ADVERTISEMENT

ವ್ಯಸನಮುಕ್ತ ಗ್ರಾಮದಲ್ಲೀಗ ಅಕ್ಷರ ಜಾತ್ರೆ

ಸಂತೋಷಕುಮಾರ ಮೆಹೆಂದಳೆ
Published 10 ಏಪ್ರಿಲ್ 2017, 19:30 IST
Last Updated 10 ಏಪ್ರಿಲ್ 2017, 19:30 IST
ವ್ಯಸನಮುಕ್ತ ಗ್ರಾಮದಲ್ಲೀಗ ಅಕ್ಷರ ಜಾತ್ರೆ
ವ್ಯಸನಮುಕ್ತ ಗ್ರಾಮದಲ್ಲೀಗ ಅಕ್ಷರ ಜಾತ್ರೆ   

ಈ ಹಳ್ಳಿಯಲ್ಲಿ ಎಲ್ಲ ಹಳ್ಳಿಗಳಂತೆ ಕುಡಿಯುವ ನೀರಿನಿಂದ ಹಿಡಿದು, ಕಿತ್ತು ಹೋದ ರಸ್ತೆಗಳವರೆಗೆ ಎಲ್ಲಾ ಸಮಸ್ಯೆಗಳೂ ಇವೆ. ವಿಪರೀತ ಎನ್ನಿಸುವ ಅರೆ ಬಯಲು ಸೀಮೆಯ ದೂಳು, ಸೆಕೆ, ಹೊಸ ಅಲೆ ಮತ್ತು ಹಳೆಯ ತಲೆಮಾರಿನ ಮಧ್ಯದ ತಾಕಲಾಟದ ವೈರುಧ್ಯಗಳು... ಹೀಗೆ ಜಗತ್ತಿನ ಎಲ್ಲಾ ಹಳ್ಳಿಗಳು ಎದುರಿಸುವಂತಹ ಸಮಸ್ಯೆಗಳನ್ನು ಇದೂ ಎದುರಿಸುತ್ತಲೇ ಇತ್ತು.

ಅದಕ್ಕೆ ಸರಿಯಾಗಿ ಮಾರಣಾಂತಿಕವಾದರೂ ಪ್ರತಿಯೊಬ್ಬನೂ ಆಪ್ತವಾಗಿಸಿಕೊಳ್ಳುತ್ತಿರುವ ತಂಬಾಕು, ಸಿಗರೇಟು, ಬೀಡಿ, ಗುಟಕ ಮತ್ತು ಸಾರಾಯಿಯಂತಹ ಸಮಸ್ಯೆ ಹಳ್ಳಿ ಹುಟ್ಟುವ ಮೊದಲೇ ಆವರಿಸಿಕೊಂಡಿತ್ತು. ಗೋವೆಯ ಅಕ್ರಮ ಸಾರಾಯಿಯ ಹೊಡೆತಕ್ಕೆ ಹಳ್ಳಿ ನಲುಗಿ ಹೋಗಿತ್ತು. ಸರಿಯಾಗಿ ಕುಡಿವ ನೀರು ಸಿಗದಿದ್ದರೂ ಊರಿನ ಹುಡುಗರಿಗೆ ಬೀರಿನ ಬಗ್ಗೆ ಅಪ್ಪಟ ಮಾಹಿತಿ ಇರುತ್ತಿತ್ತು.

ಆದರೆ ಹೊಸ ಅಲೆಯ ನೀರಿನಲ್ಲಿ ಅದೆಂಥಾ ಸೆಳೆತ ಇರುತ್ತದೆಂದರೆ, ಒಮ್ಮೆ ರಭಸಗೊಂಡು ಬೀಸಿದರೆ ಎಲ್ಲಾ ಕೊಚ್ಚಿಕೊಂಡು ಹೋಗುವಷ್ಟು. ಅಂತಹದ್ದೊಂದು ಅಲೆ ಅದೂ ಯುವ ಜನರ ರೂಪದಲ್ಲಿ ಸರಿ ಸುಮಾರು 2014ರ ಜ.26ರ ಹೊತ್ತಿಗೆ ಕಾಲಿಟ್ಟಿತ್ತು ನೋಡಿ. ಊರನ್ನೆಲ್ಲಾ ಆವರಿಸಿದ್ದ ಸಾಯಂಕಾಲದ ಮಂಪರು ಕಿತ್ತುಹೋಗಿತ್ತು. ಸಂಪೂರ್ಣ ಊರನ್ನೇ ವ್ಯಸನಮುಕ್ತ ಗ್ರಾಮವನ್ನಾಗಿಸಲು ಸ್ನೇಹಿತರ ಪಡೆಯೊಂದು ಹಿರಿಯರ ಮಾರ್ಗದರ್ಶನದಲ್ಲಿ ಎದ್ದು ನಿಂತಿತ್ತು.

ADVERTISEMENT

ದಮೊದಲಿಗೆ ವಿರೋಧ, ಕೂಗಾಟ ಇತ್ಯಾದಿಗಳೆಲ್ಲಾ ಎದುರಾದರೂ ಮುಕ್ತಿ ಹೊಂದುವ ನಿಟ್ಟಿನಲ್ಲಿ ನಿರ್ಧರಿಸಿದ್ದ ಊರ ಯುವಕರ ಪಡೆ ಅದಕ್ಕೆ ಅವಕಾಶ ಕೊಡದೆ ಕ್ರಮೇಣ ಹಿಡಿತ ಸಾಧಿಸಿದ್ದಷ್ಟೆ ಅಲ್ಲ ಇವತ್ತು ಕದ್ದು ಕುಡಿಯೋಣ ಎನ್ನುವವರೂ ಕುಡಿದು ಊರಿನೊಳಗಡೆ ಬರಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಗಿದ್ದರೂ ಈ ಗ್ರಾಮ ಮತ್ತೊಂದು ವಿಶೇಷತೆಗೆ ಈ ಬಾರಿ ನಾಂದಿ ಹಾಡಲಿದೆ. ಕರ್ನಾಟಕದ ಇತಿಹಾಸದಲ್ಲಿ ದಾಖಲಾಗುವಂತೆ ಹಳ್ಳಿಯಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಲಿದೆ. ಉತ್ತರ ಕನ್ನಡ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವೊಂದಕ್ಕೆ ಈ ಗ್ರಾಮ ಆತಿಥ್ಯ ವಹಿಸಿಕೊಳ್ಳಲು ಸಜ್ಜಾಗಿದ್ದು ಊರ ಜನರು ಮತ್ತು ಎಂದಿನಂತೆ ಇಂತಹ ಸಾಮಾಜಿಕ ಸೇವೆಗಳಲ್ಲಿ ಎದ್ದು ನಿಲ್ಲುವ ಗ್ರಾಮದ ಯುವಕರ ಪಡೆ. ಇಲ್ಲಿಯವರೆಗೆ ಈ ಜಿಲ್ಲೆಯ ಸಾಹಿತ್ಯ ಸಮ್ಮೇಳನಗಳೆಂದರೆ ಅವವೇ ಜನರು ಭಾಗವಹಿಸುತ್ತಿದ್ದ ಕಾರ್ಯಕ್ರಮವಾಗಿತ್ತು. ಆದರೆ ಈಗ ಮೊದಲ ದಿನವೇ ಸರಿ ಸುಮಾರು ಐದು ಸಾವಿರ ಜನರಿಗೆ ಆತಿಥ್ಯ ಒದಗಿಸುವ ಯೋಜನೆ ರೂಪಿಸುತ್ತಿದೆ.

ಅದು ಇಲ್ಲಿವರೆಗೂ ಸುದ್ದಿಯೇ ಮಾಡದ ಹಳ್ಳಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ತೇರಗಾಂವ್. ಇತ್ತ ಮಲೆನಾಡು ಅತ್ತ ಬಯಲು ಸೀಮೆ ಎಂಬ ಯಾವ ಹಂಗಿಗೂ ಬೀಳದ ಅಪ್ಪಟ ಗ್ರಾಮ ಇದು. ಈ ಮೊದಲೇ ಇದಕ್ಕೆ ಜಿಲ್ಲೆಯ ಪ್ರಥಮ ಸಂತೆ ಗ್ರಾಮ ಎನ್ನುವ ಅಭಿದಾನ ಪ್ರಾಪ್ತವಾಗಿತ್ತಾದರೂ ಅಷ್ಟಾಗಿ ಸುದ್ದಿಗಿಳಿಯಲಿಲ್ಲ. ಅದಕ್ಕೂ ಮೊದಲೇ ವ್ಯಸನಮುಕ್ತವಾಗಿದ್ದರೂ ಮಾಧ್ಯಮಗಳಿಗೆ ಅದು ಸುದ್ದಿಯಾಗಿರಲೇ ಇಲ್ಲ.

ಆದರೀಗ ಮತ್ತೊಮ್ಮೆ ತೇರಗಾಂವ್ ಸುದ್ದಿಯಾಗುತ್ತಿದೆ. 20ನೇ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆತಿಥ್ಯಕ್ಕೆ ಸಜ್ಜಾಗಿ ಅಕ್ಷರ ಜಾತ್ರೆಯ ತೇರು ಎಳೆಯುತ್ತಿದೆ. ಊರಿನಲ್ಲಿ ಈಗ ಹಬ್ಬದ ವಾತಾವರಣ ನಿರ್ಮಾಣವಾಗುತ್ತಿದೆ. ಗ್ರಾಮ ಪಂಚಾಯಿತಿಯ ಅಧ್ಯಕ್ಷ ಬಸವರಾಜು ಲಕ್ಕನಗೌಡರ ಪ್ರಕಾರ ‘ಊರಿನಲ್ಲಿ ಏನೇ ಆದರೂ ಅದರಿಂದ ಊರಿಗೆ ಹೆಸರು ಬರುವಂತಿರಬೇಕು. ಒಮ್ಮೆ ಒಂದು ಕಾರ್ಯ ಕೈಗೆತ್ತಿಕೊಂಡರೆ ಅದರಿಂದ ಯಶಸ್ಸು ಸಾಧಿಸದೇ ಹಿಂದೆ ಸರಿಯುವ ಮಾತೇ ಇಲ್ಲ...’ ಇಂತಹ ಯುವ ಉತ್ಸಾಹಿ ಅಧ್ಯಕ್ಷರಿಂದಾಗಿ ಇವತ್ತು ತೇರಗಾಂವ್ ವ್ಯಸನ ಮುಕ್ತಗೊಂಡು ಸದ್ದಿಲ್ಲದೆ ಅಕ್ಷರ ಜಾತ್ರೆಗೆ ಸಜ್ಜಾಗುತ್ತಿದೆ. ಇದೇ ಬಸವರಾಜು ಊರಿನ ವ್ಯಸನ ಬಿಡಿಸಲು ಮೊಟ್ಟ ಮೊದಲು ಕಾಲೂರಿ ನಿಂತವರು. ಊರ ಹಿರಿಯರು ಮತ್ತು ಮುಖಂಡರು ಇವತ್ತಿಗೂ ನಮ್ಮ ಪುರಾತನ ಗ್ರಾಮಸಭೆಯ ಮಹತ್ವವನ್ನು ಬಿಟ್ಟುಕೊಡದೆ ಪ್ರತಿ ಕಾರ್ಯಕ್ರಮ ಅಥವಾ ಮಹತ್ವದ ನಿರ್ಧಾರಗಳಿಗೆ ಆಯಾ ದಿನದ ಸಂಜೆಗೆ ಊರ ಮಧ್ಯದ ದೇವಸ್ಥಾನದಲ್ಲಿ ಗ್ರಾಮ ಸಭೆ ನಡೆಸಿ ಸಾಮೂಹಿಕ ನಿರ್ಧಾರವನ್ನು ಕೈಗೊಳ್ಳುವಂತಹ ಡೆಮಾಕ್ರೆಟಿಕ್ ವ್ಯವಸ್ಥೆಯನ್ನು ಇವತ್ತಿಗೂ ಉಳಿಸಿಕೊಂಡಿದ್ದಾರೆ. 

ಇಲ್ಲಿ ನಿರ್ಧಾರವಾಗುವ ನಿರ್ಣಯಗಳೆ ಅಂತಿಮವಾಗುತ್ತವೆ. ಊರಿಗೆ ಸಂಬಂಧಿಸಿದ  ಏನೇ ಕಾರ್ಯಕ್ರಮಗಳಿದ್ದರೂ, ಸಮಸ್ಯೆಗಳಿದ್ದರೂ ಅವೆಲ್ಲದರ ಚರ್ಚೆ ಗ್ರಾಮಸಭೆಯಲ್ಲೇ ಆಗುತ್ತದೆ. ಹಾಗಾಗಿ ಊರ ಹಿರಿಯರು ಪಂಚರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಪ್ರಮುಖರ ಸಾಮೂಹಿಕ ನಿರ್ಣಯದ ಪ್ರಜಾಸತ್ತಾತ್ಮಕ ವ್ಯವಸ್ಥೆ ಇಲ್ಲಿ ಜೀವಂತವಾಗಿದೆ. ಊರ ಎದುರಿಗಿರುವ ಪುರಾತನ ಕೆರೆ ಇವತ್ತು ಹೂಳೆತ್ತಿಸಿಕೊಂಡು ಭರ್ತಿಯಾಗಿ ನಿಂತಿದೆ.

ಜಿಲ್ಲಾ ಸಮ್ಮೇಳನದಲ್ಲಿ ಪುಸ್ತಕ ಮಾರಾಟ ಮಳಿಗೆ, ಜನಪದೀಯ ಕಾರ್ಯಕ್ರಮಗಳು, ಸ್ಥಳೀಯರಿಗೆ ವಿಶೇಷ ಸ್ಪರ್ಧೆಗಳ ಮೂಲಕ ಮತ್ತು ಆದ್ಯತೆಯ ಮೇರೆಗೆ ಜಿಲ್ಲಾ ಸಮ್ಮೇಳನವನ್ನು ಅವಿಸ್ಮರಣೀಯವಾಗಿಸುವ ಕಾರ್ಯಕ್ಕೆ ಭರದಿಂದ ಸಿದ್ಧತೆ ಸಾಗಿದೆ. ನೀವೆಲ್ಲ ಬರುವುದಷ್ಟೆ ಬಾಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.