ADVERTISEMENT

ಹೇಗಿತ್ತು, ಹೇಗಾಯ್ತು ಚಿತ್ರದುರ್ಗ...

​ಪ್ರಜಾವಾಣಿ ವಾರ್ತೆ
Published 25 ಜುಲೈ 2016, 19:30 IST
Last Updated 25 ಜುಲೈ 2016, 19:30 IST
ಕೋಟೆಯ ಮೇಲ್ಭಾಗದಲ್ಲೆಲ್ಲಾ ಮನೆಗಳ ನಿರ್ಮಾಣ
ಕೋಟೆಯ ಮೇಲ್ಭಾಗದಲ್ಲೆಲ್ಲಾ ಮನೆಗಳ ನಿರ್ಮಾಣ   

ಗಂಡುಮೆಟ್ಟಿನ ನಾಡು, ಐತಿಹಾಸಿಕ ಬೀಡು ಎಂದೆಲ್ಲಾ  ಕರೆಸಿಕೊಳ್ಳುತ್ತಿರುವ ಚಿತ್ರದುರ್ಗವು ಅಭಿವೃದ್ಧಿಯಿಂದ ವರ್ಷದಿಂದ ವರ್ಷಕ್ಕೆ ವಂಚಿತವಾಗುತ್ತಿದೆ. ದುರ್ಗವು ಪ್ರವಾಸಿ ಕೇಂದ್ರವಾಗಬೇಕು, ದುರ್ಗಕ್ಕೆ ಭದ್ರಾ ಮೇಲ್ದಂಡೆ ತರಬೇಕೆಂಬ 60 ವರ್ಷಗಳ ಕನಸು ಈಗ ಹಳಸಿ ಹೋಗಿದೆ. ಜೋಗಿಮಟ್ಟಿ ಅರಣ್ಯ ಪ್ರದೇಶದಿಂದ ಮೇಲುದುರ್ಗದವರೆಗೆ ರೋಪ್-ವೇ ನಿರ್ಮಿಸಬೇಕೆಂಬ ಯೋಜನೆ ಜಾರಿಯಾಗದೇ 30 ವರ್ಷಗಳು ಸರಿದುಹೋಗಿವೆ.

ದಾವಣಗೆರೆ –ದುರ್ಗ –ತುಮಕೂರು–ಬೆಂಗಳೂರಿಗೆ ನೇರ ರೈಲು ಮಾರ್ಗ ಕಲ್ಪಿಸುವುದರಿಂದ ಪ್ರಯಾಣಿಕರಿಗಷ್ಟೇ ಅಲ್ಲ, ನಗರದ ವಾಣಿಜ್ಯೋದ್ಯಮಕ್ಕೂ ಅಧಿಕ ಲಾಭವಿದೆ ಎಂಬ ಐದು ವರ್ಷಗಳ ಮಾತು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಇಂತಹ ದೊಡ್ಡ ಕನಸುಗಳ ಮಾತು ಒತ್ತಟ್ಟಿಗಿರಲಿ. ಅಭೇದ್ಯವಾದ ಏಳು ಸುತ್ತಿನ ಕೋಟೆಯೆಂದೇ  ಹೆಸರಾದ  ದುರ್ಗದ ಕೋಟೆಯಲ್ಲೀಗ ಕಾಣುವುದು ಐದೇ ಸುತ್ತು. ಎರಡು ಸುತ್ತುಗಳು ನಾಪತ್ತೆ! ಕಾರಣ ಕೋಟೆಯ ಮೇಲ್ಭಾಗದಲ್ಲೆಲ್ಲಾ ಮನೆಗಳ ನಿರ್ಮಾಣವಾದರೆ, ಕೋಟೆ ಕಲ್ಲುಗಳನ್ನು  ಮನೆ ಕಟ್ಟಲು ಕದ್ದೊಯ್ಯಲಾಗಿದೆ. ಐತಿಹಾಸಿಕ ಕೋಟೆಯ ಮುಂದೆ ನಿಯಮಾನುಸಾರ 200 ಮೀಟರ್‌ನಷ್ಟು ಜಾಗ ಬಿಡದೇ ಮನೆಗಳನ್ನು  ಕಟ್ಟಿಕೊಳ್ಳಲಾಗಿದ್ದರೂ ನಗರಸಭೆಯವರು ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ.

ಇಲ್ಲಿನ ರಾಜಕೀಯ ಧುರೀಣರ ಇಚ್ಛಾಶಕ್ತಿಯ ಕೊರತೆ, ಐತಿಹಾಸಿಕ ಕಲ್ಲಿನ ಕೋಟೆಯನ್ನು ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಳಿಸಬೇಕೆಂಬ ಛಲ, ಪ್ರಯತ್ನಗಳಾಗಲಿ ಕಾಣದಾಗಿದೆ. ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಲಾರದಷ್ಟು ಇಲ್ಲಿನ ರಾಜಕಾರಣಿಗಳ ಆಷಾಢಭೂತಿತನವನ್ನು ಜನರು ಸಹಿಸಿಕೊಂಡಿದ್ದಾರೆ!

ನೀರು ಇಲ್ಲದಿದ್ದರೂ ಬದುಕುವ ಕಲೆಯನ್ನು, ಕೊಚ್ಚೆನೀರು ಕುಡಿದು ಬದುಕಬಲ್ಲ ರೋಗ ನಿರೋಧಕ ಶಕ್ತಿಯನ್ನು, ತಗ್ಗುಗುಂಡಿ ಹೊಂಡದ ನಡುವೆಯೇ ಅಳಿದುಳಿದ ರಸ್ತೆಗಳಲ್ಲೇ ಎದ್ದು ಬಿದ್ದು ಸರ್ಕಸ್ ಮಾಡುತ್ತಾ ಓಡಾಡುವ ಸಾಮರ್ಥ್ಯವನ್ನು, ಬೀದಿದೀಪಗಳಿಲ್ಲದಿದ್ದರೂ ಸಹನಾಶೀಲರಾಗಿರಬೇಕಾದುದನ್ನು ಕಲಿಯುವ ಗ್ರಹಚಾರ ಜನರದ್ದು!

ಇಲ್ಲಿನವರು ಮಂತ್ರಿಗಳಾಗಿ ಸಂಸದರಾದರೂ ಇನಿತೂ ಪ್ರಯೋಜನ ಆಗಿಲ್ಲ. ಇದೀಗ 12,348 ಕೋಟಿ ವೆಚ್ಚದ ಕಾಮಗಾರಿ ಭರದಿಂದ ಸಾಗುತ್ತಿದೆಯೆಂಬ ಸುವಾರ್ತೆ ಕೇಳುತ್ತಿದೆ. ಅಜ್ಜಂಪುರದ ಸುರಂಗಮಾರ್ಗ ನಿರ್ಮಾಣಕಾರ್ಯಕ್ಕೆ  ಚಾಲನೆ ಸಿಕ್ಕಿದ್ದು, 7 ಕಿ.ಮೀ. ಸುರಂಗಮಾರ್ಗ ಯೋಜನೆ ರೂಪಿಸಲಾಗಿದೆ ಎನ್ನಲಾಗುತ್ತಿದೆ.

ಮಾರ್ಗ ನಿರ್ಮಾಣಕ್ಕೆ ಖಾಸಗಿ ಜಮೀನುಗಳನ್ನು ಖರೀದಿಸಲಾಗಿದೆ. ಜೊತೆಗೆ ಮಾಲೀಕರಿಗೆ ಪರಿಹಾರ ಒದಗಿಸಲು ಸರ್ಕಾರದಿಂದ 22ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು ಇದರಲ್ಲಿ 12 ಕೋಟಿ ಜಮೀನು ನೀಡಿರುವ ರೈತರಿಗೆ ಪಾವತಿಸಲಾಗಿದೆ ಎನ್ನುತ್ತದೆ ಸಮೀಕ್ಷೆ. ಸದ್ಯ ಎಲ್ಲವೂ ಕಾಗದದ ಮೇಲಿದೆ. ಒಳ್ಳೆಯದಾಗುವ ನಿರೀಕ್ಷೆ ಜನರದ್ದು.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಹಿತಾಸಕ್ತಿಯಿಂದಾಗಿ ದಾವಣಗೆರೆ ತುಮಕೂರು, ನೇರ ರೈಲು ಮಾರ್ಗ ಅನುಷ್ಠಾನದಿಂದಾಗಿ ದುರ್ಗದ ಅದೃಷ್ಟವನ್ನೇ ಬದಲಿಸಹೊರಟಿದ್ದಾರೆ ರೈಲ್ವೆ ಹೋರಾಟ ಸಮಿತಿಯ ನೇತಾರರು. ರೈಲ್ವೆ ಯೋಜನೆಗೆ ಹೊಸ ಕಾಯ್ದೆ ಪ್ರಕಾರವೇ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರ ಆದೇಶಿಸಿದೆ. ಈ ದಿಸೆಯಲ್ಲಿ ಯೋಜನಾ ಅನುಷ್ಠಾನಕ್ಕೆ  ರಾಜ್ಯ ಸಚಿವ ಸಂಪುಟವು ಒಪ್ಪಿಗೆ ನೀಡಿದೆ ಎಂಬ ಆಶಾಭಾವವನ್ನು  ಹೋರಾಟ ಸಮಿತಿ ಅಧ್ಯಕ್ಷರು ವ್ಯಕ್ತಪಡಿಸುತ್ತಾರೆ. ಇದೆಲ್ಲಾ ಭೂಸ್ವಾಧೀನ ಪ್ರಕ್ರಿಯೆಯನ್ನೇ ಅವಲಂಬಿಸಿದೆ. ಸದ್ಯ ಎಲ್ಲಾ ಯೋಜನೆಗಳೂ ಕಡತಗಳಲ್ಲಿ ಬೆಚ್ಚಗಿವೆ.

ಇನ್ನು ದುರ್ಗ ಪ್ರವಾಸಿ ಕೇಂದ್ರವಾಗಲೇಬೇಕೆಂಬ 60 ವರ್ಷಗಳ ಹೋರಾಟಕ್ಕೂ ಇದೀಗ ಮಾತಿನ ಚಾಲನೆ ಸಿಕ್ಕಿದಂತಿದೆ. ಆದರೆ ಸೌಕರ್ಯಗಳ ಕೊರತೆ ತುಂಬಿ ತುಳುಕಾಡುತ್ತಿದೆ. ಪ್ರವಾಸಿಗರಿಗೆ ತಂಗಲು ಸುಸಜ್ಜಿತವಾದ ಹೋಟೆಲ್ ಇಲ್ಲ. ವಾಹನಗಳನ್ನು ಪಾರ್ಕಿಂಗ್ ಮಾಡಲು ಕೋಟೆಯ ಆಸುಪಾಸು ಜಾಗವಿಲ್ಲ. ಸರಿಯಾದ ಊಟ ಕುಡಿಯುವ ನೀರು ಅಗತ್ಯ ಶೌಚಾಲಯಗಳ ವ್ಯವಸ್ಥೆಯಿಲ್ಲ.

ಅದೇನೇ ಇರಲಿ... ಇತ್ತೀಚಿಗೆ ದುರ್ಗದಲ್ಲಿ ‘ತ್ರೀಸ್ಟಾರ್‌’ ಮಾದರಿ ಹೋಟೆಲ್‌ಗಳಾಗಿವೆ. ಕೋಟೆಯ  ಸಮೀಪದಲ್ಲೇ  ಸಂರಕ್ಷಣ ಇಲಾಖೆಯವರು ಸುಸಜ್ಜಿತ ಹೋಟೆಲ್ ಆರಂಭಿಸಿದ್ದಾರೆ. ಬೆಂಗಳೂರಿನಿಂದ ಬರುವ ಪ್ರವಾಸಿಗರ ಬಸ್ ಮೊದಲು ಚಿತ್ರದುರ್ಗಕ್ಕೆ ಬಂದು ನಂತರ ಹಂಪಿಕಡೆ ಹೋಗುವ ವ್ಯವಸ್ಥೆಯನ್ನಾದರೂ ಮಾಡುವ ಇಚ್ಛಾಶಕ್ತಿಯನ್ನು ಇಲ್ಲಿನ ರಾಜಕಾರಣಿಗಳು ತೋರುವ ಮೂಲಕ ಈ ಮಣ್ಣಲ್ಲಿ ಹುಟ್ಟಿದ ಋಣ ತೀರಿಸಬೇಕಿದೆ. 2.45 ಕೋಟಿ ರೂಪಾಯಿ ನಿರ್ಮಿತಿ ಕೇಂದ್ರದಲ್ಲಿ  ಕೊಳೆಯುತ್ತಿದೆ ಎಂದು ರಾಜಕಾರಣಿಯೊಬ್ಬರು ಮಾಹಿತಿ ಕೊಡುತ್ತಾರೆ. ಬೆಳಕು ಮತ್ತು ಧ್ವನಿ ವ್ಯವಸ್ಥೆಗೆ ಎಂಟು ಕೋಟಿ ಮಂಜೂರಾಗಿದ್ದು, ನಾಲ್ಕು ವರ್ಷಗಳಾಗಿವೆ.

ಇಲ್ಲಿನ ಸಿಹಿನೀರು ಹೊಂಡದ ಸುತ್ತಲಿನ ಭಾಗದ ಕೋಟೆ ಅಸ್ಥಿರಗೊಂಡಿದೆ, ಸಿಹಿನೀರಿನ ಹೊಂಡ ಕಕ್ಕಸು ಹೊಂಡವಾಗಿದೆ.  ಸ್ಥಳೀಯ ಜನಪ್ರತಿನಿಧಿಗಳೇಕೆ ಇಷ್ಟು ಜಡವಾಗಿದ್ದಾರೆ ಎಂಬ ಜಿಜ್ಞಾಸೆ ಕಾಡದಿರದು.

1721ರಲ್ಲಿ ವೀರಮರಣವನ್ನಪ್ಪಿದ  ಭರಮಣ್ಣ ನಾಯಕನ ಸಮಾಧಿಯನ್ನು ಮೇಲುದುರ್ಗದಲ್ಲಿಯೇ ಮಾಡಲಾಗಿದೆ. ನಾಯಕನ ಸಮಾಧಿಯ ಬಳಿಯೇ ಮಗ ಹಿರೇಮದಕರಿ ನಾಯಕರ ಸಮಾಧಿಯನ್ನೂ ಕಾಣಬಹುದು.  ಸಮಾಧಿಯ ದುರಸ್ತಿ ಕಾರ್ಯ ನಡೆಯದೆ ಪಾಳುಬಿದ್ದಿದೆ. ದುರ್ಗದ ಜನರಿಗೂ ಕುತೂಹಲವಿಲ್ಲ, ಪ್ರಾಚ್ಯವಸ್ತು ಇಲಾಖೆಯವರಿಗೆ ಇತಿಹಾಸ ಪ್ರಜ್ಞೆ ಇಲ್ಲ.  ಇನ್ನು ದುರ್ಗದಲ್ಲಿ ಮುರುಘಾಪರಂಪರೆ ಬೆಳೆಯಲು ಕಾರಣವಾದ ಭರಮಣ್ಣನು ಕಟ್ಟಿಸಿದ ಬೃಹನ್ಮಠದಲ್ಲಿಯೇ ಮಹಾಸ್ವಾಮಿಗಳೂ ಇದರ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ.

ನಗರಸಭೆಯಿಂದಲೇ ಅನಧಿಕೃತವಾಗಿ ಒತ್ತುವರಿ ಆಗಿರುವ ಸರ್ಕಾರಿ ಕಲಾ ಕಾಲೇಜಿನ ಕಾಮರ್ಸ್‌ ಬ್ಲಾಕ್ ಕಟ್ಟಡ ಈಗ ಶಾಸಕರ ಕಚೇರಿಯಾಗಿದೆ. ಹೇಳೋರಿಲ್ಲ, ಕೇಳೋರಿಲ್ಲ. ಬೋಧನಾ ಕೊಠಡಿಗಳ ಕೊರತೆಯಿಂದಾಗಿ ಪಾಳಿಪದ್ಧತಿ ಅನುಸಾರ ತರಗತಿಗಳು ನಡೆಯುತ್ತಿವೆ.

ಇತ್ತೀಚೆಗೆ ಪ್ರವಾಸೋದ್ಯಮ ಇಲಾಖಾ ವತಿಯಿಂದ  ತಂಡವೊಂದು  ಚಿತ್ರದುರ್ಗದ ಕೋಟೆಯನ್ನು ವೀಕ್ಷಿಸಿ ಸಮೀಕ್ಷೆ ನಡೆಸಿದ್ದು, ಪ್ರವಾಸಿ ತಾಣವಾಗುವ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸುವ ಚಿಂತನೆ ನಡೆಸಿದ್ದಾರೆಂದು ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದು, ಇನ್ನಾದರೂ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಜನಪ್ರತಿನಿಧಿಗಳು ಜಿಲ್ಲಾಡಳಿತವು ಸೂಕ್ತಕ್ರಮ ಅನುಸರಿಸುವತ್ತ ಗಮನ ನೀಡಬೇಕಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.