ADVERTISEMENT

ಗೂಳೂರು ಗಣಪನ ನೋಡಿದಿರಾ?

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 19:30 IST
Last Updated 27 ಅಕ್ಟೋಬರ್ 2017, 19:30 IST
ಗುಳೂರು ಗಣಪ
ಗುಳೂರು ಗಣಪ   

–ವಿನಯ್‌ ಹೆಬ್ಬೂರು

ಗೂಳೂರಿನಲ್ಲಿ ಗಣೇಶನನ್ನು ಇಟ್ಟಿದ್ದಾರಾ. ಗಣೇಶನ ದರ್ಶನ ಮಾಡಿದೆ ಸುತ್ತಮುತ್ತ ನೋಡಬಹುದಾದ ಇನ್ಯಾವ ಪ್ರೇಕ್ಷಣೀಯ ಸ್ಥಳಗಳಿವೆ. ಒಂದು ದಿನದ ಟ್ರಿಪ್‌ಗೆ ಪ್ಲಾನ್ ಮಾಡಿಕೊಡ್ತೀಯಾ?’ ಬೆಂಗಳೂರಿನ ಸ್ನೇಹಿತರೊಬ್ಬರು ಕೇಳಿದ ಪ್ರಶ್ನೆ ಇದು.

ತುಮಕೂರು ಹೊರವಲಯದಲ್ಲಿರುವ ಪುಟ್ಟ ಹಳ್ಳಿ ಗೂಳೂರು. 11 ಅಡಿ ಎತ್ತರ, 11 ಅಡಿ ಅಗಲದ ಮಣ್ಣಿನ ಗಣಪತಿಯನ್ನು ಇಲ್ಲಿ ಪ್ರತಿವರ್ಷ ಬಲಿಪಾಡ್ಯಮಿಯಂದು ಪ್ರತಿಷ್ಠಾಪಿಸಲಾಗುತ್ತದೆ. ಒಂದು ತಿಂಗಳು ಗಣಪನ ಪೂಜೆ ನಡೆಯುತ್ತದೆ.

ADVERTISEMENT

ಬೃಹತ್ ಗಣಪನ ಹೊಟ್ಟೆಯಲ್ಲಿ ಊರಿನ ಹಲವು ಮನೆಗಳಲ್ಲಿ ಪೂಜೆ ಸ್ವೀಕರಿಸಿದ ಪುಟ್ಟ ಗಣಪ, ಗೌರಮ್ಮನ ಪ್ರತಿಮೆಗಳೂ ಇರುತ್ತವೆ. ಊರಿನ 18 ಜಾತಿಗಳ ಜನರು ಶಾಸ್ತ್ರೋಕ್ತವಾಗಿ ಹಿಡಿಮಣ್ಣು ಸಲ್ಲಿಸಿದ ನಂತರವೂ ದೊಡ್ಡ ಗಣಪನ ಮಣ್ಣಿನ ವಿಗ್ರಹಕ್ಕೆ ರೂಪುಕೊಡುವ ಕೆಲಸ ಶುರು ಆಗುವುದು ವಿಶೇಷ. ಈ ವರ್ಷ ನವೆಂಬರ್ 26ಕ್ಕೆ ಗಣಪತಿ ವಿಸರ್ಜನೆ ನಡೆಯಲಿದೆ.

ಬೆಂಗಳೂರಿನಿಂದ ಪ್ರತಿ ವರ್ಷವೂ ಲಕ್ಷಾಂತರ ಮಂದಿ ಬಸ್‌ ಇತ್ಯಾದಿ ವಾಹನಗಳನ್ನು ಮಾಡಿಕೊಂಡು ಬಂದು ಗಣಪನ ದರ್ಶನ ಪಡೆಯುತ್ತಾರೆ.

ಹೀಗೆ ಬಂದವರು ನಂತರ ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದು ವಾಡಿಕೆ. ಈ ಬಾರಿ ಉತ್ತಮ ಮಳೆಯೂ ಆಗಿರುವುದರಿಂದ ಎಲ್ಲೆಡೆ ಹಸಿರು ರಾರಾಜಿಸುತ್ತಿದೆ.

ಗೂಳೂರು ಗಣಪನನ್ನು ನೋಡಲೆಂದು ಬಂದವರು ಸನಿಹದಲ್ಲಿಯೇ ಇರುವ ಕೈದಾಳದ ಚನ್ನಕೇಶವಸ್ವಾಮಿ ದೇಗುಲಕ್ಕೂ ಭೇಟಿ ನೀಡಬಹುದು. ಇದು ಗೂಳೂರಿನಿಂದ ಕೇವಲ 1 ಕಿ.ಮೀ. ದೂರದಲ್ಲಿದೆ. ಹೊಯ್ಸಳ ಶೈಲಿಯ ದೇಗುಲ ನೋಡಲು ಸುಂದರ, ಅಷ್ಟೇ ಅಲ್ಲ ಹಸಿರಿನ ಪರಿಸರವೂ ಮನಸೆಳೆಯುವಂತಿದೆ. ಜಕಣಾಚಾರಿಯ ಮಗ ಡಕಣಾಚಾರಿಗೆ ಕೇಶವ ಇಲ್ಲಿ ಕೈ ನೀಡಿದ ಎಂಬುದು ಪ್ರತೀತಿ.

ದಾಬಸ್‌ಪೇಟೆಯಿಂದ ಗೂಳೂರಿಗೆ ಬರುವವರು ತುಮಕೂರು ಟೋಲ್‌ಗೇಟ್‌ಗೆ ಒಂದು ಕಿ.ಮೀ. ಹಿಂದೆಯೇ ಬಲಕ್ಕೆ ಹೊರಳಿದರೆ ಮಂದರಗಿರಿ ಎನ್ನುವ ಜಿನಕ್ಷೇತ್ರ ಸಿಗುತ್ತದೆ. ಬೆಟ್ಟದ ಮೇಲೆ ಪುರಾತನ ಬಸದಿಗಳಿವೆ.

ಬೆಟ್ಟದ ಮೇಲಿನ ದೊಣೆ, ಅಲ್ಲಿಂದ ಕಾಣುವ ವಿಶಾಲ ಮೈದಾಳ ಕೆರೆಗಳು ಒಮ್ಮೆ ಮನದಲ್ಲಿ ದಾಖಲಾದರೆ ಮತ್ತೆಂದೂ ಅಳಿಸಿಹೋಗುವುದಿಲ್ಲ. ಬೆಟ್ಟದ ಬುಡದಲ್ಲಿ ಪಿಂಛ (ನವಿಲುಗರಿಯ ಬೀಸಣಿಕೆ) ಆಕಾರದ ಧ್ಯಾನ ಮಂದಿರವಿದೆ.

ದೇವರಾಯನದುರ್ಗ ಸಹ ಗೂಳೂರಿಗೆ ಸಮೀಪವೇ ಇದೆ. ದೇವರಾಯನದುರ್ಗದ ಹಾದಿಯ ನಾಮದಚಿಲುಮೆಯಲ್ಲಿ ಚುಕ್ಕೆಜಿಂಕೆಗಳು, ಮಕ್ಕಳ ಆಟದ ಪಾರ್ಕು, ತುಸು ಮುಂದೆ ಬಂದರೆ ಜಯಮಂಗಲಿ ನದಿಯ ಉಗಮಸ್ಥಾನ ಕಣ್ತುಂಬಿಕೊಳ್ಳಬಹುದು. ಬೆಟ್ಟದ ಕೆಳಗೆ ಭೋಗ ನರಸಿಂಹ, ಬೆಟ್ಟದ ಮೇಲೆ ಯೋಗ ನರಸಿಂಹ ದೇಗುಲಗಳನ್ನು ಸಂದರ್ಶಿಸಬಹುದು. ದೇವರಾಯನದುರ್ಗ ಬೆಟ್ಟದ ಸಮೀಪವೇ ಇರುವ ವಿದ್ಯಾಶಂಕರ ದೇಗುಲ ಸಹ ಕಾಡಿನ ಸಹಜ ಪರಿಸರದಲ್ಲಿದೆ.

ಮೈದನಹಳ್ಳಿ ಕೃಷ್ಣಮೃಗ ತಾಣ, ತಿಮ್ಲಾಪುರ ಕರಡಿಧಾಮ, ಗೊರವನಹಳ್ಳಿ ಲಕ್ಷ್ಮೀದೇಗುಲ, ಸಿದ್ದಗಂಗಾ ಮಠ, ಹೆಬ್ಬೂರು ಶ್ರೀಚಕ್ರ ದೇವಸ್ಥಾನಗಳೂ ಗೂಳೂರಿಗೆ ಹೆಚ್ಚೇನೂ ದೂರವಾಗದು. ಟ್ರೆಕಿಂಗ್ ಆಸಕ್ತಿ ಇರುವವರು ಚಿನಗ ಬೆಟ್ಟ ಹತ್ತುವ ಸವಾಲು ಸ್ವೀಕರಿಸಬಹುದು.

ಶನಿವಾರ- ಭಾನುವಾರಗಳಂದು ತುಮಕೂರು ಅಮಾನಿಕೆರೆಯಲ್ಲಿ ಸಂಗೀತ ಕಾರಂಜಿ ಇರುತ್ತದೆ. ಇದು ಸಹ ಇದೀಗ ಪ್ರವಾಸಿ ಆಕರ್ಷಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.