ADVERTISEMENT

ಶತಮಾನದ ಹೊಸ್ತಿಲಲಿ ದೀಕ್ಷಾಸ್ಥಳ

ಎಂ.ಆರ್.ಮಂಜುನಾಥ
Published 22 ಡಿಸೆಂಬರ್ 2014, 19:30 IST
Last Updated 22 ಡಿಸೆಂಬರ್ 2014, 19:30 IST

ಧಾರ್ಮಿಕ ಗುರುಗಳಾಗಲು ಬಯಸುವರಿಗೆ ದೀಕ್ಷೆ ಕೊಡುವ ಏಕೈಕ ಸ್ಥಳ, ಸರ್ವ ಧರ್ಮೀಯರು ಪೂಜಿಸುವ ಪ್ರಾರ್ಥನಾ ಮಂದಿರವಾಗಿರುವ ಹುಬ್ಬಳ್ಳಿಯ ಏಸುನಾಮ ದೇವಾಲಯಕ್ಕೀಗ (ಹೋಲಿನೇಮ್ ಕೆಥೆಡ್ರಲ್) ಶತಮಾನದ ಸಂಭ್ರಮ.

22 ಬಾಗಿಲುಗಳುಳ್ಳ ಏಕೈಕ ದೇವಮಂದಿರ ಎಂಬ ಹೆಗ್ಗಳಿಕೆ ಹೊಂದಿರುವ ಈ ಚರ್ಚ್‌ನಲ್ಲಿ ಒಂದೇ ಇಂಚಿನ ಬೈಬಲ್ ಸೇರಿದಂತೆ, ಕ್ರಿ.ಶ.1888ನೇ ಇಸವಿಯಲ್ಲಿ ತಯಾರಾದ ಗಂಟೆ, ಚೇರ್, ಹಿತ್ತಾಳೆಯ ಶಿಲುಬೆ... ಹೀಗೆ ಅಪರೂಪದ ವಸ್ತುಗಳನ್ನೂ ಕಾಣಬಹುದು.

ಮನ ಸೆಳೆಯುವ ಕಲಾಕೃತಿ
ಈ ದೇವಾಲಯದ ವಾಸ್ತುಶಿಲ್ಪ ಕೂಡ ಮನಮೋಹಕವಾಗಿದೆ. ಆಗ್ನೇಯ ದಿಕ್ಕಿನಿಂದ ವೀಕ್ಷಿಸಿದರೆ ಅತಿ ಎತ್ತರದಲ್ಲಿ ಮೊನಚಾದ ಶಿಲುಬೆ ಗೋಚರಿಸುತ್ತದೆ. ದೇವಾಲಯವು ಸುಮಾರು 50 ಅಡಿ ಎತ್ತರ, 137 ಅಡಿ ಉದ್ದ, 54 ಅಡಿ ಅಗಲವಿದೆ. ಇಕ್ಕೆಲಗಳಲ್ಲಿ ಆಕರ್ಷಕ ಹಜಾರಗಳು, ಕಂಬ ಮತ್ತು ಕಮಾನುಗಳಿವೆ. 22 ಬಾಗಿಲುಗಳ ಮೇಲೂ ಸುಂದರ ಕಲಾಕೃತಿಗಳಿವೆ. ಕಿಟಕಿಗಳಿಂದ ಒಳ ಹಜಾರೆಗೆ ಗಾಳಿ ಬೆಳಕು ಚೆನ್ನಾಗಿ ಬರುವ ವ್ಯವಸ್ಥೆ ಇದೆ. ಇದರಿಂದ ಇಲ್ಲಿ ಸದಾ ತಂಪಾದ ವಾತಾವರಣ ಇದ್ದು, ಪ್ರಾಗಂಣಕ್ಕೆ ಫ್ಯಾನ್ ಅಥವಾ ಎ.ಸಿ. ಅವಶ್ಯಕತೆಯೇ ಇಲ್ಲ.

ಪೂರ್ವಭಾಗದಲ್ಲಿ ನಯವಾಗಿ ರೂಪಗೊಂಡ ಚಚ್ಚೌಕಾಗಿ ಬಾದಾಮಿ ಕಲ್ಲಿನಲ್ಲಿ ಕೆತ್ತನೆ ಮಾಡಿದ ತಲೆಕಂಬಗಳಿದ್ದರೆ, ಉತ್ತರ ಮತ್ತು ದಕ್ಷಿಣಕ್ಕೆ ಶಿಲುಬೆಯಾಕಾರದ ಎರಡು ಬಾಹುಗಳಿವೆ. ಎತ್ತರದಲ್ಲಿ ಮತ್ತು ಕೆಳಗಿರುವ ಛಾವಣಿಗಳ ಮೇಲೆ ಕೊರೆದ ಕಲ್ಲಿನ ಪರದೆಗಳಿವೆ. ಪ್ರತಿಯೊಂದು ಕಿಟಕಿಗಳು ಗುಲಾಬಿ ಹೂವಿನ ಚಿತ್ರದ ಕೆತ್ತನೆಯಿಂದ ಮಾಡಿದ್ದಾಗಿದೆ.

ಇತಿಹಾಸ
ಅಪರಾಧಿಗಳಿಗೆ ಪುನರುಜ್ಜೀವನ ಕಲ್ಪಿಸುವ ಉದ್ದೇಶದಿಂದ 1922ರಲ್ಲಿ ಒಂದು ಜಾಗವನ್ನು ಗುರುತಿಸಲಾಯಿತು. ಇಲ್ಲಿಯೇ ಅಪರಾಧಿಗಳ ಮಕ್ಕಳಿಗೆ ‘ಸೆಟ್ಲಮೆಂಟ್ ಕನ್ನಡ ಮಾಧ್ಯಮ ಶಾಲೆ’ ತೆರೆಯಲಾಯಿತು. ಇಲ್ಲಿ ಪ್ರಾರ್ಥನೆ ಮಾಡಲು ಸರಿಯಾದ ಜಾಗದ ವ್ಯವಸ್ಥೆ ಇಲ್ಲದ ಕಾರಣ, 1926ರಲ್ಲಿ ಪ್ರಾರ್ಥನಾ ಮಂದಿರವೂ ರೂಪುಗೊಂಡಿತು. ಕೆಲಕಾಲ ನಿರ್ಮಾಣ ಕಾರ್ಯ ಸ್ಥಗಿತಗೊಂಡು, ಕೊನೆಗೂ 1931 ಮಾರ್ಚ್ 1ರಂದು ಈ ದೇವಾಲಯ ಲೋಕಾರ್ಪಣೆಗೊಂಡಿತು. ಅಂದಹಾಗೆ ಇಲ್ಲಿರುವ ಬಹುತೇಕ ಕಲಾಕೃತಿಗಳು ರೂಪು ಪಡೆದಿರುವುದು ‘ಸೆಟ್ಲಮೆಂಟ್‌’ನ ಕೈದಿಗಳ ಕೈಯಿಂದ ಎಂಬುದು ಅಚ್ಚರಿ ತರುವ ವಿಷಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.