ADVERTISEMENT

ಹುಳುಕು ಹಲ್ಲಿನ ಸುತ್ತ ಮುತ್ತ

ಡಾ .ಕೆ.ಎಸ್.ಚೈತ್ರಾ
Published 29 ಜುಲೈ 2016, 19:30 IST
Last Updated 29 ಜುಲೈ 2016, 19:30 IST
ಹುಳುಕು ಹಲ್ಲಿನ ಸುತ್ತ ಮುತ್ತ
ಹುಳುಕು ಹಲ್ಲಿನ ಸುತ್ತ ಮುತ್ತ   

ಹುಳುಕು ಹಲ್ಲಿನ ಸಮಸ್ಯೆ ಈಗ ಸಾಮಾನ್ಯವಾಗಿಬಿಟ್ಟಿದೆ. ನಮ್ಮ ಹಲ್ಲಿನ  ರಚನೆ, ಬಾಯಿಯಲ್ಲಿರುವ ಸೂಕ್ಷ್ಮಜೀವಿ,  ತಿನ್ನುವ  ಆಹಾರ –ಇವೆಲ್ಲವೂ ಹುಳುಕು  ಹಲ್ಲಿಗೆ  ಕಾರಣವಾಗುತ್ತವೆ. ಭಾರತದಲ್ಲಿ  ಶೇ.31ರಿಂದ  89 ಜನರು ಹಾಗೂ  ಶೇ.90ರಷ್ಟು ಶಾಲಾ  ಮಕ್ಕಳು ಹುಳುಕು  ಹಲ್ಲು ಹೊಂದಿದ್ದಾರೆ ಎನ್ನಲಾಗುತ್ತದೆ. ಅನಾದಿ ಕಾಲದಿಂದಲೂ  ಮಾನವರನ್ನು  ಕಾಡುತ್ತಿರುವ ಹುಳುಕು ಹಲ್ಲಿನ ಸಮಸ್ಯೆಗೆ ಕಾರಣ ಹಲವು. 

ಹಲ್ಲಿನ ರಚನೆಯಲ್ಲಿ ತೊಂದರೆಯಿದ್ದಾಗ ಹಲ್ಲುಗಳನ್ನು ಸ್ವಚ್ಛಗೊಳಿಸುವುದು  ಕಠಿಣ. ಹಾಗೆಯೇ  ಸವೆದ - ಮುರಿದ ಹಲ್ಲು, ಆಹಾರಕಣ ಸಿಕ್ಕಿ ಬೀಳುವ ಸಂದಿಗಳು, ಆಳ-ಅಗಲವಾದ ಹಲ್ಲುಗಳಲ್ಲಿ  ಹುಳುಕು  ಹೆಚ್ಚಾಗುತ್ತದೆ.

ಸ್ಟ್ರೆಪ್ಟೊಕಾಕಸ್ ಮ್ಯೂಟ್ಯಾನ್ಸ್ ಎಂಬ ಸೂಕ್ಷ್ಮಜೀವಿ ಹುಳುಕು ಹಲ್ಲಿಗೆ ಪ್ರಮುಖ ಕಾರಣ. ಇವು ಬಾಯಲ್ಲಿ ಸಹಜವಾಗಿಯೇ ಇರುತ್ತವೆ. ಆದರೆ ಸ್ವಚ್ಛ, ಆರೋಗ್ಯಕರ ಬಾಯಲ್ಲಿ   ಕ್ರಿಯಾಶೀಲವಾಗಿರುವುದಿಲ್ಲ. ಸಾಮಾನ್ಯವಾಗಿ ಆಮ್ಲ-ಪ್ರತ್ಯಾಮ್ಲದ ಸಮತೋಲನ ಅಂಶವಾದ ಪಿ.ಎಚ್. 7 ಇರಬೇಕು.  ಬಾಯಿಯಲ್ಲಿ ಪಿ.ಎಚ್ . ಮಟ್ಟ ಕುಸಿದಾಗ (ಸಿಹಿ, ಅಂಟು, ಸಕ್ಕರೆ ಅಂಶ, ಅಮ್ಲಪದಾರ್ಥಗಳ ಅಂಶದಿಂದ) ಆಮ್ಲೀಯ ಗುಣ ಹೆಚ್ಚುತ್ತದೆ. ಈ ಅನುಕೂಲಕರ  ಪರಿಸರದಲ್ಲಿ   ರೋಗಾಣು ಕ್ರಿಯಾಶೀಲವಾಗಿ ಹುಳುಕಿಗೆ ಕಾರಣವಾಗುತ್ತದೆ.

ನಾವು ತಿನ್ನುವ ಆಹಾರ ನಮ್ಮ  ದಂತರೋಗ್ಯದ  ಮೇಲೆ  ಬೀರುವ  ಪರಿಣಾಮ ಅಪಾರ. ತಿನ್ನುವ ಆಹಾರದಲ್ಲಿರುವ ಸಕ್ಕರೆ, ಪಿಷ್ಟ – ಇವುಗಳನ್ನು  ಬಳಸಿ ಸೂಕ್ಷ್ಮಾಣುಜೀವಿಗಳು  ತೀಕ್ಷ್ಣ  ಆಮ್ಲಗಳನ್ನು ಉತ್ಪಾದಿಸುತ್ತವೆ. ಈ ಆಮ್ಲ ನಮ್ಮ ಹಲ್ಲಿನ ಹೊರ ಕವಚವಾದ ಎನಾಮೆಲ್‌ನ  ಮೇಲೆ  ದಾಳಿ  ನಡೆಸುತ್ತವೆ. ಇದು  ಹುಳುಕಿನ ಆರಂಭಕ್ಕೆ ಕಾರಣವಾಗುತ್ತದೆ. ನಂತರ ಒಳ ಪದರಗಳಿಗೆ ಹಬ್ಬಿ ಹಲ್ಲನ್ನು  ದುರ್ಬಲಗೊಳಿಸುತ್ತದೆ.

ತಿನ್ನುವ  ಆಹಾರದ  ಪ್ರಮಾಣಕ್ಕಿಂತ ಯಾವಾಗ, ಎಷ್ಟು  ಬಾರಿ, ಎಂತಹ  ಆಹಾರ ಸೇವಿಸುತ್ತೇವೆ ಎಂಬುದು  ಮುಖ್ಯ. ಸಿಹಿ ತಿಂಡಿ, ಅಂಟಾದ ಪದಾರ್ಥ, ಆಮ್ಲಯುಕ್ತ  ತಂಪು  ಪಾನೀಯಗಳು ಆದಷ್ಟೂ ಮಿತವಾಗಿರಬೇಕು. ಉತ್ತಮ ಸಮತೋಲನ ಆಹಾರ ಮತ್ತು ಸ್ವಚ್ಛ ನೀರು ಬಲಶಾಲಿ ಹಲ್ಲಿಗೆ  ಸಹಕಾರಿಯಾಗುತ್ತದೆ.

ಹೀಗೆ  ಕಾರಣಗಳು  ಹಲವಾರು ಇದ್ದರೂ ಇವೆಲ್ಲದರ ಜೊತೆಗೆ  ಹಲ್ಲುಗಳ  ಕುರಿತ ನಿರ್ಲಕ್ಷ್ಯ ಮತ್ತು  ತಪ್ಪು  ಕಲ್ಪನೆಗಳು ಹುಳುಕು  ಹಲ್ಲುಗಳನ್ನು  ಹಾಗೆಯೇ ಬಿಡಲು ಅಥವಾ  ಚಿಕಿತ್ಸೆ ತೀರ ತಡವಾಗುವಂತೆ  ಮಾಡುತ್ತದೆ.

ಹುಳುಕು ಹಲ್ಲಿನ ಕುರಿತ  ಕೆಲವು ತಪ್ಪು  ಕಲ್ಪನೆಗಳು ಹೀಗಿವೆ:
ಹುಳುಕಾದರೆ, ನೋವಾಗಿ ಗೊತ್ತಾಗುತ್ತದೆ ಎಂಬ ತಪ್ಪು ಕಲ್ಪನೆಯಿದೆ.  ಆದರೆ ಇದು ಸುಳ್ಳು. ಆರಂಭದಲ್ಲಿ  ಬರೀ ಕಪ್ಪು  ಚುಕ್ಕೆಯಾಗಿ ಕಾಣಿಸಿಕೊಳ್ಳುವ ಹುಳುಕಿನಲ್ಲಿ  ನೋವಿರುವುದಿಲ್ಲ. ಹಲ್ಲುಗಳ  ಸಂದಿಯಲ್ಲಿ  ಆರಂಭವಾದರೆ ಮೇಲಿನಿಂದ ಕಾಣಿಸುವುದೂ ಇಲ್ಲ. ಕೆಲವೊಮ್ಮೆ  ತಿಂದ  ಆಹಾರ  ಸಿಕ್ಕಿಕೊಳ್ಳುವುದೇ  ಹುಳುಕಿನ ಲಕ್ಷಣವಾಗಿರುತ್ತದೆ. ಆರಂಭಿಕ  ಹಂತದಲ್ಲಿ  ಚಿಕಿತ್ಸೆ  ಸುಲಭ ಮತ್ತು ಸರಳ. ನೋವಿಗೆ  ಕಾದರೆ ಹಲ್ಲನ್ನೇ  ಕಳೆದುಕೊಳ್ಳುವ ಸಾಧ್ಯತೆಯೂ ಇದೆ.

ಚಾಕೊಲೆಟ್, ಕೇಕ್ ಮಾತ್ರ ಹುಳುಕಿಗೆ  ಕಾರಣ:
ಆಹಾರದಲ್ಲಿನ ಸಕ್ಕರೆ, ಪಿಷ್ಟ ಎರಡೂ ಸೂಕ್ಷ್ಮಾಣುಜೀವಿಗಳಿಂದ ಉಪಯೋಗಿಸಲ್ಪಟ್ಟು ಆಮ್ಲ ಉತ್ಪತ್ತಿಯಾಗುತ್ತದೆ. ಇದು ಹಲ್ಲಿನ  ಮೇಲೆ  ದಾಳಿ ನಡೆಸಿ ಹುಳುಕಿಗೆ ಕಾರಣವಾಗುತ್ತದೆ. ಉದಾಹರಣೆಗೆ,  ಒಂದು ಬಾರಿ ಚಿಪ್ಸ್ ತಿಂದ ನಂತರ ಸುಮಾರು ಇಪ್ಪತ್ತು ನಿಮಿಷ ಹಲ್ಲುಗಳ ಮೇಲೆ ಆಸಿಡ್ ದಾಳಿ  ನಡೆಯುತ್ತದೆ. ಹಾಗಾಗಿ ಫ್ರೆಂಚ್ ಫ್ರೈಸ್, ಚಿಪ್ಸ್, ಅಂಟಾದ ಬಿಳಿ  ಅಕ್ಕಿ, ಬ್ರೆಡ್  – ಇವೆಲ್ಲವೂ ಹುಳುಕಿಗೆ  ಕಾರಣವಾಗಬಹುದು.

ಫಿಲ್ಲಿಂಗ್ ಮಾಡಿಸಿದ್ರೆ ಹಲ್ಲು  ದುರ್ಬಲವಾಗುತ್ತದೆ ಎಂಬ ನಂಬಿಕೆಯಿದೆ. ಆರಂಭಿಕ ಹಂತದಲ್ಲಿ ಹಲ್ಲು  ತುಂಬಿಸಿದರೆ ಹುಳುಕನ್ನು ಪ್ರತಿಬಂಧಿಸಿ, ಅಗಿಯುವ  ಸಾಮರ್ಥ್ಯ  ಮರಳಿಸಬಹುದು. ಹಾಗೆಯೇ ನಿರ್ಲಕ್ಷ್ಯ  ಮಾಡಿದಲ್ಲಿ  ಹುಳುಕು  ತಿರುಳಿಗೆ ಹಬ್ಬಿ  ನೋವು, ಮುರಿತ, ಊತ ಕಾಣಿಸಿಕೊಳ್ಳುತ್ತದೆ. ಈ   ಹಂತದಲ್ಲಿ ಬೇರುನಾಳ  ಚಿಕಿತ್ಸೆ  ಅಗತ್ಯವಿದ್ದಾಗ ಹಲ್ಲಿಗೆ  ಕವಚ ಬೇಕಾಗುತ್ತದೆ.

ಮಕ್ಕಳ ಹುಳುಕು ಹಲನ ನಿರ್ಲಕ್ಷ್ಯ:
ಹಾಲುಹಲ್ಲುಗಳು ಬಿದ್ದು  ಹೋಗುತ್ತವೆಯಾದರೂ ಅವುಗಳ ಕೆಳಗೆ ಶಾಶ್ವತ  ಹಲ್ಲುಗಳ ಮೊಗ್ಗುಗಳಿರುತ್ತವೆ. ಹಾಗಾಗಿ  ಹುಳುಕನ್ನು  ತಡೆಯದಿದ್ದರೆ ಅದು  ಶಾಶ್ವತ  ಹಲ್ಲುಗಳ  ಮೊಗ್ಗಿಗೂ  ಹರಡಿ, ಮುಂದೆ  ಬರುವ ಹಲ್ಲುಗಳೂ ರೋಗಗ್ರಸ್ತವಾಗಬಹುದು.

ಹಲ್ಲಿನ ಪಕ್ಕ ನೋವಿನ ಮಾತ್ರೆ ಇಡುವುದು:
ಹುಳುಕನ್ನು ಸಂಪೂರ್ಣವಾಗಿ ಗುಣಪಡಿಸುವ ತಂತ್ರಜ್ಞಾನ ಇನ್ನೂ ಬಂದಿಲ್ಲ. ಆದರೆ  ಹುಳುಕನ್ನು  ತೆಗೆದು, ಬದಲಿ ವಸ್ತು ಹಾಕಿ  ಇನ್ನಷ್ಟು ಹರಡದಂತೆ ಜಾಗ್ರತೆ  ವಹಿಸಬಹುದು. ನೋವಿನ ಮಾತ್ರೆ ನುಂಗಿದಾಗ ನೋವು  ಕಡಿಮೆಯಾಗಬಹುದು. ಆದರೆ ಹುಳುಕು  ಹಾಗೇ  ಇರುತ್ತದೆ.  ಅಲ್ಲದೇ ಹಲ್ಲಿನ ಪಕ್ಕ ಬಾಯಿಯಲ್ಲಿ  ಇಟ್ಟಾಗ  ಮೃದು ಚರ್ಮ ಸುಟ್ಟು ಹುಣ್ಣಾಗುವ  ಸಾಧ್ಯತೆಯಿದೆ.

ಮುತ್ತಿನಂತಹ ಆರೋಗ್ಯಕರ  ಹಲ್ಲುಗಳು ಸೌಂದರ್ಯ ಹೆಚ್ಚಿಸುವುದಷ್ಟೇ ಅಲ್ಲ, ಆತ್ಮವಿಶ್ವಾಸ ನೀಡಿ ಇಡೀ ವ್ಯಕ್ತಿತ್ವಕ್ಕೆ ಮೆರುಗನ್ನು ನೀಡುತ್ತವೆ. ಇದಲ್ಲದೆ ಅಗಿಯುವಿಕೆ, ಸ್ಪಷ್ಟವಾದ ಮಾತು, ದವಡೆ ಹಾಗೂ ಮುಖದ ಬೆಳವಣಿಗೆಗೆ ಹಲ್ಲುಗಳು ಅತ್ಯಗತ್ಯ. ಆದ್ದರಿಂದ ಹುಳುಕು  ಹಲ್ಲುಗಳಾಗದಂತೆ ಎಚ್ಚರ  ವಹಿಸುವುದು ಸೂಕ್ತ.

ಹುಳುಕು  ತಡೆಯುವುದು ಹೇಗೆ?
* ಹಣ್ಣು, ತರಕಾರಿ, ಹಾಲು, ಧಾನ್ಯ ಎಲ್ಲವನ್ನೂ  ಒಳಗೊಂಡ ಉತ್ತಮ ಆಹಾರ ಸೇವನೆ,
* ದಿನಕ್ಕೆರಡು ಬಾರಿ ಸರಿಯಾಗಿ ಬ್ರಷ್ ಮಾಡುವುದು
*  ದಿನಕ್ಕೊಂದು  ಬಾರಿ  ದಂತ ದಾರ  ಬಳಸುವುದು
* ನಿಯಮಿತವಾಗಿ ಆರು  ತಿಂಗಳಿಗೆ  ದಂತವೈದ್ಯರ ಭೇಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.