ADVERTISEMENT

ಬಿಸಿಲುನಾಡಿನ ಮಲೆನಾಡು ‘ಜಲದುರ್ಗ’

ಶರಣ ಪ್ಪ ಆನೆಹೊಸೂರು
Published 12 ಅಕ್ಟೋಬರ್ 2015, 19:30 IST
Last Updated 12 ಅಕ್ಟೋಬರ್ 2015, 19:30 IST

ಸುತ್ತಲೂ ಕೃಷ್ಣೆಯ ಜುಳುಜುಳು ನಿನಾದ. ಇದು ಎರಡು ಕವಲಾಗಿ ಹರಿಯುವ ನಡುಗಡ್ಡೆ ಮಧ್ಯೆ ನಿರ್ಮಾಣಗೊಂಡಿರುವ ಅಭೇದ್ಯ ಕೋಟೆಯೇ ಜಲದುರ್ಗ. ತನ್ನ ಸೌಂದರ್ಯದಿಂದ ಇದು  ಬಿಸಿಲುನಾಡಿನ ಮಲೆನಾಡು ಎಂದೇ ಪ್ರಸಿದ್ಧಿ. ದೇವಗಿರಿಯ ಯಾದವರು, ವಿಜಯ ನಗರ ಅರಸರು, ವಿಜಯಪುರದ ಆದಿಲ್ ಶಾಹಿಗಳು, ಮೊಘಲರ ಔರಂಗಜೇಬ್ ಮತ್ತು ಸುರುಪುರದ ನಾಯಕರ ಆಡಳಿತದಲ್ಲಿ ಶ್ರೀಮಂತವಾಗಿ ಮೆರೆದ ಜಲದುರ್ಗ ಕೋಟೆ ಇರುವುದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನಲ್ಲಿ.

ಈ ಕೋಟೆ 12ನೇ ಶತಮಾನದಲ್ಲಿ ಯಾದವರರಿಂದ ನಿರ್ಮಾಣಗೊಂಡಿದೆ ಎಂಬ ಉಲ್ಲೇಖಗಳಿವೆ.  17ನೇ ಶತಮಾನದಲ್ಲಿ ವಿಜಯಪುರದ ಅರಸರು ಮತ್ತು ಆದಿಲ್ ಶಾಹಿಗಳಿಂದ ಕೋಟೆ ಅಭಿವೃದ್ಧಿ ಕಂಡಿದೆ. ವಿಜಯನಗರದ ಅರಸರು, ಆದಿಲ್‌ ಶಾಹಿಗಳು ಈ ಕೋಟೆಯನ್ನು ಬಂದಿಖಾನೆಯಾಗಿ ಬಳಸುತ್ತಿದ್ದರು.

ಕೋಟೆ ನಿರ್ಮಾಣಕ್ಕೆ ದೊಡ್ಡದಾದ ಚೌಕಾಕಾರದ ಕಲ್ಲು, ಕೆಲವೆಡೆ ಉದ್ದವಾದ ದಿಮ್ಮಿ ಕಲ್ಲು, ಇನ್ನೂ ಕೆಲವು ಕಡೆ ಗುಂಡಗಲ್ಲು, ಅನಿಯಮಿತಾಕಾರದ ಕಲ್ಲುಗಳನ್ನು ಬಳಸಲಾಗಿದೆ. ಈ ಕೋಟೆ ಹೆಚ್ಚು ಪ್ರಸಿದ್ಧಿ ಪಡೆದಿರುವುದು ಇಲ್ಲಿನ ತೊಟ್ಟಿಲು ಬುರುಜಿನಿಂದ. ಸಂಗಮನಾಥ ಗುಡಿ ಪಕ್ಕಕ್ಕೆ ಇರುವ ಸುಮಾರು 500ರಿಂದ 600 ಅಡಿ ಎತ್ತರವಿರುವ ಗೋಲಾಕಾರದ ಕೋಟೆ ಇದೆ. ಇದರ ಮೇಲೆ ತೊಟ್ಟಿಲು ಕಟ್ಟಿಸಲಾಗಿತ್ತು.

ಮರಣದಂಡನೆಗೆ ಗುರಿಯಾಗದ ಅಪರಾಧಿಗಳನ್ನು ಈ ತೊಟ್ಟಿಲಿನಲ್ಲಿ ಕೂರಿಸಿ ಅದನ್ನು ಆಳ ಕದಂಕದಲ್ಲಿ ಹರಿಯುವ ನದಿಗೆ ತಳ್ಳಿ ಮರಣದಂಡನೆ ಜಾರಿ ಮಾಡಲಾಗುತ್ತಿತ್ತು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ. ತೂಗು ತೊಟ್ಟಿಲು ಪ್ರಕೃತಿಯ ವಿಕೋಪಕ್ಕೆ ಸಿಲುಕಿ ಹಾಳಾಗಿದೆ.

ಕೋಟೆಯ ಸುತ್ತಲು ಕಾವಲು ಗೋಪುರಗಳಿವೆ. 15 ಕಿ.ಮೀ. ದೂರದವರೆಗೂ ನಿಗಾ ಇರಿಸುವ ಸಲುವಾಗಿ ಇವುಗಳನ್ನು ಎತ್ತರವಾದ ಸ್ಥಳದಲ್ಲಿ ನಿರ್ಮಿಸಲಾಗಿದೆ. ಕೋಟೆಯಲ್ಲಿ ಗಂಗಾಧರ, ನೀಲಮ್ಮ, ಯಲ್ಲಮ್ಮ, ಸಂಗಮೇಶ್ವರ, ಈಶ್ವರ ದೇವಾಲಯಗಳಿವೆ. ಬಸವಣ್ಣನ, ಹನುಮಂತನ ಕಟ್ಟೆಗಳಿವೆ. ಸಂಗಮೇಶ್ವರ ದೇವಸ್ಥಾನ ಹಿಂದೂ ಮತ್ತು ಇಸ್ಲಾಮಿಕ್ ವಾಸ್ತು ಶೈಲಿ ಹೊಂದಿದೆ.

ದೇವಾಲಯದ ಮುಂಭಾಗದ ಉರ್ದು ಹಾಗೂ ಸಂಸ್ಕೃತ ಭಾಷೆಯ ಶಾಸನವಿದೆ. ಈ ದೇವಾಲಯಕ್ಕೆ ಹಿಂದೂ ಹಾಗೂ ಮುಸ್ಲಿಂ ಭಕ್ತರಿದ್ದಾರೆ. ಸಂಗಮೇಶ್ವರ ಗುಡಿ ಪಕ್ಕದಲ್ಲಿ ಸಿಡಿಲು ಬಾವಿ ಇದೆ. ಸಿಡಿಲು ಬಡಿದ ರಭಸಕ್ಕೆ ಕೊರೆದು ಆದ ಬಾವಿ ಇದು ಎಂಬ ಪ್ರತೀತಿ ಇದೆ. ಆದರೆ, ಈ ಬಾವಿ ವ್ಯವಸ್ಥಿತವಾಗಿ ತೋಡಿದ ಬಾವಿಯಂತೆಯೇ ಕಾಣುತ್ತದೆ. 

ಜಲದುರ್ಗದಲ್ಲಿ ಅನೇಕ ಗಿಡ ಮೂಲಿಕೆಗಳಿವೆ. ಇದು ರಾಜಕಾಲದ ವನಸ್ಪತಿ ವನಕೂಡ ಆಗಿತ್ತಂತೆ.  ಈಗಲೂ ರಾಜ್ಯ ಹಾಗೂ ಹೊರ ರಾಜ್ಯದ ಜನರು ಬಂದು ಗಿಡಮೂಲಿಕೆ ತೆಗೆದುಕೊಂಡು ಹೋಗುತ್ತಾರೆ ಎನ್ನುತ್ತಾರೆ ಸ್ಥಳೀಯರು.

ಹೀಗೆ ಬನ್ನಿ: ಲಿಂಗಸುಗೂರಿನಿಂದ ಪಶ್ಚಿಮಕ್ಕೆ 22 ಕಿ.ಮೀ, ನಾರಾಯಣಪುರ ಡ್ಯಾಂನಿಂದ ಪೂರ್ವಕ್ಕೆ 18 ಕಿ.ಮೀ. ದೂರದಲ್ಲಿದೆ ಜಲದುರ್ಗ. ಲಿಂಗಸುಗೂರಿನಿಂದ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಮೂರು ಬಾರಿ, ಈಶನ್ಯಾ ರಸ್ತೆ ಸಾರಿಗೆ ಬಸ್ಸುಗಳ ಸೌಲಭ್ಯ ಇದೆ. ಉಳಿದ ವೇಳೆ ಖಾಸಗಿ ವಾಹನಗಳಾದ ಟಂಟಂ ಆಟೊಗಳಿವೆ. ಆಹಾರ  ಮತ್ತು ನೀರನ್ನು ಪ್ರವಾಸಿಗರೇ ತಂದರೆ ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.