ADVERTISEMENT

ಕೋಣನಕೆರೆಯ ಕತ್ತೆಗಳು!

ಟಿ.ಎಚ್‌.ಪಂಚಾಕ್ಷರಯ್ಯ
Published 8 ಮೇ 2017, 19:30 IST
Last Updated 8 ಮೇ 2017, 19:30 IST
ಚಿತ್ರಗಳು: ಲೇಖಕರವು
ಚಿತ್ರಗಳು: ಲೇಖಕರವು   

ಅದೊಂದು ಮುಸ್ಸಂಜೆ ಹೊತ್ತು. ಗುಬ್ಬಿ ತಾಲ್ಲೂಕಿನ ಕೋಣನಕೆರೆಯಿಂದ ವಾಪಸ್‌ ಬರುತ್ತಿರುವಾಗ ರಸ್ತೆ ಪಕ್ಕದ ತೋಟದಲ್ಲಿ ನೂರಾರು ಕತ್ತೆಗಳು ಜಮಾಯಿಸಿದ್ದವು. ಸಾಲು–ಸಾಲಾಗಿ ನಿಲ್ಲಿಸಿ, ಅವುಗಳ ಕಾಲಿಗೆ ಹಗ್ಗ ಬಿಗಿಯಲಾಗುತ್ತಿತ್ತು. ‘ಇದೇನು ಕತ್ತೆಗಳ ಸಂತೆಯೇ ಇಲ್ಲಿ ನೆರೆದಿದೆಯಲ್ಲ, ಏನಿದರ ಮಜಕೂರು’ ಎಂಬ ಕೌತುಕ. ಸೀದಾ ತೋಟಕ್ಕೆ ಹೋಗಿ, ಹಗ್ಗ ಬಿಗಿಯುತ್ತಿದ್ದ ವ್ಯಕ್ತಿಯ ಮುಂದೆ ಈ ಪ್ರಶ್ನೆಗಳನ್ನು ಇಟ್ಟಾಗ ಸಿಕ್ಕ ಉತ್ತರಗಳು ಮತ್ತಷ್ಟು ರೋಚಕ. 

ಹೊಲ–ಗದ್ದೆಗಳ ಫಲವತ್ತತೆ ಹೆಚ್ಚಿಸಲು ಸಾಮಾನ್ಯವಾಗಿ ರೈತರು ಏನು ಮಾಡುತ್ತಾರೆ? ಊರಿಂದ ಊರಿಗೆ ಅಲೆಯುವ ಕುರಿ ಮಂದೆಯನ್ನು ದವಸ–ಧಾನ್ಯ ಹಾಗೂ ಹಣ ಕೊಟ್ಟು ಕರೆಸುತ್ತಾರೆ; ಅಥವಾ ಕೊಟ್ಟಿಗೆ ಗೊಬ್ಬರವನ್ನು ಖರೀದಿಸಿ ಹಾಕುತ್ತಾರೆ, ಅಲ್ಲವೆ? ಆದರೆ, ಗುಬ್ಬಿ ತಾಲ್ಲೂಕಿನ ತೋಟಗಳ ಫಲವತ್ತತೆ ಹೆಚ್ಚಿಸಲು ಕತ್ತೆಗಳ ಸಗಣಿಯೇ ಆಗಬೇಕಂತೆ. ಹಾಗಾಗಿಯೇ ತೋಟದಿಂದ ತೋಟಕ್ಕೆ ಈ ಕತ್ತೆಗಳನ್ನು ಕರೆದೊಯ್ಯಲು ರೈತರು ಸರದಿಯಲ್ಲಿ ನಿಲ್ಲುತ್ತಾರೆ!

ಅಂದಹಾಗೆ, ಕುರಿ ಮಂದೆಯಂತೆ ಹೀಗೆ ಕತ್ತೆಗಳ ಮಂದೆಯನ್ನು ಬೆಳೆಸಿದವರು ಕೋಣನಕೆರೆ ಗ್ರಾಮದ ನಾಗರಾಜು ಮತ್ತು ಅವರ ಸ್ನೇಹಿತ ತುರುವೇಕೆರೆ ತಾಲ್ಲೂಕು ಕೊಂಡಜ್ಜಿ ಗ್ರಾಮದ ಪರಮೇಶ್. ಈ ಇಬ್ಬರೂ ರೈತರು ನೂರಕ್ಕೂ ಅಧಿಕ ಕತ್ತೆಗಳನ್ನು ಸಾಕಿದ್ದು, ತೆಂಗು, ಅಡಿಕೆ ತೋಟಗಳಲ್ಲಿ ಅವುಗಳ ಮಂದೆ ನಿಲ್ಲಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. 

‘ಮೂರು ತಲೆಮಾರುಗಳಿಂದ ನೂರಾರು ಕತ್ತೆಗಳನ್ನು ಸಾಕುತ್ತಾ ಬಂದಿದ್ದೇವೆ. ತಾತ ಗೋವಿಂದಪ್ಪ, ತಂದೆ ಗಂಗಣ್ಣ ಬೆಳೆಸಿಕೊಂಡು ಬಂದ ಪರಂಪರೆಯಂತೆ ನಮ್ಮ ಕುಟುಂಬ ಕತ್ತೆ ಸಾಕುತ್ತಿದೆ. ಈಗ ಸ್ನೇಹಿತ ಪರಮೇಶ್ ಸಹ ನಮ್ಮ ಕೈಜೋಡಿಸಿದ್ದಾರೆ’ ಎನ್ನುತ್ತಾರೆ ನಾಗರಾಜು.

‘ಯಾರಿಗೂ ತೊಂದರೆ ಕೊಡದೆ ತಲೆ ತಗ್ಗಿಸಿ ಗುಂಪುಗೂಡಿ ಮುನ್ನುಗ್ಗುವ ಈ ಕತ್ತೆಗಳಿಂದ ಲಾಭಗಳಿಸಿ ತಲೆ ಎತ್ತಿ ಜೀವನ ನಡೆಸುತ್ತಿದ್ದೇನೆ’ ಎನ್ನುವುದು ಅವರ ಅಭಿಮಾನದ ಮಾತು.

ಕಡಬ ಹೋಬಳಿ ಹಾಗೂ ಕಡಬ ಕೆರೆ ಸುತ್ತಣ ತೋಟಗಳಿಗಷ್ಟೆ ಕತ್ತೆ ಮಂದೆ ನಿಲ್ಲಿಸುವುದು ಸೀಮಿತವಾಗಿತ್ತು. ಆದರೆ, ಈ ಸಲ ಬಿರುಬಿಸಿಲಿನಿಂದ ನೀರಿಗೆ ತೊಂದರೆಯಾಗಿದ್ದು, ನೀರಿರುವ ಕಡೆಗೆ ಕತ್ತೆಗಳ ಮಂದೆ ವಲಸೆ ಹೋಗುವಂತಾಗಿದೆ. ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಅಡ್ಡಿ ಆಗಬಾರದೆಂದು ನಾಗರಾಜು ಅವರು ಕತ್ತೆಗಳನ್ನು ದೂರದ ಊರುಗಳಿಗೆ ಹೊಡೆದೊಯ್ಯುವ ಗೋಜಿಗೆ ಹೋಗುತ್ತಿಲ್ಲ.


ತೋಟಗಳಲ್ಲೇ ವಾಸ್ತವ್ಯ
ತೋಟಗಳಲ್ಲಿಯೇ ಕತ್ತೆಗಳು ತಿಂಗಳಾನುಗಟ್ಟಲೇ ವಾಸ್ತವ್ಯ ಹೂಡುತ್ತವೆ. ‘ನಮ್ಮ ತೋಟಕ್ಕೆ ಮಂದೆ ಹಾಕಿ’ ಎಂದು ಮುಂಗಡ ಕೊಟ್ಟು ಕಾಯ್ದಿರಿಸುವ ರೈತರಿದ್ದಾರೆ. ಮಂದೆಯಲ್ಲಿ ಬೀಡುಬಿಟ್ಟ ಪ್ರತೀ ಕತ್ತೆಗೆ ಒಂದು ರಾತ್ರಿಗೆ ₹10ರಂತೆ ತೋಟದ ಯಜಮಾನ ಹಣ ನೀಡಬೇಕು. ಬೆಳಗಿನಿಂದ ಸಂಜೆವರೆಗೆ ಕೆರೆ–ಗದ್ದೆ ಬಯಲಲ್ಲಿ ಮೇಯ್ದು ಬರುವ ಕತ್ತೆಗಳು ಸಂಜೆ 6ರಿಂದ ಮರುದಿನ ಬೆಳಗಿನ 8ರವರೆಗೆ ತೋಟದಲ್ಲಿ ಬಿಡಾರ ಹೂಡುತ್ತವೆ. 

ಅಡಿಕೆತೋಟ ಇದ್ದವರು, ತಿಂಗಳಾನುಗಟ್ಟಲೇ ತಮ್ಮ ತೋಟದಲ್ಲೇ ಮಂದೆ ಬಿಡಿಸಿಕೊಳ್ಳುತ್ತಾರೆ. ಕತ್ತೆ ಕಾಯುವವರಿಗೆ ರಾತ್ರಿಯಷ್ಟೆ ಮನೆ ಊಟ. ಬೆಳಿಗ್ಗೆ, ಮಧ್ಯಾಹ್ನ ಮಂದೆ ನಿಲ್ಲಿಸಿಕೊಂಡವರ ಮನೆಯಲ್ಲೇ ಊಟ. 

ತೋಟದಲ್ಲಿ ಕತ್ತೆಗಳನ್ನು ಸಾಲಾಗಿ ನಿಲ್ಲಿಸಿ, ಕಾಲಿಗೆ ಹಗ್ಗ ಬಿಗಿದು ಕಟ್ಟುತ್ತಾರೆ. ಆದರೆ, ಮರಿಗಳನ್ನು ಮಾತ್ರ ಕಟ್ಟದೆ ಹಾಗೇ ಬಿಡುತ್ತಾರೆ. ಕತ್ತೆ ಮಂದೆ ಬಿಟ್ಟ ಪ್ರದೇಶದ ಸುತ್ತಲೂ ತಂತಿಮಿಶ್ರಿತ, ದಾರದ ಬಲೆಯನ್ನು ರಕ್ಷಣೆಗಾಗಿ ಕಟ್ಟುತ್ತಾರೆ.

ಪ್ರತಿ ಕತ್ತೆ, ದಿನಕ್ಕೆ  ಸರಾಸರಿ ಕೆಜಿಯಷ್ಟು ಸಗಣಿ ಹಾಕುತ್ತದೆ. ಒಮ್ಮೆ ಕತ್ತೆಗಳ ಸಾಲುಕಟ್ಟಿದ ಸ್ಥಳದಲ್ಲಿ ಮತ್ತೆ ಕಟ್ಟುವುದಿಲ್ಲ. ಮರುದಿನ ಮುಂದಿನ ಭಾಗದಲ್ಲಿ ಅವುಗಳನ್ನು ನಿಲ್ಲಿಸುತ್ತಾರೆ. ಹೀಗೆ ಇಡೀ ತೋಟದಲ್ಲಿ ಸಗಣಿ ಬೀಳುವಂತೆ ನೋಡಿಕೊಳ್ಳುತ್ತಾರೆ.

‘ಕತ್ತೆಗಳು ಇಡೀ ದಿನ ಮೇವು ಮೇಯ್ದು, ರಾತ್ರಿ ಹೊತ್ತು ಯಥೇಚ್ಛವಾಗಿ ಸಗಣಿ ಹಾಕುತ್ತವೆ. ಹಸಿರು ಮೇವಿನ ಗೊಬ್ಬರ ಮಣ್ಣಲ್ಲಿ ಬಹುಬೇಗ ಕರಗುವುದರಿಂದ ನಮ್ಮ ತೋಟ ಹೇಗೆ ಹಸಿರುಗಟ್ಟಿದೆ ನೋಡಿ’ ಎನ್ನುತ್ತಾ ತಮ್ಮ ಅಡಿಕೆ ತೋಟದಲ್ಲಿ ಒಂದು ಸುತ್ತು ಹಾಕಿಸುತ್ತಾರೆ ಬೆಲವತ್ತದ ರೈತ ವೆಂಕಟೇಶ್‌.


ಹಾಲಿಗೂ ಬೇಡಿಕೆ
ಕತ್ತೆ ಹಾಲಿಗೂ ಸಾಕಷ್ಟು ಬೇಡಿಕೆಯಿದೆ. ಮಂದೆಯಲ್ಲಿರುವ ಎಂಟು ಕತ್ತೆಗಳು ಹಾಲು ಕೊಡುತ್ತವೆ. ಕತ್ತೆಯ ಹಾಲು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು. ಕೆಮ್ಮು, ಅಸ್ತಮಾ ರೋಗಕ್ಕೆ ಇದು ರಾಮಬಾಣ ಎಂಬ ನಂಬಿಕೆ ಇದೆ. ಮಿಲಿ ಲೀಟರ್‌ ಲೆಕ್ಕದಲ್ಲಿ ಈ ಹಾಲನ್ನು ಮಾರಾಟ ಮಾಡುತ್ತಾರೆ. ಒಂದು ವಳ್ಳೆಯಷ್ಟು (ಅಂದಾಜು 15ರಿಂದ 20 ಎಂ.ಎಲ್‌) ಹಾಲಿಗೆ ಬರಿ 200 ರೂಪಾಯಿ!

‘ಮಕ್ಕಳಿಗೆ ಕತ್ತೆಯ ಹಾಲು ಕುಡಿಸುವವರು ತೋಟದ ಹತ್ತಿರವೇ ಬಂದು ಕರೆಸಿಕೊಂಡು ಹೋಗುತ್ತಾರೆ. ಇವುಗಳ ಸಗಣಿ ವಾಸನೆಯನ್ನು ವಾರಾನುಗಟ್ಟಲೇ ಕುಡಿಸಿದರೆ, ಮದ್ಯವ್ಯಸನಿಗಳು ಕುಡಿಯುವುದನ್ನು ಬಿಡುತ್ತಾರೆ’ ಎನ್ನುತ್ತಾರೆ ಪರಮೇಶ್‌.

‘ಮಳೆ ಬರಲಿ, ಕ್ಷಾಮ ತೊಲಗಲಿ’ ಎಂದು ಕತ್ತೆಗಳ ಮದುವೆ ಮಾಡುವ ಆಚರಣೆ ಇದೆ. ಇಂತಹ ಆಚರಣೆಗಾಗಿ ಜೋಡಿ ಕತ್ತೆಗಳನ್ನು ಇವರಿಂದ ಒಯ್ಯುವ ಜನರಿಗೆ ಲೆಕ್ಕವಿಲ್ಲ. ‘ಮೇ-ಜೂನ್ ತಿಂಗಳಲ್ಲಿ ಜೋಡಿ ಕತ್ತೆಗಳಿಗೆ ಬಲು ಬೇಡಿಕೆ. ಅವು ಮದುವೆ ಮಾಡಿಸಿಕೊಂಡು, ಮೆರವಣಿಗೆಯಲ್ಲಿ ಪಾಲ್ಗೊಂಡ ಬಳಿಕ ಮತ್ತೆ ಮಂದೆಗೆ ಬರುತ್ತವೆ ನೋಡಿ’ ಎಂದು ನಗುತ್ತಾರೆ ನಾಗರಾಜು.

ADVERTISEMENT



ಕತ್ತೆಗಳಿಗೆ ಆರೋಗ್ಯ ಕೈಕೊಡುವುದು ತುಂಬಾ ಕಡಿಮೆ. ಆದರೆ, ಮಳೆ ಹೆಚ್ಚಾದರೆ ಮಾತ್ರ ಅವುಗಳು ಅನಾರೋಗ್ಯಕ್ಕೆ ತುತ್ತಾಗುತ್ತವೆ. ಆದ್ದರಿಂದ ಮಳೆ ‘ಧೋ’ ಎಂದು ಸುರಿಯತೊಡಗಿದರೆ ಈ ಕತ್ತೆ ಸಾಕಾಣಿಕೆದಾರರಿಗೆ ಆತಂಕ. ಅಂದಹಾಗೆ, ಬಯಲಲ್ಲಿ ಮೇಯ್ದಿದ್ದನ್ನು ಬಿಟ್ಟರೆ ಬೇರೆ ಯಾವ ಸಿದ್ಧ ಆಹಾರವನ್ನೂ ಅವುಗಳಿಗೆ ಕೊಡುವುದಿಲ್ಲ.

ಸದ್ಯ ಕೆರೆಗಳು ಬತ್ತಿರುವ ಕಾರಣ ಕತ್ತೆಗಳ ಕುಡಿಯುವ ನೀರಿಗೂ ಬರ. ಅವುಗಳ ಯಾತನೆ ತಪ್ಪಿಸಲು ತಮ್ಮ ನೆಂಟರು, ಸ್ನೇಹಿತರ ಮೊರೆ ಹೋಗಿದ್ದಾರೆ ನಾಗರಾಜು ಹಾಗೂ ಪರಮೇಶ್‌. ನೀರು ಇರುವ ಕೆರೆಗಳತ್ತ ಅವರೀಗ ವಲಸೆ ಹೊರಟಿದ್ದು, ಮೊದಲ ಬಾರಿಗೆ ಗುಬ್ಬಿ ತಾಲ್ಲೂಕಿನ ಗಡಿ ದಾಟಿದ್ದಾರೆ. ಈಗ ತುರುವೇಕೆರೆ ತಾಲ್ಲೂಕು ತಂಡಗ ಗ್ರಾಮದ ಸುತ್ತಮುತ್ತ ಮಂದೆ ನಿಲ್ಲಿಸುತ್ತಿದ್ದಾರೆ.

ಬಿಸಿಲಿನ ಹೊಡೆತ, ನೀರಿನ ಅಭಾವದಿಂದ ಹತ್ತಾರು ಕತ್ತೆಗಳು ಮೂರು ತಿಂಗಳಿಂದ ಈಚೆಗೆ ಸತ್ತಿವೆ. ‘ಬೆಳೆಹಾನಿಗೆ, ಕುರಿ ಕಳೆದುಕೊಂಡವರಿಗೆ ಪರಿಹಾರ ನೀಡುವಂತೆಯೇ ನಮಗೂ ಪರಿಹಾರ ಕೊಡಬೇಕು’ ಎನ್ನುವುದು ಈ ಕತ್ತೆ ಪ್ರಿಯರ ಬಲವಾದ ವಾದ.

‘ಪ್ರತಿವರ್ಷ ಹತ್ತಾರು ಕತ್ತೆಗಳು ಮರಿ ಹಾಕುತ್ತವೆ. ನಮ್ಮ ಮಂದೆಯಲ್ಲಿ ಕತ್ತೆಗಳ ಹುಟ್ಟು ಮತ್ತು ಸಾವು ಹೆಚ್ಚು–ಕಡಿಮೆ ಸಮಪ್ರಮಾಣದಲ್ಲಿದೆ. ಇನ್ನಷ್ಟು ಕೊಂಡು ಸಾಕುವ ಆಲೋಚನೆ ಇದೆ. ಸರ್ಕಾರ ಹಸು, ಕುರಿ, ಮೇಕೆ, ಹಂದಿ ಸಾಕಾಣಿಕೆಗೆ ಸಬ್ಸಿಡಿಸಹಿತ ಸಾಲ ನೀಡುತ್ತದೆ. ಕತ್ತೆ ಸಾಕಲೂ ಸಾಲ ನೀಡುವಂತಾದರೆ ಅನುಕೂಲ’ ಎಂಬ ಆಶಯ ಅವರದಾಗಿದೆ. 

‘ಕಂಡ ಕಂಡವರನ್ನೆಲ್ಲ ಕತ್ತೆ ಎಂದು ಕರೆದು ಅದರ ಕಿಮ್ಮತ್ತನ್ನು ಕಡಿಮೆ ಮಾಡಬೇಡಿ’ ಎನ್ನುವ ಬೀಚಿ ಅವರ ಮಾತುಗಳನ್ನು ನೆನಪಿಸಿಕೊಳ್ಳುವ ನಾಗರಾಜು, ‘ದುಡಿಮೆಗೆ, ನಿಯತ್ತಿಗೆ ದ್ಯೋತಕವಾಗಿದೆ ಈ ಸಾಧು ಪ್ರಾಣಿ. ನಮಗಂತೂ ಅದೇ ಅನ್ನದ ಮೂಲ’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.