ADVERTISEMENT

ಅರಣ್ಯ ನಗರದಿ ಆನೆ ಸಫಾರಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 19:30 IST
Last Updated 24 ನವೆಂಬರ್ 2014, 19:30 IST
ಅರಣ್ಯ ನಗರದಿ ಆನೆ ಸಫಾರಿ
ಅರಣ್ಯ ನಗರದಿ ಆನೆ ಸಫಾರಿ   

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಎಂದಾಕ್ಷಣ ನೆನಪಾಗುವುದು ದಂಡಕಾರಣ್ಯ ಹಾಗೂ ವನ್ಯಜೀವಿಗಳು. ಹಲವು ಬಗೆಯ ವನ್ಯಜೀವಿಗಳಿಂದ, ನಾನಾ ವಿಧದ ಪಕ್ಷಿ ಸಂಕುಲಗಳಿಂದ, ಪರಿಸರ ಸೌಂದರ್ಯದಿಂದ ಕಣ್ತುಂಬಿಸಿಕೊಳ್ಳಬಹುದಾದ ದಾಂಡೇಲಿ ಹಾಗೂ ಸುತ್ತಮುತ್ತಲಿನ ಸ್ಥಳ ಅನೇಕ ಕಾರಣಗಳಿಂದ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. 

ಈಗ ಮತ್ತೆ ಪ್ರವಾಸಿಗರ ಚಿತ್ತ ಇತ್ತ ಹರಿಸುವಂತೆ ಮಾಡುವ ಸಲುವಾಗಿ ಸಮೀಪದ ಜೊಯಿಡಾ ತಾಲ್ಲೂಕಿನ ಪಣಸೋಲಿ ವನ್ಯಜೀವಿ ಅರಣ್ಯಧಾಮದಲ್ಲಿ ಮೊಟ್ಟ ಮೊದಲ ಬಾರಿಗೆ ಆನೆ ಸಫಾರಿ ಶುರು ಮಾಡಲಾಗಿದೆ. ಮತ್ತಿಗೋಡು ಅರಣ್ಯದಿಂದ 15 ವರ್ಷದ ಚಾಮುಂಡೇಶ್ವರಿ ಮತ್ತು 45 ವರ್ಷದ ರಾಜೇಶ ಎಂಬ ಆನೆಗಳನ್ನು ತರಿಸಲಾಗಿದೆ. ಮತ್ತೆರಡು  ಕುಮಾರಸ್ವಾಮಿ ಮತ್ತು ತುಂಗ ಆನೆಗಳು ನಾಗರಹೊಳೆಯ ಮತ್ತಿಗೋಡು ಅರಣ್ಯದಿಂದ ಇನ್ನೇನು ಬರಲಿವೆ. ಹಾಗೆಯೇ, ತುಂಬು ಗರ್ಭಿಣಿಯಾದ ತುಂಗ ಬಾಣಂತನ ಮುಗಿಸಿಕೊಂಡು ಸ್ವಲ್ಪ ತಡವಾಗಿ ಬರಲಿದ್ದಾಳೆ.

ಆನೆಯ ಸಫಾರಿ ಮಾಡಲು ಒಂದೆರಡು ಕಿ.ಮೀ ಜಾಗ ಗುರುತು ಮಾಡಲಾಗಿದೆ. ಸಫಾರಿಯ ಜೊತೆ ಅಕ್ಕಪಕ್ಕದಲ್ಲಿರುವ ಬಗೆಬಗೆಯ ವೃಕ್ಷಸಂಕುಲದ ಜೊತೆ ವಿವಿಧ ಬಗೆಯ ಪ್ರಾಣಿ-ಪಕ್ಷಿಗಳನ್ನೂ ನೋಡಬಹುದು. ಅಪರೂಪದ ಕಪ್ಪು ಚಿರತೆ, ಹುಲಿಗಳನ್ನು ನೋಡಿ ಖುಷಿ ಪಡಬಹುದು. ಇವುಗಳನ್ನೆಲ್ಲ ನೋಡಲು ಅರಣ್ಯ ಇಲಾಖೆಯಿಂದ ವಾಹನ ಸೌಕರ್ಯ ಇದ್ದರೂ ಸಫಾರಿ ಸಮಯದಲ್ಲಿ ನೋಡುವುದೇ ಇನ್ನಷ್ಟು ಚೆಂದ.

‘ಆನೆಗಳ ಉಪಟಳದ ದೂರುಗಳು ಹೆಚ್ಚುತ್ತಿರುವ ಕಾರಣ, ಹಿಡಿದಿಟ್ಟಿರುವ ಆನೆಗಳ ಸಂಖ್ಯೆ ಹೆಚ್ಚಿದೆ. ಇವುಗಳನ್ನು ಕಾಡಿಗೆ ಬಿಟ್ಟು ಬಂದರೆ ಪುನಃ ರೈತರ ದೂರು ಹೆಚ್ಚಾಗಬಹುದು ಎಂಬ ಕಾರಣದಿಂದ ಅಭಯಾರಣ್ಯಗಳಿಗೆ ಕಳುಹಿಸಲಾಗುತ್ತಿದೆ. ಅಲ್ಲಿ ಅವುಗಳಿಗೆ ತರಬೇತಿ ನೀಡುವ ಮೂಲಕ ಸಫಾರಿಗೆ ಬಳಸಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಇಲ್ಲಿ ಆನೆಗಳ ಪಾಲನೆಗೆಂದು ಐದಾರು ಮಾವುತರನ್ನು ನೇಮಿಸಲಾಗಿದೆ. ಇವರು ದಿನನಿತ್ಯ ಆನೆಗಳಿಗೆ ವ್ಯಾಯಾಮ ಮಾಡಿಸುತ್ತಾರೆ. ಕಾಳಿನದಿಯಲ್ಲಿ ಸ್ನಾನ ಮಾಡಿಸಿ, ನಂತರ ಉಪಾಹಾರಕ್ಕೆ ಉದ್ದು, ಗೋಧಿ, ಅವಲಕ್ಕಿ, ಹೆಸರುಕಾಳು, ಕುಸುವಲಕ್ಕಿ, ಭತ್ತದ ಹುಲ್ಲು, ಬೆಲ್ಲ, ತೆಂಗಿನ ಕಾಯಿ ಇವುಗಳನ್ನು ಸೇರಿ ಬೇಯಿಸಿದ ಅನ್ನದ ಉಂಡೆಯನ್ನು ತಿನ್ನಿಸುತ್ತಾರೆ. ನಂತರ ಅಭಯಾರಣ್ಯಕ್ಕೆ ಬಿಟ್ಟುಬರುತ್ತಾರೆ.

‘ಪ್ರತಿ ಆನೆಗೆ ಬೆಳಗಿನ ಉಪಾಹಾರಕ್ಕೆ 15 ಕೆ.ಜಿ, ರಾತ್ರಿಯ ಊಟಕ್ಕೆ 25 ಕೆ.ಜಿ. ಆಹಾರ ಕೊಡಲಾಗುವುದು. ಸಫಾರಿ ಮುಗಿದ ಬಳಿಕ ಮಧ್ಯಾಹ್ನ ಕಾಡಿನೊಳಗೆ ಸಮೃದ್ಧಿಯಾಗಿ ಬೆಳೆದ ಗಿಡ ಮರಗಳ ತೊಗಟೆಯನ್ನು ತಿಂದು ಸಂಜೆ 4 ಗಂಟೆಗೆ ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತವೆ’ ಎನ್ನುತ್ತಾರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಲಕೃಷ್ಣ.

‘ಇಲ್ಲಿ ಹೊರ ರಾಜ್ಯಗಳಿಂದ ಈಗಲೂ ಪ್ರವಾಸಿಗರು ಬರುತ್ತಾರೆ. ಆದರೆ ಮುಂಚೆಗೆ ಹೋಲಿಸಿದರೆ ಉತ್ತರ ಕರ್ನಾಟಕದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.  ಇನ್ನು ಮುಂದಾದರೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದೇನೋ ಕಾದು ನೋಡ ಬೇಕಿದೆ’ ಎನ್ನುತ್ತಾರೆ ಅರಣ್ಯ ಸಂರಕ್ಷಣಾಧಿಕಾರಿ ಶ್ರೀರಾಮುಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.