ADVERTISEMENT

12 ವರ್ಷಕ್ಕೊಮ್ಮೆ ಅರಳುತ್ತಾಳೆ ನೀಲಸುಂದರಿ!

ಶಶಿಧರಸ್ವಾಮಿ ಆರ್.ಹಿರೇಮಠ
Published 25 ಸೆಪ್ಟೆಂಬರ್ 2017, 19:30 IST
Last Updated 25 ಸೆಪ್ಟೆಂಬರ್ 2017, 19:30 IST
12 ವರ್ಷಕ್ಕೊಮ್ಮೆ ಅರಳುತ್ತಾಳೆ ನೀಲಸುಂದರಿ!
12 ವರ್ಷಕ್ಕೊಮ್ಮೆ ಅರಳುತ್ತಾಳೆ ನೀಲಸುಂದರಿ!   

ಸಂಡೂರಿನ ಕುಮಾರಸ್ವಾಮಿ ದೇವಸ್ಥಾನವಿರುವ ಶ್ರೀ ಸ್ವಾಮಿಮಲೈ ಬೆಟ್ಟ ಶ್ರೇಣಿಯಲ್ಲಿ ಈಗ –12 ವರ್ಷಗಳ ಬಳಿಕ– ಅಪರೂಪದ ನೀಲಕುರಂಜಿ ಹೂವು ಮತ್ತೆ ಅರಳುವ ಸಮಯ.

ಆ ಹೂವನ್ನು ನೋಡಲು ಪನಮೇಶಲು, ಡಾ. ಅರವಿಂದ ಪಾಟೀಲ, ನಿಜಗುಣಸ್ವಾಮಿ, ವಿದ್ಯಾಧರಸ್ವಾಮಿ ಅವರನ್ನು ಒಳಗೊಂಡ ನಮ್ಮ ತಂಡ ನಸುಕಿನಲ್ಲಿ ಎತ್ತರವಾದ ಪ್ರದೇಶಕ್ಕೆ ಹೋದಾಗ ವಿಪರೀತ ಇಬ್ಬನಿ. ಫೋಟೊಗ್ರಫಿ ಮಾಡಲು ಸಾಹಸ ಮಾಡಬೇಕಾಯಿತು. ಮಂಜಿನ ಹನಿಗಳು ನಮ್ಮ ಕ್ಯಾಮೆರಾಗಳ ಮೇಲೆ ಬೀಳತೊಡಗಿದಾಗ ಸ್ವಲ್ಪಹೊತ್ತು ಬಿಟ್ಟು ಬರಲು ನಿರ್ಧರಿಸಿ ಕುಮಾರಸ್ವಾಮಿ ದೇವಸ್ಥಾನದ ಆಸುಪಾಸು ಇರುವ ವನ್ಯ ಕುಸುಮಗಳ ಫೋಟೊ ಕ್ಲಿಕ್ಕಿಸಿಕೊಂಡೆವು. ಸ್ವಲ್ಪ ಸಮಯದ ಬಳಿಕ ಮತ್ತೆ ನೀಲಕುರಂಜಿ ಅರಳಿದ ಬೆಟ್ಟಕ್ಕೆ ಸಾಗಿದೆವು. ಇಬ್ಬನಿ ಕರಗಿದ ಆ ವಾತಾವರಣದಲ್ಲಿ ನೀಲ ಸುಂದರಿಯು ಬೀಸುವ ತಂಗಾಳಿಗೆ ಬಳುಕುತ್ತಾ ನಮ್ಮನ್ನು ಕೈಬೀಸಿ ಕರೆದಳು. ಇಳಿಜಾರು ಪ್ರದೇಶದಲ್ಲಿ ಕುಂತು-ನಿಂತು ಪ್ರಯಾಸ ಪಟ್ಟು ನಾವು ಆ ಹೂವು ಹಾಗೂ ಗಿಡದ ಫೋಟೊಗ್ರಫಿ ಮಾಡತೊಡಗಿದೆವು.

ನೀಲಕುರಂಜಿಯು ಹೊರನೋಟಕ್ಕೆ ತೀರಾ ಸಾಮಾನ್ಯ ಸಣ್ಣ ಕುರುಚಲು ಸಸ್ಯ. 30 ರಿಂದ 60 ಸೆಂ.ಮೀ. ಎತ್ತರ ಬೆಳೆಯುವ ಈ ಪೊದರು ಲಕ್ಷಾಂತರ ವರ್ಷಗಳಿಂದ ತನ್ನ ಜೈವಿಕ ಗಡಿಯಾರಕ್ಕೆ ಅನುಸಾರವಾಗಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಅರಳುತ್ತದೆ. 19ನೇ ಶತಮಾನದಲ್ಲಿ ಗಾಟ್‌ಫ್ರೈಡ್‌ ಡೇನಿಯಲ್‌ ನಿಸ್ಸಾನ್‌ ಎಸೆನ್‌ಬೆಕ್‌ ಎಂಬುವರು ಹೂವನ್ನು ಪ್ರಥಮವಾಗಿ ಗುರುತಿಸಿದರು. ರಾಬರ್ಟ್ ವೈಟ್ ಮತ್ತು ಕ್ಯಾಪ್ನೆಟ್‌ ಬೆಡೋಮ್ ಎಂಬ ಸಸ್ಯ ವಿಜ್ಞಾನಿಗಳು ಅವಿರತ ಪರಿಶ್ರಮದಿಂದ 1826ರಿಂದ 1934ರವರೆಗಿನ ಅವಧಿಯಲ್ಲಿ ಕಲೆಹಾಕಿದ ನೀಲಕುರಂಜಿಯ ಪುಷ್ಪಧಾರಣೆ ಕುರಿತ ವೈಜ್ಞಾನಿಕ ವಿವರಣೆಗಳನ್ನು ‘ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ’ಯ ಸಂಶೋಧನಾ ಪತ್ರಿಕೆಯಲ್ಲಿ ಡಾ. ಮಾರಿಸನ್ ಎಂಬ ಸಸ್ಯವಿಜ್ಞಾನಿ ದಾಖಲಿಸಿದ್ದಾರೆ.

ADVERTISEMENT

ನೀಲಕುರಂಜಿ ಹೂವಿನಲ್ಲಿ 250 ಪ್ರಭೇದಗಳಿವೆ. ಭಾರತದಲ್ಲಿ 46 ಪ್ರಭೇದಗಳ ಹೂವುಗಳು ಕಂಡು ಬರುತ್ತವೆ. ದೀರ್ಘ ಅವಧಿಗೊಮ್ಮೆ ಅರಳುವ ಈ ತೆರನಾದ ಹೂವುಗಳನ್ನು ‘ಪಿಲಿಟೆಸಿಯಲ್ಸ್’ ಎನ್ನುವರು. ಸಂಡೂರಿನ ಈ ಪರ್ವತ ಶ್ರೇಣಿಯಲ್ಲಿ ಈ ನೀಲಿ ಪುಷ್ಪ ಈಗ ಅರಳಿ ನಿಂತಿದೆ. ತೆನೆಯಂತಹ ಹೂಗುಚ್ಛಗಳಲ್ಲಿ ಸುಮಾರು 2ರಿಂದ 6 ಹೂವುಗಳಿರುತ್ತವೆ. ಅದರಲ್ಲಿರುವ ಹೂವುಗಳು ಜೇನ್ನೊಣ, ದುಂಬಿಗಳನ್ನು ಆಕರ್ಷಿಸಿ ಪರಾಗ ಸ್ಪರ್ಶಗೊಂಡು ತದನಂತರ ಮಾಸಲುಗೊಂಡು ನೆಲಕ್ಕೆ ಉರುಳುತ್ತವೆ. ಆಗ ತೆನೆಗಳಲ್ಲಿ ಬೀಜಗಳು ಫಲಿತಗೊಂಡು ಸಸ್ಯಗಳು ಮತ್ತೆ ಹುಟ್ಟುತ್ತವೆ.

ನೀಲಕುರಂಜಿ ಪರಿಶುದ್ಧ ಪ್ರೇಮದ ಪ್ರತೀಕವೂ ಆಗಿದೆ. ತಮಿಳುನಾಡಿನ ನೀಲಗಿರಿ, ಪಳನಿ, ಅಣ್ಣಾಮಲೈಗಳನ್ನು ಒಳಗೊಂಡಂತೆ ನೀಲಕುರಂಜಿ ಪ್ರದೇಶದ ಒಡೆಯನೇ ಮುರುಗ. ಬೆಟ್ಟಗಾಡಿನ ತರುಣಿ ‘ವಲ್ಲಿ’ಯನ್ನು ಮುರುಗ ವರಿಸಿದಾಗ ನೀಲಕುರಂಜಿಯ ಹಾರವನ್ನು ಧರಿಸಿದ್ದನಂತೆ. ಕೊಡೈಕೆನಾಲ್‌ನಲ್ಲಿ ಮುರುಗನೇ ಆರಾಧ್ಯ ದೈವನಾದ ‘ಕುರಂಜಿ ಆಂಡವರ್’ ದೇವಸ್ಥಾನವಿದೆ. ಸಂಡೂರಿನಲ್ಲಿಯೂ ಮುರುಗನಾದ ಕುಮಾರಸ್ವಾಮಿ ದೇವಸ್ಥಾನವಿರುವುದು ಸಾಮ್ಯತೆಯನ್ನು ತೋರಿಸುತ್ತದೆ.

ನೀಲಕುರಂಜಿ ಎದುರಿಸುತ್ತಿರುವ ಅಪಾಯ ಇಡೀ ಜೀವರಾಶಿಯ ವಿಪತ್ಕಾಲದ ಪ್ರತೀಕ. ಅನೇಕ ಕೀಟಗಳು ಈ ಸಸ್ಯಗಳನ್ನು ಅವಲಂಬಿಸಿದ್ದರೆ ಆ ಕೀಟಗಳನ್ನು ಅನೇಕ ಪಕ್ಷಿಗಳು ಅವಲಂಬಿಸಿ ಸಸ್ಯಜೀವಿ, ಪ್ರಾಣಿಜೀವಿಗಳ ನಡುವೆ ಲಕ್ಷಾಂತರ ವರ್ಷಗಳ ವಿಕಾಸ ಕ್ರಿಯೆಯ ಮೂಲಕ ಬಲಗೊಂಡಿರುವ ಸೂಕ್ಷ್ಮ ಸಂಬಂಧ ನಮ್ಮ ಕಣ್ಣಿದುರಿನಲ್ಲೇ ಕರಗುತ್ತಿದೆ. ಹನ್ನೆರಡು ವರ್ಷಕ್ಕೊಮ್ಮೆ ಅರಳಿ ಕೇವಲ 22 ದಿನ ಕಾಣುವ ಈ ನಿಸರ್ಗ ರಮಣೀಯ ನೋಟ ನೋಡಲು ಬಂದವರು ಅಪಾರ ಸಂಖ್ಯೆಯ ಜನ. ಕೆಲವರು ಇವುಗಳ ಬಗ್ಗೆ ಅರಿಯದೇ ಸಿಕ್ಕ ಸಿಕ್ಕಲ್ಲಿ ತುಳಿದಾಡಿದರು. ಈ ಹೂವಿನ ಮಹತ್ವ ತಿಳಿಸಿದರೂ ಕೆಲವರು ಕ್ಯಾರೆ ಎನ್ನದೆ ಕಿತ್ತು ಒಯ್ಯುತ್ತಲೇ ಇದ್ದರು. ನೀಲಸುಂದರಿ ನೋವಾದರೂ ನಗುತ್ತಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.