ADVERTISEMENT

ಬನಶಂಕರಿಯ ಜಾತ್ರಾ ವೈಭವ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 19:30 IST
Last Updated 9 ಜನವರಿ 2017, 19:30 IST
ಬನಶಂಕರಿಯ ಜಾತ್ರಾ ವೈಭವ
ಬನಶಂಕರಿಯ ಜಾತ್ರಾ ವೈಭವ   

–ಸೋಮಲಿಂಗ ಬೇಡರ ಆಳೂರ
ಯಂಕಣ್ಣ ಸಾಗರ್ ಕಲ್ಲೂರು


ಬನದವ್ವ, ಬಂದವ್ವ, ವನದುರ್ಗೆ, ಶಾಖಾಂಬರಿ ಎಂಬ ನಾನಾ ಹೆಸರುಗಳಿಂದ ಆರಾಧಿಸುವ ದೇವಿ ಬನಶಂಕರಿ. ಬಾಗಲಕೋಟೆಯ ಬಾದಾಮಿಯ ಹತ್ತಿರದ ಚೋಳಚಗುಡ್ಡದಲ್ಲಿ ನೆಲೆಸಿರುವ ಚಾಲುಕ್ಯರ ಕುಲದೇವತೆಯಾದ ಬನಶಂಕರಿ ಜಾತ್ರೆ ಇದೇ 12ರಿಂದ ನಡೆಯಲಿದೆ.

ಉತ್ತರ ಕರ್ನಾಟಕದ ಅತ್ಯಂತ ದೊಡ್ಡದೆನಿಸಿಕೊಂಡ ಈ ಜಾತ್ರೆ ಪ್ರತಿ ವರ್ಷ ಪುಷ್ಯ ಮಾಸದ ಬನದ ಹುಣ್ಣಿಮೆಯ ಹತ್ತು ದಿನಗಳ ಮುಂಚೆ ಆರಂಭಗೊಳ್ಳುತ್ತದೆ. ಆಗಿನಿಂದ ದೇವಿಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗುತ್ತವೆ. ಜಾತ್ರೆ ನಿಮಿತ್ತ ಚತುರ್ದಶಿಯಂದು ಪಲ್ಲೆದ ಹಬ್ಬ ಮಾಡುತ್ತಾರೆ, 108 ತರಕಾರಿಗಳ ನೈವೇದ್ಯ ಅರ್ಪಿಸಲಾಗುತ್ತದೆ.

ಬನದ ಹುಣ್ಣಿಮೆಯಿಂದ ಭಾರತ ಹುಣ್ಣಿಮೆವರೆಗೆ ಜಾತ್ರೆ ಜರಗುತ್ತದೆ. ‘ರೊಕ್ಕಿದ್ರ ಬನಶಂಕರಿ ಜಾತ್ರ್ಯಾಗ ತಂದಿ - ತಾಯಿ ಬಿಟ್ಟು ಎಲ್ಲಾನೂ ಸಿಗತೈತಿ’ ಎನ್ನುವ ಮಾತು ಪ್ರತಿಯೊಬ್ಬರಿಂದ ಕೇಳಿ ಬರುವ ಸಾಮಾನ್ಯ ಮಾತು. ಏಕೆಂದರೆ ಈ ಜಾತ್ರೆಯಲ್ಲಿ ಹಲವು ವಸ್ತುಗಳು ಒಂದೇ ಸ್ಥಳದಲ್ಲಿ ದೊರೆಯುತ್ತವೆ.

ಕೃಷಿ ಉಪಕರಣಗಳು, ಗೃಹೋಪಯೋಗಿ ಸಾಮಾನುಗಳು, ಮಕ್ಕಳ ಆಟಿಕೆಯ ವಸ್ತುಗಳು, ಮಹಿಳೆಯರ ಶೃಂಗಾರ ಸಾಧನಗಳು, ಪ್ರಸಿದ್ಧ ಸಿಹಿ ತಿಂಡಿಗಳು, ಮನೆ ಕಟ್ಟಡದ ಪರಿಕರಗಳು ಬೆಲೆಗೆ ತಕ್ಕಂತೆ ದೊರೆಯುತ್ತವೆ.

ಸುಪ್ರಸಿದ್ಧ ಅಮಿನಗಡದ ಕರದಂಟು, ಡಾಣ ಶಿರೂರಿನ ಕಡಕ್ ರೊಟ್ಟಿ, ಚೋಳಚಗುಡ್ಡದ ಕೆನೆ ಮೊಸರು, ಹೊಳೆ ಆಲೂರಿನ ನಯ ನಾಜೂಕುಯುಕ್ತ ಕುಸುರಿ ಕೆತ್ತನೆಗಳಿರುವ ಸಾಗವಾನಿ, ಅಕೇಶಿಯಾ ಕಟ್ಟಿಗೆ ಬಾಗಿಲುಗಳು, ಚೌಕಟ್ಟುಗಳು, ಇಳಕಲ್ಲದ ಸೀರೆಗಳು, ಗುಳೆದಗುಡ್ಡದ ಕುಪ್ಪಸದ ಖಣಗಳು, ವಿವಿಧ ಬಗೆಯ ಉಡುಗೆ ತೊಡುಗೆಗಳೂ ಲಭ್ಯ.

ಹಗಲು ರಾತ್ರಿಗಳೆನ್ನದೆ ನಿರಂತರ ಹೊಸ ಹೊಸ ನಾಟಕ, ಸಿನಿಮಾ, ರಸಮಂಜರಿ, ಸರ್ಕಸ್ ಭರ್ಜರಿ ಮನರಂಜನೆ ನೀಡುತ್ತವೆ. ಬನಶಂಕರಿ ಜಾತ್ರೆಗೆ ಬರುವವರು ಮನೆಯಿಂದ ಬುತ್ತಿ ಕಟ್ಟಿಕೊಂಡು ಬರುವುದು ಕಡಿಮೆ. ಕೆಲವರು ಸ್ಥಳದಲ್ಲಿಯೇ ಅಡುಗೆ ತಯಾರಿಸಿಕೊಂಡು ಊಟ ಮಾಡಿದರೆ, ಮತ್ತೆ ಕೆಲವರು ಜಾತ್ರೆಯಲ್ಲಿ ಸಿಗುವ ರೊಟ್ಟಿ ಊಟ ಸವಿಯುತ್ತಾರೆ.

ಸುತ್ತಮುತ್ತಲಿನ ಊರುಗಳ ಜನರು  ತಾವು ಸಿದ್ಧಪಡಿಸಿದ ರೊಟ್ಟಿ ಬುತ್ತಿಯ ಹೆಡಿಗೆಗಳನ್ನು ಹೊತ್ತುಕೊಂಡು ಅಲೆಯುತ್ತ, ಇಲ್ಲವೆ ಒಂದೆಡೆ ಕುಳಿತುಕೊಂಡು ಊಟಕ್ಕೆ ಬರುವವರಿಗಾಗಿ ಉಣಬಡಿಸಲು ಸಿದ್ಧರಾಗಿರುತ್ತಾರೆ. ತೆಳ್ಳನೆ ಎಳ್ಳು ಹಚ್ಚಿದ ಸಜ್ಜಿ, ಜೋಳದ ರೊಟ್ಟಿ, ಎಣ್ಣೆ ಬದನೆಕಾಯಿ, ಮೊಳಕೆ ಬರಿಸಿದ ಹೆಸರು, ಮಟಗಿ, ಅಲಸಂದಿಗಳ ಕಾಳುಪಲ್ಲೆ, ಗುರೆಳ್ಳು, ಶೇಂಗಾ ಚಟ್ನಿ, ಟೊಮೆಟೊ, ಸೌತೆಕಾಯಿ ಪಚಡಿ, ವಿವಿಧ ರೀತಿಯ ಮೆಂತ್ಯೆ, ಮೂಲಂಗಿ, ಈರುಳ್ಳಿ, ಹಾತರಕಿ ಹಸಿ ತರಕಾರಿಗಳು, ಕೆನೆ ಮೊಸರು, ಉಪ್ಪಿನಕಾಯಿ ಇವೆಲ್ಲವುಗಳನ್ನು ನೋಡುತ್ತಿದ್ದರೆ ಬಾಯಿಯಲ್ಲಿ ನೀರೂರುತ್ತದೆ. ಅವರು ಪ್ರೀತಿಯಿಂದ ನಮಗೇನು ಇಷ್ಟವೋ ಅದನ್ನೆಲ್ಲ ಕೇಳಿ ತಿಳಿದು ಊಟಕ್ಕೆ ಬಡಿಸುತ್ತಾರೆ.

ಹೊಟ್ಟೆ ಬಿರಿಯುವ ಹಾಗೆ ಊಟ ಮಾಡಿದರೂ ಒಬ್ಬರಿಗೆ 20 ರೂಪಾಯಿಗಳು ಮಾತ್ರ! ದೇವಸ್ಥಾನದ ಎದುರಿಗಿರುವ ಹರಿದ್ರಾ ತೀರ್ಥ ಪುಷ್ಕರಣಿಯ ಸುತ್ತಮುತ್ತ ಇಂಥ ‘ಅನ್ನಪೂರ್ಣೆ’ಯರು ಹೆಚ್ಚಾಗಿ ಕಂಡು ಬರುತ್ತಾರೆ. ‘ಬರ್ರಿ ಅಣ್ಣಾವ್ರ... ಬರ್ರಿ ಅಕ್ಕಾವ್ರ... ಸಜ್ಜಿ ರೊಟ್ಟಿ, ಜೋಳದ ರೊಟ್ಟಿ, ಕಾಳ ಪಲ್ಯ, ಕೆನಿ ಮೊಸರ, ಕೆಂಪ ಚಟ್ನಿ  ಐತ್ರಿ ಊಟಾ ಮಾಡ್ಬರ್ರಿ... ಬರೇ 20 ರೂಪಾಯಿದಾಗ ನಾಲ್ಕು ರೊಟ್ಟಿ ಪಲ್ಯ ಕೊಡ್ತೇವ್ರಿ, ಹಂಗ ಹೊಟ್ಟಿ ಹಸಗೊಂಡು ಅಡ್ಡಾಡಬ್ಯಾಡ್ರಿ ಬರ್ರಿ... ಊಟಾ ಮಾಡ್ಬರ್ರೀ... ಎಂದು ಯಾತ್ರಿಕರ ಗಮನ ಸೆಳೆಯುತ್ತಾರೆ.

ಮಾನವಿಯ ಸಂಕ್ರಾಂತಿ ಜಾತ್ರೆ
ರಾಯಚೂರಿನ ಮಾನವಿ ತಾಲ್ಲೂಕಿನ ಕಲ್ಲೂರು ಗ್ರಾಮವು ಏಳು ಊರು, ಏಳು ಅಗಸೆಗಳು, ಏಳು ಆಂಜನೇಯ ಮೂರ್ತಿ ಮತ್ತು ಏಳು ಗುಡ್ಡಗಳಿಂದ ಪ್ರಸಿದ್ಧಿ ಪಡೆದಿದೆ.ವೀರಗಲ್ಲು, ಮಾಸ್ತಿಗಲ್ಲು, ಕೋಟೆ-ಕೊತ್ತಲಗಳಿಂದ ಕೂಡಿದ ಈ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶಕ್ತಿ ಕ್ಷೇತ್ರ ಮಾರಟೇಶ್ವರ ದೇವಾಲಯವಿದೆ. 

ಕ್ರಿ.ಶ. 1050ರಲ್ಲಿ ಚಾಲುಕ್ಯ ದೊರೆ ಸೋಮಾಯಾಜಿ ನಿರ್ಮಿಸಿರುವ ಈ ದೇಗುಲದಲ್ಲಿ ಸಂಕ್ರಾಂತಿಯಂದು ಜಾತ್ರೆ ನಡೆಯುತ್ತದೆ. ಮಾರಟೇಶ್ವರ ಮತ್ತು ಕಾಳಿಕಾದೇವಿಯ ಕಲ್ಯಾಣೋತ್ಸವದ ಅಂಗವಾಗಿ ರಾತ್ರಿ ವೇಳೆ ಹರ ಹರ ಮಹಾದೇವ ಎಂದು ಭಕ್ತರು ಅಗ್ನಿಕುಂಡ ಪ್ರವೇಶಿಸುತ್ತಾರೆ. ನಂತರ ಮಾರನೇ ದಿನ ಮಾರಟೇಶ್ವರ ಕಾಳಿಕಾದೇವಿಯ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಹೊತ್ತು, ವೀರಗಾಸೆ, ನಂದಿಕೋಲು (ನಂದಿ ಧ್ವಜ) ಕುಣಿತದೊಂದಿಗೆ ಜನರು ಊರಿನಲ್ಲಿ ಪುರವಂತಿಗೆ ಹೊರಡುತ್ತಾರೆ.

ಚೈತ್ರಮಾಸದ ಸೌರಮಾನ ಯುಗಾದಿಯಂದು ಸೂರ್ಯನ ಕಿರಣಗಳು ದೇವಸ್ಥಾನದ ಮೂರು ಬಾಗಿಲು ದಾಟಿ ನೇರವಾಗಿ ಮಾರಟೇಶ್ವರ ಲಿಂಗದ ಮೇಲೆ ಬೀಳುವುದು ವಿಶೇಷ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.