ADVERTISEMENT

ಬಿಸಿಲ ರಸಧಾರೆ...

ಪ್ರಸಾದ್ ಶೆಣೈ ಆರ್ ಕೆ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
ಬಿಸಿಲ ರಸಧಾರೆ...
ಬಿಸಿಲ ರಸಧಾರೆ...   

ಪಶ್ಚಿಮಘಟ್ಟದ ಮಡಿಲಲ್ಲಿ ಮಗುವಿನಂತೆ ಬೆಚ್ಚಗೇ ಮಲಗಿರುವ ಪುಟ್ಟ ಊರು ಹೆಬ್ರಿ. ಕಣ್ಣಲ್ಲೆಲ್ಲಾ ಉಲ್ಲಾಸದ ಹಚ್ಚೆ ಹಚ್ಚುವ ಪಚ್ಚೆ ಗದ್ದೆಗಳು. ಎಲ್ಲೋ ದೂರದಿ ಇನ್ನೇನು ಮಾತಾಡುವಂತೆ ನಿಂತಿರುವ ದೈತ್ಯ ಹಸಿರುಗುಡ್ಡಗಳ ನಿರಾಡಂಬರ ಚೆಲುವು. ಮಾರ್ಚ್‌ನ ಹಿತವಾದ ಹವಾ, ಬಿಸಿಲಿನಲ್ಲೂ ಆಗೊಮ್ಮೆ, ಈಗೊಮ್ಮೆ ನಾನಿದ್ದೇನೆ ಅಂತ ಮೈಮೇಲೆ ಸುಳಿದಾಡಿ, ಅಷ್ಟೇ ವೇಗದಲ್ಲಿ ಬಿಸಿಲಿನಲ್ಲಿ ಮಂಗಮಾಯ. ಇಂತಹ ಅನುಭವ ಪಡೆಯುತ್ತಾ ಹೆಬ್ರಿ-ಸೋಮೇಶ್ವರದ ಹಸಿರ ದಾರಿ ಹಿಡಿದರೆ ಕೂಡ್ಲು ಜಲಪಾತ ನೋಡುವ ಆಸೆಗೆ ಇನ್ನಷ್ಟು ರೆಕ್ಕೆ ಮೂಡುತ್ತದೆ.

‘ಇನ್ನೇನು ಬಿಸಿಲು ಹಿಡಿಯಿತು, ನೀರೆಲ್ಲಿರುತ್ತದೆ ಮಾರಾಯ್ರೆ? ಮಳೆಗಾಲದಲ್ಲಿ ಬರಬೇಕಪ್ಪಾ ಈಗೆಂತ ಜಲಪಾತದ ಸೊಗಸು?’ ಎಂದು ನೀವು ನಿರಾಸಕ್ತರಾಗಬಹುದು. ನಾವೂ ಹಾಗೇ ಅಂದುಕೊಂಡು ಆಗುಂಬೆ ಮಾರ್ಗದ ಬಳುಕಿನ ದಾರಿಯಲ್ಲಿರುವ ಕೂಡ್ಲುತೀರ್ಥ ಜಲಪಾತದ ದಾರಿ ಹಿಡಿದರೆ, ದೂರದಲ್ಲೆಲ್ಲೋ ಜಲಪಾತದ ಜೋಗುಳ ಕಿವಿಯ ತೂಗಿಸುತ್ತಿತ್ತು. ಅದಕ್ಕೆ ಬೇರೆ ಹಿನ್ನೆಲೆಯಾಗಿ ಜುಗಲ್‍ಬಂದಿ ನೀಡುವ ಕಾಜಾಣ ಹಕ್ಕಿಗಳ ಹಾಡು. ಕಾಡಿನ ದಾರಿಯನ್ನು ಇನ್ನಷ್ಟು ಆಪ್ತವಾಗಿಸುತ್ತ ಜಲಪಾತದತ್ತ ಕರೆದೊಯ್ಯುವಾಗ ಕಾಡುದಾರಿಯ ತಂಪಿನ ನಡುವೆ ಬಿಸಿಲ ರಂಗವಲ್ಲಿ ವರ್ಣರಂಜಿತವಾಗಿ ಆಗಷ್ಟೇ ಮೂಡುತ್ತಿತ್ತು. ಮತ್ತೂ ನಡೆಯುತ್ತ ಹೋದಂತೆಲ್ಲಾ ಪಕ್ಕದಲ್ಲೇ ಮುಗಿಲ ನೆತ್ತಿಗೆ ತಾಗಿದಂತೆ ನಿಂತಿರುವ ಹಸಿರ ಬೆಟ್ಟದ ತುದಿ. ಒಮ್ಮೆ ಭಯಾನಕವಾಗಿ, ಮತ್ತೊಮ್ಮೆ ರಮಣೀಯತೆಯಿಂದ ‘ಬನ್ನಿ ನನ್ನ ಬಳಿ’ ಅಂತ ಕರೆದಂತಾಗಿ ಉಲ್ಲಾಸ ಹೆಚ್ಚಿತ್ತು. ಬಳಲಿಕೆಯಾದರೂ ತನ್ನ ಚೆಲುವಿನಿಂದ ಸಮಾಧಾನಪಡಿಸುವ ಸಹ್ಯಾದ್ರಿಯ ಆ ಹಸಿರೇ ಹೀಗಿರುವಾಗ, ಇನ್ನು ಇಲ್ಲೇ ಧುಮ್ಮಿಕ್ಕುವ ಕೂಡ್ಲು ಹೇಗಿರಬಹುದಪ್ಪಾ ಅಂತ ಯೋಚಿಸುವಷ್ಟರಲ್ಲಿ ನೀರು ಧುಮ್ಮಿಕ್ಕುವ ಸದ್ದು ಕಿವಿಗೆ ಹತ್ತಿರಾಗತೊಡಗಿತು.

ನೋಡನೋಡುತ್ತಿದ್ದಂತೆಯೇ ಒಮ್ಮೆ ಹಾಲ ಪುಡಿಯಂತೆ, ಮತ್ತೊಮ್ಮೆ ಹಾಲಿನಂತೆಯೇ ಉದುರುತ್ತಿದ್ದ ಕೂಡ್ಲುವಿನ ಜಲ ವೈಭವಕ್ಕೆ ಮನವರಳಿ ಹೂವಾಗದೇ ಇರಲಿಲ್ಲ.

ADVERTISEMENT

ನೆತ್ತಿ ಮೇಲೆ ನೋಡಿದರೆ ಯಾವುದೋ ನಾಡಿನಿಂದ ಬಂದ ಕಿನ್ನರರಂತೆ ಹಾಸಿಕೊಂಡಿರುವ ಸೂರ್ಯನ ಆಹ್ಲಾದಕರ ಕಿರಣಗಳು ಕಾಡ ತುಂಬೆಲ್ಲಾ ಹೊಕ್ಕಿ, ಹಸಿರಿಗೆ ಬೆಳಕಿನ ಕಣ್ಣು ಬಂದಂತಿತ್ತು. ಸೂರ್ಯನಿಂದಲೇ ಗಂಗೆ ಉದಯಿಸಿ ಜಲಪಾತವಾಗಿ ಉಕ್ಕುವಳೋ ಎನ್ನುವ ಭಾವ ಮೂಡುತ್ತಿದ್ದಂತೆಯೇ ಕೂಡ್ಲುವಿನ ನೀರ ಸಂಗೀತ ಎಲ್ಲಾ ಯೋಚನೆಗಳನ್ನೂ, ಜಂಜಡಗಳನ್ನೂ, ಭ್ರಮೆ, ಅಹಂಗಳನ್ನೂ ಮರೆಸಿ ನಾವಿನ್ನೂ ಕಂಡಿರದ ಚೆಂದದ ಲೋಕಕ್ಕೆ ಕರೆದುಕೊಂಡು ಹೋಗಿ ನಲಿಸುತ್ತಿತ್ತು.

ಬತ್ತದ ಜಲಧಾರೆ: ಈಚೆಗಷ್ಟೇ ತಾಲ್ಲೂಕು ಕೇಂದ್ರವೆಂದು ಘೋಷಣೆಯಾಗಿರುವ ಹೆಬ್ರಿಯಲ್ಲಿ ಉತ್ತಮ ಮಳೆ ಸುರಿದಿದ್ದರಿಂದಲೋ ಏನೋ ನದಿ ಮೂಲಗಳು ಹೇಳುವಷ್ಟು ಬರಿದಾಗಿಲ್ಲ. ಹೆಬ್ರಿಯ ಸೀತಾ ನದಿ ಹರಿದು ಕೂಡ್ಲು ಜಲಪಾತಕ್ಕೆ ಸೇರಿ ಧಾರೆಯಾಗುವುದರಿಂದ ಕೂಡ್ಲು ತನ್ನ ಕಳೆಯನ್ನು ಕಳೆದುಕೊಂಡಿಲ್ಲ. ಹಾಗೇ ಧುಮ್ಮಿಕ್ಕುವ ಕೂಡ್ಲು, ಆಗುಂಬೆ ಕಾಡಿನತ್ತ ಇನ್ನಷ್ಟು ಜಲಧಾರೆಯಾಗಿ ಚಿಮ್ಮುತ್ತದೆ.

ಸೀತೆಯಿಂದ ಹರಿಯುವ ಕೂಡ್ಲು, ತಾನೇ ಬೇರೆ ಎಂಬಂತೆ ಹರಿಯುವ ನೋಟ ಕಣ್ಣಿಗೆ ಹಬ್ಬದೂಟ. ಸುಮಾರು 180 ಅಡಿ ಎತ್ತರದಿಂದ ಸುರಿದು ನೀಳವಾಗಿ ಇಳೆಗೆ ಉದುರಿ ಸ್ವರ್ಗವಾಗುವ ಕೂಡ್ಲುವಿನ ಮುತ್ತಿನ ಹನಿಗಳನ್ನು ಬೊಗಸೆಯಲ್ಲಿ ಹಿಡಿದರೆ ಸ್ವರ್ಗ ಲೋಕದ ಅನರ್ಘ್ಯ ನಿಧಿಯೊಂದು ದೊರತಂತಾಗುತ್ತದೆ. ಫ್ರಿಜ್‌ನಲ್ಲಿರುವ ಐಸ್ ನೀರಿಗಿಂತಲೂ ತಂಪಾಗಿರುವ ಇಲ್ಲಿನ ನೀರು ಅತ್ಯಂತ ಪರಿಶುದ್ಧ. ಕಾಡ ಬೆಳದಿಂಗಳು ಅದೆಷ್ಟು ಚೆಂದವೋ? ಕಾಡ ಬಿಸಿಲು ಕೂಡ ಅಷ್ಟೇ ಚೆಂದ ಅನ್ನುವ ಸತ್ಯ ಅನುಭವಿಸಬೇಕಾದರೆ ಕೂಡ್ಲುವಿನ ಬಗಲಲ್ಲೊಮ್ಮೆ ಸೆರೆಯಾಗಬೇಕು. ಏನೇ ಹೇಳಿ, ಬಿಸಿಲಲ್ಲಿ ಕಾಣುವ ಜಲಪಾತಗಳಿಗೆ ಒಂದು ಸೊಗಸು, ಮಳೆಗಾಲದಲ್ಲಿ ಉಕ್ಕುವ ಜಲಪಾತಗಳಿಗೇ ಮತ್ತೊಂದು ಸೊಗಸು. ಆದರೂ ಎಲ್ಲಾ ಕಾಲಗಳನ್ನೂ ಮರೆಸುವ ಶಕ್ತಿ ಕೂಡ್ಲು ಜಲಪಾತಕ್ಕಂತೂ ಇದೆ.

ಹಸಿರು, ಬೆಟ್ಟ, ಮೌನ, ಕಾನನದ ತಂಗಾಳಿ, ಹಕ್ಕಿ ಹಾಡು, ಬಿಸಿಲ ಪ್ರಖರತೆಯಲ್ಲಿ ಸಿಗುವ ಕಾಡಿನ ನೆರಳ ದಾರಿಗಳು, ಇವೆಲ್ಲ ಬದುಕನ್ನು ಇನ್ನಷ್ಟು ಚಂದಗಾಣಿಸುತ್ತವೆ ಎನ್ನುವ ಸತ್ಯ ಕಂಡುಕೊಂಡವರಂತೆ ನಾವು ಕಾಡಿನ ಧ್ಯಾನಕ್ಕೆ ನಿರ್ಲಿಪ್ತರಾದಾಗ ಮಟ ಮಟ ಮಧ್ಯಾಹ್ನದ ಬಿಸಿಲು. ಆದರೂ ಕೂಡ್ಲುವಿನ ಥಂಡಿಯ ಸನಿಹದಲ್ಲಿ ಯಾವ ಬಿಸಿಲೂ ನಾಟಲಿಲ್ಲ. ನಾಟಿದ್ದು ಕೂಡ್ಲುವಿನ ಸೊಗಸಷ್ಟೆ.

ಕಾಡು ಹಾಳು ಮಾಡದಿರಿ: ಮೋಜು ಮಸ್ತಿ ಅಂತೆಲ್ಲಾ ಕಾಡಿನ ಹಸಿರನ್ನೂ, ಹೆಸರನ್ನೂ ಮರೆಯುವರು ಇಲ್ಲಿ ಜಾಸ್ತಿಯಾಗುತ್ತಿದ್ದಾರೆ. ಕಾಡಿನ ಮೇಲೆ ಅಲ್ಲಿನ ಜೀವ ಸಂಕುಲಗಳಿಗೆ ನಮಗಿಂತಲೂ ಜಾಸ್ತಿ ಹಕ್ಕಿದೆ ಅನ್ನುವುದು ಇಲ್ಲಿಗೆ ಬರುವವರಿಗೆ ನೆನಪಿಲ್ಲದಿರುವುದು ದುರಂತ. ಇಂತಹ ವಿಹಂಗಮ ತಾಣಗಳಲ್ಲಿ ಕೆಲ ಫೇಕರಿಗಳು ಕುಡಿದು ಎಸೆದ ಬಾಟಲಿಗಳು ಚೂರಾಗಿ ರಾತ್ರಿ ಕಾಡಲ್ಲಿ ಸಂಚಾರ ಮಾಡುವ ಕಡವೆ ಜಿಂಕೆಗಳಂತಹ ಸಾಧುಪ್ರಾಣಿಗಳ ಕಾಲು ಹೊಕ್ಕಿ ಅವುಗಳ ಕಾಲು ಊನಗೊಂಡ ಉದಾಹರಣೆಗಳೂ ಇವೆ ಎನ್ನುವುದು ಈ ಪ್ರದೇಶವನ್ನು ಸೂಕ್ಷ್ಮವಾಗಿ ಗ್ರಹಿಸಿರುವ ಕೆಲ ಚಾರಣಿಗರ ಮಾತು.

ಇಲ್ಲಿ ಸುತ್ತಾಟ ನಡೆಸುವವರು ಪ್ಲಾಸ್ಟಿಕ್, ಬಾಟಲಿ ಸೇರಿದಂತೆ ಯಾವುದೇ ವಸ್ತುಗಳನ್ನು ಎಸೆಯದೆ ಹೊಣೆಗಾರಿಕೆ ತೋರಬೇಕಿದೆ. ನೀರಿಗಿಳಿದು ಸ್ನಾನ ಮಾಡಲು ಸಾಬೂನಿನಂತಹ ರಾಸಾಯನಿಕಗಳನ್ನೂ ಬಳಸಿ ಜಲಚರಗಳಿಗೆ ಸಿಗುವ ನೀರು ಅಶುದ್ಧವಾಗದಂತೆ ತಡೆಗಟ್ಟಬೇಕಿದೆ.
***
ಎಲ್ಲಿದೆ ಈ ಕೂಡ್ಲು ತೀರ್ಥ?

ಕೂಡ್ಲುವಿಗೆ ಕಾರ್ಕಳ ತಾಲ್ಲೂಕಿನಿಂದ 32 ಕಿ.ಮೀ. ಆಗುಂಬೆಯಿಂದ 26 ಕಿ.ಮೀ. ದೂರವಿದೆ. ಹೆಬ್ರಿ ಪೇಟೆಯಿಂದ ಸೋಮೇಶ್ವರ -ಆಗುಂಬೆ ದಾರಿಯಲ್ಲಿ ಸುಮಾರು 20 ಕಿ.ಮೀ. ಸಾಗಿದಾಗ ಅಲ್ಲಿಂದ ಕೂಡ್ಲು ತೀರ್ಥಕ್ಕೆ ಹೋಗುವ ದಾರಿ ಸಿಗುತ್ತದೆ.

ಮಳೆಗಾಲದಲ್ಲಿ ಇಲ್ಲಿಗೆ ಪ್ರವೇಶವಿಲ್ಲ. ಅಕ್ಟೋಬರ್ ಬಳಿಕ ಪ್ರವೇಶವಿದೆ. ಸ್ವಂತ ವಾಹನದಲ್ಲಿ ಅಥವಾ ಇಲ್ಲಿ ಲಭ್ಯವಿರುವ ಆಟೊಗಳನ್ನು ಬಳಸಿ ಹೋಗಬಹುದು. ರಸ್ತೆ ತೀರಾ ಹಾಳಾಗಿದ್ದು ಜಾಗರೂಕತೆಯಿಂದ ಸಾಗಬೇಕು. ಅರಣ್ಯ ಇಲಾಖೆ ಇಲ್ಲಿ ಪ್ರವಾಸಿಗರಿಗೆ ವಿಧಿಸುವ ಶುಲ್ಕದಿಂದಲೇ ತಿಂಗಳಿಗೆ ಲಕ್ಷಗಟ್ಟಲೇ ಆದಾಯ ಗಳಿಸುತ್ತಿದ್ದರೂ ರಸ್ತೆ ಮಾತ್ರ ಇನ್ನೂ ಹಾಳು ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.