ADVERTISEMENT

ಕೊಟ್ಟಿಗೆಹಾರದ ಜಲಕನ್ಯೆಯರು

​ಪ್ರಜಾವಾಣಿ ವಾರ್ತೆ
Published 24 ಜುಲೈ 2017, 19:30 IST
Last Updated 24 ಜುಲೈ 2017, 19:30 IST
ಧುಮ್ಮಿಕ್ಕಿ ಹರಿಯುತ್ತಿರುವ ನೀರು           ಚಿತ್ರಗಳು: ಲೇಖಕರವು
ಧುಮ್ಮಿಕ್ಕಿ ಹರಿಯುತ್ತಿರುವ ನೀರು ಚಿತ್ರಗಳು: ಲೇಖಕರವು   

–ಅನಿಲ್‌ ಮೊಂತೆರೊ ಕೊಟ್ಟಿಗೆಹಾರ

*

ಮಳೆಯೊಂದಿಗೆ ಮಲೆನಾಡಿನಲ್ಲಿ ಅವತರಿಸುವ ಜಲಕನ್ಯೆಯರು ತಮ್ಮ ಸೊಬಗಿನಿಂದ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಾರೆ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರಿನ ಸಂಪರ್ಕ ಸೇತುವೆಯಾಗಿರುವ ಚಾರ್ಮಾಡಿ ಘಾಟ್‌ನ ಅಂಕುಡೊಂಕು ರಸ್ತೆಯಲ್ಲಿ ಈಗ ಜಲಕನ್ಯೆಯರ ದರ್ಬಾರು ಜೋರಾಗಿದೆ. ಮನಸೆಳೆವ ಜಲರಾಶಿಯ ನಡುವೆ ಮಂಜಿನ ಸೊಬಗು ಪ್ರಕೃತಿ ಆರಾಧಕರ ಪಾಲಿಗೆ ಹಬ್ಬ.

ADVERTISEMENT

ಚಾರ್ಮಾಡಿ ಘಾಟಿಯ ಆಲೇಖಾನ್ ಜಲಪಾತ ಮಳೆಯ ಆರ್ಭಟಕ್ಕೆ ಹಾಲಿನ ಹೊಳೆಯಾಗಿ ಹರಿಯುತ್ತಿದೆ. ಈ ಘಾಟಿಯ ಕಣಿವೆ ಸಮೀಪ ಸುರಿಯುವ ಹಲವು ಜಲಪಾತಗಳು ಸಹ ಕಣ್ಮನ ಸೆಳೆಯುತ್ತಿವೆ. ಸಾವಿರಾರು ಅಡಿಯಿಂದ ರಸ್ತೆಗೆ ಧುಮುಕುವ ಜಲಕನ್ಯೆ ಬಂಡೆಯ ಮೇಲೆ ಬಿನ್ನಾಣದಿಂದ ಹರಿದು ರಸ್ತೆಯ ಬದಿಗೆ ಬಳುಕುತ್ತಾ ಸಾಗುತ್ತಿರುವ ದೃಶ್ಯ ಅವರ್ಣನೀಯ!

(ಮಂಜಿನ ನಡುವಿನ ನೀರಧಾರೆ)

ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಈಗ ಜಲಕನ್ಯೆಯರ ಮೈಮಾಟ, ನರ್ತನ ನೋಡಿ ಆನಂದಪಡುತ್ತಾರೆ. ಹೌದು, ಚಾರ್ಮಾಡಿಯ ಸೋಮನಕಾಡು ಸಮೀಪ ಬೆಟ್ಟದಿಂದ ಬಳುಕುತ್ತಾ ಬಂದು ರಸ್ತೆಗೆ ಧುಮುಕುವ ಜಲಧಾರೆ ನೋಡಲು ಎಷ್ಟೊಂದು ಮನಮೋಹಕ. ಇಲ್ಲಿ ಹಾಲ್ನೊರೆಯಾಗಿ ಸುರಿಯುವ ಜಲಪಾತಗಳ ಸಂಖ್ಯೆ ಅಮಿತ. ಮಲೆನಾಡಿನ ಹಸಿರ ಸೌಂದರ್ಯದ ನಡುವೆ ಜಲಕನ್ಯೆಯರ ದರ್ಶನ ಆಗದಿದ್ದರೆ ಪ್ರಯಾಣ ಅಪೂರ್ಣ.

ಜಿಗಣೆಗಳಿಗೆ ನಾವು ಸ್ವಲ್ಪ ಮೈಯ ರಕ್ತ ಸುರಿಸಿ ಬಂದರೆ ಬಡಕಲ ಜೀವಿಗಳಿಗೆ ರಕ್ತದಾನ ಮಾಡಿದಂತೆ ಆಗುತ್ತದೆ, ಅಲ್ಲವೆ? ಮಲೆನಾಡಿನ ಬಿರುಸಿನ ಮಳೆಗೆ ಜಲಪಾತದ ಸಮೀಪ ಜಿಗಣೆಗಳು ನಮ್ಮನ್ನು ಅಪ್ಪುತ್ತವೆ. ರಕ್ತದಾನ ಬೇಡ ಎನ್ನುವುದು ನಿಮ್ಮ ವಾದವೇ? ಜಿಗಣೆಗಳು ನಮ್ಮನ್ನು ಸೋಕದಿರಬೇಕಾದರೆ ಹರಳೆಣ್ಣೆಗೆ ನಶ್ಯ ಪುಡಿ ಸೇರಿಸಿ ಕಾಲುಗಳಿಗೆ ಹಚ್ಚಬೇಕು. ಆಗ ಜಲಪಾತಗಳ ಬಳಿ ಎಷ್ಟು ಹೊತ್ತು ನಿಂತರೂ ಅವುಗಳು ನಮ್ಮ ತಂಟೆಗೆ ಬರಲಾರವು. ಆಮೇಲೆ ನಾವುಂಟು, ಜಲಕನ್ಯೆಯರುಂಟು ಅಷ್ಟೇ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.