ADVERTISEMENT

ಶಿಲ್ಪಗಳಲ್ಲಿ ಅರಳಿತು ಮಲೆನಾಡಿನ ಸಂಸ್ಕೃತಿ

ಬಳಕೂರು ವಿ.ಎಸ್.ನಾಯಕ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST
ಶಿಲ್ಪಗಳಲ್ಲಿ ಅರಳಿತು ಮಲೆನಾಡಿನ ಸಂಸ್ಕೃತಿ
ಶಿಲ್ಪಗಳಲ್ಲಿ ಅರಳಿತು ಮಲೆನಾಡಿನ ಸಂಸ್ಕೃತಿ   

ಸೌಂದರ್ಯಕ್ಕೆ ಅನ್ವರ್ಥ ಆಗುಂಬೆ. ಇಲ್ಲಿ  ಸಾಲು ಸಾಲು ಪುಣ್ಯ ಕ್ಷೇತ್ರಗಳು. ಕವಿ ಪುಂಗ ವರ್ಣಿತ ಬೀಡು.  ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ ಗತಕಾಲದ ವೈಭವವನ್ನು ಸಾರುವ ಊರು ಆಗುಂಬೆ. ಇಲ್ಲಿ ಈಗ  ಮತ್ತೊಂದು ವಿಶೇಷತೆ ಸೇರಿಕೊಂಡಿದೆ.

ಮಲೆನಾಡಿನ ಸಂಸ್ಕೃತಿ, ಆಚಾರ ವಿಚಾರ, ನಡೆ-ನುಡಿಯನ್ನು ಸಿಮೆಂಟ್ ಕಲಾಕೃತಿಗಳ ಮೂಲಕ ಬಿಂಬಿಸುವ ಕಾರ್ಯ ನಡೆದಿದೆ.   ಕಲಾ ಶ್ರೀಮಂತಿಕೆಯ ಮೂಲಕ ನೋಡುಗರನ್ನು ಸೆಳೆಯುತ್ತಿದೆ. ಶಿಲ್ಪಕಲಾ ಕೃತಿಗಳ ಉದ್ಯಾನವನವೇ ನಿರ್ಮಾಣವಾಗಿ ಪ್ರವಾಸಿತಾಣವಾಗಿ ಎಲ್ಲರನ್ನು ಆಕರ್ಷಿಸುತ್ತಿದೆ. 

ಆಗುಂಬೆಯಲ್ಲಿರುವ ಈ ಶಿಲ್ಪಗಳ ನಿರ್ಮಾಣ ಕಾರ್ಯವನ್ನು ಕನ್ನಡ ಸಂಸ್ಕೃತಿ ಇಲಾಖೆ– ಬೆಂಗಳೂರು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು, ಮಣಿಪಾಲ್ ಎಜುಕೇಷನ್ ಅಂಡ್ ಎಂಪ್ಲಾಯ್‌ಮೆಂಟ್ ಟ್ರಸ್ಟ್‌ ಸೇರಿ ಕೈಗೊಂಡಿವೆ.

ವೆಂಕಟಾಚಲಪತಿ ಅವರ ನಿರ್ದೇಶನದಲ್ಲಿ ಎಚ್.ಎನ್.ಕೃಷ್ಣಮೂರ್ತಿರವರ ಸಂಚಾಲಕತ್ವದಲ್ಲಿ, ವೈ.ಕುಮಾರ್‌ರವರ ಪರಿಕಲ್ಪನೆಯಲ್ಲಿ ಸುಮಾರು ಹತ್ತು ಜನ ಹಿರಿಯ ಶಿಲ್ಪಿಗಳು ಮತ್ತು ಹತ್ತು ಜನ ಸಹಾಯಕ ಶಿಲ್ಪಿಗಳು ಒಟ್ಟು 20 ಶಿಲ್ಪಕಲಾವಿದರ ಕೈಚಳಕದಲ್ಲಿ ರಾಜ್ಯಮಟ್ಟದ ನೈಜ ಸಿಮೆಂಟ್ ಶಿಲ್ಪಕಲಾ ಶಿಬಿರವು ಆಯೋಜನೆಗೊಂಡಿದೆ. 

ಮಲೆನಾಡು ವಿಭಿನ್ನ ಸಂಸ್ಕೃತಿಗೆ ಹೆಸರಾಗಿದ್ದು, ಇಲ್ಲಿನ ಜನರ ಹಲವು ಆಚರಣೆಗಳನ್ನು ಕಲಾಕೃತಿಗಳ ರೂಪದಲ್ಲಿ ಬಿಂಬಿಸಿ ಇದಕ್ಕೆ ಮೆರುಗು ನೀಡುವ ಕೆಲಸ ಸಾಗಿದೆ. ಈ ಸಿಮೆಂಟ್ ಶಿಲ್ಪವನದಲ್ಲಿ ಯಕ್ಷಗಾನ, ಚಂಡೆ ಬಾರಿಸುವ ಮಹಿಳೆ, ಭೂತಕೋಲ, ಕಂಬಳ, ಮತ್ಸ್ಯಕನ್ಯೆ,  ಸ್ವಾಮಿ ವಿವೇಕಾನಂದ, ವಿಶ್ವೇಶ್ವರಯ್ಯ, ಭತ್ತ ಬೀಸುವ ಮಹಿಳೆಯರ ಸಿಮೆಂಟ್ ಶಿಲ್ಪಗಳು ಅಲ್ಲಿನ ವಿಭಿನ್ನ ಸಂಸ್ಕೃತಿಯ ನೆಲೆಯನ್ನು ಬಿತ್ತರಿಸುವ ನಿಟ್ಟಿನಲ್ಲಿ  ಜನ್ಮತಾಳಿವೆ.

ಒಟ್ಟು ಹನ್ನೊಂದು ಸಿಮೆಂಟ್ ಶಿಲ್ಪಗಳು ಇಲ್ಲಿನ ವಿಶೇಷ ಆಚರಣೆ ಪದ್ಧತಿ, ಸಂಸ್ಕೃತಿಗಳೆಲ್ಲವು ನಮ್ಮ ಕಣ್ಣ ಮುಂದೆ ಗೋಚರವಾಗುವ ಅನುಭವ  ನೀಡುತ್ತವೆ. ಈ ಕಾಂಕ್ರೀಟ್ ಶಿಲ್ಪಗಳನ್ನು ಸುಮಾರು 15 ದಿನಗಳ ಸಮಯ ತೆಗೆದುಕೊಂಡು ನಿರ್ಮಿಸಲಾಗಿದ್ದು, ಸಿಮೆಂಟ್ ಮತ್ತು ಕಬ್ಬಿಣವನ್ನು ಬಳಸಲಾಗಿದೆ.  

ಮಂದವಾಗಿ ಬೀಸುವ ಗಾಳಿ, ಆಗಾಗ ಮುಸುಕುವ ಮಂಜಿನ ವಾತಾವರಣದ ನಡುವೆ ಮೋಡದ ಸೆರಗಿನಿಂದ ಬರುವ ಸೂರ್ಯನ ಕಿರಣಗಳು ಇಲ್ಲಿನ ಈ ಶಿಲ್ಪವನ ನೋಡಲು ಬಂದ ಪ್ರವಾಸಿಗರಿಗೆ ಮತ್ತೂ ಚೆಂದದ ಅನುಭವ ನೀಡುತ್ತವೆ. ಇಲ್ಲಿನ ಸಂಸ್ಕೃತಿಗೆ ಪೂರಕವಾದ ಶಿಲ್ಪಗಳ ರಚನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

ಪರಿಕಲ್ಪನಾಕಾರರಾದ ವೈ.ಕುಮಾರ್‌ರವರು ಹೇಳುವ ಹಾಗೆ ಪ್ರತಿಯೊಂದು ಪ್ರದೇಶವು ವಿಭಿನ್ನ ಸಂಸ್ಕೃತಿಯನ್ನು ಹೊಂದಿದ್ದು, ಈ ಶಿಲ್ಪಕಲಾ ಶಿಬಿರದ ಮೂಲಕ ಇಲ್ಲಿನ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಈ ಶಿಬಿರ ನಡೆದಿದೆ. ಮುಂದಿನ ಪೀಳಿಗೆಗೆ ಅಲ್ಲಿನ ನಡೆ ನುಡಿ ಆಚಾರ ವಿಚಾರದ ಕುರಿತು ತಿಳಿದುಕೊಳ್ಳಲು ಇದು ಒಂದು ದಾರಿಯೂ ಆಗಲಿದೆ.

‘ಈ ಶಿಲ್ಪಗಳು ಎಂತಹ ಸಂದರ್ಭದಲ್ಲಾದರೂ ಸುಮಾರು ಮುನ್ನೂರು ವರ್ಷ ಬಾಳಿಕೆ ಬರುತ್ತವೆ. ಇವುಗಳನ್ನು ಕಡಿಮೆ ಅವಧಿಯಲ್ಲೇ ನಿರ್ಮಿಸಬಹುದು’ ಎನ್ನುತ್ತಾರೆ ಶಿಬಿರದ ನಿರ್ದೇಶಕರಾದ ವೆಂಕಟಾಚಲಪತಿಯವರು. ಈ ಶಿಲ್ಪಗಳನ್ನು ಕಣ್ತುಂಬಿಕೊಳ್ಳಬೇಕಾದರೆ ರಜಾ ಪಟ್ಟಿಯಲ್ಲಿ ಈ ಊರನ್ನು ಆಯ್ಕೆ ಮಾಡಿಕೊಳ್ಳುವುದನ್ನು ಮರೆಯದಿರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.