ADVERTISEMENT

ವಿದೇಶಿಗರಿಗೆ ಇಲ್ಲಿ ಅಕ್ಕರೆಯ ಆತಿಥ್ಯ

ಸುಮಾ ಬಿ.
Published 6 ಫೆಬ್ರುವರಿ 2017, 19:30 IST
Last Updated 6 ಫೆಬ್ರುವರಿ 2017, 19:30 IST
ಚಿತ್ರಗಳು:  ಬಿ.ಆರ್‌.ಸವಿತಾ
ಚಿತ್ರಗಳು: ಬಿ.ಆರ್‌.ಸವಿತಾ   
ಆರತಿ ಎತ್ತಿ ‘ಬಿಯಾವೆನ್ಯು’ (ಸುಸ್ವಾಗತ) ಎನ್ನುತ್ತ ಮನೆಯೊಳಗೆ ಸ್ವಾಗತಿಸಿದ್ದನ್ನು ಫ್ರಾನ್ಸ್‌ ದೇಶದ ಪ್ರವಾಸಿಗರು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು. ‘ಇಟ್ಸ್‌ ಇಂಡಿಯನ್‌ ವೆಲ್‌ಕಮ್‌ ಕಲ್ಚರ್‌’ ಎಂದು ಜತೆಗಿದ್ದ ಗೈಡ್‌ ಹೇಳುತ್ತಿದ್ದಂತೆ, ‘ಹೋ’ ಎಂದು ಆನಂದದಿಂದ ತಲೆಯಾಡಿಸಿದರು. ಆರತಿ ನೀರನ್ನು ಪ್ರತಿಯೊಬ್ಬರ ಹಣೆಗೆ ಇಡಲು ಮುಂದಾದಾಗ, ನಾ ಮುಂದು, ತಾ ಮುಂದು ಎಂದು ಮುಗಿಬಿದ್ದರು. 
 
ಹೀಗೆ ಮೈಸೂರಿಗೆ ಬರುವ ಬಹುತೇಕ ವಿದೇಶಿ ಪ್ರವಾಸಿಗರಿಗೆ ಆತಿಥ್ಯ ನೀಡುವ ಈ ಮನೆಯಲ್ಲಿ ಇಂಥ ದೃಶ್ಯಗಳು ಸಾಮಾನ್ಯ. ಭಾರತೀಯ ಪ್ರವಾಸಿತಾಣಗಳನ್ನು ಕಣ್ತುಂಬಿಕೊಂಡು ಈ ಮನೆಗೆ ಭೇಟಿನೀಡುವ ವಿದೇಶಿಗರಿಗೆ ಭಾರತೀಯ ಸಂಸ್ಕೃತಿಯ ದರ್ಶನವಾಗುತ್ತದೆ. ಮನೆಯ ಅನತಿ ದೂರದಿಂದಲೇ ಬ್ಯಾಂಡು ಭಜಂತ್ರಿ ಬಾರಿಸುತ್ತ, ಹೂವಿನ ಹಾರ ಹಾಕಿ, ಆರತಿ ಎತ್ತಿ ಸ್ವಾಗತವೀಯುತ್ತ ಹಣೆಗೆ ತಿಲಕವಿಟ್ಟು ಬರಮಾಡಿಕೊಳ್ಳುವುದು ವಿಶೇಷ.
 
ಮೈಸೂರಿನ ಒಂಟಿಕೊಪ್ಪಲಿನ ಶಶಿಕಲಾ ಅಶೋಕ್‌, ಭಾರತೀಯ ಸಂಸ್ಕೃತಿಯನ್ನು ವಿದೇಶಿಗರ ಮನಕ್ಕೆ ದಾಟಿಸುವ ಕಾರ್ಯದಲ್ಲಿ ಆರು ವರ್ಷಗಳಿಂದ ತೊಡಗಿಕೊಂಡಿದ್ದಾರೆ. ಅಮೆರಿಕ, ಫ್ರಾನ್ಸ್‌, ರಷ್ಯಾ, ಇಸ್ರೇಲ್‌, ಆಸ್ಟ್ರೇಲಿಯಾ, ಇಂಗ್ಲೆಂಡ್‌, ಗ್ರೀಕ್‌ ಹೀಗೆ 50ಕ್ಕೂ ಹೆಚ್ಚು ದೇಶಗಳ ಪ್ರಜೆಗಳು ಈ ಮನೆಗೆ ಭೇಟಿ ನೀಡುತ್ತಾರೆ. ಬಾಳೆಲೆ ಊಟ ಸವಿದು ಇಲ್ಲಿನ ಕೆಲ ಸಂಸ್ಕಾರಗಳನ್ನೂ ಕಲಿತಿದ್ದಾರೆ. ಕೆಲವರು ಕನ್ನಡ ಕಲಿಕೆಗೂ ಮುಂದಾಗಿದ್ದಾರೆ. ಊಟದ ಜತೆಗೆ ಭರತನಾಟ್ಯ ಪ್ರದರ್ಶನ, ಶಾಸ್ತ್ರೀಯ ಸಂಗೀತ, ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತವೆ. ಇಲ್ಲಿಗೆ ಭೇಟಿ ನೀಡಿರುವ ಬಹುತೇಕ ವಿದೇಶಿಗರು ತಮ್ಮ ಪ್ರವಾಸದ ಪ್ರಮುಖ ಆಕರ್ಷಣೆಯಲ್ಲಿ ಈ ಮನೆಯಲ್ಲಿ ಕಳೆದ ಸಮಯವನ್ನೂ ದಾಖಲಿಸಿದ್ದಾರೆ. 2004ರಲ್ಲಿ ನೊಬೆಲ್‌ ಪ್ರಶಸ್ತಿ ಪಡೆದ ಅಮೆರಿಕದ ಡೆವಿಡ್‌ ಗ್ರಾಸ್‌ ಅವರು ಈ ಮನೆಯ ಅತಿಥಿಗಳಲ್ಲೊಬ್ಬರು.
 
ಶಶಿಕಲಾ ಅವರ ಪತಿ ಅಶೋಕ್‌ ಟ್ರಾವೆಲ್‌ ಏಜೆಂಟರು. ವಿದೇಶಿ ಪ್ರವಾಸಿಗರಿಗೆ ತಾಣಗಳ ವೀಕ್ಷಣೆಗೆ ಸಿದ್ಧತೆ ಮಾಡಿಕೊಡುತ್ತಾರೆ. 2010ರಲ್ಲಿ ಜರ್ಮನಿಯಿಂದ ಎರಡು ಕುಟುಂಬಗಳು ಮೈಸೂರಿಗೆ ಬಂದಿದ್ದವು. ಭಾರತೀಯ ಶೈಲಿಯ ಅಡುಗೆ ಸವಿಯುವ ಇಂಗಿತವನ್ನು ಅವರು ಅಶೋಕ್‌ ಬಳಿ ವ್ಯಕ್ತಪಡಿಸಿದರು. ಮಧ್ಯಾಹ್ನದ ಊಟದ ಸಮಯ ಮೀರಿದ್ದರಿಂದ ಪ್ರವಾಸಿಗರನ್ನು ಮನೆಗೆ ಕರೆತಂದರು. ಊಟ ಸವಿದ ಬಳಿಕ ವಿದೇಶಿಗರು ವ್ಯಕ್ತಪಡಿಸಿದ ಸಂತಸ ಶಶಿಕಲಾ ಅವರಲ್ಲಿ ಪ್ರವಾಸಿಗರ ಆತಿಥ್ಯದ ಪರಿಕಲ್ಪನೆಯನ್ನು ಬಿತ್ತಿತು. ವಿದೇಶಿ ಪ್ರವಾಸಿಗರಿಗೆ ಅಪ್ಪಟ ದೇಸಿ ಊಟ ಒದಗಿಸುವುದನ್ನೇ ಕಾಯಕವನ್ನಾಗಿ ಸ್ವೀಕರಿಸಿದರು. ಶತಮಾನದಷ್ಟು ಹಳೆಯ ಮನೆಯನ್ನೇ ‘ಭಾರತೀಯ ಸಂಸ್ಕೃತಿಯ ದರ್ಶನಕ್ಕೆ’ ಮೀಸಲಿಟ್ಟರು.
 
‘2011ರಲ್ಲಿ 30 ವಿದೇಶಿಗರ ತಂಡ ಬಂದಿತು. ಊಟ ಉಣಬಡಿಸಿದರೆ ಸಾಲದು, ಇದರೊಂದಿಗೆ ಇಲ್ಲಿನ ಆಚಾರ ವಿಚಾರಗಳನ್ನೂ ಅವರಿಗೆ ದಾಟಿಸಬೇಕು ಅನಿಸಿತು. ವಾಲಗ, ಬ್ಯಾಂಡು ಭಜಂತ್ರಿಯೊಂದಿಗೆ ಹೂವಿನ ಹಾರ ಹಾಕಿ, ಆರತಿ ಎತ್ತಿ ಸ್ವಾಗತಿಸಿದೆವು. ಇದನ್ನು ವಿದೇಶಿಗರು ಬಹುವಾಗಿ ಮೆಚ್ಚಿಕೊಂಡರು. ಭರತನಾಟ್ಯ, ಸಂಗೀತ ನಂತರ ಸ್ಥಾನ ಪಡೆದವು’ ಎನ್ನುತ್ತಾರೆ ಶಶಿಕಲಾ.
 
ಡಿಸೆಂಬರ್‌ನಿಂದ ಜೂನ್‌ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚು. ತುಂಬು ಹೃದಯದಿಂದ ಮರಳಿದ ವಿದೇಶಿಗರು ‘ಇಂಡಿಯನ್‌ ಕಲ್ಚರ್‌ ಈಸ್‌ ಗ್ರೇಟ್‌’ ಎಂದು ಹಾಡಿ ಹೊಗಳಿದ್ದಾರೆ. 
 
ವಿದೇಶಿಗರಿಗೆಂದೇ ವಿಶೇಷವಾಗಿ ಬಾಳೆಲೆ ಊಟ ಸಿದ್ಧಗೊಂಡಿರುತ್ತದೆ. ಚಪಾತಿ, ಪಲ್ಯ, ಕೋಸಂಬರಿ, ಪಾಯಸ, ಅನ್ನ, ತಿಳಿಸಾರು, ಹಪ್ಪಳ– ಸಂಡಿಗೆ, ಉಪ್ಪಿನಕಾಯಿ... ಹೀಗಿರುತ್ತದೆ ಊಟದ ಮೆನು. ಮಸಾಲದೋಸೆ, ಕೊಬ್ಬರಿ ಚಟ್ನಿ, ಪುಳಿಯೋಗರೆ, ಚಿತ್ರಾನ್ನ, ಮೈಸೂರ್‌ ಪಾಕ್‌ ಸವಿಗೆ ವಿದೇಶಿಗರು ಮಾರುಹೋಗಿದ್ದಾರೆ. ಯಾವ ದೇಶದ ಪ್ರವಾಸಿಗರು ಯಾವ ಬಗೆಯ ಆಹಾರ ಇಷ್ಟಪಡುತ್ತಾರೆ ಎನ್ನುವುದನ್ನು ಶಶಿಕಲಾ ಅರಿತಿದ್ದಾರೆ. ಅವರವರ ಅಭಿರುಚಿಗೆ ತಕ್ಕಂತೆ ಅಡುಗೆ ಸಿದ್ಧಪಡಿಸುತ್ತಾರೆ. ಎಲ್ಲ ಬಗೆಯ ಮೆನುವಿನಲ್ಲೂ ‘ಮೈಸೂರ್‌ ಪಾಕ್‌’ ಇದ್ದೇ ಇರುತ್ತದೆ. ಪ್ರತಿ ಖಾದ್ಯವನ್ನು ಬಡಿಸುವಾಗಲೂ ಅದರ ಕುರಿತು ಸಂಕ್ಷಿಪ್ತ ಮಾಹಿತಿಯನ್ನೂ ನೀಡುತ್ತಾರೆ.
 
ಪ್ರವಾಸಿಗರ ಭೇಟಿ ಮೂರು ತಿಂಗಳ ಮುನ್ನವೇ ನಿಗದಿಯಾಗುತ್ತದೆ. ಪ್ರವಾಸಿ ಏಜೆನ್ಸಿಗಳು ಪ್ರವಾಸದ ವೇಳಾಪಟ್ಟಿಯಲ್ಲಿ ಶಶಿಕಲಾ ಅವರ ಮನೆಗೆ ಭೇಟಿ ನೀಡುವ ದಿನ, ಸಮಯವನ್ನು ಮುಂಚಿತವಾಗೇ ತಿಳಿಸುತ್ತಾರೆ. ಊಟವಷ್ಟೇ ಅಲ್ಲ, ವಿದೇಶಿ ಮಹಿಳೆಯರಿಗೆ ಸೀರೆಯ ಪರಿಚಯವನ್ನೂ ಮಾಡಿಕೊಟ್ಟಿದ್ದಾರೆ ಶಶಿಕಲಾ ಅವರು. ವಿದೇಶಿಯರು ಸೀರೆ ಉಟ್ಟು ಸಂಭ್ರಮಿಸುವಂತೆ ಮಾಡಿದ್ದಾರೆ. ‘ಹೌ ಡಿಫಿಕಲ್ಟ್‌ ಇಟ್‌ ಈಸ್‌’ ಎಂದು ಉದ್ಘರಿಸುತ್ತಲೇ, ಸೀರೆಯ ಚೆಂದವನ್ನು ಸಂಭ್ರಮಿಸಿದ್ದಾರೆ.
 
ಪುರುಷರು ಪಂಚೆ ತೊಟ್ಟಿದ್ದೂ ಉಂಟು. ರಂಗೋಲಿ ಹಾಕುವುದು, ಮೆಹೆಂದಿ, ವಸ್ತ್ರಾಲಂಕಾರ, ಹೂ ಕಟ್ಟುವುದು, ಗಿಡಮೂಲಿಕೆ, ಯೋಗ, ವಿವಾಹ ಸಂಪ್ರದಾಯ, ಅಡುಗೆ ತಯಾರಿ ಹೀಗೆ ವಿದೇಶಿಗರ ಆಸಕ್ತಿ ಮೇರೆಗೆ ಶಶಿಕಲಾ ಮಾಹಿತಿ, ಪ್ರಾತ್ಯಕ್ಷಿಕೆ ನೀಡುತ್ತಾರೆ. ಮಲ್ಲಿಗೆ, ಅರಿಶಿಣ– ಕುಂಕುಮ ಕೊಟ್ಟು ಮಹಿಳೆಯರನ್ನು ಬೀಳ್ಕೊಡುತ್ತಾರೆ.   
 
**
ಬಾಳೆಲೆ ಊಟ ಅದ್ಭುತ ಎನ್ನಿಸಿತು. ಇಲ್ಲಿ ಹಲವಾರು ತಾಣಗಳನ್ನು ನೋಡಿದೆವು. ಈ ಮನೆಗೆ ಭೇಟಿ ನೀಡಿದ್ದು ಸಂತಸದ ಸಮಯ ಎನಿಸಿದೆ. ಭಾರತೀಯ ಸಂಸ್ಕೃತಿ, ಆಚಾರ, ಸಂಸ್ಕಾರಗಳ ಬಗ್ಗೆ ತಿಳಿದುಕೊಂಡೆವು.
–ಜಾನ್‌ ಈವ್‌ ,ಫ್ರಾನ್ಸ್‌
 
**
ಇಲ್ಲಿಗೆ ಬಂದು ಖುಷಿ ಆಯ್ತು. ಊಟ ತುಂಬಾ ಚೆನ್ನಾಗಿದೆ. ಸೀರೆ ಉಡಬೇಕೆಂಬ ಆಸೆ ಇತ್ತು. ಅದು  ಇಲ್ಲಿ ನೆರವೇರಿತು. ಮಲ್ಲಿಗೆ ಹೂ, ಹಣೆಗೆ ಕುಂಕುಮ ಇಡುವ ಭಾರತೀಯ ಸಂಸ್ಕೃತಿ ನಿಜಕ್ಕೂ ಪುಳಕವಾಯಿತು
–ಮಾರ್ಟಿನ, ಫ್ರಾನ್ಸ್‌

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.