ADVERTISEMENT

ಯುಗಾದಿ ವಿಶೇಷ: ಮಕ್ಕಳಿಗೆ ಸಕ್ಕರೆ ಸರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 19:30 IST
Last Updated 27 ಮಾರ್ಚ್ 2017, 19:30 IST
ಯುಗಾದಿ ವಿಶೇಷ: ಮಕ್ಕಳಿಗೆ ಸಕ್ಕರೆ ಸರ
ಯುಗಾದಿ ವಿಶೇಷ: ಮಕ್ಕಳಿಗೆ ಸಕ್ಕರೆ ಸರ   

ಮಯೋರಾ

ಯುಗಾದಿ ಹಬ್ಬದಂದು ಉತ್ತರ ಕರ್ನಾಟಕದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಕೊರಳಿನಲ್ಲಿ ಸಕ್ಕರೆ ಸರ ಕಾಣಿಸುತ್ತದೆ. ಅದರಲ್ಲೂ ಜನಪದ ಕಲೆಗಳ ಜೀವಂತಿಕೆಯನ್ನು ಉಳಿಸಿಕೊಂಡಿರುವ ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡದಲ್ಲಿ ಈ ಸಂಪ್ರದಾಯ ಸಾಮಾನ್ಯ.

ಕಟ್ಟಿಗೆಯ ಪಡಿಯಚ್ಚಿನಲ್ಲಿ ಸಕ್ಕರೆ ಪಾಕ ಮಾಡಿ ಹಾಕಿ ಒಂದು ಹುಲಿ ಉಗುರು, ಎಂಟು ಪದಕಗಳನ್ನು ಸಿದ್ಧಪಡಿಸಿ ಮಕ್ಕಳ ಕೊರಳಿಗೆ ಹಾಕುವ ಸಂಪ್ರದಾಯವಿದೆ.

ಯುಗಾದಿ ಪಾಡ್ಯದಂದು ಮಕ್ಕಳಿಗೆ ಹೊಸ ಬಟ್ಟೆ ಹಾಕಿ ಕೊರಳಲ್ಲಿ ಈ ಸಕ್ಕರೆ ಸರ ಹಾಕುತ್ತಾರೆ. ಹೀಗೆ ಮಾಡಿದರೆ ಮಕ್ಕಳಲ್ಲಿ ಧೈರ್ಯ ಬರುತ್ತದೆ, ಮನೆಯಲ್ಲಿ ಸದಾ ಸಂತಸ, ನೆಮ್ಮದಿ ತುಂಬಿರುತ್ತದೆ; ಸಕ್ಕರೆಯ ಸಿಹಿ ಮನೆಯಲ್ಲಿ ನಿತ್ಯ ನೆಲೆಸಿರುತ್ತದೆ ಎಂಬುದು ನಂಬಿಕೆ.

ಸಕ್ಕರೆ ಸರವನ್ನು ಕೂಡ ನಿಯಮ ಬದ್ಧವಾಗಿ ಮಾಡುತ್ತಾರೆ. ಸಕ್ಕರೆ ಸವಿಗೆ ಸಂಕೇತವಾದರೆ, ಹುಲಿ ಉಗುರು ಹಾಕುವುದಕ್ಕೆ ಕಾರಣ ಮಕ್ಕಳಿಗೆ ಭಯ ಎಂಬುದು ಇರಬಾರದು ಎನ್ನುವುದು. ಅದರ ಜೊತೆ ಪದಕ ಹಾಕುವುದು ಏಕೆಂದರೆ ಪದಕವು ಸಿರಿವಂತಿಕೆಯ ಸಂಕೇತ. ಮನೆಯಲ್ಲಿ ಸದಾ ಸಿರಿವಂತಿಕೆ ತುಂಬಿರಲಿ ಎನ್ನುವುದು ಹಿರಿಯರ ಆಶಯ.

ಗುಳೇದಗುಡ್ಡದಲ್ಲಿ ಸುಲೋಚನಾ ಸೂರೇಬಾನ ಕುಟುಂಬ ಕಳೆದ ನಾಲ್ಕು ತಲೆಮಾರುಗಳಿಂದ ಈ ಸಕ್ಕರೆ ಸರ ಮಾಡುವ ಕಾಯಕದಲ್ಲಿ ತೊಡಗಿದೆ. ‘ಈ ಸಂಪ್ರದಾಯಕ್ಕೆ ಅದರದ್ದೇ ಆದ ಮಹತ್ವವಿದೆ. ಅದು ನಶಿಸಬಾರದು ಎನ್ನುವ ಕಾರಣ ನಮ್ಮ ತಾತ, ಮುತ್ತಾತರಿಂದ ನಡೆದು ಬಂದಿರುವ ಈ ಸಂಪ್ರದಾಯವನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ’ ಎನ್ನುತ್ತಾರೆ ಸುಲೋಚನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT