್ಟು ಗುಣಕಾರಿಯೆಂದು ಗೊತ್ತಾಗಿದೆ.

ಊಟ ಮಾಡುವಾಗ ಮೊಸರಿ ನೊಂದಿಗೆ ತಿಂದರೆ ಇನ್ನೂ ಪೌಷ್ಟಿಕ. ರಕ್ತ ಹೆಪ್ಪುಗಟ್ಟದಂತೆ ತಡೆಯುವ ಶಕ್ತಿ ಅದಕ್ಕಿದೆ. ಮೂಳೆಗಳ ಬಲವರ್ಧಕ, ಸ್ನಾಯುಗಳ ಶಕ್ತಿ ಹೆಚ್ಚಿಸುತ್ತದೆ. ಮೆದುಳಿನ ನರ ಕೋಶಗಳ ತೊಂದರೆ ನಿವಾರಿಸಿ ಅಲ್ಝೈಮರ್ಸ್ ಕಾಯಿಲೆಯನ್ನು ದೂರವಿಡಲು ಸಮರ್ಥವಾಗಿದೆ. ವ್ಯಾಯಾಮ ಮಾಡಿದವರು ಎರಡು ಹಣ್ಣು ತಿಂದರೆ ಕಳೆದುಕೊಂಡ ಶಕ್ತಿ ಮರಳುತ್ತದೆ. ವಯಸ್ಕರ ನಿದ್ರೆಯ ಸಮಸ್ಯೆ, ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಕಲ್ಲು ಇದಕ್ಕೆಲ್ಲ ಮದ್ದಾಗುವ ಕೀವಿ ಜೀವಕೋಶಗಳಲ್ಲಿ ಡಿಎನ್‌ಎ ಹಾನಿಯನ್ನು ತಡೆಯಲು ಸಮರ್ಥವಾಗಿದೆ.

ಕೂದಲು, ಚರ್ಮ, ಉಗುರುಗಳಿಗೆ ಹೆಚ್ಚಿನ ಕಾಂತಿ ತುಂಬುವ ಕೀವಿ ಹಣ್ಣು ಸೌಂದರ್ಯ ವರ್ಧಕವೂ ಹೌದು. ಸೂರ್ಯನ ಬಿಸಿಲಿನಿಂದ ಚರ್ಮ ಕಪ್ಪಾಗದಂತೆ ತಡೆಯುತ್ತದೆ. ಅದರಲ್ಲಿರುವ ಸತು ಪುರುಷರ ಟೆಸ್ಟೊಸ್ಟೆರಾನ್ ರಸದೂತದ ವರ್ಧನೆ ಮಾಡಿ ಪುರುಷತ್ವವನ್ನು ಅಧಿಕಗೊಳಿಸುತ್ತದೆ. 

ಕೀವಿ ಹಣ್ಣಿನ ಸಲಾಡ್, ಸೂಪ್ ರುಚಿಕರವಾಗಿರುತ್ತದೆ. ಇದರ ಪಾನೀಯವೂ ಸ್ವಾದಿಷ್ಟ. ಅನಾನಸ್‌ ಮತ್ತು ಕಿತ್ತಳೆಯೊಂದಿಗೆ ಸೇರಿಸಿ ತಿಂದರೆ ಹೆಚ್ಚು ಪೌಷ್ಟಿಕ. ಸೇಬು, ಪೇರಳೆ, ಸ್ಟ್ರಾಬೆರಿ, ಜೇನುತುಪ್ಪಗಳೊಂದಿಗೆ ಸೇರಿಸಿ ತಿನ್ನುವುದು ಆರೋಗ್ಯಕ್ಕೆ ಸಹಾಯಕ. ಆದರೆ ಅಧಿಕವಾಗಿ ತಿಂದರೆ ಅಲರ್ಜಿಯಂತಹ ತೊಂದರೆ ಬರಬಹುದು. ಬಾಡಿದ, ಗಾಯವಾಗಿ ಹಣ್ಣಾದ ಕೀವಿ ಬಳಕೆಗೆ ಯೋಗ್ಯವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.