ADVERTISEMENT

ಮಣ್ಣಿಗೆ ಬಲ ತುಂಬುವ ಜೀವಂತ ಹೊದಿಕೆ

ಗಣಂಗೂರು ನಂಜೇಗೌಡ
Published 19 ಜೂನ್ 2017, 19:30 IST
Last Updated 19 ಜೂನ್ 2017, 19:30 IST
ನಾಗರಾಜೇಗೌಡ ಅವರು ‘ಜೀವಂತ ಹೊದಿಕೆ’ ಪದ್ಧತಿಯಲ್ಲಿ ಬೆಳೆದಿರುವ ಬಾಳೆ ತೋಟ
ನಾಗರಾಜೇಗೌಡ ಅವರು ‘ಜೀವಂತ ಹೊದಿಕೆ’ ಪದ್ಧತಿಯಲ್ಲಿ ಬೆಳೆದಿರುವ ಬಾಳೆ ತೋಟ   

ಮಣ್ಣಿನ ತಾಕತ್ತು ಹೆಚ್ಚಿಸಬಲ್ಲ ‘ಜೀವಂತ ಹೊದಿಕೆ’ ಪದ್ಧತಿಯ ನೈಸರ್ಗಿಕ ಕೃಷಿ ಪ್ರಯೋಗದ ಮೂಲಕ ಯಶ ಕಂಡವರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಚಂದಗಿರಿಕೊಪ್ಪಲು ಗ್ರಾಮದ ರೈತ ನಾಗರಾಜೇಗೌಡ. ನೈಸರ್ಗಿಕ ಕೃಷಿಯಲ್ಲಿ ತೊಡಗಿರುವ ಅವರು, ಎರಡು ವರ್ಷಗಳಿಂದ ಈಚೆಗೆ ಜೀವಂತ ಹೊದಿಕೆ ಪದ್ಧತಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಅಡಿಕೆ, ನುಗ್ಗೆ, ತೆಂಗು ಇತರ ಬೆಳೆಗಳನ್ನು ಬೆಳೆಯುವ ಜಮೀನಿನ ಮೇಲ್ಮೈ ಭಾಗ ಸದಾ ಹಸಿರಿನಿಂದ ಮುಚ್ಚಿರುವಂತೆ ನೋಡಿಕೊಳ್ಳುವುದು ಈ ಪದ್ಧತಿಯ ಮುಖ್ಯ ಲಕ್ಷಣ. ಇಲ್ಲಿ ಪ್ರಧಾನ ಬೆಳೆಯ ಜತೆಗೆ ಪೂರಕ ಅಥವಾ ಉಪ ಬೆಳೆಗಳನ್ನು ಬೆಳೆಯುವ ಮೂಲಕ ಹಸಿರು ಹೊದಿಕೆ ತನ್ನಿಂತಾನೆ ಸೃಷ್ಟಿಯಾಗುವಂತೆ ಮಾಡಲಾಗಿದೆ.

ನಾಗರಾಜೇಗೌಡ ಅವರ 3 ಎಕರೆ 20 ಗುಂಟೆ ವಿಸ್ತೀರ್ಣದ ತೋಟದಲ್ಲಿ ಬಾಳೆ ಪ್ರಧಾನ ಬೆಳೆಯಾಗಿದ್ದು ಫಲ ಕೊಡಲಾರಂಭಿಸಿದೆ. ಬಾಳೆ ಜತೆಗೆ ಅಂತರ ಬೆಳೆಯಾಗಿ ನುಗ್ಗೆ, ತೆಂಗು, ಕುಂಬಳ; ದ್ವಿದಳ ಧಾನ್ಯ ಬೆಳೆಗಳಾದ ಅಲಸಂದೆ, ತೊಗರಿ, ಉದ್ದು, ಉರುಳಿ ಬೆಳೆಯನ್ನೂ ಬೆಳೆಯುತ್ತಿದ್ದಾರೆ. ಅಲ್ಲಲ್ಲಿ ಹಸಿ ಮೆಣಸಿನಕಾಯಿ ಗಿಡಗಳಿವೆ.

ADVERTISEMENT

ಸ್ಥಳಾವಕಾಶ ಇರುವ ಕಡೆ ಹಸಿರೆಲೆ ಗೊಬ್ಬರ ಕೊಡುವ ಗ್ಲಿರಿಸಿಡಿಯಾ, ಅಗಚೆ ಗಿಡಗಳನ್ನೂ ಬೆಳೆಸಿದ್ದಾರೆ.  ತೋಟದ ಸುತ್ತಲೂ ಸಿಲ್ವರ್‌್, ಬೀಟೆ, ಸಾಗವಾನಿ, ನೇರಳೆ, ಕಿತ್ತಲೆ, ಮೂಸಂಬಿ, ನಾಟಿ ಬೇವು, ಹೆಬ್ಬೇವು ಗಿಡಗಳಿವೆ. ಕೀಟಗಳ ಹಾವಳಿ ತಡೆಗೆ ಅಲ್ಲಲ್ಲಿ ಚೆಂಡು ಹೂ ಬೆಳೆದಿದ್ದಾರೆ. ಮಣ್ಣಿಗೆ ಪ್ರಖರ ಬಿಸಿಲಿನ ತಾಪ ತಟ್ಟದಂತೆ ವ್ಯವಸ್ಥೆಗೊಳಿಸಿದ್ದಾರೆ. ಅತಿವೃಷ್ಟಿ ಉಂಟಾದ ಸಂದರ್ಭದಲ್ಲಿ ಬೆಳೆಗೆ ಶೀತ ಹಿಡಿಯದಂತೆ ಪ್ರಧಾನ ಬೆಳೆಯ ಎರಡು ಸಾಲುಗಳ ಮಧ್ಯದಲ್ಲಿ ಟ್ರೆಂಚ್‌ ತೆಗೆಯಲಾಗಿದೆ.

ಈ ಟ್ರೆಂಚ್‌ ಬಸಿಗಾಲುವೆಯಂತಿದ್ದು, ಅತಿಯಾದ ನೀರನ್ನು ಹೀರಿಕೊಳ್ಳಲು ಮತ್ತು ಗಿಡಕ್ಕೆ ನೀರಿನ ಕೊರತೆಯಾದರೆ ಗಿಡಗಳಿಗೆ ಅಗತ್ಯ ತೇವಾಂಶ ಬಿಟ್ಟುಕೊಡಲು  ಸಹಕಾರಿಯಾಗಿದೆ. ಅವರ ತೋಟದಲ್ಲಿ ರಾಸಾಯನಿಕ ಗೊಬ್ಬರಕ್ಕೆ ಜಾಗವಿಲ್ಲ.

ನಾಗರಾಜೇಗೌಡ ತಮ್ಮ ಬೆಳೆಗೆ ರಸಗೊಬ್ಬರ ಕೊಡುವ ಬದಲು ಜೀವಾಮೃತ ಉಣಬಡಿಸುತ್ತಿದ್ದಾರೆ. ಹನಿ ನೀರಾವರಿ ಅಥವಾ ತುಂತುರು ನೀರಾವರಿ ಪದ್ಧತಿ ಅಳವಡಿಸಿದ್ದರೆ ನೀರಿನ ಜತೆ ಜತೆಯಲ್ಲೇ ಗಿಡಗಳಿಗೆ ಜೀವಾಮೃತ ಕೊಡಬಹುದು. ಬಿಂದಿಗೆ ಮೂಲಕವೂ ಬುಡಕ್ಕೆ ಹಾಕಬಹುದು. ನಾಟಿ ಸಮಯದಲ್ಲಿ ಪೈರುಗಳನ್ನು ಬೀಜಾಮೃತದಿಂದ ಸಂಸ್ಕರಿಸಿ ನಾಟಿ ಮಾಡುವುದರಿಂದ ಗಿಡಗಳು ಹುಲುಸಾಗಿ ಬೆಳೆಯುತ್ತವೆ ಎಂದು ಈ ಯಶಸ್ವಿ ರೈತ ಹೇಳುತ್ತಾರೆ.

ತೋಟದಲ್ಲಿ ತುಂತುರು ನೀರಾವರಿ (ಸ್ಪ್ರಿಂಕ್ಲರ್‌) ಪದ್ಧತಿ ಅಳವಡಿಸಿದ್ದು, ಆ ಮೂಲಕ  ಜೀವಾಮೃತ ಕೊಡಲಾಗುತ್ತಿದೆ. ಇದರಿಂದ ಬೆಳೆಯ ಜತೆಗೆ ಇಡೀ ತೋಟಕ್ಕೆ ಜೀವಾಮೃತದ ಅಂಶ ದೊರೆತು ಪೂರಕ ಬೆಳೆಗಳಿಗೂ ಅನುಕೂಲವಾಗುತ್ತದೆ.

‘ಜೀವಂತ ಹೊದಿಕೆ ಪದ್ಧತಿ ದೀರ್ಘಾವಧಿ ತೋಟಗಾರಿಕೆ ಬೆಳೆಗಳಿಗೆ ಹೆಚ್ಚು ಉಪಯುಕ್ತ. ಈ ಪದ್ಧತಿಯಿಂದ ಆರಂಭದ ಒಂದೆರಡು ವರ್ಷ ಅಷ್ಟೇನೂ ಲಾಭ ಸಿಗುವುದಿಲ್ಲ ಎನ್ನುವುದು ನಿಜ. ಆದರೆ ಮಣ್ಣಿನ ಫಲವತ್ತತೆ ಶ್ರೀಮಂತಗೊಂಡು ಬೆಳೆ ಅದರ ರಸವನ್ನುಣ್ಣಲು ಶುರು ಮಾಡಿದ ಬಳಿಕ ನಿರೀಕ್ಷಿತಲಾಭ ಪಡೆಯಬಹುದು ಎನ್ನುವುದು ನಾಗರಾಜೇಗೌಡ ಅವರ ಸಲಹೆ. ಸಂಪರ್ಕಕ್ಕೆ:9448245957. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.