ADVERTISEMENT

ಮನೆ ಮನಗಳಲ್ಲಿ ಗೂಡು ಕಟ್ಟಿ...

ಪ್ರಜಾವಾಣಿ ಚಿತ್ರ
Published 2 ಮೇ 2016, 19:54 IST
Last Updated 2 ಮೇ 2016, 19:54 IST
-ನೀಲರಾಜ ಪಕ್ಷಿ
-ನೀಲರಾಜ ಪಕ್ಷಿ   

ಹಸಿರಿನ ಸಿರಿಯಿಂದ ಆವೃತವಾಗಿದ್ದ ನಾಡಲ್ಲಿ ಒಂದೊಂದೇ ಮರಗಳು ನೆಲಕಚ್ಚುತ್ತಿರುವ ಸಂದರ್ಭದಲ್ಲಿ ಹಸಿರಿಗಾಗಿ ಹಪಹಪಿಸುವ ಹಕ್ಕಿಗಳ ಪಾಡು ಕೇಳುವವರೇ ಇಲ್ಲ. ಆದರೂ ಅನಿವಾರ್ಯವಾಗಿ ಸಿಕ್ಕ ಜಾಗಗಳಲ್ಲೇ ಗೂಡುಗಳನ್ನು ಕಟ್ಟಿ ತಮ್ಮ ಜೀವನ ಚಕ್ರವನ್ನು ಸರಿದೂಗಿಸುತ್ತಿವೆ. ಅದಕ್ಕೆ ಉದಾಹರಣೆಗಳು ಧಾರವಾಡದ ಹಲವು ಪರಿಸರ ಪ್ರೇಮಿಗಳ ಮನೆಯೊಳಗೇ ಕಾಣಸಿಗುತ್ತವೆ. ಅಪರೂಪ ಎನಿಸಿರುವ ಪಕ್ಷಿಗಳು ಮೊಕ್ಕಾಂ ಹೂಡಿವೆ. 

ಕುರುಚಲು ಕಾಡಿನಲ್ಲಿ ಗೂಡು ಕಟ್ಟಿ ನಲಿದಾಡುವ ಹಕ್ಕಿ ನೀಲರಾಜ. ಅದೀಗ ಕಾಡು ಬಿಟ್ಟು ಉಷಾ ಮತ್ತು ಎಸ್.ಎಲ್.ಕುಲಕರ್ಣಿ ಅವರ ಮನೆಯಲ್ಲಿ ಬಾಣಂತನಕ್ಕೆ  ಬಂದಿದೆ! ಪಕ್ಷಿ ವೀಕ್ಷಕ ಎಸ್.ಎಂ.ಪಾಟೀಲ ಹಾಗೂ ಆರ್.ಜಿ.ತಿಮ್ಮಾಪುರ ಅವರ ಜೊತೆಗೂಡಿ ಹಕ್ಕಿ ನೋಡಲು ಹೋದಾಗ ಅಚ್ಚರಿ. ಏಕೆಂದರೆ ಸ್ನಾನದ ಕೋಣೆಯ ಮೈಸೋಪಿನ ಬಾಕ್ಸ್‌ನ ನಾಜೂಕಾದ ಗೂಡಿನಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿವೆ. ವಿಧವಿಧ ಹಣ್ಣು, ಕೀಟ, ಕಾಳು, ಕಡಿಗಳನ್ನು ತಂದು ಕಸ ಮಾಡಿದರೂ ಅದನ್ನು ಬೇಸರಿಸದೇ ಸ್ವಚ್ಛಗೊಳಿಸುವ ಕಾರ್ಯ ಮನೆಮಂದಿಯದ್ದು.

ಈಗ ಗುಬ್ಬಿಯ ಕಥೆ ಕೇಳಿ.  ಹಸಿರಿನ ಸಿರಿಯಲ್ಲಿ ಚಿವ್‌ ಚಿವ್‌ ಎನ್ನುತ್ತಾ ನಲಿದಾಡಿಕೊಂಡಿರುವ ಹಲವಾರು ಗುಬ್ಬಿಗಳು  ತಿಮ್ಮಾಪುರ ಎಂಬುವರ ಮನೆಯಲ್ಲಿ ಚಿಲಿಪಿಲಿಗುಟ್ಟುತ್ತಿವೆ. ಇವರ ಮನೆಯಲ್ಲಿ ಇಲ್ಲಿಯವರೆಗೆ ಸಾವಿರಾರು ಗುಬ್ಬಿಗಳು ಸಂತಾನೋತ್ಪತಿ ಮಾಡಿವೆ. ‘ನಮ್ಮ ಮನೆಯ ವಾತಾವರಣ ಗುಬ್ಬಿಗೆ ಹಿಡಿಸಿಬಿಟ್ಟಿವೆ. ದಿನವೂ ಹೊಸಹೊಸ ಗುಬ್ಬಿಗಳು ಸೇರಿಕೊಳ್ಳುತ್ತವೆ. ಪಕ್ಷಿಗಳ ಗೂಡಿಗೂ ಅನುಕೂಲ ಆಗುವ ಮನೆ ಕಟ್ಟಿಸಬೇಕು’ ಎನ್ನುತ್ತಾರೆ ತಿಮ್ಮಾಪುರ.

ಇನ್ನು ಪ್ರೊ. ಅರಣು ಹುಯಿಳಗೋಲ ಅವರ ಮನೆಯ ಕಥೆ ಕೇಳಿ. ಇವರ ಮನೆಯಲ್ಲಿ ಪ್ರತಿ ದಿನ ಕುಡಿಯುವ ನೀರಿನ ತಟ್ಟೆಗಳು, ತೊಟ್ಟಿಗಳು ಪಕ್ಷಿಗಳಿಗೆ ಕಾಯುತ್ತಿರುತ್ತವೆ. ಇವುಗಳನ್ನು ಅರಸಿ ಫ್ಯಾನ್‌ಟೇಲ್, ಬುಲ್‌ಬುಲ್, ಬಿಳಿ ಕಣ್ಣಿನ ಹಕ್ಕಿ, ನೀಲರಾಜ ಪಕ್ಷಿಯಂಥ ಅಪರೂಪದ ಹಕ್ಕಿ ಸೇರಿದಂತೆ ಕೆಂಬೂತ, ಕೋಗಿಲೆ, ಕಾಗೆ, ಗಿಳಿ ಎಲ್ಲವೂ ಇಲ್ಲಿ ಬರುತ್ತವೆ.

ವಿದೇಶದಲ್ಲಿರುವ ಮಕ್ಕಳನ್ನು ಪ್ರತಿದಿನ ನೋಡಲು ಆಗುವುದಿಲ್ಲ ಎಂಬ ನೋವನ್ನು ಈ ಹಕ್ಕಿಗಳನ್ನು ನೋಡಿ ಕಳೆದುಕೊಳ್ಳುತ್ತಿದ್ದಾರೆ ಅರಣು. ಅದೇ ರೀತಿ ಅನಿಲ್ ಜೆ.ಮೂಡು ಬಿದರೆ ಅವರ ಮನೆಯಲ್ಲಿ ಬುಲ್‌ಬುಲ್ ಪಕ್ಷಿಗಳು ತಲೆಮಾರುಗಳಿಂದ ವಾಸವಾಗಿದ್ದರೆ, ಡಾ. ಮಾಯಣ್ಣನವರ ಮನೆಯ ಫ್ಯಾನ್, ಮೋಹನ್‌ ಅಣ್ಣಿಗೇರಿ ಮನೆಯಲ್ಲಿ ಲೈಟ್, ಮನೆಯ ಆವರಣದ ವೈರ್‌ಗಳ ಸಂದಿಗೊಂದಿಗಳಲ್ಲೂ ಹಲವು ಪಕ್ಷಿಗಳು ಗೂಡು ಕಟ್ಟಿ ವಾಸಿಸುತ್ತಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.