ADVERTISEMENT

ಬರ್ರಿ, ಇದು ಕಾಮತ್‌ ಡೇರಿ!

ಚಂದ್ರಶೇಖರ ಆರ್‌.
Published 29 ನವೆಂಬರ್ 2017, 15:05 IST
Last Updated 29 ನವೆಂಬರ್ 2017, 15:05 IST
ಹಸುಗಳೊಂದಿಗೆ ರವಿ ಕಾಮತ್‌, ಜಯವಂತ ಕಾಮತ್‌
ಹಸುಗಳೊಂದಿಗೆ ರವಿ ಕಾಮತ್‌, ಜಯವಂತ ಕಾಮತ್‌   

ಬೆಂಗಳೂರಿನಲ್ಲಿ ಚಿಕ್ಕ ಉದ್ಯಮದಲ್ಲಿ ಉತ್ತಮ ಆದಾಯ ಗಳಿಸುತ್ತಿದ್ದ ಆ ಸಹೋದರರನ್ನು ಸೆಳೆದದ್ದು ಹೈನುಗಾರಿಕೆ. ಸರಿ, ಮನದ ಮಾತಿಗೆ ಓಗೊಟ್ಟು ಸೀದಾ ಹಳ್ಳಿಗೆ ಬಂದ ಅವರು ಅಲ್ಲಿಯೇ ಬದುಕು ಕಟ್ಟಿಕೊಂಡರು. ಅವರೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಗೆಣಸಿನಕುಣಿ ಗ್ರಾಮದ ಕಾಮತ್ ಸಹೋದರರು.

ಹೌದು, ಕಾಮತ್‌ ಕುಟುಂಬದ ವೆಂಕಟೇಶ್‌, ರವಿ ಹಾಗೂ ಜಯವಂತ ಇಂದು ಗೆಣಸಿನಕುಣಿಯಂತಹ ಚಿಕ್ಕ ಗ್ರಾಮದಲ್ಲಿ ದೊಡ್ಡ ಮಟ್ಟದಲ್ಲಿ ಹೈನುಗಾರಿಕೆ ಆರಂಭಿಸಿ ಯಶಸ್ಸು ಗಳಿಸಿದ್ದಾರೆ.

2014ರಲ್ಲಿ ಕೇವಲ ನಾಲ್ಕು ಸಿಂಧಿ ಆಕಳುಗಳಿಂದ ಹೈನುಗಾರಿಕೆ ಶುರು ಮಾಡಿದರು. ಇದೀಗ 150 ವಿವಿಧ ತಳಿಯ ಹಸುಗಳು ಅವರ ಫಾರಂನಲ್ಲಿ ಇವೆ. ಜೆರ್ಸಿ, ಅಮೃತ್ ಮಹಲ್, ಗೀರ್, ದೇವಣಿ, ಕಿಲಾರಿ ಸೇರಿದಂತೆ ವಿವಿಧ ತಳಿಯ ಹಸುಗಳು ಅಲ್ಲಿವೆ.

ADVERTISEMENT

ಮೊದಲು ಸುತ್ತಲಿನ ಹೊಲಗಳಿಂದ ಜೋಳ, ಭತ್ತದ ಹುಲ್ಲು ತಂದು ಮೇವು ಪೂರೈಸಿಕೊಳ್ಳುತ್ತಿದ್ದರು. ಬಳಿಕ ಅದು ತ್ರಾಸದಾಯಕ ಮತ್ತು ದುಬಾರಿ ಎಂದು ಅರಿತ ಅವರು ತಮ್ಮದೇ ಜಮೀನಿನಲ್ಲಿ ಮೇವು ಬೆಳೆಯಲು ಆರಂಭಿಸಿದರು. ಜೋಳದ ಮೇವು ಬೆಳೆಯುವ ಸುಸಜ್ಜಿತ ಶೈತ್ಯಾಗಾರ ನಿರ್ಮಿಸಿದರು. ಅಲ್ಲಿಯೇ ಮೇವು ಸಂಸ್ಕರಣೆ ಮಾಡಿ ಸಮಸ್ಯೆ ನಿವಾರಿಸಿಕೊಂಡರು.

ಹಾಲಿನ ಉತ್ಪನ್ನಗಳ ತಯಾರಿಕೆ: ಮೊದಮೊದಲು ಹಾಲನ್ನು ಮಾತ್ರ ಸ್ಥಳೀಯ ಡೇರಿಗೆ ಮಾರಾಟ ಮಾಡುತ್ತಿದ್ದ ಅವರು ಕ್ರಮೇಣ ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ತುಪ್ಪ, ಶ್ರೀಖಂಡ ತಯಾರಿಸಲು ಮುಂದಾದರು. ಹಾಲಿನ ಉತ್ಪನ್ನಗಳಿಗೆ ‘ಕೇಸರಿ’ ಎಂದು ತಮ್ಮ ತಾಯಿ ಹೆಸರು ಇಟ್ಟರು.

ಆರಂಭದಲ್ಲಿ ಸಾಗರ ತಾಲ್ಲೂಕಿನ ಕೆಲ ಗ್ರಾಮಗಳಿಗೆ ಮಾರಾಟವಾಗುತ್ತಿದ್ದ ‘ಕೇಸರಿ’ ಹಾಲು ಇಂದು ಬೆಂಗಳೂರಿಗೂ ಪರಿಚಯ ವಾಗಿದೆ. ಹಾಲು ಉತ್ಪಾದನೆಗೆ ಹವಾನಿಯಂತ್ರಿತ ಉತ್ಪಾದನಾ ಘಟಕವಿದೆ. ದೊಡ್ಡ ದೊಡ್ಡ ಯಂತ್ರಗಳಿವೆ.

ಹಾಲಿನ ಉತ್ಪನ್ನಗಳನ್ನು ಸ್ಥಳೀಯವಾಗಿ ಮಾರಾಟ ಮಾಡಿದರೆ ಹೆಚ್ಚಿನ ಗಳಿಕೆ ಸಾಧ್ಯವಿಲ್ಲ ಎಂದು ಅರಿತ ಅವರು, ಖರ್ಚು ಆದಾಯ ಸರಿದೂಗಿಸಲು ಹಾಲಿನ ಉತ್ಪನ್ನಗಳನ್ನು ಇತರ ನಗರಗಳಿಗೂ ಮಾರಾಟ ಮಾಡಲು ಮುಂದಾದರು. ಅದರಲ್ಲಿ ಯಶ ಕಂಡರು.

ಕಾಮತ್ ಸಹೋದರರು ದೊಡ್ಡ ಪ್ರಮಾಣದಲ್ಲಿ ಹೈನುಗಾರಿಕೆ ಆರಂಭಿಸಿದ್ದರಿಂದ ಕೆಲ ಸ್ಥಳೀಯರಿಗೆ ಉದ್ಯೋಗ ದೊರಕಿದೆ.

(ಕಾಮತ್‌ ಸಹೋದರರ ಹೈನುಗಾರಿಕೆ ಫಾರ್ಮ್‌ನಲ್ಲಿರುವ ರಾಸುಗಳು)

ಹಸುಗಳ ಲಾಲನೆ ಪಾಲನೆ, ಹಾಲಿನ ಉತ್ಪನ್ನಗಳ ಮಾರಾಟ, ಮೇವು ಉತ್ಪಾದನೆ ಸೇರಿದಂತೆ ಹಲವು ಕೆಲಸಗಳಿಗೆ ಸ್ಥಳೀಯರನ್ನು ನೇಮಿಸಿಕೊಂಡಿದ್ದಾರೆ. ಇದರಿಂದ ಗ್ರಾಮದ ಕೆಲ ಯುವಕರಿಗೆ ಸಹಾಯವಾಗಿದೆ. ಬೆಂಗಳೂರಿನಲ್ಲಿ ತಮ್ಮ ಹಿಂದಿನ ಉದ್ಯಮದಲ್ಲಿ ಜೊತೆಗಿದ್ದ ಕೆಲ ಉತ್ತರ ಭಾರತದ ಯುವಕರಿಗೂ ಅವಕಾಶ ನೀಡಿದ್ದಾರೆ.

ಹೈನುಗಾರಿಕೆ ಜೊತೆಗೆ ಹಸುಗಳ ಸೆಗಣಿಯಿಂದ ಜೈವಿಕ ಇಂಧನ ತಯಾರಿಸಿ ಗೃಹ ಬಳಕೆಗೆ ಉಪಯೋಗಿಸುತ್ತಿದ್ದಾರೆ. ಅದಲ್ಲದೆ ನೈಸರ್ಗಿಕ ಇಂಧನದ ಬಗ್ಗೆ ಅಪಾರ ಆಸಕ್ತಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಕಾಳಜಿ ಹೊಂದಿದ್ದಾರೆ. ನವೀಕರಿಸಬಹುದಾದ ಇಂಧನ ಮೂಲಗಳನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ.

ಈಗಾಗಲೇ ತಮ್ಮ ಜಮೀನಿನ ಸುತ್ತ ಸೋಲಾರ್ ಶಕ್ತಿಯನ್ನು ಬಳಸಿ ವಿದ್ಯುತ್ ಯಂತ್ರದ ಬೇಲಿ ಅಳವಡಿಸಿದ್ದಾರೆ. ಮಳೆ ನೀರು ಸಂಗ್ರಹದ ಮೂಲಕ ನವೀಕರಿಸಬಹುದಾದ ಇಂಧನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವತ್ತ ಹೆಜ್ಜೆಯನ್ನು ಇಟ್ಟಿದ್ದಾರೆ.

ಪ್ರವಾಸಿ ತಾಣ: ನೂರಾರು ಹಸುಗಳು, ಹಾಲು ಉತ್ಪಾದನಾ ಘಟಕ, ಮೇವು ಕಟಾವು ಯಂತ್ರಗಳು.. ಹೀಗೆ ಆಧುನಿಕ ಹೈನುಗಾರಿಕೆ ಘಟಕದಂತೆ ಕಾಣುವ ಕಾಮತ್ ಸಹೋದರರ ಹೈನುಗಾರಿಕೆ ಯಶಸ್ಸನ್ನು ಕಾಣಲು ದೂರದ ಊರುಗಳಿಂದ ಸ್ಮೇಹಿತರು, ಪರಿಚಯದವರು, ವಿದ್ಯಾರ್ಥಿಗಳು ಬರುತ್ತಿದ್ದಾರೆ. ಹೈನುಗಾರಿಕೆ ಬಗ್ಗೆ ಮಾಹಿತಿ ಪಡೆಯುತ್ತಾರೆ. ತಮ್ಮಲ್ಲಿನ ಮಾಹಿತಿಯನ್ನು ಹಂಚುತ್ತಿದ್ದಾರೆ.

ಸಂಪರ್ಕಕಕ್ಕೆ: 9686587280/ 9945498313.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.